ಭುವನೇಶ್ವರ: ಒಡಿಶಾ ವಿಧಾನಸಭೆ ಚುನಾವಣೆಯಲ್ಲಿ (Odisha Assembly Election 2024) ಬಿಜೆಪಿಯು ಸ್ಪಷ್ಟ ಬಹುಮತ ಸಾಧಿಸಿದ್ದು, ಮುಖ್ಯಮಂತ್ರಿ ನವೀನ್ ಪಟ್ನಾಯಕ್ (Naveen Patnaik) ಅವರ 24 ವರ್ಷಗಳ ಸುದೀರ್ಘ ಆಡಳಿತ ಕೊನೆಗೊಂಡಿದೆ. ಇನ್ನು, ಒಡಿಶಾದಲ್ಲಿ (Odisha) ಬಿಜೆಪಿಯು ಐತಿಹಾಸಿಕ ಗೆಲುವು ಸಾಧಿಸಿದ ಬೆನ್ನಲ್ಲೇ, ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಪ್ರಶ್ನೆ ಮೂಡಿದೆ. ಅಷ್ಟೇ ಅಲ್ಲ, ಒಡಿಶಾ ಮುಖ್ಯಮಂತ್ರಿ ಗಾದಿ ಮೇಲೆ ಬಿಜೆಪಿಯ ಐವರು ನಾಯಕರು ಕಣ್ಣಿಟ್ಟಿದ್ದು, ಯಾರಿಗೆ ಹುದ್ದೆ ಒಲಿಯಲಿದೆ ಎಂಬ ಕುತೂಹಲವೂ ಮೂಡಿದೆ.
ಐವರು ಆಕಾಂಕ್ಷಿಗಳು ಯಾರ‍್ಯಾರು?
ಒಡಿಶಾ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಲು ಐವರು ನಾಯಕರು ತುದಿಗಾಲಿನಲ್ಲಿ ನಿಂತಿದ್ದಾರೆ. ಕೇಂದ್ರದ ಮಾಜಿ ಸಚಿವ ಜುವಲ್ ಓರಮ್, ಹಾಲಿ ಸಚಿವ ಧರ್ಮೇಂದ್ರ ಪ್ರಧಾನ್, ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಹಾಗೂ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ವೈಜಯಂತ್ ಪಾಂಡಾ ಅವರು ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿದ್ದಾರೆ. ಇನ್ನು ಪಕ್ಷದ ರಾಜ್ಯಾಧ್ಯಕ್ಷ ಮನಮೋಹನ್ ಸಮಾಲ್ ಅವರು ಕೂಡ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಜೂನ್ 10ರಂದು ನೂತನ ಸಿಎಂ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿ ಆಯ್ಕೆ ಕುರಿತು ಒಡಿಶಾ ಬಿಜೆಪಿ ರಾಜ್ಯಾಧ್ಯಕ್ಷ ಮನಮೋಹನ್ ಸಮಾಲ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. “ಬಿಜೆಪಿಯ ಸಂಸದೀಯ ಮಂಡಳಿಯು ರಾಜ್ಯದಲ್ಲಿ ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬುದನ್ನು ತೀರ್ಮಾನಿಸುತ್ತದೆ. ಒಡಿಶಾದ ಮಣ್ಣಿನ ಸಂಸ್ಕೃತಿ, ಗುಣಗಳು ಇರುವ ನಾಯಕನನ್ನು ಮುಖ್ಯಮಂತ್ರಿಯಾಗಿ ನೇಮಿಸಲಾಗುವುದು ಎಂಬುದಾಗಿ ಇದಕ್ಕೂ ಮೊದಲು ನರೇಂದ್ರ ಮೋದಿ ಅವರು ಹೇಳಿದ್ದರು. ಅದರಂತೆ, ಪಕ್ಷವು ಸಿಎಂ ಹುದ್ದೆಯನ್ನು ಯಾರಿಗೆ ನೀಡಬೇಕು ಎಂಬುದರ ಕುರಿತು ತೀರ್ಮಾನ ತೆಗೆದುಕೊಳ್ಳಲಿದೆ” ಎಂದು ಹೇಳಿದರು.
ಒಡಿಶಾದಲ್ಲಿ ಈ ಬಾರಿ ಬಿಜೆಪಿ ತನ್ನ ಹಳೆದ ದೋಸ್ತಿ ಬಿಜೆಡಿಗೆ ಭರ್ಜರಿ ಗುದ್ದು ನೀಡಿದ್ದು, ಒಟ್ಟು 147 ಸ್ಥಾನಗಳಲ್ಲಿ 78 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಬಿಜೆಡಿ ಕೇವಲ 51 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇನ್ನುಳಿದಂತೆ ಕಾಂಗ್ರೆಸ್ 14 ಕ್ಷೇತ್ರಗಳಲ್ಲಿ ಗೆದ್ದಿದೆ.
ಇನ್ನು ಒಡಿಶಾದಲ್ಲಿ ಈ ಬಾರಿ ಚುನಾವಣಾ ಫಲಿತಾಂಶವು ಬಹುತೇಕ 2019ರ ರೀತಿಯಲ್ಲೇ ಇರಲಿದೆ ಎಂದೂ ಅಂದಾಜಿಸಲಾಗಿತ್ತು. ಎಕ್ಸಿಟ್ ಪೋಲ್ ರಿಸಲ್ಟ್ ಪ್ರಕಾರ ಬಿಜೆಡಿ ಈ ಬಾರಿ 62-80 ಸ್ಥಾನಗಳನ್ನು ಗಳಿಸಿದರೆ ಕಾಂಗ್ರೆಸ್ 5 ರಿಂದ 8 ಸ್ಥಾನಗಳನ್ನು ಗಿಟ್ಟಿಸಿಕೊಳ್ಳಲಿದೆ. ಇನ್ನು ಲೋಕಸಭಾ ಎಲೆಕ್ಷನ್ ರಿಸಲ್ಟ್‌ಗೆ ಬಂದರೆ ಬಿಜೆಪಿ ಒಡಿಶಾದಲ್ಲಿ 18-20 ಸ್ಥಾನಗಳನ್ನು ಪಡೆದುಕೊಳ್ಳಲಿದೆ. ಬಿಜೆಡಿ ಕೇವಲ 0-2 ಸ್ಥಾನ ಪಡೆದುಕೊಳ್ಳಲಿದೆ. ಇಲ್ಲಿ ಕಾಂಗ್ರೆಸ್ 0-1 ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ ಎಂದು ಅಂದಾಜಿಸಿತ್ತು ಇಂದಿನ ಈ ಫಲಿತಾಂಶ ಎಲ್ಲಾ ಎಕ್ಸಿಟ್ ಪೋಲ್ ಫಲಿತಾಂಶವನ್ನು ತಲೆಕೆಳಗಾಗಿಸಿವೆ.
ಇದನ್ನೂ ಓದಿ: HD Kumaraswamy: ಮೋದಿ ಬಯಸಿದ್ರೆ ಮಂತ್ರಿಯಾಗಲು ರೆಡಿ; ಮನದಾಸೆ ತೆರೆದಿಟ್ಟ ಕುಮಾರಸ್ವಾಮಿ!