Site icon Vistara News

Independence Day 2023: ಭಾರತದ ಧ್ವಜ ಹಾರಿಸಿದ ಮೊದಲ ಮಹಿಳೆ ಭಿಕಾಜಿ ಕಾಮಾ

bhikaji kama flag

:: ಡಾ. ಎಸ್.ಬಿ. ಬಸೆಟ್ಟಿ

ಭಾರತದ ರಾಷ್ಟ್ರೀಯ ಧ್ವಜ (Indian flag) ನಿರ್ಮಾಣದ ಇತಿಹಾಸದಲ್ಲಿ ಮೇಡಂ ಭಿಕಾಜಿ ರುಸ್ತಮ್ ಕಾಮಾ (Madam Bhikaaji Kama) ಅವರ ಹೆಸರು ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟಿದೆ. ಭಾರತದ ಸ್ವಾತಂತ್ರ್ಯಕ್ಕಾಗಿ (indian independence) ಹೋರಾಟ ನಡೆಸುತ್ತಿದ್ದ ದೇಶಪ್ರೇಮಿಗಳು ಭಾರತೀಯರೆಲ್ಲರೂ ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಲು ಒಂದಾಗಬೇಕಾದರೆ ಅವರ ಗಮನ ಕೇಂದ್ರಿಕರಿಸುವದಕ್ಕೆ, ಅವರು ಏಕೀಕೃತವಾದ ನಿಷ್ಠೆಯನ್ನು ಸಲ್ಲಿಸುವುದಕ್ಕೆ ರಾಷ್ಟ್ರಧ್ವಜವೊಂದರ ಅವಶ್ಯಕತೆಯನ್ನು ಮನಗಂಡರು. ಫ್ರಾನ್ಸಿನಲ್ಲಿ ಆಶ್ರಯ ಹೊಂದಿದ್ದ ಮೇಡಂ ಕಾಮಾ ಮತ್ತು ಮಿತ್ರರು ಮೊಟ್ಟ ಮೊದಲಿಗೆ 1906ರಲ್ಲಿ ಒಂದು ರಾಷ್ಟ್ರೀಯ ಧ್ವಜವನ್ನು ಕಲ್ಪಿಸಿದರು. ಇದು ಭಾರತದಲ್ಲಿ ಪ್ರಚಾರದಲ್ಲಿ ಬರಲಿಲ್ಲ. ಮೇಡಂ ಕಾಮಾ ಅವರು ನಮ್ಮ ಸ್ವಾತಂತ್ರ್ಯ ಹೋರಾಟವನ್ನು ವಿದೇಶದಿಂದ ಬೆಂಬಲಿಸಿದವರಲ್ಲಿ ಒಬ್ಬರು. ಅವರು ವಿದೇಶೀ ನೆಲದಲ್ಲಿ ಭಾರತದ ಧ್ವಜ ಹಾರಿಸಿದವರಲ್ಲಿ ಮೊದಲಿಗರು. ಅವರು ಇದೇ ರೀತಿಯಾಗಿ ವಿಶ್ವಕ್ಕೆ, ಭಾರತವು ಬ್ರಿಟಿಷ್ ಸರಕಾರದ ವಿರುದ್ಧ ನಡೆಸಿದ ಸ್ವಾತಂತ್ರ್ಯ ಸಂಗ್ರಾಮದ (indian freedom fight) ಪರಿಚಯ ನೀಡಿದರು.

ಜುಲೈ 2, 1947ರಂದು ಸಂವಿಧಾನ ಸಭೆಯಲ್ಲಿ ರಾಷ್ಟ್ರಧ್ವಜವನ್ನು ಅಂಗೀಕರಿಸಲಾಯಿತು. ಧ್ವಜವನ್ನು ಅಳವಡಿಸಿಕೊಳ್ಳುವ ನಿರ್ಣಯದ ನಂತರ ನಿಯೋಜಿತ ಪ್ರಧಾನಿ ಪಂ. ಜವಾಹರಲಾಲ್ ನೆಹರು ಹೇಳಿದರು: “ಈ ಸದನದಲ್ಲಿ ಅನೇಕರು ನನ್ನಂತೆಯೇ ಪುಳಕ ಅನುಭವಿಸುತ್ತಾರೆ ಎಂದು ನನಗೆ ಖಾತ್ರಿಯಿದೆ. ಈಗ ನಾವು ಸ್ವೀಕರಿಸುವ ಧ್ವಜದ ಹಿಂದೆ ಇತಿಹಾಸವಿದೆ. ನಾವು ಈ ಧ್ವಜವನ್ನು ಹೆಮ್ಮೆಯಿಂದ, ಉತ್ಸಾಹದಿಂದ ನೋಡಿದ್ದೇವೆ. ಈ ಧ್ವಜದ ನೋಟವು ನಮಗೆ ಮುಂದುವರಿಯಲು ಧೈರ್ಯ ನೀಡಿತು.ʼʼ

