Site icon Vistara News

Independence Day 2023: ಹೀಗಿತ್ತು ಸ್ವತಂತ್ರ ಭಾರತ ಸಾಗಿ ಬಂದ ಹಾದಿ!

independence day

ಒಂದು ಕಾಲದಲ್ಲಿ ಪ್ರಪಂಚದ ಶಿಕ್ಷಣ ಕೇಂದ್ರವಾಗಿದ್ದ (ನಲಂದಾ) ಭಾರತ ಬ್ರಿಟಿಷರ ಕಾಲದಲ್ಲಿ ಅವರು ಮಾಡಿದ ಲೂಟಿಯಿಂದಾಗಿ ಆರ್ಥಿಕ- ಸಾಮಾಜಿಕ ಕ್ಷೇತ್ರಗಳಲ್ಲಿ ಪಾತಾಳಕ್ಕಿಳಿದಿತ್ತು. ಆದರೆ ಇಂದು ಮತ್ತೆ ಪ್ರಪಂಚದ ವಿಜ್ಞಾನ, ತಂತ್ರಜ್ಞಾನ, ಐಟಿ, ವೈದ್ಯಕೀಯ, ಗಣಿತ, ಧಾರ್ಮಿಕ ಕೇಂದ್ರವಾಗಿ ಮತ್ತೆ ಬೆಳಗುತ್ತಿದೆ. ಹಾಗಿದ್ದರೆ ನಮಗೆ ಸ್ವಾತಂತ್ರ್ಯ ಪ್ರಾಪ್ತಿಯಾದ ನಂತರ, 15ನೇ ಆಗಸ್ಟ್ 1947ರಿಂದ ಈ ಕಾಲದವರೆಗೆ ಭಾರತ ಬೆಳೆದು ಬಂದ ಬಗೆ ಹೇಗೆ? ನಮ್ಮ ದೇಶದ ನೋಟ ಹೇಗೆ ಬದಲಾಯಿತು? ವಿಜ್ಞಾನ, ತಂತ್ರಜ್ಞಾನ, ಆರ್ಥಿಕತೆ, ಮಾನವ ಅಭಿವೃದ್ಧಿಯಂತಹ ಹಲವಾರು ಕ್ಷೇತ್ರಗಳಲ್ಲಿ ಭಾರತ ಏನನ್ನು ಹೇಗೆ ಸಾಧಿಸಿತು ಎಂಬುದನ್ನು ಸ್ವಾತಂತ್ರ್ಯ ದಿನಾಚರಣೆಯ (Independence Day 2023) ಶುಭ ಸಂದರ್ಭದಲ್ಲಿ ಒಂದೊಂದಾಗಿ ನೋಡೋಣ.

