Site icon Vistara News

Independence Day 2024: ಬ್ರಿಟಿಷ್‌ ಕಾಲದ ಚಿನ್ನದ ನಾಣ್ಯದಿಂದ ಹಿಡಿದು ಸ್ವತಂತ್ರ ಭಾರತದ ರೂಪಾಯಿವರೆಗಿನ ಇತಿಹಾಸ ಕುತೂಹಲಕರ!

Independence Day 2024

ಭಾರತದಲ್ಲಿ ನಾಣ್ಯ, ನೋಟುಗಳು (Indian Currency) ಚಲಾವಣೆಗೆ ಬಂದು ಹಲವು ಶತಮಾನಗಳೇ ಕಳೆದಿವೆ. ಇದರ ಬಹುದೊಡ್ಡ ಇತಿಹಾಸವೇ ಇದೆ. “ರೂಪಾಯಿ” (Rupee) ಪದದ ಮೂಲ ಸಂಸ್ಕೃತ ಪದ ‘ರೂಪ್ಯ’ದಿಂದ (Rupya) ಬಂದಿದೆ. ಇದರರ್ಥ ಆಕಾರ, ಮುದ್ರೆಯೊತ್ತಲ್ಪಟ್ಟ, ಪ್ರಭಾವಿತ ಅಥವಾ ನಾಣ್ಯ ಎಂಬುದಾಗಿದೆ. ಸಂಸ್ಕೃತ ಪದ “ರೌಪ್ಯ” ಅಂದರೆ ಬೆಳ್ಳಿಯಿಂದ ಮುದ್ರಿಸಲ್ಪಟ್ಟದ್ದು ಎಂಬ ಅರ್ಥವನ್ನು ಹೊಂದಿದೆ.

ನಾವು ಪ್ರಸ್ತುತ ಬಳಸುವ ರೂಪಾಯಿಗೂ ಕ್ರಿಸ್ತಪೂರ್ವ 6ನೇ ಶತಮಾನದ ನಾಣ್ಯಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಇದರ ಹಿನ್ನೆಲೆ ಸಾಕಷ್ಟು ಆಸಕ್ತಿದಾಯಕವಾಗಿದೆ. 19ನೇ ಶತಮಾನದಲ್ಲಿ ಬ್ರಿಟಿಷರು (British govt) ಮೊದಲ ಬಾರಿಗೆ ಕಾಗದದ ಕರೆನ್ಸಿಯನ್ನು ಪರಿಚಯಿಸಿದರು. 1861ರ ಕಾಗದದ ಕರೆನ್ಸಿ ಕಾಯಿದೆಯು ಬ್ರಿಟಿಷ್ ಭಾರತದ ವಿಶಾಲವಾದ ವಿಸ್ತಾರದ ಉದ್ದಕ್ಕೂ ನೀಡಲಾದ ನೋಟಿನ ಏಕಸ್ವಾಮ್ಯವನ್ನು ಸರ್ಕಾರಕ್ಕೆ ನೀಡಿತು.

ಭಾರತೀಯ ಕರೆನ್ಸಿ ನೋಟುಗಳು ಬ್ರಿಟಿಷರ ಆಡಳಿತದ ಬಳಿಕ ಹೇಗೆ ವಿಕಸನಗೊಂಡಿವೆ ಎಂಬುದರ ಕುರಿತು ಆಸಕ್ತಿದಾಯಕ ಮಾಹಿತಿಗಳು ಇಲ್ಲಿವೆ:

ಭಾರತದಲ್ಲಿ ನಾಣ್ಯಗಳನ್ನು ಕ್ರಿಸ್ತಪೂರ್ವ 6ನೇ ಶತಮಾನದಲ್ಲಿ ಮುದ್ರಿಸಲಾಯಿತು. ಆಗ ಇದನ್ನು ಕರ್ಷಪಣಗಳು ಅಥವಾ ಪಣಗಳು ಎಂದು ಕರೆಯಲಾಗುತ್ತಿತ್ತು. ಈ ನಾಣ್ಯಗಳು ಅನಿಯಮಿತ ಆಕಾರ, ಪ್ರಮಾಣಿತ ತೂಕವನ್ನು ಹೊಂದಿತ್ತು.