ಈ ಧ್ವಜವನ್ನು ನಂತರದ ಪೀಳಿಗೆಗೆ ಹಸ್ತಾಂತರಿಸಿದ ಆರಂಭಿಕ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಭಿಕಾಜಿ ಕಾಮಾ ಕೂಡ ಒಬ್ಬರು. ಭಾರತದಲ್ಲಿ ಮೊದಲ ರಾಷ್ಟ್ರಧ್ವಜವನ್ನು ಆಗಸ್ಟ್ 7, 1906ರಂದು ಕಲ್ಕತ್ತಾದ ಪಾರ್ಸಿ ಬಗಾನ್ ಚೌಕದಲ್ಲಿ (ಗ್ರೀನ್ ಪಾರ್ಕ್) ಹಾರಿಸಲಾಯಿತು ಎಂದು ಹೇಳಲಾಗುತ್ತದೆ. ಧ್ವಜವು ಕೆಂಪು, ಹಳದಿ ಮತ್ತು ಹಸಿರು ಬಣ್ಣದ ಸಮತಲ ಪಟ್ಟಿಗಳಿಂದ ಕೂಡಿತ್ತು. ಎರಡನೇ ಧ್ವಜವನ್ನು ಪ್ಯಾರಿಸ್‌ನಲ್ಲಿ ಮೇಡಂ ಕಾಮಾ ಮತ್ತು ಅವರ ದೇಶಭ್ರಷ್ಟ ಕ್ರಾಂತಿಕಾರಿಗಳ ತಂಡ 1907ರಲ್ಲಿ ಹಾರಿಸಿತು (ಕೆಲವರ ಪ್ರಕಾರ 1905ರಲ್ಲಿ). ಬರ್ಲಿನ್‌ನಲ್ಲಿ ನಡೆದ ಸಮಾಜವಾದಿ ಸಮ್ಮೇಳನದಲ್ಲಿ ಈ ಧ್ವಜವನ್ನು ಪ್ರದರ್ಶಿಸಲಾಯಿತು.

ಮೇಡಂ ಭಿಕಾಜಿ ರುಸ್ತುಂ ಕೆ.ಆರ್. ಕಾಮಾ ಅವರು ಮುಂಬಯಿಯ ಸೊರಬ್‍ಜಿ ಫ್ರಾಮ್‍ಜಿ ಪಟೇಲ್ ಅವರ ಪುತ್ರಿ. ಮೇಡಂ ಕಾಮಾ ಅವರು 1857ರ ಸುಮಾರಿಗೆ ಜನಿಸಿದರು. ಮುಂಬಯಿಯ ಗಣ್ಯ ಸಾಲಿಸಿಟರ್ ಆಗಿದ್ದ ಪಾರ್ಸಿ ಸುಧಾಕರ ಕೆ.ಆರ್. ಕಾಮ್ ಅವರ ಪುತ್ರನ ಜೊತೆ ಅವರ ವಿವಾಹವಾಯಿತು. ಮೇಡಂ ಕಾಮಾ ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಮುಂಬೈಯ ಅಲೆಕ್ಸಾಂಡ್ರ ಪಾರ್ಸಿ ಬಾಲಕಿಯರ ಶಾಲೆಯಲ್ಲಿ ಪಡೆದರು. ಅವರೇ ತಿಳಿಸಿದ ಪ್ರಕಾರ ಅವರ 1902ರಿಂದ ಯುರೋಪ್‍ನಲ್ಲಿದ್ದು, ಜರ್ಮನಿ, ಪ್ಯಾರಿಸ್ ಸ್ಕಾಟ್‍ಲ್ಯಾಂಡ್ ಮತ್ತು ಲಂಡನ್‍ನಲ್ಲಿ ತಲಾ ಒಂದೊಂದು ವರ್ಷ ಕಳೆದರು. 22ನೇ ಆಗಸ್ಟ್‌ 1907ರಂದು ಜರ್ಮನಿಯ ಸ್ಟುಟ್‍ಗಾರ್ಟ್‍ನಲ್ಲಿ ದ್ವಿತೀಯ ಅಂತಾರಾಷ್ಟ್ರೀಯ ಸಾಮಾಜಿಕ ಸಮ್ಮೇಳನದಲ್ಲಿ ವಿವಿಧ ದೇಶಗಳಿಂದ ಸುಮಾರು ಸಾವಿರಾರು ಸದಸ್ಯರು ಸೇರಿದ್ದರು. ಆ ಸಭೆಯಲ್ಲಿ ಅವರು ಸಭಿಕರನ್ನು ದಂಗು ಬಡಿಸುವಂತಹ ಬಿರುಸಿನ ಭಾಷಣ ಮಾಡಿದರು. ತಮ್ಮ ಭಾವನಾತ್ಮಕ ಭಾಷಣದ ನಂತರ ಹಸಿರು, ಸ್ವರ್ಣ ಮತ್ತು ಕೇಸರಿ ತ್ರಿವರ್ಣಗಳನ್ನೊಳಗೊಂಡ ಧ್ವಜ ಏರಿಸಿದರು. ಅಲ್ಲಿರುವ ಎಲ್ಲ ಮಹನೀಯರು ಎದ್ದು ನಿಂತು, ಭಾರತದ ಸ್ವಾತಂತ್ರ್ಯದ ರಾಷ್ಟ್ರೀಯ ಧ್ವಜಕ್ಕೆ ವಂದಿಸಬೇಕೆಂದು ವಿನಂತಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ವೇದಿಕೆಯೊಂದರಲ್ಲಿ ಭಾರತ ಸ್ವಾತಂತ್ರ್ಯದ ರಾಷ್ಟ್ರೀಯ ಧ್ವಜ ಹಾರಿಸಿದ ಪ್ರಥಮ ವ್ಯಕ್ತಿ ಕಾಮಾ ಅವರಾಗಿದ್ದಾರೆ.