ಘನತೆ ತಂದುಕೊಟ್ಟ ವಿಜ್ಞಾನ- ತಂತ್ರಜ್ಞಾನ

ಬ್ರಿಟಿಷರು ಭಾರತವನ್ನು ತೊರೆದಾಗ ಭಾರತ ಆರ್ಥಿಕವಾಗಿ ಅಸ್ಥಿರವಾಗಿತ್ತು. ಸ್ವತಂತ್ರ ಭಾರತ ಮೊದಲ ಪಂಚವಾರ್ಷಿಕ ಯೋಜನೆಯಲ್ಲಿ ವೈಜ್ಞಾನಿಕ ಸಂಶೋಧನೆಗೆ ಆದ್ಯತೆ ನೀಡಿತು. ಇದು ಐಐಟಿ ಮತ್ತು ಐಐಎಸ್‌ಸಿಯಂತಹ ಪ್ರತಿಷ್ಠಿತ ವೈಜ್ಞಾನಿಕ ಸಂಸ್ಥೆಗಳಿಗೆ ದಾರಿ ಮಾಡಿಕೊಟ್ಟಿತು. ಸ್ವಾತಂತ್ರ್ಯದ ಕೇವಲ ಮೂರು ವರ್ಷಗಳ ನಂತರ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯನ್ನು 1950ರಲ್ಲಿ ಸ್ಥಾಪಿಸಲಾಯಿತು. ಈ ಸಂಸ್ಥೆಗಳು ವಿದೇಶಿ ಸಂಸ್ಥೆಗಳ ನೆರವಿನೊಂದಿಗೆ ಭಾರತದಲ್ಲಿ ಸಂಶೋಧನೆಯನ್ನು ಉತ್ತೇಜಿಸಿದವು. 1975ರಲ್ಲಿ ತನ್ನ ಮೊದಲ ಉಪಗ್ರಹ ಆರ್ಯಭಟವನ್ನು ಉಡಾವಣೆ ಮಾಡಿತು; ಇಂದು ನಾವು ಮಂಗಳನ ಕಕ್ಷೆಯವರೆಗೂ ತಲುಪಿದ್ದೇವೆ. ಭಾರತವು ಬಾಹ್ಯಾಕಾಶ ಸಂಶೋಧನಾ ತಂತ್ರಜ್ಞಾನ ಕ್ಷೇತ್ರದಲ್ಲಿ ಇಟ್ಟು ದಾಪುಗಾಲು ನಂಬಲಾಗದ್ದು. ಭಾರತ ಇಡೀ ಜಗತ್ತಿಗೆ ಲಸಿಕೆಗಳನ್ನು ಉತ್ಪಾದಿಸುತ್ತಿದೆ. ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲೂ ನಾವೇ ಗ್ರೇಟ್.‌ UPIಯ ಯಶಸ್ಸು ಜಗತ್ತಿಗೆ ಒಂದು ಯಶಸ್ವೀ ಕೇಸ್ ಸ್ಟಡಿ. 2022ರ ಮೊದಲ ತ್ರೈಮಾಸಿಕದಲ್ಲಿ ರೂ. 10.2 ಲಕ್ಷ ಕೋಟಿ ರೂ. ಮೌಲ್ಯದ 936 ಕೋಟಿ ವಹಿವಾಟುಗಳು!

ಎತ್ತರಕ್ಕೇರಿದ ಆರ್ಥಿಕತೆ

1947ರಲ್ಲಿ ಭಾರತ ಸ್ವತಂತ್ರವಾದಾಗ ನಮ್ಮ ಜಿಡಿಪಿ ಕೇವಲ 2.7 ಲಕ್ಷ ಕೋಟಿಯಷ್ಟಿತ್ತು. ಇದು ಪ್ರಪಂಚದ GDPಯ ಕೇವಲ 3% ಮಾತ್ರ. 1965ರಲ್ಲಿ, ಎಂ.ಎಸ್.ಸ್ವಾಮಿನಾಥನ್ ಮೂಲಕ ಭಾರತದಲ್ಲಿ ಹಸಿರು ಕ್ರಾಂತಿ ಆರಂಭವಾಯಿತು. ಈ ಸಮಯದಲ್ಲಿ, ಹೆಚ್ಚಿನ ಇಳುವರಿ ನೀಡುವ ಗೋಧಿ ಮತ್ತು ಭತ್ತದ ತಳಿಗಳು, ಹೆಚ್ಚಿದ ಕೃಷಿ ಪ್ರದೇಶಗಳು, 1978-1979ರಿಂದ ದಾಖಲೆ 131 ದಶಲಕ್ಷ ಟನ್‌ಗಳ ಧಾನ್ಯ ಉತ್ಪಾದನೆಗೆ ಕಾರಣವಾಯಿತು. ಆಗ ಭಾರತ ವಿಶ್ವದ ಅಗ್ರ ಕೃಷಿ ಉತ್ಪಾದಕರಲ್ಲಿ ಒಂದೆಂದು ಗುರುತಿಸಲ್ಪಟ್ಟಿತು. ಕಾರ್ಖಾನೆಗಳು ಮತ್ತು ಜಲವಿದ್ಯುತ್ ಸ್ಥಾವರಗಳ ನಿರ್ಮಾಣ ಹೆಚ್ಚಿತು. ಕೃಷಿ ಕಾರ್ಮಿಕರ ಜೊತೆಗೆ ಕೈಗಾರಿಕಾ ಕಾರ್ಮಿಕರಿಗೆ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾದವು. ಇಂದು ಭಾರತ 147 ಲಕ್ಷ ಕೋಟಿ ಜಿಡಿಪಿಯೊಂದಿಗೆ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆ. ಇದು ಜಾಗತಿಕ ಜಿಡಿಪಿಯ 8%ರಷ್ಟಿದೆ. ದೇಶದಲ್ಲಿ ಸ್ಟಾರ್ಟ್‌ಅಪ್‌ ಸಂಖ್ಯೆ 15,400%ನಷ್ಟು ಏರಿಕೆ ಕಂಡಿದೆ. 2016ರಲ್ಲಿ 471 ಇದ್ದದ್ದು ಜೂನ್ 2022ರ ಹೊತ್ತಿಗೆ 72,993ಕ್ಕೆ ಏರಿದೆ. ಸ್ಟಾರ್ಟ್‌ಅಪ್‌ಗಳ ಈ ಅಸಾಧಾರಣ ಏರಿಕೆಯಿಂದ ದೇಶದಲ್ಲಿ ಲಕ್ಷಾಂತರ ಹೊಸ ಉದ್ಯೋಗಗಳು ಹುಟ್ಟಿವೆ.