ಬ್ರಿಟಿಷರ ಕಾಲದ ನಾಣ್ಯಗಳು

ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಡಳಿತದ ಸಮಯದಲ್ಲಿ ಅಂದರೆ 1600ರಲ್ಲಿ ಮೊಘಲ್ ಕರೆನ್ಸಿಯು ಜನಪ್ರಿಯವಾಗಿತ್ತು. ಆದರೆ 1717ಎ.ಡಿನಲ್ಲಿ ಮೊಘಲ್ ಚಕ್ರವರ್ತಿ ಫರೂಖ್ ಸಿಯಾರ್ ಅವರು ಬ್ರಿಟಿಷರಿಗೆ ಬಾಂಬೆ ಟಂಕಸಾಲೆಯಲ್ಲಿ ಮೊಘಲ್ ಹಣವನ್ನು ನಾಣ್ಯ ಮಾಡಲು ಅನುಮತಿ ನೀಡಿದರು. ಅನಂತರ ಬ್ರಿಟಿಷರು ಚಿನ್ನದ ನಾಣ್ಯಗಳನ್ನು ಕ್ಯಾರೊಲಿನಾ ಎಂಬ ಹೆಸರಿನಲ್ಲಿ ತಂದರು. ಬೆಳ್ಳಿಯ ನಾಣ್ಯಗಳನ್ನು ಏಂಜಲೀನಾ ಎಂದು, ತಾಮ್ರದ ನಾಣ್ಯಗಳನ್ನು ಕಪ್ಪೆರೂನ್ ಮತ್ತು ತವರ ನಾಣ್ಯಗಳನ್ನು ಟಿನ್ನಿ ಎಂದು ಕರೆಯಲಾಯಿತು.


ಮೊದಲ ನೋಟು

18ನೇ ಶತಮಾನದಲ್ಲಿ ಬಂಗಾಳದಲ್ಲಿರುವ ಬ್ಯಾಂಕ್ ಆಫ್ ಹಿಂದೂಸ್ತಾನ್ ಜನರಲ್ ಬ್ಯಾಂಕ್ ಮತ್ತು ಬಂಗಾಳ ಬ್ಯಾಂಕ್ ಪೇಪರ್ ಕರೆನ್ಸಿಯನ್ನು ವಿತರಿಸಿದ ಭಾರತದ ಮೊದಲ ಬ್ಯಾಂಕುಗಳಾಗಿವೆ. 1812ರ ಸೆಪ್ಟೆಂಬರ್ 3ರಂದು ಬ್ಯಾಂಕ್ ಆಫ್ ಬೆಂಗಾಲ್ ಮೂಲಕ ಬ್ರಿಟಿಷರು ಇವುಗಳನ್ನು ಹೊರತಂದರು. ಇದು ಎರಡು ನೂರ ಐವತ್ತು ಸಿಕ್ಕಾ ರೂಪಾಯಿ ನೋಟಾಗಿತ್ತು.

ನಾಣ್ಯಗಳ ಕಾಯಿದೆ

1835ರ ನಾಣ್ಯಗಳ ಕಾಯಿದೆಯೊಂದಿಗೆ ದೇಶಾದ್ಯಂತ ಏಕರೂಪದ ನಾಣ್ಯವು ಚಲಾವಣೆಗೆ ಬಂದಿತ್ತು. 1858ರಲ್ಲಿ ಮೊಘಲ್ ಸಾಮ್ರಾಜ್ಯವು ಕೊನೆಗೊಂಡಿತು ಮತ್ತು ಬ್ರಿಟಿಷರು ನೂರು ರಾಜಪ್ರಭುತ್ವದ ರಾಜ್ಯಗಳ ಮೇಲೆ ಹಿಡಿತ ಸಾಧಿಸಿದರು. ಹೀಗಾಗಿ ಬಳಿಕ ನಾಣ್ಯಗಳ ಮೇಲೆ ಗ್ರೇಟ್ ಬ್ರಿಟನ್ ಪ್ರಭುತ್ವದ ರಾಜನ ಚಿತ್ರವನ್ನು ಮುದ್ರಿಸಲಾಯಿತು.

