Site icon Vistara News

Madanlal Dhingra: ಸ್ವಾತಂತ್ರ್ಯದ ಕಿಡಿ ಮದನ್‍ಲಾಲ್ ಢಿಂಗ್ರಾ ಬಲಿದಾನದ ನೆನಪು

madanlal dhingra

:: ಮಯೂರಲಕ್ಷ್ಮೀ

ಸೆಪ್ಟೆಂಬರ್ 18, 1883, ಪಂಜಾಬ್ ಪ್ರಾಂತದ ಶ್ರೀಮಂತ ಕುಟುಂಬದಲ್ಲಿ ಜನಿಸಿದವರು ಮದನ್‍ಲಾಲ್ ಢಿಂಗ್ರಾ. ಅವರ ತಂದೆ ದಿತ್ತಮಾಲ್ ಢಿಂಗ್ರಾ ಸಿವಿಲ್ ಬ್ರಿಟಿಷ್ ಸರ್ಕಾರದಲ್ಲಿ ಸರ್ಜನ್ ಆಗಿದ್ದರು. ಅವರು ಬ್ರಿಟಿಷರೊಂದಿಗೆ ಅತ್ಯಂತ ಸೌಹಾರ್ದತೆಯಿಂದಿದ್ದರು. ಬ್ರಿಟಿಷರ ಪ್ರಭಾವದಿಂದ ತಮ್ಮ ಪುತ್ರರನ್ನು ಆಧುನಿಕವಾಗಿ ಬೆಳೆಸಿದ್ದಲ್ಲದೇ ಉನ್ನತ ವಿದ್ಯಾಭ್ಯಾಸಕ್ಕಾಗಿ ಲಂಡನ್ನಿಗೆ ಕಳುಹಿಸಿದ್ದರು. ಮದನ್ ಲಾಲ್ ತಾಯಿ ಧಾರ್ಮಿಕ ಶ್ರದ್ಧೆಯುಳ್ಳ ಭಾರತೀಯ ಮಾತೆಯಾಗಿದ್ದರು. ಅವರ ಪ್ರಭಾವ ಮದನ್ ಮೇಲಿತ್ತು. ಆದರೆ ಬ್ರಿಟಿಷರ ವಿರುದ್ಧ ಕ್ರಾಂತಿಕಾರಕ ಚಟುವಟಿಕೆಗಳಲ್ಲಿ ತೊಡಗಿದ್ದ ಮದನ್ ಲಾಹೋರ್ ಕಾಲೇಜಿನಿಂದ ಹೊರಬಂದರು.

ಅಣ್ಣನ ಸಲಹೆಯಂತೆ ಉನ್ನತ ಶಿಕ್ಷಣಕ್ಕಾಗಿ ಲಂಡನ್ನಿಗೆ ತೆರಳಿ ಅಲ್ಲಿನ ಯೂನಿವರ್ಸಿಟಿ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನೀಯರಿಂಗ್ ಶಿಕ್ಷಣ ಪಡೆಯಲಾರಂಭಿಸಿದರು. ಅಲ್ಲಿ ಸಾವರ್ಕರ್ ಮತ್ತು ಶ್ಯಾಂಜೀ ಕೃಷ್ಣಶರ್ಮ ಅವರ ಸಂಪರ್ಕವಾಯಿತು. “ಇಂಡಿಯಾ ಹೌಸ್”ನಲ್ಲಿ ವಾಸಿಸುತ್ತಿದ್ದು ಕ್ರಾಂತಿಕಾರಕ ವಿಚಾರಗಳಲ್ಲಿ ಆಸಕ್ತಿ ವಹಿಸತೊಡಗಿದರು. ಲಂಡನ್ನಿನಲ್ಲಿ ಅಭಿನವ ಭಾರತದಲ್ಲಿದ್ದ ಕ್ರಾಂತಿಕಾರಿಗಳನ್ನು ಬಂಧಿಸಿ ಸೆರೆಯಲ್ಲಿಟ್ಟು ನಾನಾ ರೀತಿಯಲ್ಲಿ ಹಿಂಸಿಸಲಾಗಿತ್ತು. ಜೊತೆಗೆ ಸಾವರ್ಕರ್ ಸಹೋದರನನ್ನು ಬಂಧಿಸಿ ಸೆರೆಯಲ್ಲಿಟ್ಟಿದ್ದರು.