ಜೋಡಿಸಿದ ಮೂಲಸೌಕರ್ಯ

ಸ್ವಾತಂತ್ರ್ಯದ 76 ವರ್ಷಗಳಲ್ಲಿ ಭಾರತೀಯ ಮೂಲಸೌಕರ್ಯ ತೀವ್ರವಾಗಿ ಸುಧಾರಿಸಿದೆ. ಭಾರತೀಯ ರಸ್ತೆ ಜಾಲದ ಒಟ್ಟಾರೆ ಉದ್ದ 1951ರಲ್ಲಿ 4 ಲಕ್ಷ ಕಿಮೀಗಳಿದ್ದುದು, 2015ರ ಹೊತ್ತಿಗೆ 47 ಲಕ್ಷ ಕಿಮೀಗೆ ಬೆಳೆದಿದೆ. ಇದು ವಿಶ್ವದ ಮೂರನೇ ಅತಿದೊಡ್ಡ ರಸ್ತೆ ಮಾರ್ಗ ಜಾಲ. ಭಾರತದ ರಾಷ್ಟ್ರೀಯ ಹೆದ್ದಾರಿ ವ್ಯವಸ್ಥೆ 2021ರಲ್ಲಿ 1,37,625 ಕಿಲೋಮೀಟರ್‌ ವ್ಯಾಪಿಸಿದೆ. 1947-1969ರ ಅವಧಿಯಲ್ಲಿ ಇದು 24,000 ಕಿಮೀ ಇತ್ತು. ಭಾರತ ಏಷ್ಯಾದ ಮೂರನೇ ಅತಿದೊಡ್ಡ ವಿದ್ಯುತ್ ಉತ್ಪಾದಕವಾಗಿ ಹೊರಹೊಮ್ಮಿದೆ. 1947ರಲ್ಲಿ 1,362 ಮೆಗಾವ್ಯಾಟ್‌ನಿಂದ ಇಂದಿನ 3,95,600 MWಗೆ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯ ಹೆಚ್ಚಿದೆ. 2018ರ ವೇಳೆಗೆ ದೇಶದ ಎಲ್ಲಾ 18,452 ಹಳ್ಳಿಗಳನ್ನು ವಿದ್ಯುತ್‌ನಿಂದ ಬೆಳಗಿಸುವಲ್ಲಿ ಯಶಸ್ವಿಯಾಗಿದೆ.

ಮಾನವ ಅಭಿವೃದ್ಧಿಯ ದೃಶ್ಯ

1947ರಲ್ಲಿ ಭಾರತ ಜನಸಂಖ್ಯೆ ಇದ್ದುದು 34 ಕೋಟಿ. ಕೇವಲ 12% ಸಾಕ್ಷರತೆ ದರವನ್ನು ಹೊಂದಿತ್ತು. ಇಂದು ಅದು ಸುಮಾರು 140 ಕೋಟಿ ಜನಸಂಖ್ಯೆಯನ್ನು ಹೊಂದಿದೆ ಮತ್ತು 74.04% ಸಾಕ್ಷರತೆಯನ್ನು ಹೊಂದಿದೆ. 2022ರಲ್ಲಿ ಇಲ್ಲಿನ ಪ್ರಜೆಗಳ ಸರಾಸರಿ ಜೀವಿತಾವಧಿ ಅಂದಿನ 32 ವರ್ಷಗಳಿಂದ 70 ವರ್ಷಗಳಿಗೆ ಏರಿದೆ.