ಅವರು 22ನೇ ಆಗಸ್ಟ್‌ 1907ರಂದು ಏರಿಸಿದ ಧ್ವಜದಲ್ಲಿ ಮೂರು ಪಟ್ಟಿಗಳಿದ್ದವು. ಮೇಲ್ಭಾಗ ಮುಸ್ಲಿಮರಿಗೆ ಪವಿತ್ರವೆನಿಸಿದ ಹಸಿರು, ಮಧ್ಯಭಾಗದಲ್ಲಿ ಬೌದ್ಧರಿಗೂ ಸಿಖ್ಖರಿಗೂ ಪವಿತ್ರವೆನಿಸಿದ ಕೇಸರಿ ಮತ್ತು ಕೆಳಗೆ ಹಿಂದೂಗಳಿಗೆ ಪವಿತ್ರವೆನಿಸಿದ ಕೆಂಪು ವರ್ಣದ ಪಟ್ಟಿಯಿತ್ತು. ಆ ಧ್ವಜದಲ್ಲಿ ಬ್ರಿಟಿಷ್ ಭಾರತದ ಎಂಟು ಪ್ರಾಂತ್ಯಗಳನ್ನು ಪ್ರತಿನಿಧಿಸುವ ಎಂಟು ಕಮಲಗಳಿದ್ದವು. ಮಧ್ಯಭಾಗದ ಸ್ವರ್ಣ ಪಟ್ಟಿಯಲ್ಲಿ ದೇವನಾಗರಿ ಲಿಪಿಯಲ್ಲಿ ‘ವಂದೇ ಮಾತರಂ’ ಎಂದು ಬರೆಯಲಾಗಿತ್ತು. ಕೆಳಗಿನ ಕೆಂಪು ಪಟ್ಟಿಯಲ್ಲಿ ಧ್ವಜದ ಮುಕ್ತಭಾಗದಲ್ಲಿ ಸೂರ್ಯನ ಮತ್ತು ದಂಡವಿರುವ ಭಾಗದಲ್ಲಿ ಅರ್ಧ ಚಂದ್ರನ ಚಿತ್ರವೂ ಇತ್ತು.

