ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಇಂದು ಬೆಳಗ್ಗೆ 7.30ಕ್ಕೆ ದಿಲ್ಲಿಯ ಕೆಂಪುಕೋಟೆಯ (Red Fort) ಮೇಲೆ 78ನೇ ಸ್ವಾತಂತ್ರ್ಯೋತ್ಸವದ ಭಾಷಣ (Independence day 2024) ಮಾಡಲಿದ್ದಾರೆ. ಧ್ವಜಾರೋಹಣದ ಬಳಿಕ ಸತತ 11ನೇ ಬಾರಿ ಭಾಷಣ ಮಾಡುವ ಮೂಲಕ ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರೂ ಮತ್ತು ಇಂದಿರಾ ಗಾಂಧಿ ಅವರ ದಾಖಲೆಯನ್ನು ಪ್ರಧಾನಿ ಮೋದಿ ಸರಿಗಟ್ಟಲಿದ್ದಾರೆ. ಮತ್ತು ಮನಮೋಹನ್ ಸಿಂಗ್ ಅವರ ದಾಖಲೆ ಮುರಿಯಲಿದ್ದಾರೆ.
ಸ್ವಾತಂತ್ರ್ಯ ದಿನದ ನೇರ ಪ್ರಸಾರ ಎಲ್ಲಿ?
ಕೆಂಪು ಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯ ನೇರ ಪ್ರಸಾರ ಕಾರ್ಯಕ್ರಮವನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲಾಗುತ್ತದೆ. ವಿಸ್ತಾರ ನ್ಯೂಸ್ ಟಿವಿ ಮತ್ತು ವಿಸ್ತಾರ ನ್ಯೂಸ್ ಯುಟ್ಯೂಬ್ ಚಾನೆಲ್ ಮೂಲಕವೂ ಮೋದಿಯವರ ಭಾಷಣ ನೇರ ಪ್ರಸಾರ ನೋಡಬಹುದು.
ಅಲ್ಲದೇ ಕಾರ್ಯಕ್ರಮವನ್ನು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಯೂಟ್ಯೂಬ್ ಚಾನೆಲ್ ಜೊತೆಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಎಕ್ಸ್‌ನಲ್ಲಿ @PIB_India ಮತ್ತು PMO ಟ್ವಿಟರ್ ಹ್ಯಾಂಡಲ್ ಮೂಲಕವೂ ಪ್ರಸಾರ ಮಾಡಲಾಗುತ್ತದೆ
2014ರಲ್ಲಿ ಮೊದಲ ಬಾರಿಗೆ ದಿಲ್ಲಿಯ ಕೆಂಪುಕೋಟೆಯಲ್ಲಿ ಆಗಸ್ಟ್ 15ರಂದು ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ್ ಮತ್ತು ಜನ್ ಧನ್ ಬ್ಯಾಂಕ್ ಖಾತೆಗಳ ಕುರಿತು ಹೇಳಿದ್ದರು. ಅಲ್ಲಿಂದ ಇಲ್ಲಿಯ ತನಕವು ಪ್ರತಿ ವರ್ಷವೂ ಅವರು ಹೊಸ ಹೊಸ ಅಭಿಯಾನಗಳ ಬಗ್ಗೆ ಮಾತನಾಡುತ್ತಾರೆ. ಈ ವರ್ಷವೂ ಯಾವ ಹೊಸ ವಿಚಾರದ ಬಗ್ಗೆ ಪ್ರಧಾನಿ ಮೋದಿ ಮಾತನಾಡುತ್ತಾರೆ ಎಂಬ ಬಗ್ಗೆ ಬಹಳ ಕುತೂಹಲ ಇದೆ.