ಸರ್ವರಿಗೆ ಶಿಕ್ಷಣ, ಎಲ್ಲರಿಗೆ ಆರೋಗ್ಯ

ಸರ್ವರಿಗೂ ಶಿಕ್ಷಣ ಹಾಗೂ ಎಲ್ಲರಿಗೂ ಆರೋಗ್ಯ ಎಂಬುದು ಉನ್ನತ ಆಶಯ; ಆದರೆ ಅದು ಇನ್ನೂ ಪೂರ್ತಿಯಾಗಿ ಜಾರಿಯಾಗಿಲ್ಲ. ಜಗತ್ತಿನ ಟಾಪ್ 100 ವಿಶ್ವ ವಿಶ್ವವಿದ್ಯಾಲಯಗಳಲ್ಲಿ ಒಂದೇ ಒಂದು ಭಾರತೀಯ ವಿಶ್ವವಿದ್ಯಾಲಯ ಅಥವಾ ಸಂಸ್ಥೆ ಇಲ್ಲ. ವಿಶ್ವದಲ್ಲೇ ಅತಿ ಹೆಚ್ಚು ಯುವ ಜನಸಂಖ್ಯೆ ಹೊಂದಿರುವ ಭಾರತ ತನ್ನ ಯುವಕರಿಗೆ ಸರಿಯಾದ ಕೌಶಲ್ಯ ಮತ್ತು ಶಿಕ್ಷಣ ದೊರೆತರೆ ಅದ್ಭುತಗಳನ್ನು ಸಾಧಿಸಬಹುದು. ಆರೋಗ್ಯ ಕ್ಷೇತ್ರದಲ್ಲೂ, WHO ಸರಾಸರಿ ಪ್ರಕಾರ 1000 ಜನರಿಗೆ 2.5 ವೈದ್ಯರಿರಬೇಕು; ಇಲ್ಲಿ ಆ ಅನುಪಾತ 1000 ಜನರಿಗೆ ಕೇವಲ 0.7 ವೈದ್ಯರಿದ್ದಾರೆ. ಇತ್ತೀಚಿನ ಅಧ್ಯಯನ ಪ್ರಕಾರ ಭಾರತದಲ್ಲಿ 65%ರಷ್ಟು ವೈದ್ಯಕೀಯ ವೆಚ್ಚವನ್ನು ರೋಗಿಗಳು ಜೇಬಿನಿಂದ ಪಾವತಿಸುತ್ತಾರೆ. ಸಾರ್ವಜನಿಕ ಆಸ್ಪತ್ರೆಗಳಲ್ಲಿನ ಕಳಪೆ ಸೌಲಭ್ಯಗಳಿಂದಾಗಿ ಖಾಸಗಿ ಆರೋಗ್ಯ ಸೇವೆ ಬೆಳೆದಿದೆ. ಆದರೆ ಭಾರತದಲ್ಲಿ ಕಲಿತ ಪ್ರತಿಭೆಗಳು ಯುರೋಪ್‌, ಅಮೆರಿಕಗಳಲ್ಲಿ ವೈದ್ಯರಾಗಿ, ವಿಜ್ಞಾನಿಗಳಾಗಿ ಭಾರಿ ಕೊಡುಗೆ ನೀಡುತ್ತಿದ್ದಾರೆ.

ಪ್ರಜಾಪ್ರಭುತ್ವದ ಹೆಮ್ಮೆಯ ನೆಲ

ಇಲ್ಲಿನ ರಾಜಕೀಯ ಕ್ಷೇತ್ರ ಪ್ರಜಾಪ್ರಭುತ್ವದ ಯಶಸ್ವೀ ಪ್ರಯೋಗ. ಜವಾಹರಲಾಲ್ ನೆಹರು ಭಾರತದ ಮೊದಲ ಪ್ರಧಾನ ಮಂತ್ರಿಯಾಗಿ ಸಮಾಜವಾದಿ- ಆರ್ಥಿಕ ವ್ಯವಸ್ಥೆಯನ್ನು ಉತ್ತೇಜಿಸಿದರು. ಇದರಲ್ಲಿ ಪಂಚವಾರ್ಷಿಕ ಯೋಜನೆಗಳು, ಗಣಿಗಾರಿಕೆ, ಉಕ್ಕು, ವಾಯುಯಾನ ಮತ್ತಿತರ ಭಾರೀ ಕೈಗಾರಿಕೆಗಳು, ಆರ್ಥಿಕತೆಯ ದೊಡ್ಡ ವಲಯಗಳ ರಾಷ್ಟ್ರೀಕರಣ ಎಲ್ಲಾ ಇತ್ತು. ಬೃಹತ್ ಸಾರ್ವಜನಿಕ ಕಾರ್ಯಗಳು ಮತ್ತು ಕೈಗಾರಿಕೀಕರಣದ ಚಾಲನೆಯು ಪ್ರಮುಖ ಅಣೆಕಟ್ಟುಗಳು, ರಸ್ತೆಗಳು, ನೀರಾವರಿ ಕಾಲುವೆಗಳು, ಉಷ್ಣ ಮತ್ತು ಜಲವಿದ್ಯುತ್ ಸ್ಥಾವರಗಳು ಬಂದವು. 1970ರ ದಶಕದ ಆರಂಭದಲ್ಲಿ ಭಾರತದ ಜನಸಂಖ್ಯೆ 50 ಕೋಟಿ ಮೀರಿದರೂ ಹಸಿರು ಕ್ರಾಂತಿ ಎಲ್ಲರಿಗೂ ಆಹಾರ ನೀಡಿತು. ಪಿ.ವಿ ನರಸಿಂಹ ರಾವ್, ಮನಮೋಹನ ಸಿಂಗ್ ಮತ್ತಿತರ ಪ್ರಧಾನಿಗಳು ಇನ್ನಷ್ಟು ಆರ್ಥಿಕ ಬದಲಾವಣೆಗಳನ್ನು ತಂದರು. ಇದರಿಂದ ಬಡತನ ಸುಮಾರು 22%ಕ್ಕೆ ಇಳಿದಿದೆ. ಒಟ್ಟು ದೇಶೀಯ ಉತ್ಪನ್ನದ ಬೆಳವಣಿಗೆ 7% ಮೀರಿದೆ. ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಸತತ ಮೂರು ಅವಧಿಗೆ ಅಧಿಕಾರದಲ್ಲಿದ್ದು, ರಾಷ್ಟ್ರೀಕರಣ ಮೊದಲಾದ ದಿಟ್ಟ ನಿರ್ಧಾರಗಳನ್ನು ಕೈಗೊಂಡರು. 2007ರಲ್ಲಿ ದೇಶ ಮೊದಲ ಮಹಿಳಾ ರಾಷ್ಟ್ರಪತಿಯನ್ನು (ಪ್ರತಿಭಾ ಪಾಟೀಲ್) ಕಂಡಿತು. ಇಂದು ನರೇಂದ್ರ ಮೋದಿಯವರ ಆಡಳಿತದಲ್ಲಿ ಸೆಕ್ಷನ್ 370ರ ರದ್ದತಿ, ರಕ್ಷಣಾ ವ್ಯವಸ್ಥೆಗಳ ಗಟ್ಟಿತನ, ಸ್ಟಾರ್ಟಪ್‌ಗಳಿಗೆ ಉತ್ತೇಜನ, ಇನ್ನಿತರ ಮಹತ್ವದ ಬದಲಾವಣೆಗಳು ಸಂಭವಿಸಿವೆ. ಮೂಲಸೌಕರ್ಯ ಮತ್ತು ಉತ್ಪಾದನೆ ವಿಸ್ತರಣೆಗೆ ಮೋದಿ ಆಡಳಿತ ತಂದೆ ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ವಚ್ಛ ಭಾರತ್ ಯೋಜನೆಗಳು ಮನೆಮಾತು.

