ಶ್ರೀನಗರ: ದೇಶಕ್ಕೆ ದೇಶವೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದೆ. ಒಂದು ದಿನ ಕಳೆದರೆ ದೇಶಾದ್ಯಂತ 76ನೇ ಸ್ವಾತಂತ್ರ್ಯ ದಿನ (Independence Day 2023) ಆಚರಿಸಲಾಗುತ್ತದೆ. ದೆಹಲಿಯ ಕೆಂಪು ಕೋಟೆಯಲ್ಲಿ ನರೇಂದ್ರ ಮೋದಿ ಅವರು ತಿರಂಗಾ ಹಾರಿಸಲಿದ್ದಾರೆ. ದೇಶದ ಮೂಲೆ ಮೂಲೆಯಲ್ಲಿಯೂ ಆಗಸ್ಟ್ 15ರಂದು ತಿರಂಗಾ ಹಾರಲಿದೆ. ಇದರ ಬೆನ್ನಲ್ಲೇ, ಜಮ್ಮು-ಕಾಶ್ಮೀರದಲ್ಲಿ (Jammu Kashmir) ಹಿಜ್ಬುಲ್ ಮುಜಾಹಿದ್ದೀನ್ ಉಗ್ರನ ಸಹೋದರರೊಬ್ಬರು ತಿರಂಗಾ (Tiranga) ಬೀಸುವ ಮೂಲಕ ದೇಶಪ್ರೇಮ ಮೆರೆದಿದ್ದಾರೆ.
ಹೌದು, ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯಲ್ಲಿ ಸಕ್ರಿಯನಾಗಿರುವ ಜಾವಿದ್ ಮಟ್ಟೂ ಸಹೋದರ ರಯೀಸ್ ಮಟ್ಟೂ ಅವರು ಜಮ್ಮು-ಕಾಶ್ಮೀರದ ಸೋಪೊರ್‌ನಲ್ಲಿರುವ ತಮ್ಮ ನಿವಾಸದಲ್ಲಿ ತಿರಂಗಾ ಬೀಸಿದ್ದಾರೆ. ಆ ಮೂಲಕ ನಮ್ಮದು ಉಗ್ರರ ಕುಟುಂಬವಲ್ಲ, ದೇಶಭಕ್ತರ ಕುಟುಂಬ ಎಂಬ ಸಂದೇಶ ರವಾನಿಸಿದ್ದಾರೆ. ಇವರು ತಿರಂಗಾ ಬೀಸಿದ ಫೋಟೊಗಳು ಲಭ್ಯವಾಗಿದ್ದು, ಅವರು ವೈರಲ್ ಆಗಿವೆ.
ಜಾವಿದ್ ಮಟ್ಟು ಅಲಿಯಾಸ್ ಫೈಸಲ್ ಅಲಿಯಾಸ್ ಸಾಕಿಬ್ ಅಲಿಯಾಸ್ ಮುಸೈಬ್ ಎಂಬಾತನು ರಯೀಸ್ ಮಟ್ಟೂ ಅವರ ಸಹೋದರನಾಗಿದ್ದು, ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಸೇರಿದ್ದಾನೆ. ಆತನು ಭದ್ರತಾ ಸಿಬ್ಬಂದಿಯ ಟಾಪ್ 10 ಟಾರ್ಗೆಟ್‌ಗಳಲ್ಲಿ ಒಬ್ಬನಾಗಿದ್ದಾನೆ. ಒಂದೆಡೆ, ಜಾವಿದ್ ಮಟ್ಟು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರೆ, ಆತನ ಸಹೋದರ ದೇಶಭಕ್ತಿಯನ್ನು ಪ್ರದರ್ಶಿಸಿದ್ದಾನೆ. ಭದ್ರತಾ ಸಿಬ್ಬಂದಿಯು ಜಾವಿದ್ ಮಟ್ಟೂನನ್ನು ಹತ್ಯೆಗೈಯಲು ಸಿದ್ಧರಾಗಿದ್ದರೆ, ರಯೀಸ್ ಮಟ್ಟು ದೇಶಪ್ರೇಮಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Independence Day 2023: ತಿರಂಗಾವನ್ನು ಜಾಲತಾಣಗಳ ಡಿಪಿ ಇಟ್ಟು ದೇಶಪ್ರೇಮ ಮೆರೆಯಲು ಮೋದಿ ಕರೆ
ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧತೆ
ಸ್ವಾತಂತ್ರ್ಯ ದಿನಾಚರಣೆಗೆ ದೇಶಕ್ಕೆ ದೇಶವೇ ಸಿದ್ಧವಾಗುತ್ತಿದೆ. ಅದರಲ್ಲೂ, ದೆಹಲಿಯಲ್ಲಿ ಅದ್ಧೂರಿ ಕಾರ್ಯಕ್ರಮಕ್ಕೆ ಇನ್ನಿಲ್ಲದ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಹಾಗಾಗಿ, ದೇಶದ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಆಗಸ್ಟ್ 13ರಿಂದ 15ರವರೆಗೆ ಮೂರು ದಿನ ನಡೆಯುವ ಹರ್ ಘರ್ ತಿರಂಗಾ (ಪ್ರತಿ ಮನೆಯಲ್ಲೂ ತಿರಂಗಾ) ಅಭಿಯಾನದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ. ಇದಕ್ಕೆ ಜನರಿಂದ ಉತ್ತಮ ಸ್ಪಂದನೆಯೂ ದೊರೆತಿದೆ.