ಮೇಡಂ ಭಿಕಾಜಿ ಕಾಮಾ

ಕಾಮಾ ಅವರ ಧ್ವಜವನ್ನು ಬಹುಶಃ ಅವರೂ ಹಾಗೂ ಅವರ ಮಿತ್ರರಾದ ವೀರ ಸಾವರ್ಕರ್ ಮತ್ತು ಶ್ಯಾಮ್‍ಜಿ ಕೃಷ್ಣ ವರ್ಮಾ ಸೇರಿ ರಚಿಸಿರಬೇಕು. ಅವರ ಮಾರ್ಗದರ್ಶನದಲ್ಲಿ ಬಂಗಾಳದ ಒಬ್ಬ ಯುವ ಕ್ರಾಂತಿಕಾರಿ ಹೇಮಚಂದ್ರದಾಸ್ (ಕನುಂಗೋ) ರಚಿಸಿದ್ದಾರೆ. ಭಾರತದ ಪರಿಸ್ಥಿತಿಯ ಬಗ್ಗೆ ಅರಿವು ಮೂಡಿಸಲು ಮತ್ತು ಭಾರತದ ರಾಷ್ಟ್ರೀಯ ಚಳುವಳಿಗೆ ಬೆಂಬಲ ದೊರಕಿಸಿಕೊಳ್ಳಲು ಮ್ಯಾಡಮ್ ಕಾಮಾ ಅವರು ಸ್ಟುಟ್‍ಗರ್ಟ್‍ನಲ್ಲಿ ವಿಜಯ ಸಾಧಿಸಿದ 10 ವಾರಗಳ ನಂತರ ಅಮೇರಿಕಾಗೆ ಹೋಗಿ ಧ್ವಜದ ಜೊತೆಗೆ ಇಡೀ ದೇಶದ ಪ್ರವಾಸ ಮಾಡಿದರು.

ಲಂಡನ್‍ನ ಇಂಡಿಯಾ ಹೌಸ್‍ನಲ್ಲಿ 24ನೇ ನವೆಂಬರ್ 1908 ರಂದು ನಡೆದ ಸಭೆಯಲ್ಲಿ ಮ್ಯಾಡಮ್ ಕಾಮಾ ಅವರು ಸಿಲ್ಕ್ ಮತ್ತು ಚಿನ್ನದ ದಾರಗಳಲ್ಲಿ ಹೆಣೆದ ಒಂದು ಧ್ವಜವನ್ನು ಪ್ರದರ್ಶಿಸಿದ್ದಾರೆ. ಅದರಲ್ಲಿ “1908ರ ಹುತಾತ್ಮರ ಸ್ಮರಣಾರ್ಥ” ಎಂದು ಬರೆಯಲಾಗಿತ್ತು. ಗುರು ಗೋವಿಂದ್ ಸಿಂಗ್ ಅವರ ಜಯಂತಿಯನ್ನು 29ನೇ ಡಿಸೆಂಬರ್‌ನಂದು ವೆಸ್ಟ್ ಮಿನಿಸ್ಟರ್‌ನ ಕ್ಯಾಕ್ಸ್‌ಟಾನ್ ಹಾಲ್‍ನಲ್ಲಿ ಐತಿಹಾಸಿಕ ಸಭೆಯಾಗಿ ಆಚರಿಸಲಾಯಿತು. ಅದರಲ್ಲಿ ವಿ.ಡಿ. ಸಾವರ್ಕರ್, ಲಾಲಾ ಲಜಪತರಾಯ್, ಬಿ.ಸಿ. ಪಾಲ್ ಮತ್ತು ಇತರ ಕ್ರಾಂತಿಕಾರಿಗಳು ಭಾಗವಹಿಸಿದ್ದಾರೆ. ಹಿಂಬದಿಯಲ್ಲಿ ‘ಸತ್ ಶ್ರೀ ಅಕಾಲ್’ ಎಂದು ಬರೆದಿರುವ ಒಂದು ಭಿತ್ತಿಪತ್ರವಿದೆಯಲ್ಲದೆ ಎರಡು ಧ್ವಜಗಳು ಇವೆ. ಒಂದು ಸಿಖ್ಖರ ಧ್ವಜ ಮತ್ತು ಇನ್ನೊಂದು ಭಾರತದ ಸ್ವಾತಂತ್ರ್ಯದ ಧ್ವಜವಿರುವದು.‌

