ಜೈಪುರ: ಕಾಂಗ್ರೆಸ್ ನ ರಾಷ್ಟ್ರೀಯ ಮುಖಂಡರಾದ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಲೋಕ ಸಭಾ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆ ನಡೆದ ಒಂದು ದಿನದ ನಂತರ, ಮಾಜಿ ಶಾಸಕ ಗಂಗಾಜಲ್ ಮೀಲ್ ಮತ್ತು ಪಿಸಿಸಿ ಉಪಾಧ್ಯಕ್ಷ ಸುಶೀಲ್ ಶರ್ಮಾ ಸೇರಿದಂತೆ ಪಕ್ಷದ ಹಲವಾರು ಮುಖಂಡರು ಭಾನುವಾರ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಸೂರತ್ಗಢದಿಂದ ಕಾಂಗ್ರೆಸ್ ಟಿಕೆಟ್ ಪಡೆದು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಹನುಮಾನ್ ಮೀಲ್, ಮಾಜಿ ಪಿಸಿಸಿ ಉಪಾಧ್ಯಕ್ಷ ಅಶೋಕ್ ಅವಸ್ಥಿ. ಓಂಕಾರ್ ಸಿಂಗ್ ಲಖಾವತ್, ನಾರಾಯಣ್ ಪಂಚಾರಿಯಾ ಮತ್ತು ಅರುಣ್ ಚತುರ್ವೇದಿ ಸೇರಿದಂತೆ ಇತರರು ಬಿಜೆಪಿಗೆ ಸೇರಿದರು.
ಗುಂಪುಗಾರಿಕೆಯಿಂದಾಗಿ ಕಾಂಗ್ರೆಸ್ ನಿಷ್ಠ ಕಾರ್ಯಕರ್ತರಿಗೆ ನಿರಾಸೆಯಾಗಿದೆ ಎಂದು ಸುಶೀಲ್ ಶರ್ಮಾ ಆರೋಪಿಸಿದ್ದಾರೆ. ನಾನು ಹಲವು ವರ್ಷಗಳಿಂದ ಕಾಂಗ್ರೆಸ್ಗಾಗಿ ಕೆಲಸ ಮಾಡಿದ್ದೇನೆ. ಆದರೆ ಈಗ ಪಕ್ಷದ ಕಾರ್ಯಕರ್ತರ ಮಾತನ್ನು ಕೇಳುವವರು ಯಾರೂ ಇಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಸನಾತನ ಧರ್ಮದಲ್ಲಿ ನಂಬಿಕೆ ಇರುವ ನನ್ನಂತಹ ಕಾರ್ಯಕರ್ತರು ಅಯೋಧ್ಯೆಯಲ್ಲಿ ರಾಮ ಮಂದಿರದ ವಿಷಯದಲ್ಲಿ ಕಾಂಗ್ರೆಸ್ ತೆಗೆದುಕೊಂಡ ನಿಲುವಿನಿಂದ ನಿರಾಶೆಗೊಂಡಿದ್ದಾರೆ ಎಂದು ಅವರು ಹೇಳಿದರು.
ಮೋದಿ ನಾಯಕತ್ವಕ್ಕೆ ಮೆಚ್ಚುಗೆ
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೇಂದ್ರ ಸರ್ಕಾರ ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಇದರಿಂದ ಪ್ರಭಾವಿತನಾಗಿ, ರಾಷ್ಟ್ರೀಯತಾವಾದಿ ಚಿಂತನೆಯಿಂದ ನಾನು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಲು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದರು.
ವಿಧಾನಸಭಾ ಚುನಾವಣೆಗೆ ಟಿಕೆಟ್ ಹಂಚಿಕೆಯಲ್ಲಿ ಪಿಸಿಸಿ ಮುಖ್ಯಸ್ಥ ಗೋವಿಂದ್ ಸಿಂಗ್ ದೋಟಾಸ್ರಾ ಮತ್ತು ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಿರಂಕುಶವಾಗಿ ವರ್ತಿಸಿದ್ದಾರೆ ಎಂದು ಮಾಜಿ ಕಾಂಗ್ರೆಸ್ ಶಾಸಕ ಮೀಲ್ ಆರೋಪಿಸಿದ್ದಾರೆ. “ನಾವು ಈ ಬಗ್ಗೆ ರಾಜ್ಯ ಉಸ್ತುವಾರಿ ಸುಖ್ಜಿಂದರ್ ಸಿಂಗ್ ರಾಂಧವ ಅವರಿಗೆ ದೂರು ನೀಡಿದಾಗ, ಅವರು ಸಹ ನಮ್ಮ ಮಾತನ್ನು ಕೇಳಲಿಲ್ಲ. ಕಾಂಗ್ರೆಸ್ನಲ್ಲಿ ಸಂಪೂರ್ಣ ಕಾಲು ಎಳೆಯುವ ಕೆಲಸ ನಡೆಯುತ್ತಿದೆ” ಎಂದು ಅವರು ಹೇಳಿದರು.
ಇದನ್ನೂ ಓದಿ: Ram Mandir: ಅಯೋಧ್ಯೆ ರಾಮ ಮಂದಿರಕ್ಕೆ ಬರಬೇಡಿ ಎಂದ ಪೇಜಾವರ ಶ್ರೀ
ಕಾಂಗ್ರೆಸ್ ನಾಯಕರಲ್ಲದೆ, ನಿವೃತ್ತ ಅಧಿಕಾರಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಹಲವಾರು ಜನರು ಜೈಪುರದ ಪಕ್ಷದ ರಾಜ್ಯ ಪ್ರಧಾನ ಕಚೇರಿಯಲ್ಲಿ ಬಿಜೆಪಿಗೆ ಸೇರಿದರು. ರಾಜಸ್ಥಾನದಲ್ಲಿ ಏಪ್ರಿಲ್ 19 ಮತ್ತು 26 ರಂದು ಎರಡು ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಏಪ್ರಿಲ್ 19 ರಂದು ಮೊದಲ ಹಂತದಲ್ಲಿ ಗಂಗಾನಗರ, ಬಿಕಾನೇರ್, ಚುರು, ಜುಂಜುನು, ಸಿಕಾರ್, ಜೈಪುರ ಗ್ರಾಮೀಣ, ಜೈಪುರ, ಅಲ್ವಾರ್ ಭರತ್ಪುರ್, ಕರೌಲಿ-ಧೋಲ್ಪುರ್, ದೌಸಾ ಮತ್ತು ನಾಗೌರ್ನ 12 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಟೋಂಕ್-ಸವಾಯಿ ಮಾಧೋಪುರ್, ಅಜ್ಮೀರ್, ಪಾಲಿ, ಜೋಧ್ಪುರ, ಬಾರ್ಮರ್, ಜಲೋರ್, ಉದಯಪುರ, ಬನ್ಸ್ವಾರಾ, ಚಿತ್ತೋರ್ಗಢ, ರಾಜ್ಸಮಂದ್, ಭಿಲ್ವಾರಾ, ಕೋಟಾ ಮತ್ತು ಝಾಲಾವರ್-ಬರಾನ್ನ ಉಳಿದ 13 ಸ್ಥಾನಗಳಿಗೆ ಏಪ್ರಿಲ್ 26 ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ.