ಹೊಸದಿಲ್ಲಿ: ಇಂದು ರಾಜಧಾನಿಯಲ್ಲಿ ಇಂಡಿಯಾ ಮೈತ್ರಿಕೂಟ (INDIA Bloc) ಪಕ್ಷಗಳ ಸಭೆ ಅಶೋಕ ಹೋಟೆಲ್‌ನಲ್ಲಿ ನಡೆಯಲಿದೆ. 2024ರ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿಯನ್ನು ಎದುರಿಸುವುದು ಏಕೈಕ ಪ್ರಮುಖ ಅಜೆಂಡಾ ಆಗಿದೆ. ಅದಕ್ಕೆ ಜಂಟಿ ಕಾರ್ಯತಂತ್ರ ರೂಪಿಸುವಿಕೆ, ಸೀಟು ಹಂಚಿಕೆ, ಜಂಟಿ ಪ್ರಚಾರದ ನೀಲನಕ್ಷೆ ಇತ್ಯಾದಿಗಳು ಸಭೆಯಲ್ಲಿ ಚರ್ಚೆಯಾಗಲಿವೆ.
ನಿನ್ನೆ ವಿರೋಧ ಪಕ್ಷಗಳ 78 ಸಂಸತ್ ಸದಸ್ಯರನ್ನು ಚಳಿಗಾಲದ ಅಧಿವೇಶನದ (Parliament winter session) ಅಂತ್ಯದವರೆಗೆ ಸ್ಪೀಕರ್ ಅಮಾನತುಗೊಳಿಸಿದ್ದರು. ಇದಾಗಿ ಒಂದು ದಿನದ ನಂತರ, ಇಂಡಿಯಾ ಬ್ಲಾಕ್ ಸಭೆ ನಡೆಸುತ್ತಿದೆ. ಕಳೆದ ವಾರದ ಅಮಾನತಿನೊಂದಿಗೆ ಒಟ್ಟು 92 ಪ್ರತಿಪಕ್ಷ ಸಂಸದರನ್ನು ಈ ಅಧಿವೇಶನದ ಅಂತ್ಯದವರೆಗೆ ಅಮಾನತುಗೊಳಿಸಲಾಗಿದೆ. ಇವರಲ್ಲಿ 14 ಮಂದಿ ಸೌಲಭ್ಯ ಸಮಿತಿಯ ಮುಂದೆ ವಿಚಾರಣೆಗೆ ಹಾಜರಾಗಬೇಕಾಗುತ್ತದೆ. ಇದು ದೀರ್ಘಾವಧಿ ಅಮಾನತಿಗೂ ಶಿಫಾರಸು ಮಾಡಬಹುದು.
ಮೈತ್ರಿಕೂಟದ ಸಭೆಗೆ ಒಂದು ದಿನ ಮೊದಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata banerjee) ಅವರು, 2024ರ ಸಾರ್ವತ್ರಿಕ ಚುನಾವಣೆಯ ನಂತರ ಇಂಡಿಯಾ ಬ್ಲಾಕ್‌ನ ಪ್ರಧಾನಿ ಅಭ್ಯರ್ಥಿಯನ್ನು ನಿರ್ಧರಿಸಲಾಗುವುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿಯನ್ನು ಸೋಲಿಸಲು ಸೀಟು ಹಂಚಿಕೆ ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದರು.
ಬ್ಯಾನರ್ಜಿ ಅವರು ಸೋಮವಾರ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ, ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Aravind Kejrival) ಮತ್ತು ಶಿವಸೇನಾ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಿದರು. ಟಿಎಂಸಿ ಸಂಸದ ಮತ್ತು ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ಸೌತ್ ಅವೆನ್ಯೂ ನಿವಾಸದಲ್ಲಿ ಸುಮಾರು 45 ನಿಮಿಷ ಮೀಟಿಂಗ್ ನಡೆಯಿತು. ಮಂಗಳವಾರದಿಂದ 10 ದಿನಗಳ ವಿಪಸ್ಸನ ಧ್ಯಾನಕ್ಕಾಗಿ ಕೇಜ್ರಿವಾಲ್ ಅಜ್ಞಾತ ಸ್ಥಳಕ್ಕೆ ಹೋಗಲಿದ್ದಾರೆ.
