Site icon Vistara News

Independence day | ಮಗುವಿಗೆ ದೇಸಿ ಆಟಿಕೆಗಳನ್ನೇ ಕೊಡಿಸಿ ಎಂದ ಮೋದಿ

modi

ನವ ದೆಹಲಿ: ಆತ್ಮನಿರ್ಭರ ಭಾರತಕ್ಕೆ ಪ್ರತಿಯೊಬ್ಬರೂ ಕೊಡುಗೆ ನೀಡಬೇಕು. ಮನೆಮನೆಯಲ್ಲಿ ದೇಶಿ ಆಟಿಕೆಗಳನ್ನು ಬಳಸಿದಾಗ, ದೇಶಿ ಉತ್ಪನ್ನಗಳನ್ನೇ ಬಳಸಿದಾಗ ಸ್ವಾವಲಂಬಿ ಭಾರತದ ಕನಸು ನನಸಾಗುತ್ತದೆ ಎಂದು ಪ್ರಧಾನಿ ಮೋದಿ ಕೆಂಪುಕೋಟೆಯಿಂದ ಹೇಳಿದರು.

ನಮ್ಮ ಮಕ್ಕಳಿಗೆ ನಾವು ವಿದೇಶಿ ಆಟಿಕೆಗಳನ್ನು ಯಾಕೆ ಕೊಡಿಸಬೇಕು? ದೇಶಿ ಆಟಿಕೆಗಳನ್ನು ಕೊಡಿಸಲು ಪ್ರತಿ ಮನೆಯಲ್ಲೂ ಸಂಕಲ್ಪ ಮಾಡಬೇಕು. ದೇಶಿ ಉತ್ಪನ್ನಗಳನ್ನೇ ಬಳಸುವೆವು ಎಂದು ಪ್ರತಿಜ್ಞೆ ಮಾಡಬೇಕು. ನಾವು ಸಣ್ಣ ಸಣ್ಣ ವಸ್ತುಗಳಿಗೂ ವಿದೇಶಿ ಅವಲಂಬನೆ ನಿಲ್ಲಿಸಿದರೆ ಆತ್ಮನಿರ್ಭರ ಭಾರತವು ಸಂಪೂರ್ಣ ನಿಜವಾಗುತ್ತದೆ. ಇಂದು ಮಹರ್ಷಿ ಅರವಿಂದರ ಜಯಂತಿ ಕೂಡ ಆಗಿದೆ. ಅವರು ʼಸ್ವದೇಶಿಯಿಂದ ಸ್ವರಾಜ್ಯ, ಸ್ವರಾಜ್ಯದಿಂದ ಸುರಾಜ್ಯʼ ಎಂಬ ಮಂತ್ರವನ್ನು ನೀಡಿದರು. ಇದಕ್ಕಾಗಿ ʼಆತ್ಮನಿರ್ಭರ ಭಾರತʼ ಪ್ರತಿಯೊಬ್ಬ ಪ್ರಜೆಯ ಪಣ ಆಗಬೇಕು. ಆತ್ಮನಿರ್ಭರ ಭಾರತವು ಸಮಾಜದ ಜನಾಂದೋಲನ. 75 ವರ್ಷಗಳ ಬಳಿಕ ಮೊದಲ ಬಾರಿಗೆ ಕೆಂಪು ಕೋಟೆಯಿಂದ ಸ್ವದೇಶಿ ತೋಪುಗಳಿಂದಲೇ ಧ್ವಜವಂದನೆ ನಡೆದಿದೆ. ಇದನ್ನು ನನಸಾಗಿಸಿದ ನಮ್ಮ ದೇಶದ ಸೇನಾಯೋಧರಿಗೆ ನಾನು ನಮನ ಸಲ್ಲಿಸುತ್ತೇನೆ ಎಂದರು.

ಇದನ್ನೂ ಓದಿ: Independence day | ಜಗತ್ತಿನ ಸರ್ಟಿಫಿಕೇಟ್‌ಗೆ ನಾವೇಕೆ ಕಾಯಬೇಕು? ನಾವು ಇರೋದೇ ಹೀಗೆ: ಮೋದಿ ಸ್ಪಷ್ಟೋಕ್ತಿ

ಇಂದು ಭಾರತವು ಜಗತ್ತಿನ ಮ್ಯಾನುಫ್ಯಾಕ್ಚರಿಂಗ್‌ ಹಬ್‌ ಆಗುತ್ತಿದೆ. ಒಂದು ಲಕ್ಷ ಕೋಟಿ ರೂಪಾಯಿಯ ಪಿಎಲ್‌ಐ ಸ್ಕೀಮ್‌ ನಮ್ಮ ಉದ್ಯಮಿಗಳನ್ನು ಸ್ವಾವಲಂಬಿಗಳನ್ನಾಗಿಸಿದೆ. ಎಲೆಕ್ಟ್ರಾನಿಕ್‌ ವಸ್ತುಗಳು, ಮೊಬೈಲ್‌ ಫೋನ್‌ಗಳು ನಮ್ಮಲ್ಲೇ ತಯಾರಾಗುತ್ತಿವೆ. ನಮ್ಮ ಮೆಟ್ರೋ, ನಮ್ಮ ವಂದೇ ಭಾರತ್‌ ಟ್ರೇನು ವಿಶ್ವದ ಆಕರ್ಷಣೆಯಾಗುತ್ತಿದೆ. ನಮ್ಮ ವಿದ್ಯುತ್‌ ಕ್ಷೇತ್ರದಲ್ಲಿ ನಾವು ಯಾರಿಗೂ ಅವಲಂಬಿಯಾಗಬೇಕಿಲ್ಲ. ಸೋಲಾರ್‌ ವಿದ್ಯುತ್‌, ಸುಸ್ಥಿರ ವಿದ್ಯುತ್‌, ಮಿಷನ್‌ ಹೈಡ್ರೋಜನ್‌, ಪವರ್‌ ಪ್ಲಾಂಟ್‌ಗಳು, ಎಲೆಕ್ಟ್ರಿಕ್‌ ವಾಹನಗಳು ಇದೆಲ್ಲದರಲ್ಲೂ ಆತ್ಮನಿರ್ಭರ ಭಾರತವಾಗುತ್ತಿದ್ದೇವೆ. ಸಾವಯವ ಕೃಷಿಯು ಆತ್ಮನಿರ್ಭರಕ್ಕೆ ಕೊಡುಗೆ ನೀಡುತ್ತಿದೆ. ರಸಗೊಬ್ಬರಗಳಿಂದ ನಮ್ಮ ಕೃಷಿಗೆ ಮುಕ್ತಿ ನೀಡಬೇಕಿದೆ. ಹಸಿರು ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಆತ್ಮನಿರ್ಭರ ಭಾರತ ಕಟ್ಟುವಲ್ಲಿ ನೆರವಾಗುವಂತೆ ನಾನು ಖಾಸಗಿ ವಲಯಕ್ಕೂ ಆಹ್ವಾನ ನೀಡುತ್ತಿದ್ದೇನೆ ಎಂದು ನುಡಿದರು.

ಇದನ್ನೂ ಓದಿ: Independence Day | ಶ್ವೇತ ವರ್ಣದ ಪೇಟಾ, ನೀಲಿ ಕೋಟ್‌ನಲ್ಲಿ ಮಿಂಚಿದ ಪ್ರಧಾನಿ ನರೇಂದ್ರ ಮೋದಿ

Exit mobile version