ಕಾನೂನಿನ ಕೈಗಳಲ್ಲಿ

ಸ್ವಾತಂತ್ರ್ಯದ ಮೊದಲು, ಪ್ರಿವಿ ಕೌನ್ಸಿಲ್ ಭಾರತದಲ್ಲಿ ಅತ್ಯುನ್ನತ ಮೇಲ್ಮನವಿ ಪ್ರಾಧಿಕಾರವಾಗಿತ್ತು. ಸ್ವಾತಂತ್ರ್ಯದ ನಂತರದ ಮೊದಲ ಕ್ರಮವಾಗಿ ಈ ಕೌನ್ಸಿಲ್ ಅನ್ನು ರದ್ದುಗೊಳಿಸಲಾಯಿತು. ಬಿ.ಆರ್.ಅಂಬೇಡ್ಕರ್ ಅವರ ತೀಕ್ಷ್ಣವಾದ ಕಾನೂನು ಬುದ್ಧಿಶಕ್ತಿಯ ಮೂಲಕ ಮೂಡಿಬಂದ ಸಂವಿಧಾನವು ಬಲಿಷ್ಠವಾದ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳಿಗೆ ನಾಂದಿ ಹಾಕಿತು. ಇಂದು ಭಾರತದ ಸಂವಿಧಾನವೇ ಸರ್ವೋಚ್ಚ ಕಾನೂನಾಗಿ ಕಾರ್ಯನಿರ್ವಹಿಸುತ್ತದೆ. ಭಾರತೀಯ ಕಾನೂನು ವ್ಯವಸ್ಥೆಯು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಪ್ರಮುಖ ಅಂಶವಾಗಿ ಅಭಿವೃದ್ಧಿಗೊಂಡಿದೆ. ಎಲ್ಲಾ ನಾಗರಿಕರಿಗೆ ಸಾಂವಿಧಾನಿಕ ಹಕ್ಕುಗಳನ್ನು ಇದು ರಕ್ಷಿಸುತ್ತದೆ. 1950ರಲ್ಲಿ ಇದನ್ನು ಅಂಗೀಕರಿಸಿದಾಗಿನಿಂದ ಅಕ್ಟೋಬರ್ 2021ರವರೆಗೆ 105 ತಿದ್ದುಪಡಿಗಳನ್ನು ಕಂಡಿದೆ. ಜುಲೈ 2022ರ ಹೊತ್ತಿಗೆ ಭಾರತದ ಕಾನೂನು ಮತ್ತು ನ್ಯಾಯ ಸಚಿವಾಲಯದ ಶಾಸಕಾಂಗ ಇಲಾಖೆಯ ಮಾಹಿತಿಯ ಪ್ರಕಾರ ಸುಮಾರು 839 ಕೇಂದ್ರ ಕಾನೂನುಗಳಿವೆ.