ಸತತ ಮೂರನೇ ಬಾರಿ ಪ್ರಧಾನಿಯಾಗಿ ಗದ್ದುಗೆ ಏರಿರುವ ಮೋದಿ ತಮ್ಮ ನಾಳೆಯ ಭಾಷಣದ ವೇಳೆ ತಮ್ಮ ಸರ್ಕಾರದ ಸಾಧನೆಗಳು, ಕಾರ್ಯಕ್ರಮಗಳು ಮತ್ತು ದೇಶದ ಪ್ರಗತಿಗೆ ತಮ್ಮ ದೂರದೃಷ್ಟಿಯ ಸಂಗತಿಗಳ ಬಗ್ಗೆ ಬೆಳಕು ಚೆಲ್ಲುವ ಸಾಧ್ಯತೆಗಳಿವೆ. ಹೀಗಾಗಿ ಅವರ ಭಾಷಣವನ್ನು ಕೇಳಲು ದೇಶದ ಮೂಲೆಮೂಲೆಯಲ್ಲೂ ಜನರು ಕಾತರರಾಗಿರುತ್ತಾರೆ.
ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ದಾಖಲೆ ಬರೆದಿರುವ ಅವರು, ಈ ಅವಧಿಯ ಮೊದಲ ಸ್ವಾತಂತ್ರ್ಯ ದಿನದ ಭಾಷಣವಾಗಿದೆ. ಈ ಭಾಷಣದೊಂದಿಗೆ ಪ್ರಧಾನಿ ಮೋದಿ ಅವರು ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿಯವರ ಅನಂತರ ಕೆಂಪು ಕೋಟೆಯಲ್ಲಿ ಸತತ 11 ಸ್ವಾತಂತ್ರ್ಯ ದಿನದ ಭಾಷಣ ಮಾಡುವ ಮೂರನೇ ಭಾರತೀಯ ಪ್ರಧಾನಿಯಾಗಲಿದ್ದಾರೆ.
ಇನ್ನು ಪ್ರಧಾನಿಯವರ ಸ್ವಾತಂತ್ರ್ಯ ದಿನದ ಭಾಷಣದ ಅವಧಿಗೆ ಹೋಲಿಸಿದರೆ ಮೋದಿಯವರೇ ಅತಿ ಉದ್ದದ ಭಾಷಣ ಮಾಡಿರುವ ಪ್ರಧಾನಿಯಾಗಿದ್ದರೆ. ಪ್ರಧಾನಿ ಮೋದಿಯವರು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರತಿ ಭಾಷಣವನ್ನೂ ಸರಾಸರಿ 82 ನಿಮಿಷಗಳ ಕಾಲ ನಡೆಸಿದ್ದಾರೆ. ಇದು ಭಾರತದ ಇತಿಹಾಸದಲ್ಲೇ ಪ್ರಧಾನಿಯವರ ಅತಿ ಉದ್ದದ ಭಾಷಣವಾಗಿದೆ.
ಈ ಬಾರಿಯ ಥೀಮ್ ಏನು?
ಈ ಬಾರಿ ಸ್ವಾತಂತ್ರ್ಯ ದಿನದ ಥೀಮ್ “ವಿಕಸಿತ ಭಾರತ”. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಪರಿವರ್ತಿಸುವ ಸರ್ಕಾರದ ದೃಷ್ಟಿಕೋನವನ್ನು ಇದು ಸಾರುತ್ತದೆ. ಈ ವಿಷಯವು ಶಿಕ್ಷಣ, ಆರೋಗ್ಯ ರಕ್ಷಣೆ, ಮೂಲಸೌಕರ್ಯ ಮತ್ತು ತಂತ್ರಜ್ಞಾನದಲ್ಲಿ ಸಮಗ್ರ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುತ್ತದೆ. ಆರ್ಥಿಕ ಬೆಳವಣಿಗೆ, ಸಾಮಾಜಿಕ ಪ್ರಗತಿ ಮತ್ತು ಸುಸ್ಥಿರ ಅಭಿವೃದ್ಧಿಯ ಮೂಲಕ ಭಾರತದ ಜಾಗತಿಕ ಸ್ಥಾನಮಾನವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ: Droupadi Murmu: ಹೊಸ ಕ್ರಿಮಿನಲ್ ಕಾನೂನು ಸ್ವಾತಂತ್ರ್ಯ ಹೋರಾಟಗಾರರಿಗೆ ಸಂದ ಗೌರವ; ರಾಷ್ಟ್ರಪತಿ ಮುರ್ಮು