Indian Currency


6ನೇ ಕಿಂಗ್ ಜಾರ್ಜ್ ಬ್ಯಾಂಕ್ ನೋಟುಗಳು ಮತ್ತು ನಾಣ್ಯಗಳ ಮೇಲಿನ ವಿನ್ಯಾಸಗಳನ್ನು ಬದಲಿಸಿದರು. ಆದರೆ 1857ರ ದಂಗೆಯ ನಂತರ, ಅವರು ವಸಾಹತುಶಾಹಿ ಭಾರತದ ಅಧಿಕೃತ ಕರೆನ್ಸಿಯಾಗಿ ರೂಪಾಯಿಯನ್ನು ಮಾಡಿದರು.
1862ರಲ್ಲಿ ರಾಣಿ ವಿಕ್ಟೋರಿಯಾ ಗೌರವಾರ್ಥವಾಗಿ, ವಿಕ್ಟೋರಿಯಾ ಭಾವಚಿತ್ರದೊಂದಿಗೆ ಬ್ಯಾಂಕ್ ನೋಟುಗಳು ಮತ್ತು ನಾಣ್ಯಗಳ ಸರಣಿಯನ್ನು ಬಿಡುಗಡೆ ಮಾಡಲಾಯಿತು.

ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆ

ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು 1935ರಲ್ಲಿ ಸ್ಥಾಪಿಸಲಾಯಿತು. ಭಾರತ ಸರ್ಕಾರದ ನೋಟುಗಳನ್ನು ವಿತರಿಸಲು ಅಧಿಕಾರ ನೀಡಲಾಯಿತು. ಇದು ಮೊದಲಿಗೆ 10,000 ರೂಪಾಯಿ ಮೌಲ್ಯದ ನೋಟುಗಳನ್ನು ಮುದ್ರಿಸಿತ್ತು. ಆದರೆ ಸ್ವಾತಂತ್ರ್ಯದ ಅನಂತರ ಇದನ್ನು ಅಮಾನ್ಯಗೊಳಿಸಲಾಯಿತು.


ಆರ್‌ಬಿಐ ಬಿಡುಗಡೆ ಮಾಡಿದ ಮೊದಲ ನೋಟು

ಆರ್‌ಬಿಐ ಬಿಡುಗಡೆ ಮಾಡಿದ ಮೊದಲ ಕಾಗದದ ಕರೆನ್ಸಿ 1938ರ ಜನವರಿಯಲ್ಲಿ 6ನೇ ಕಿಂಗ್ ಜಾರ್ಜ್ ಆವರ ಭಾವಚಿತ್ರವನ್ನು ಹೊಂದಿರುವ 5 ರೂಪಾಯಿ ನೋಟಾಗಿತ್ತು.


ಸ್ವಾತಂತ್ರ್ಯ ಅನಂತರದ ನೋಟು

1947ರಲ್ಲಿ ಸ್ವಾತಂತ್ರ್ಯ ಪಡೆದ ಅನಂತರ ಮತ್ತು 1950ರ ದಶಕದಲ್ಲಿ ಭಾರತ ಗಣರಾಜ್ಯವಾದಾಗ ಭಾರತದ ಆಧುನಿಕ ರೂಪಾಯಿಯ ವಿನ್ಯಾಸ ಪಡೆಯಿತು. ಪೇಪರ್ ಕರೆನ್ಸಿಗೆ ಆಯ್ಕೆ ಮಾಡಲಾದ ಚಿಹ್ನೆಯು ಸಾರಾನಾಥದಲ್ಲಿರುವ ಸಿಂಹದ ಚಿಹ್ನೆಯನ್ನು ಒಳಗೊಂಡಿತ್ತು. ಇದು 6ನೇ ಜಾರ್ಜ್ ನ ಬ್ಯಾಂಕ್ ನೋಟುಗಳನ್ನು ಬದಲಾಯಿಸಿತು. ಆದ್ದರಿಂದ, ಸ್ವತಂತ್ರ ಭಾರತವು ಮುದ್ರಿಸಿದ ಮೊದಲ ನೋಟು 1 ರೂಪಾಯಿ ನೋಟು.

1 ರೂಪಾಯಿ ನೋಟಿನ ಇತಿಹಾಸ ಹೀಗಿದೆ

ಬ್ರಿಟಿಷ್ ಆಡಳಿತದ ಅವಧಿಯಲ್ಲಿ 1917ರ ನವೆಂಬರ್ 30ರಂದು ಒಂದು ರೂಪಾಯಿ ನೋಟನ್ನು ಬಿಡುಗಡೆ ಮಾಡಲಾಯಿತು. ಅದೂ ಮೊದಲನೇ ಮಹಾಯುದ್ಧದ ಸಮಯದಲ್ಲಿ.


