ಗಾಂಧಿನಗರ: ದೇಶದಲ್ಲಿ ಕೊರೊನಾ ಬಿಕ್ಕಟ್ಟಿನ ನಂತರದಲ್ಲಿ ಹೃದಯಾಘಾತ ಪ್ರಕರಣಗಳ (Heart Attack) ಸಂಖ್ಯೆ ಗಣನೀಯವಾಗಿ ಜಾಸ್ತಿಯಾಗಿದೆ. ಅದರಲ್ಲೂ, ಯುವಕರೇ ಹೆಚ್ಚು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾದವರು, ಐಸಿಯುನಲ್ಲಿ ಚಿಕಿತ್ಸೆ ಪಡೆದವರಿಗೇ ಹೆಚ್ಚಿನ ಪ್ರಮಾಣದಲ್ಲಿ ಹೃದಯಾಘಾತ ಆಗುತ್ತಿದೆ ಎಂದು ವರದಿಗಳು ತಿಳಿಸಿವೆ. ಇನ್ನು, ಹೃದಯಾಘಾತ ಹೆಚ್ಚಾಗಲು ಕೊರೊನಾ ನಿರೋಧಕ ಲಸಿಕೆಯೇ ಕಾರಣ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ, ಕಳೆದ ಆರು ತಿಂಗಳಲ್ಲಿ ಗುಜರಾತ್‌ನಲ್ಲಿ ಹೃದಯಾಘಾತದಿಂದ 1,052 ಜನ ಮೃತಪಟ್ಟಿದ್ದಾರೆ ಎಂದು ಸರ್ಕಾರವೇ ತಿಳಿಸಿದೆ. ಇದರಿಂದಾಗಿ ರಾಜ್ಯಾದ್ಯಂತ ಆತಂಕ ಮನೆಮಾಡಿದೆ.
“ಕಳೆದ ಆರು ತಿಂಗಳಲ್ಲಿ ಹೃದಯಾಘಾತದಿಂದ 1,052 ಜನ ಮೃತಪಟ್ಟಿದ್ದಾರೆ. ಇವರಲ್ಲಿ ಶೇ.80ರಷ್ಟು ಮಂದಿ 11-25 ವರ್ಷದವರೇ ಆಗಿದ್ದಾರೆ. ಇದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಹಾಗಾಗಿ, ಎರಡು ಲಕ್ಷ ಶಾಲಾ ಶಿಕ್ಷಕರು ಹಾಗೂ ಕಾಲೇಜುಗಳ ಪ್ರೊಫೆಸರ್‌ಗಳಿಗೆ ಹೃದಯಾಘಾತ ಉಂಟಾದಾಗ ತಕ್ಷಣೆ ಮಾಡುವ ಕಾರ್ಡಿಯೋಪಲ್ಮನರಿ ರಿಸಸಿಟೇಷನ್ (CPR) ಪ್ರಕ್ರಿಯೆಯ ಕುರಿತು ತರಬೇತಿ ನೀಡಲಾಗಿದೆ” ಎಂದು ರಾಜ್ಯ ಶಿಕ್ಷಣ ಸಚಿವ ಕುಬೇರ್ ದಿಂಡೋರ್ ಮಾಹಿತಿ ನೀಡಿದ್ದಾರೆ.
“ಯುವಕರು, ಅದರಲ್ಲೂ ಶಾಲೆ, ಕಾಲೇಜುಗಳ ಯುವಕರಿಗೆ ಹೃದಯಾಘಾತ ಉಂಟಾಗಿದೆ. ಕ್ರಿಕೆಟ್ ಆಡುವಾಗ, ಗರ್ಬಾ ಸಾಂಪ್ರದಾಯಿಕ ನೃತ್ಯ ಮಾಡುವಾಗ ಹೆಚ್ಚಿನ ಜನರಿಗೆ ಹೃದಯಾಘಾತ ಉಂಟಾಗಿದೆ. ಆರು ತಿಂಗಳಲ್ಲಿ ನಿತ್ಯ ಸರಾಸರಿ 173 ಜನ ಹೃದಯಾಘಾತ ಉಂಟಾಗಿ ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಜನರಿಗೆ ಅನುಕೂಲವಾಗುವ, ಹೃದಯಾಘಾತ ಪ್ರಕರಣಗಳನ್ನು ತಡೆಯಲು ಹತ್ತಾರು ಕ್ರಮ ತೆಗೆದುಕೊಳ್ಳಲಾಗುತ್ತಿದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Cholesterol: ಕೊಲೆಸ್ಟೆರಾಲ್ ನಿಜಕ್ಕೂ ಕೆಟ್ಟದ್ದೇ? ಇದಕ್ಕೂ ಹೃದಯಾಘಾತಕ್ಕೂ ನೇರಾನೇರ ಸಂಬಂಧ ಇದೆಯೇ?
ಕಠಿಣ ಕೆಲಸ ಮಾಡದಂತೆ ಕೇಂದ್ರ ಸೂಚನೆ
“ಕೊರೊನಾ ಸೋಂಕು ತಗುಲಿ, ಐಸಿಯುನಲ್ಲಿ ಚಿಕಿತ್ಸೆ ಪಡೆಯುವುದು ಸೇರಿ ಆರೋಗ್ಯ ಸ್ಥಿತಿ ಗಂಭೀರವಾಗಿ, ಬದುಕಿ ಬಂದವರು ಯಾವುದೇ ಕಾರಣಕ್ಕೂ ಹೆಚ್ಚು ಕೆಲಸ ಮಾಡಬಾರದು. ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ICMR) ಅಧ್ಯಯನ ವರದಿ ಪ್ರಕಾರ, ಹೃದಯಾಘಾತದ ಭೀತಿ ಇರುವ ಕಾರಣ ಒಂದಷ್ಟು ಸಮಯದವರೆಗೆ ಕೊರೊನಾ ಸೋಂಕಿತರು ಹೆಚ್ಚು ಸಮಯದವರೆಗೆ ಅಥವಾ ಹೆಚ್ಚು ಭಾರ ಹೊರುವ ಕೆಲಸ ಮಾಡಬಾರದು. ಒಂದು ವರ್ಷ ಅಥವಾ ಎರಡು ವರ್ಷಗಳವರೆಗೆ ಇಂತಹ ವ್ಯಕ್ತಿಗಳು ಅತಿಯಾದ ವ್ಯಾಯಾಮ, ಜಿಮ್‌ನಲ್ಲಿ ವರ್ಕೌಟ್ ಕೂಡ ಮಾಡಬಾರದು” ಎಂದು ಅಧ್ಯಯನ ವರದಿ ಉಲ್ಲೇಖಿಸಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಂಡಾವೀಯ ತಿಳಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