ಸುರಕ್ಷತೆಯ ಭರವಸೆ

142 ದೊಡ್ಡ ದೇಶಗಳ ಪೈಕಿ ಭಾರತೀಯ ಸೇನೆಗೆ 4ನೇ ಸ್ಥಾನವಿದೆ. 1962ರಿಂದ ಈಚೆಗೆ ಭಾರತ ತನ್ನ ಹಿಂದಿನ ತಪ್ಪುಗಳಿಂದ ಖಂಡಿತವಾಗಿಯೂ ಅನೇಕ ಪಾಠಗಳನ್ನು ಕಲಿತಿದೆ. ಭಾರತೀಯ ರಕ್ಷಣಾ ವ್ಯವಸ್ಥೆ ಇಂದು ಖ್ಯಾತಿ ಗಳಿಸಲು ಸಾಧ್ಯವಾಗಿರುವ ಕಾರಣಗಳಲ್ಲಿ ಒಂದು 1958ರಲ್ಲಿ ಸ್ಥಾಪಿಸಲಾದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO). ನಮ್ಮ ಕ್ಷಿಪಣಿ ವ್ಯವಸ್ಥೆಗಳು, ಸಣ್ಣ ಮತ್ತು ದೊಡ್ಡ ಶಸ್ತ್ರಾಸ್ತ್ರಗಳು, ಫಿರಂಗಿ ವ್ಯವಸ್ಥೆಗಳು, ಎಲೆಕ್ಟ್ರಾನಿಕ್ ಸಮರ (EW) ವ್ಯವಸ್ಥೆಗಳು, ಟ್ಯಾಂಕ್‌ಗಳು, ಶಸ್ತ್ರಸಜ್ಜಿತ ವಾಹನಗಳು ಎಲ್ಲವೂ ಇದರ ಕೊಡುಗೆ. 1950ರ ದಶಕದ ಉತ್ತರಾರ್ಧದಲ್ಲಿ ಪರಮಾಣು ಶಕ್ತಿಯ ಮೇಲೆ ಕೆಲಸ ಮಾಡಲು ಪ್ರಾರಂಭಿಸಿ, 1970ರ ಹೊತ್ತಿಗೆ ಸ್ಥಳೀಯ ಪರಮಾಣು ಶಕ್ತಿ ಸ್ಥಾವರಗಳನ್ನು ಹೊಂದಿತು. 1971ರಲ್ಲಿ ಪೋಖ್ರಾಣ್‌ನಲ್ಲಿ ಮೊದಲ ಪ್ರಾಯೋಗಿಕ ಪರಮಾಣು ಬಾಂಬ್‌ ಸ್ಫೋಟಿಸಿ ತನ್ನ ಶಕ್ತಿಯನ್ನು ಜಗತ್ತಿಗೆ ಜಾಹೀರುಗೊಳಿಸಿತು. ಎಪಿಜೆ ಅಬ್ದುಲ್ ಕಲಾಂ ಅವರ ನಿರ್ದೇಶನದಲ್ಲಿ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮ (IGMDP) ನಡೆಯಿತು. 1989ರಲ್ಲಿ, ದೂರವ್ಯಾಪ್ತಿಯ ಅಗ್ನಿ ಕ್ಷಿಪಣಿ ಪರೀಕ್ಷಿಸಲಾಯಿತು. ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ವಿನ್ಯಾಸಗೊಳಿಸಲಾಗಿದೆ. ಸ್ವಂತ ಫೈಟರ್ ಜೆಟ್‌ಗಳು, ಹೆಲಿಕಾಪ್ಟರ್‌ಗಳು, ಜಲಾಂತರ್ಗಾಮಿಗಳು, ಕ್ಷಿಪಣಿಗಳು ಮತ್ತು ವಿಮಾನವಾಹಕ ನೌಕೆಗಳನ್ನು ನಿರ್ಮಿಸಿದ ಒಂದು ಡಜನ್ ರಾಷ್ಟ್ರಗಳಲ್ಲಿ ಭಾರತವೂ ಒಂದು.

ಹಲವು ನೆಲೆಗಳನ್ನು ಭಾರತ ಹೀಗೆ ಅಭಿವೃದ್ಧಿ ಹೊಂದಿದೆಯಾದರೂ, ಭಾರತವನ್ನು ʼಸೂಪರ್ ಪವರ್’ ಮಾಡಬೇಕಿದ್ದರೆ ಇನ್ನೂ ಬಹಳಷ್ಟು ಮುನ್ನಡೆಯುವುದಿದೆ. ನಮ್ಮ ಆರ್ಥಿಕ ಬೆಳವಣಿಗೆಯಲ್ಲಿ ಅಂಚಿನಲ್ಲಿರುವ ಸಮುದಾಯಗಳು, ಮಹಿಳೆಯರ ಭಾಗವಹಿಸುವಿಕೆ ಇನ್ನಷ್ಟು ಹೆಚ್ಚಬೇಕಿದೆ. ನಮ್ಮ ʼಆಜಾದಿ ಕಾ ಅಮೃತ್ ಮಹೋತ್ಸವʼ ಇದಕ್ಕೊಂದು ಅವಕಾಶ.

ಇದನ್ನೂ ಓದಿ: Independence Day 2023 : ಹೀಗಿತ್ತು ಗಾಂಧೀಜಿ ಮತ್ತು ಕರ್ನಾಟಕದ ನಂಟು…

Exit mobile version