ಆ ಕಾಲದಲ್ಲಿ ಒಂದು ರೂಪಾಯಿ ನಾಣ್ಯ ಬೆಳ್ಳಿಯದ್ದಾಗಿತ್ತು. ಆದರೆ ಯುದ್ಧದ ಕಾರಣ ಪರಿಸ್ಥಿತಿ ಹದಗೆಟ್ಟಿತು ಮತ್ತು ಒಂದು ರೂಪಾಯಿ ಬೆಳ್ಳಿಯ ನಾಣ್ಯವನ್ನು ಉತ್ಪಾದಿಸಲು ಸಾಧ್ಯವಾಗಲಿಲ್ಲ. ಈ ಕಾರಣದಿಂದಾಗಿ ಮೊದಲ ಬಾರಿಗೆ ಜನರ ಮುಂದೆ ಒಂದು ರೂಪಾಯಿ ನೋಟು ಬಿಡುಗಡೆಯಾಯಿತು. ಇದರಲ್ಲಿ 5ನೇ ಜಾರ್ಜ್ ನ ಚಿತ್ರವನ್ನು ನೋಟಿನಲ್ಲಿ ಅಳವಡಿಸಲಾಗಿತ್ತು. ಇಂಗ್ಲೆಂಡಿನಲ್ಲಿ ಮುದ್ರಿತವಾಗಿರುವ ಈ ಒಂದು ರೂಪಾಯಿ ನೋಟಿನ ಮೌಲ್ಯ ಇತರ ನೋಟುಗಳಿಗೆ ಹೋಲಿಸಿದರೆ ತುಂಬಾ ಕಡಿಮೆ ಇತ್ತು.

ನೋಟುಗಳ ಮೈಲುಗಲ್ಲು

1917-1918ರಲ್ಲಿಯೂ ಹೈದರಾಬಾದ್ ನಿಜಾಮರು ತಮ್ಮ ಸ್ವಂತ ಕರೆನ್ಸಿಯನ್ನು ಮುದ್ರಿಸಿ ಬಿಡುಗಡೆ ಮಾಡುವ ಸೌಲಭ್ಯ ಹೊಂದಿದ್ದರು. ಮೊದಲನೆಯ ಮಹಾಯುದ್ಧದಲ್ಲಿ ಲೋಹದ ಕೊರತೆಯಿಂದಾಗಿ ಮೊರ್ವಿ ರಾಜಪ್ರಭುತ್ವದ ರಾಜ್ಯಗಳು ಹರ್ವಾಲಾ ಎಂದು ಕರೆಯಲ್ಪಡುವ ಸೀಮಿತ ಹೊಣೆಗಾರಿಕೆಯ ಕರೆನ್ಸಿ ನೋಟುಗಳನ್ನು ಬಿಡುಗಡೆ ಮಾಡಿದ್ದವು.


1959ರಲ್ಲಿ ಭಾರತೀಯ ಹಜ್ ಯಾತ್ರಿಕರಿಗೆ ಹತ್ತು ರೂಪಾಯಿ ಮತ್ತು ನೂರು ರೂಪಾಯಿಗಳ ನೋಟನ್ನು ಬಿಡುಗಡೆ ಮಾಡಲಾಯಿತು. ಇದನ್ನು ಅವರು ಸೌದಿ ಅರೇಬಿಯಾದಲ್ಲಿ ಸ್ಥಳೀಯ ಕರೆನ್ಸಿಯೊಂದಿಗೆ ವಿನಿಮಯ ಮಾಡಿಕೊಳ್ಳಬಹುದಾಗಿತ್ತು.

1969ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ 5 ಮತ್ತು 10 ರೂ. ನೋಟುಗಳ ಮೇಲೆ ಮಹಾತ್ಮ ಗಾಂಧಿ ಜನ್ಮ ಶತಮಾನೋತ್ಸವದ ಸ್ಮರಣಾರ್ಥದ ವಿನ್ಯಾಸವನ್ನು ಮಾಡಿ ಬಿಡುಗಡೆ ಮಾಡಿತ್ತು.