ಇತ್ತ ಭಾರತದಲ್ಲಿದ್ದ ಬ್ರಿಟಿಷ್ ಅಧಿಕಾರಿಗಳು ಮುಗ್ಧ ಭಾರತೀಯರ ಮೇಲೆ ದೌರ್ಜನ್ಯವೆಸಗಿ, ಪ್ರತಿರೋಧಿಸಿದವರನ್ನು ಬಂಧಿಸಿ ಕೊಲ್ಲುತ್ತಿದ್ದರು. ಬ್ರಿಟಿಷ್ ಅಧಿಕಾರಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಮದನ್ ಯೋಜನೆ ಮಾಡಿದರು. ಅದೇ ಸಮಯದಲ್ಲಿ ಬ್ರಿಟಿಷ್ ಅಧಿಕಾರಿ ಸರ್ ಕರ್ಜನ್ ವಿಲ್ಲೀ ನಿಷ್ಠೆಯಿಂದ ಭಾರತದಲ್ಲಿ ಅಧಿಕಾರ ನಡೆಸಿ ಲಂಡನ್ನಿಗೆ ಹಿಂತಿರುಗಿದ್ದನು. ಲಂಡನ್ನಿನ ಭಾರತದ ಕಛೇರಿಯ ಮುಖ್ಯಸ್ಥನಾಗಿ ನೇಮಕಗೊಂಡ ನಂತರ ಅಲ್ಲಿದ್ದ ಭಾರತೀಯ ಕ್ರಾಂತಿಕಾರಿಗಳನ್ನು ಮುಗಿಸಲು ಸಂಚು ಹೂಡಿದ್ದನು. ಅವನನ್ನು ಕೊಂದು ಬ್ರಿಟಿಷರ ವಿರುದ್ಧ ಸೇಡು ತೀರಿಸಿಕೊಳ್ಳುವ ಮದನ್‍ಲಾಲ್ ನಿರ್ಧಾರ ಅಚಲವಾಗಿತ್ತು.

ಜುಲೈ 1, 1909 ಸಂಜೆ ಇಂಡಿಯನ್ ನ್ಯಾಶನಲ್ ಅಸೋಸಿಯೇಶನ್ ಹಾಲ್‍ನಲ್ಲಿ ವಾರ್ಷಿಕ ಸಭೆ ನಡೆದಿತ್ತು. ಕಾರ್ಯಕ್ರಮ ಮುಗಿದ ನಂತರ ಸರ್ ಕರ್ಜನ್ ಹೊರಡಲನುವಾದನು. ಕೂಡಲೇ ಅಲ್ಲಿ ಪ್ರವೇಶಿಸಿದ ಮದನ್‍ಲಾಲ್ ಕರ್ಜನ್ ಎದುರು ನಿಂತು ತನ್ನ ಕೈಯಲ್ಲಿದ್ದ ಪಿಸ್ತೂಲಿನಿಂದ ಪಾಯಿಂಟ್-ಬ್ಲಾಂಕ್ ರೇಂಜಿನಲ್ಲಿ ಗುಂಡು ಹಾರಿಸಿದರು. ಕುಸಿದು ಬಿದ್ದ ಕರ್ಜನನ್ನು ಕಂಡು ಎಲ್ಲರೂ ಗಾಬರಿಯಾದರು. ಯಾವುದೇ ಉದ್ವೇಗವಿಲ್ಲದೆ ಮದನ್‍ಲಾಲ್ ಎದುರಾದ ಪೋಲೀಸರಿಗೆ ಶರಣಾದರು.