ಡಿಸೆಂಬರ್ 1935ರಲ್ಲಿ ಕೊನೆಗೂ ಭಾರತಕ್ಕೆ ಹಿಂದಿರುಗುವ ಮುಂಚೆ ಮ್ಯಾಡಮ್ ಕಾಮಾ ಪಕ್ಷವಾತಕ್ಕೆ ಈಡಾಗಿದ್ದರು. ಇದರಿಂದ ಅವರು ದೈಹಿಕವಾಗಿ ಬಹಳಷ್ಟು ಕ್ಷೀಣಿಸಿದ್ದರು. ಅವರ ದೃಷ್ಟಿಯೂ ಮಂದವಾಗಿತ್ತು. ಅವರಿಗೆ ತಮ್ಮ ಅವಸಾನ ಹತ್ತಿರವಾಗಿರುವದು ಗೊತ್ತಾಗಿತ್ತು. ಆದರೆ ಭಾರತೀಯ ಧ್ವಜ ಮುಂದೊತ್ತಲೇಬೇಕಾಗಿತ್ತು. ಹೋರಾಟವೂ ಮುಂದುವರಿಯಬೇಕಾಗಿತ್ತು. ಆದುದರಿಂದ ಅವರು ತಮ್ಮ ಸಹಯೋಗಿ ಮಾಧವರಾವ್ ಅವರನ್ನು ಪ್ಯಾರಿಸ್‍ನಲ್ಲಿ ಕರೆಸಿಕೊಂಡು ತಮ್ಮ ಅವರಿಗೆ ನೀಡಿದರು. 33 ವರ್ಷಗಳ ಪರದೇಶ ವಾಸದ ನಂತರ ಅವರು ಡಿಸೆಂಬರ್ 1935ರಲ್ಲಿ ಭಾರತಕ್ಕೆ ಹಿಂದಿರುಗಿದರು. 16ನೇ ಆಗಸ್ಟ್ 1936ರಂದು ತಮ್ಮ ಮಾತೃಭೂಮಿಯಲ್ಲಿ ನಿಧನ ಹೊಂದಿದರು.

ಕಲ್ಕತ್ತಾದ ಧ್ವಜ ಮತ್ತು ಮ್ಯಾಡಮ್ ಕಾಮಾ ಅವರ ಧ್ವಜದ ನಡುವೆ ಬಹಳ ಸಾಮ್ಯವಿತ್ತು. ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಆರಂಭದ ವರ್ಷಗಳಲ್ಲಿ ಅಮೇರಿಕಾ, ಜರ್ಮನಿ ಮತ್ತು ಮೆಸೋಪೊಟೇಮಿಯಾದಲ್ಲಿನ ಭಾರತದ ಕ್ರಾಂತಿಕಾರಿಗಳು ತ್ರಿವರ್ಣ ಧ್ವಜವನ್ನು ವ್ಯಾಪಕವಾಗಿ ಬಳಸಿದ್ದರು.

ಇದನ್ನೂ ಓದಿ: Independence Day 2023 : ಟೆಲಿಫೋನ್‌, ಮೊಬೈಲ್‌ ಇಲ್ಲದ ಆ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸಂವಹನ ಹೀಗಿತ್ತು!

ಹೊಸ ದೆಹಲಿಯ ಹೃದಯಭಾಗದಲ್ಲಿರುವ ವಾಣಿಜ್ಯ ಕೇಂದ್ರವನ್ನು ಒಳಗೊಂಡಂತೆ ದೇಶದ ಹಲವು ನಗರಗಳು ಭಿಕಾಜಿ ಕಾಮಾ ಹೆಸರಿನ ಬೀದಿಗಳು ಮತ್ತು ಸ್ಥಳಗಳನ್ನು ಹೊಂದಿವೆ. ಜನವರಿ 26, 1962ರಂದು, ಭಾರತದ 11ನೇ ಗಣರಾಜ್ಯ ದಿನದಂದು, ಭಾರತೀಯ ಅಂಚೆ ಮತ್ತು ಟೆಲಿಗ್ರಾಫ್ ಇಲಾಖೆಯು ಅವಳ ಗೌರವಾರ್ಥವಾಗಿ ಸ್ಮರಣಾರ್ಥ ಅಂಚೆಚೀಟಿಯನ್ನು ಬಿಡುಗಡೆ ಮಾಡಿತು. ಮೇಡಮ್ ಕಾಮಾ ಅವರು ದೇಶಭಕ್ತರಿಗೆ ಸ್ಫೂರ್ತಿಯ ಮೂಲವಾಗಿ ಮುಂದುವರಿಯುತ್ತಾರೆ.

(ಲೇಖಕರು ಸಹಾಯಕ ಪ್ರಾಧ್ಯಾಪಕರು, ಗಾಂಧಿ ಅಧ್ಯಯನ ವಿಭಾಗ, ಕ.ವಿ.ವಿ., ಧಾರವಾಡ)

Exit mobile version