ನಾಣ್ಯಗಳ ಬದಲಿಗೆ ಟೋಕನ್

ಎರಡನೇ ಮಹಾಯುದ್ಧದ ಸಮಯದಲ್ಲಿ ಲೋಹದ ಕೊರತೆಯಿಂದಾಗಿ 36 ರಾಜಪ್ರಭುತ್ವದ ರಾಜ್ಯಗಳು ಮುಖ್ಯವಾಗಿ ಗುಜರಾತ್, ರಾಜಸ್ಥಾನ, ಸಿಂಧ್, ಬಲೂಚಿಸ್ತಾನ್ ಮತ್ತು ಕೇಂದ್ರ ಪ್ರಾಂತ್ಯಗಳು ನಾಣ್ಯಗಳ ಬದಲಿಗೆ ಕಾಗದದ ಟೋಕನ್‌ಗಳನ್ನು ನೀಡಿದವು!


ನೋಟುಗಳಲ್ಲಿ ಮಹಾತ್ಮಾ ಗಾಂಧಿ ಚಿತ್ರ

ಅಂತಿಮವಾಗಿ 1996ರಲ್ಲಿ ಮಹಾತ್ಮಾ ಗಾಂಧಿ ಚಿತ್ರವನ್ನು ಹೊಂದಿರುವ ಕಾಗದದ ನೋಟುಗಳನ್ನು ಪರಿಚಯಿಸಲಾಯಿತು.

ಛಾಯಾಗ್ರಾಹಕನೊಬ್ಬ ತೆಗೆದ ಗಾಂಧಿಯ ಚಿತ್ರ

ಪ್ರಸ್ತುತ ನೋಟಿನಲ್ಲಿರುವ ಮಹಾತ್ಮ ಗಾಂಧಿಯವರ ನಗುಮುಖದ ಚಿತ್ರ ವ್ಯಂಗ್ಯಚಿತ್ರವೆಂದು ಕೆಲವರು ಹೇಳುತ್ತಾರೆ. ಆದರೆ ಇದು ನಿಜವಲ್ಲ. ಈ ಚಿತ್ರವನ್ನು 1946ರಲ್ಲಿ ಅಜ್ಞಾತ ಛಾಯಾಗ್ರಾಹಕರೊಬ್ಬರು ತೆಗೆದಿದ್ದು, ಅದನ್ನು ಕತ್ತರಿಸಿ ಮುದ್ರಿಸಲಾಗಿದೆ.


ರಾಜಕಾರಣಿ ಮತ್ತು ಗ್ರೇಟ್ ಬ್ರಿಟನ್‌ನಲ್ಲಿ ಮಹಿಳಾ ಮತದಾರರ ಚಳವಳಿಯ ನಾಯಕರಾಗಿದ್ದ ಲಾರ್ಡ್ ಫ್ರೆಡ್ರಿಕ್ ವಿಲಿಯಂ ಪೆಥಿಕ್-ಲಾರೆನ್ಸ್ ಅವರ ಪಕ್ಕದಲ್ಲಿ ನಿಂತಿದ್ದ ಮಹಾತ್ಮಾ ಗಾಂಧಿಯವರ ಚಿತ್ರವನ್ನು ಪ್ರಸ್ತುತ ರಾಷ್ಟ್ರಪತಿ ಭವನ ಎಂದು ಕರೆಯಲ್ಪಡುವ ಹಿಂದಿನ ವೈಸರಾಯ್ ಹೌಸ್‌ನಲ್ಲಿ ತೆಗೆಯಲಾಗಿತ್ತು. ಈ ಚಿತ್ರವನ್ನು 1996ರಲ್ಲಿ ಆರ್‌ಬಿಐ ಪರಿಚಯಿಸಿದ ಮಹಾತ್ಮ ಗಾಂಧಿ ಸರಣಿಯ ಬ್ಯಾಂಕ್ ನೋಟುಗಳಲ್ಲಿ ಬಳಸಲಾಗಿದೆ.


ವಿಭಿನ್ನ ಚಿತ್ರ ಬಳಕೆ

1981ರಲ್ಲಿ 10 ರೂ. ನೋಟು ಸಿಂಹದ ಲಾಂಛನ ಮತ್ತು ರಾಷ್ಟ್ರೀಯ ಪಕ್ಷಿಯಾದ ನವಿಲಿನ ಚಿತ್ರವನ್ನು ಹೊಂದಿತ್ತು.