ಜೇಬಿನಲ್ಲಿ ತಾನೇ ಸಿದ್ಧಪಡಿಸಿಕೊಂಡಿದ್ದ ಹೇಳಿಕೆಯ ಚೀಟಿಯಿತ್ತು. ಅಮಾನುಷವಾಗಿ ಭಾರತೀಯ ಕ್ರಾಂತಿಕಾರಿಗಳನ್ನು ಗಲ್ಲುಶಿಕ್ಷೆ ನೀಡಿ ಕೊಂದ ಬ್ರಿಟಿಷರ ವಿರುದ್ಧ ತನ್ನ ಸೇಡು. ಭಾರತಾಂಬೆಯ ಪುತ್ರನಾಗಿ ಸೇಡನ್ನು ತೀರಿಸಿಕೊಂಡು ಬಲಿದಾನಿಗಳ ತ್ಯಾಗಕ್ಕೆ ನ್ಯಾಯ ಸಲ್ಲಿಸಿರುವೆ, ಮತ್ತೆ ಭಾರತಕ್ಕೆ ವಿಜಯಿಯಾಗಿ ಹಿಂದಿರುಗುವೆ ಎಂದು ಮದನ್ ಬರೆದಿದ್ದರು. ಆದರೆ ಆ ಚೀಟಿಯನ್ನು ವಶಪಡಿಸಿಕೊಂಡ ಪೋಲೀಸರು ಆ ವಿಷಯವನ್ನು ರಹಸ್ಯವಾಗಿಟ್ಟರು. ವಿಚಾರ ಪತ್ರಿಕೆಗಳಲ್ಲಿ ಬಂದರೆ ಕ್ರಾಂತಿ ಇನ್ನಷ್ಟು ತೀವ್ರವಾಗಬಹುದೆಂದು ಬ್ರಿಟಿಷರು ಹೆದರಿದರು. ಮುಂದೆ ವಿಚಾರಣೆಗೂ ಅದನ್ನು ಪ್ರಸ್ತುತಪಡಿಸಲಿಲ್ಲ.

ಕರ್ಜನ್ ಕೊಲೆಯ ಸುದ್ದಿ ಮಿಂಚಿನಂತೆ ಹರಡಿತು. ಲಂಡನ್ನಿನಲ್ಲಿದ್ದ ಎಲ್ಲಾ ಮುಖ್ಯ ಪತ್ರಿಕೆಗಳಲ್ಲಿ ಮದನ್‍ಲಾಲ್ ಕರ್ಜನನ್ನು ಹತ್ಯೆಗೈದ ಸುದ್ದಿಯಾಯಿತು. ಮದನ್‍ರನ್ನು ಸೆರೆಹಿಡಿದು ಬ್ರಿಕ್ಸ್ಟನ್ ಜೈಲಿನಲ್ಲಿರಿಸಲಾಯಿತು. ವಿಷಯ ತಿಳಿದ ಮದನ್ ಸಹೋದರ ಮತ್ತು ತಂದೆ ಹತ್ಯೆಗೈದದ್ದನ್ನು ವಿರೋಧಿಸಿ ಬೇಸರ ವ್ಯಕ್ತಪಡಿಸಿದರು. ಆದರೆ ಜೈಲಿನಲ್ಲಿದ್ದ ಮದನ್‍ಲಾಲ್‍ರನ್ನು ಭೇಟಿಯಾಗಲು ಸ್ನೇಹಿತರು ಬರುತ್ತಿದ್ದರು. ಭೇಟಿಯಾಗಲು ಬಂದ ತಮ್ಮ ಸಹೋದರನ ಮುಖವನ್ನೂ ನೋಡಲು ಮದನ್ ಇಚ್ಛಿಸಲಿಲ್ಲ. ಅವರ ದೇಶಭಕ್ತಿಯ ಕಿಚ್ಚು ಅಷ್ಟು ತೀವ್ರವಾದದ್ದು!