ಇಂಡಿಯಾ ಬ್ಲಾಕ್ ಸಭೆಗೆ ಮುನ್ನ ನಡೆದದ್ದು
- ಟಿಎಂಸಿ, ಕಾಂಗ್ರೆಸ್ ಮತ್ತು ಎಡಪಕ್ಷಗಳ ನಡುವೆ ಪಶ್ಚಿಮ ಬಂಗಾಳದಲ್ಲಿ ತ್ರಿಕೋನ ಮೈತ್ರಿ ಸಾಧ್ಯ ಎಂದು ಮಮತಾ ಬ್ಯಾನರ್ಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
- ಪ್ರಧಾನಿ ನರೇಂದ್ರ ಮೋದಿ ಮೂರನೇ ಅವಧಿಗೆ ಮರಳುತ್ತಾರೆ ಎಂಬ ಬಿಜೆಪಿ ವಿಶ್ವಾಸವನ್ನು ಮಮತಾ ಬ್ಯಾನರ್ಜಿ ಅವರು ತಳ್ಳಿಹಾಕಿದರು.
- ಸುದ್ದಿಗಾರರೊಂದಿಗೆ ಮಾತನಾಡಿದ ಬಿಹಾರದ ಉಪಮುಖ್ಯಮಂತ್ರಿ ಮತ್ತು ಆರ್ಜೆಡಿ ನಾಯಕ ತೇಜಸ್ವಿ ಯಾದವ್, ಈ ಹಿಂದೆ ರಚಿಸಲಾದ ಸಮಿತಿಗಳು ತೆರೆಮರೆಯಲ್ಲಿ ಕೆಲಸ ಮಾಡುತ್ತಿವೆ ಮತ್ತು ಚುನಾವಣೆಗೆ ಸಿದ್ಧತೆ ನಡೆಸುತ್ತಿವೆ. ವಿರೋಧ ಪಕ್ಷಗಳಲ್ಲಿರುವ ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ನಿರ್ವಹಿಸುತ್ತಾರೆ. ಪ್ರಾದೇಶಿಕ ಪಕ್ಷಗಳು ಬಹಳ ಪ್ರಬಲವಾಗಿವೆ ಎಂದು ಪ್ರತಿಪಾದಿಸಿದರು.
- ಇಂಡಿಯಾ ಬಣದಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪಾತ್ರದ ಕುರಿತು ಕೇಳಲಾದ ಪ್ರಶ್ನೆಗೆ, ಯಾದವ್, ಪ್ರತಿಯೊಬ್ಬರ ಪಾತ್ರವೂ ಒಂದೇ ಆಗಿರುತ್ತದೆ, “ವಿಭಜಕ ಶಕ್ತಿಗಳನ್ನು” ಅಧಿಕಾರದಿಂದ ಹೊರಹಾಕುವುದು ಪ್ರತಿಯೊಬ್ಬರ ಉದ್ದೇಶವಾಗಿದೆ ಎಂದಿದ್ದಾರೆ.
- ಜೆಡಿಯುನ ನಿತೀಶ್ ಕುಮಾರ್ ಮತ್ತು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಕೂಡ ಸೋಮವಾರ ಸಂಜೆ ಹೊಸದಿಲ್ಲಿಗೆ ಬಂದಿಳಿದಿದ್ದಾರೆ.
- ಮೈತ್ರಿಕೂಟದ ಮೊದಲ ಸಭೆ ಜೂನ್ 23ರಂದು ಪಾಟ್ನಾದಲ್ಲಿ ಮತ್ತು ಎರಡನೇ ಸಭೆ ಜುಲೈ 17-18ರಂದು ಬೆಂಗಳೂರಿನಲ್ಲಿ ನಡೆಯಿತು. ಮೂರನೇ ಸಭೆಯು ಮುಂಬೈನಲ್ಲಿ ಆಗಸ್ಟ್ 31-ಸೆಪ್ಟೆಂಬರ್ 1ರಂದು ನಡೆಯಿತು.
- ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು (ಎನ್ಡಿಎ) ಎದುರಿಸಲು ಮತ್ತು 2024ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ಲಿ ಸತತ ಮೂರನೇ ಬಾರಿಗೆ ಗೆಲ್ಲುವುದನ್ನು ತಡೆಯಲು ಪಕ್ಷಗಳು ಒಗ್ಗೂಡಿವೆ.
- ಮುಂಬೈ ಸಭೆಯಲ್ಲಿ, ಲೋಕಸಭೆ ಚುನಾವಣೆಯಲ್ಲಿ ಸಾಮೂಹಿಕವಾಗಿ ಸ್ಪರ್ಧಿಸುವ ನಿರ್ಣಯಗಳನ್ನು ವಿಪಕ್ಷಗಳು ಅಂಗೀಕರಿಸಿದವು. ಸೀಟು ಹಂಚಿಕೆಯ ವ್ಯವಸ್ಥೆಯನ್ನು ಶೀಘ್ರದಲ್ಲಿಯೇ ಅಂತಿಮಗೊಳಿಸಲಾಗುವುದು ಎಂದು ಘೋಷಿಸಿದರು.
- ಭಾರತ ಬಣವು ಚುನಾವಣೆಗೆ ಆಯ್ಕೆ ಮಾಡಿಕೊಂಡಿರುವ ಥೀಮ್ “ಜುಡೇಗಾ ಭಾರತ್, ಜೀತೇಗ ಇಂಡಿಯಾ” (ಭಾರತ ಒಗ್ಗೂಡುತ್ತದೆ, ಭಾರತ ಗೆಲ್ಲುತ್ತದೆ).
ಸಭೆಯ ಅಜೆಂಡಾದಲ್ಲಿ ಏನಿದೆ?
ಕೇವಲ ನಾಲ್ಕು ತಿಂಗಳು ಬಾಕಿ ಇರುವ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಸೂತ್ರವನ್ನು ಅಂತಿಮಗೊಳಿಸುವುದು ಮಹಾಮೈತ್ರಿಕೂಟದ ನಾಲ್ಕನೇ ಸಭೆಯ ಪ್ರಮುಖ ಅಜೆಂಡಾಗಳಲ್ಲಿ ಒಂದಾಗಿದೆ. ಇದು ಕಾಂಗ್ರೆಸ್‌ಗೆ ನಿರ್ಣಾಯಕವಾಗಿದೆ. ವಿಶೇಷವಾಗಿ ಪಕ್ಷವು ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶವನ್ನು ಕಳೆದುಕೊಂಡಿದೆ. “ಮೈ ನಹಿಂ, ಹಮ್” (ನಾನಲ್ಲ, ನಾವು) ಎಂಬ ಏಕತೆಯ ಥೀಮ್‌ನೊಂದಿಗೆ ಮುನ್ನಡೆಯಲು ಪಕ್ಷಗಳು ಉದ್ದೇಶಿಸಿವೆ ಎಂದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಒಗ್ಗೂಡಿರುವ ವಿವಿಧ ವಿರೋಧ ಪಕ್ಷಗಳ ನಾಯಕರ ಮುಂದಿರುವ ಪ್ರಮುಖ ಸವಾಲೆಂದರೆ, ಪರ್ಯಾಯ ಸಾಮಾನ್ಯ ಕಾರ್ಯಕ್ರಮವನ್ನು ರೂಪಿಸುವುದು. ಬಣದ ಮುಂದಿರುವ ತಕ್ಷಣದ ಸವಾಲು ಎಂದರೆ ಸಂಚಾಲಕ, ವಕ್ತಾರ ಮತ್ತು ಸಾಮಾನ್ಯ ಕಾರ್ಯದರ್ಶಿಯ ಆಯ್ಕೆಗೆ ಒಮ್ಮತ ಮೂಡಿಸುವುದು.
ಇದನ್ನೂ ಓದಿ: Lok Sabha Election 2024 : ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಸಂಕಟ; ಮೈತ್ರಿಗೆ ದಳ ಶಾಸಕರ ಹೊಸ ದಾಳ!