1983- 84ರಲ್ಲಿ ಮುದ್ರಿಸಿರುವ 20 ರೂಪಾಯಿಯ ಬ್ಯಾಂಕ್ ನೋಟಿನ ಹಿಂಭಾಗದಲ್ಲಿ ಬೌದ್ಧರ ಚಕ್ರವನ್ನು ಒಳಗೊಂಡಿತ್ತು.

1996 ಜೂನ್‌ನಲ್ಲಿ ಮುದ್ರಿಸಲಾದ 100 ರೂ.ನ ನೋಟಿನಲ್ಲಿ ಮಹಾತ್ಮಾ ಗಾಂಧಿಯವರ ಮುಂಭಾಗದ ಚಿತ್ರದೊಂದಿಗೆ ಹಿಂಭಾಗದಲ್ಲಿ ಹಿಮಾಲಯ ಪರ್ವತಗಳನ್ನು ಚಿತ್ರಿಸಲಾಗಿದೆ.


1996ರ ಜೂನ್‌ನಲ್ಲಿ 10 ರೂ. ನೋಟಿನ ಮುಂಭಾಗದಲ್ಲಿ ಗಾಂಧಿ ಮತ್ತು ಹಿಂಭಾಗದಲ್ಲಿ ಜೀವವೈವಿಧ್ಯವನ್ನು ಸಂಕೇತಿಸುವ ಭಾರತದ ಪ್ರಾಣಿಗಳನ್ನು ಪ್ರತಿನಿಧಿಸುವ ಚಿತ್ರವನ್ನು ಚಿತ್ರಿಸಲಾಯಿತು.

1997ರ ಮಾರ್ಚ್‌ನಲ್ಲಿ ಮುದ್ರಿಸಲಾದ 50 ರೂ.ಗಳ ನೋಟಿನ ಹಿಂಭಾಗ ಮತ್ತು ಮುಂಭಾಗದಲ್ಲಿ ಭಾರತೀಯ ಸಂಸತ್ತು ಮತ್ತು ಮಹಾತ್ಮ ಗಾಂಧಿಯವರ ಚಿತ್ರವನ್ನು ನೀಡಲಾಗಿದೆ.


1997ರ ಅಕ್ಟೋಬರ್‌ನಲ್ಲಿ ಮಹಾತ್ಮಾ ಗಾಂಧಿಯವರ ಮುಂಭಾಗದ ಚಿತ್ರವಿರುವ 500 ರೂ.ಗಳನ್ನು ನೀಡಲಾಯಿತು ಮತ್ತು ಅದರ ಹಿಂಭಾಗದಲ್ಲಿ ದಂಡಿ ಮೆರವಣಿಗೆಯನ್ನು ಪ್ರತಿನಿಧಿಸುವ ಚಿತ್ರವನ್ನು ಹೊಂದಿತ್ತು.


ಇದು 1930ರ ಮಾರ್ಚ್ 12ರಂದು ಪ್ರಾರಂಭಿಸಿದ ಉಪ್ಪಿನ ಸತ್ಯಾಗ್ರಹವನ್ನು ಪ್ರತಿಬಿಂಬಿಸುತ್ತದೆ. ಗಾಂಧೀಜಿ ಅವರು ಆರಂಭಿಸಿದ ವ್ಯಾಪಕ ನಾಗರಿಕ ಅಸಹಕಾರ ಚಳವಳಿ ಇದು ಎಂದು ಪರಿಗಣಿಸಲಾಗಿದೆ. ಭಾರತದಲ್ಲಿ ಉಪ್ಪಿನ ಮೇಲೆ ಬ್ರಿಟಿಷ್‌ ಪ್ರಾಬಲ್ಯದ ವಿರುದ್ಧ ಗಾಂಧೀಜಿ ತಮ್ಮ ಅನುಯಾಯಿಗಳೊಂದಿಗೆ ಅಹಮದಾಬಾದ್ ಬಳಿಯ ಅವರ ಸಬರಮತಿ ಆಶ್ರಮದಿಂದ ನವಸಾರಿ ಜಿಲ್ಲೆ ಗುಜರಾತ್‌ನ ಕರಾವಳಿ ಗ್ರಾಮವಾದ ದಂಡಿಗೆ ಮೆರವಣಿಗೆ ನಡೆಸಿದರು. ಬ್ರಿಟಿಷ್ ಸರ್ಕಾರಕ್ಕೆ ತೆರಿಗೆ ಪಾವತಿಸದೆ ಉಪ್ಪನ್ನು ತಯಾರಿಸಿದರು. ಈ ರೀತಿಯಲ್ಲಿ 1930ರ ಏಪ್ರಿಲ್ 5ರಂದು ಗಾಂಧಿಯವರು ಉಪ್ಪಿನ ಕಾನೂನನ್ನು ಮುರಿದರು.