ಇತ್ತ ಭಾರತದಲ್ಲೂ ಕ್ರಾಂತಿಕಾರಿಗಳೆಲ್ಲರೂ ಮದನ್‍ಲಾಲ್ ಸಾಹಸವನ್ನು ಕೊಂಡಾಡಿದರು. ಲಂಡನ್ನಿನ ಇಂಗ್ಲಿಷ್ ಟೈಮ್ಸ್, ಕ್ರಾನಿಕಲ್ ಮುಂತಾದ ಪತ್ರಿಕೆಗಳಲ್ಲಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆ ಸುದ್ದಿಯಾಗತೊಡಗಿತು. ಪ್ರತಿದಿನ ಅವರ ಚಲನವಲನಗಳನ್ನು ಜೈಲಿನಲ್ಲಿ ಗಮನಿಸುತ್ತಿದ್ದರು. ಭಾರತದಲ್ಲಿ ಸಾಮ್ರಾಜ್ಯ ಕಟ್ಟಿ ಮೆರೆಯುತ್ತಿದ್ದ ಬ್ರಿಟಷರ ವಿರುದ್ಧ ತನ್ನ ಸೇಡು, ಮುಂದಿನ ಕ್ರಾಂತಿಕಾರಿಗಳಿಗೆ ಸ್ಫೂರ್ತಿಯಾಗುತ್ತದೆ ಎಂದು ಮದನ್‍ಲಾಲ್ ವಾದಿಸಿದರು. ಭಾರತ ಖಂಡಿತಾ ಸ್ವತಂತ್ರವಾಗುತ್ತದೆ ಎಂದರು. ವಿಚಾರಣೆಗಳು ಮುಗಿದವು. ನ್ಯಾಯಾಲಯ ಅವರಿಗೆ ಮರಣದಂಡನೆ ವಿಧಿಸಿತು.

ಬ್ರಿಟಿಷರು ರಹಸ್ಯವಾಗಿಟ್ಟಿದ್ದ ಮದನ್‍ಲಾಲ್ ಬರೆದಿದ್ದ ಚೀಟಿಯ ಮತ್ತೊಂದು ಪ್ರತಿ ಅವರ ಸ್ನೇಹಿತನ ಮೂಲಕ ಹೊರಬಂದಿತ್ತು. ಮರುದಿನ ಪತ್ರಿಕೆಗಳಲ್ಲಿ ಅದರಲ್ಲಿದ್ದ ವಿಷಯಗಳು ಪ್ರಕಟವಾದವು. ಇಂಗ್ಲೆಂಡಿನಿಂದ ಅಮೇರಿಕಾಗೂ ಹರಡಿ ಅಲ್ಲಿನ ಪತ್ರಿಕೆಗಳಲ್ಲೂ ಪ್ರಕಟವಾಯಿತು. ಐರ್ಲೆಂಡಿನ ಪತ್ರಿಕೆಗಳು ಮದನ್‍ಲಾಲನ್ನು ವೀರಯೋಧ ಎಂದು ಬಣ್ಣಿಸಿದವು. ಆಗಸ್ಟ್ 16ರಂದು ಮುಂಜಾನೆ ಮದನ್‍ಲಾಲ್ ನೇಣಿಗೆ ಹೆಮ್ಮೆಯಿಂದ ಕೊರಳೊಡ್ಡಲು ತಯಾರಾದರು. ಯಾವುದೇ ಉದ್ವೇಗ, ಬೇಸರ ಮತ್ತು ಅಸಹನೆಯಿರಲಿಲ್ಲ.

ಬ್ರಿಟಿಷರು ವಾಡಿಕೆಯಂತೆ ಕೊನೆಯ ವಿಧಿಗಳಿಗಾಗಿ ಅವನ ಬಳಿ ಕ್ಲರ್ಗಿಯನ್ನು ಕಳಿಸಿದರು. ಆದರೆ ಮದನ್‍ಲಾಲ್ ತಾನು ಹೆಮ್ಮೆಯ ಭಾರತೀಯನಾದ್ದರಿಂದ ಹಿಂದೂವಾಗಿಯೇ ಸಾಯುವೆನೆಂದು ಅವರ ವಿಧಾನಗಳನ್ನು ತಿರಸ್ಕರಿಸಿದರು. ಕೇವಲ 26ನೇ ವಯಸ್ಸಿನಲ್ಲಿ ತನ್ನ ದೇಶಕ್ಕಾಗಿ ನೇಣಗಂಬವನ್ನೇರಿದ ಮಹಾನ್ ಬಲಿದಾನಿ ಮದನ್‍ಲಾಲ್ ಢಿಂಗ್ರಾ.

ಇದನ್ನೂ ಓದಿ: Shivakumara Swami: ಶ್ರೀ ಶಿವಕುಮಾರ ಸ್ವಾಮೀಜಿ ಸ್ಮರಣೆ: ಕರುಣೆಯೇ ಕಣ್ಣು ತೆರೆದಂತೆ…

Exit mobile version