2000ರ ನವೆಂಬರ್‌ನಲ್ಲಿ ಗಾಂಧಿಯವರ ಮುಂಭಾಗದ ಚಿತ್ರದೊಂದಿಗೆ 1000 ರೂ.ಯನ್ನು ನೀಡಲಾಯಿತು. ಅದರ ಹಿಂಭಾಗದಲ್ಲಿ ಧಾನ್ಯ ಕೊಯ್ಲು ಅಂದರೆ ಕೃಷಿ ವಲಯ, ತೈಲ ಸಂಸ್ಕರಣೆ ಇತ್ಯಾದಿ ಹೊಂದಿರುವ ಭಾರತದ ಆರ್ಥಿಕತೆಯನ್ನು ಪ್ರತಿನಿಧಿಸುವ ಚಿತ್ರವನ್ನು ಹೊಂದಿದೆ.

2001ರ ಆಗಸ್ಟ್‌ನಲ್ಲಿ ಗಾಂಧಿಯವರ ಚಿತ್ರದೊಂದಿಗೆ 20 ರೂ. ನೀಡಲಾಯಿತು. ಇದರಲ್ಲಿ ತಾಳೆ ಮರಗಳ ಚಿತ್ರವನ್ನು ಹಿಂಭಾಗದಲ್ಲಿ ಮುದ್ರಿಸಲಾಯಿತು.

ಇದನ್ನೂ ಓದಿ: Independence Day 2024: ವಾಟ್ಸ್‌ಆಪ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ಸ್ಟಿಕ್ಕರ್‌, ಮೆಸೆಜ್‌, ಇಮೇಜ್‌ ಪಡೆಯುವುದು ಹೇಗೆ?

2001ರ ನವೆಂಬರ್ ನಲ್ಲಿ 5 ರೂ. ಮುಖಬೆಲೆಯ ನೋಟಿನ ಮುಂಭಾಗದಲ್ಲಿ ಮಹಾತ್ಮ ಗಾಂಧಿ ಮತ್ತು ಹಿಂಭಾಗದಲ್ಲಿ ಕೃಷಿ ಯಾಂತ್ರೀಕರಣದ ಚಿತ್ರವನ್ನು ಚಿತ್ರಿಸಲಾಯಿತು.

2016ರ ನವೆಂಬರ್‌ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪು ಹಣದ ವಿರುದ್ಧ ಸಮರ ಸಾರುವ ಸಲುವಾಗಿ ಹಿಂದಿನ 500 ಮತ್ತು 1000 ರೂ. ನೋಟುಗಳನ್ನು ಇದ್ದಕ್ಕಿದ್ದಂತೆ ರದ್ದು ಮಾಡಿ ದೇಶಾದ್ಯಂತ ಸಂಚಲನ ಮೂಡಿಸಿದರು. 2000 ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದರು. ಮುಂದೆ 500 ರೂ.ಯ ಹೊಸ ಮಾದರಿ ನೋಟುಗಳೂ ಬಂದವು. ಬಳಿಕ ಇದೀಗ 2000 ರೂ. ಮೌಲ್ಯದ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿದ್ದು, ಚಲಾವಣೆಯಲ್ಲಿರುವ ಅದನ್ನು ಆರ್‌ಬಿಐ ಹಿಂಪಡೆದಿದೆ. 2024ರ ಅಕ್ಟೋಬರ್ ಬಳಿಕ ಈ 2000 ರೂ. ನೋಟುಗಳು ಅಧಿಕೃತವಾಗಿ ಇತಿಹಾಸದ ಪುಟವನ್ನು ಸೇರಲಿದೆ!

Exit mobile version