Site icon Vistara News

INDIA Bloc: ಇಂಡಿಯಾ ಮೈತ್ರಿಕೂಟದ ಮಹತ್ವದ ಸಭೆ ಇಂದು, ಸೀಟು ಹಂಚಿಕೆ ಚರ್ಚೆ; ಮಮತಾ ಗೈರು

INDIA bloc leaders will meet today virtually

ಹೊಸದಿಲ್ಲಿ: ವಿಪಕ್ಷಗಳ ಒಕ್ಕೂಟವಾದ ಇಂಡಿಯಾ ಮೈತ್ರಿಕೂಟದ (INDIA Bloc) ನಾಯಕರು ಇಂದು ವರ್ಚುವಲ್‌ ಆಗಿ ಸಭೆ ಸೇರಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ (laok sabha election 2024) ಸೀಟು ಹಂಚಿಕೆ (Seat sharing) ಸೇರಿದಂತೆ ಹಲವು ಮಹತ್ವದ ವಿಚಾರಗಳ ಕುರಿತು ಚರ್ಚಿಸಲಿದ್ದಾರೆ.

ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟ (Indian National Developmental Inclusive Alliance) ಸದಸ್ಯರು ಇಂದು ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನೇತೃತ್ವದ ಮುಂಬರುವ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಭಾಗವಹಿಸುವಿಕೆ, ಸೀಟು ಹಂಚಿಕೆ ಮತ್ತಿತರ ಪ್ರಮುಖ ವಿಷಯಗಳ ಕುರಿತು ಚರ್ಚಿಸಲು ಸಭೆ ಸೇರಲಿದ್ದು, ಮಧ್ಯಾಹ್ನ 11.30ಕ್ಕೆ ಇದು ನಡೆಯಲಿದೆ ಎಂದು ಸಂವಹನ ಉಸ್ತುವಾರಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಮಮತಾ ಬ್ಯಾನರ್ಜಿ (Mamata banerjee) ಅವರು ಶನಿವಾರದ ಈ ವರ್ಚುವಲ್ ಸಭೆಯಲ್ಲಿ ಭಾಗವಹಿಸುತ್ತಿಲ್ಲ. ಏಕೆಂದರೆ ಅವರು ಪೂರ್ವನಿಶ್ಚಿತ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸುಮಾರು 28 ವಿರೋಧ ಪಕ್ಷಗಳು ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಅಲಯನ್ಸ್ (ಇಂಡಿಯಾ) ಬ್ಯಾನರ್ ಅಡಿಯಲ್ಲಿ ಒಗ್ಗೂಡಿದ್ದು, ಮುಂಬರುವ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ವಿಧಾನವನ್ನು ನಿರ್ಧರಿಸುವಲ್ಲಿ ಈ ಚರ್ಚೆಗಳು ಪ್ರಾಮುಖ್ಯತೆ ಹೊಂದಿದೆ.

2024ರ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಪ್ರಾಥಮಿಕ ಗುರಿಯೊಂದಿಗೆ ಇಂಡಿಯಾ ಬ್ಲಾಕ್‌ ರೂಪುಗೊಂಡಿದೆ. ಮೈತ್ರಿಕೂಟದ ಸಂಚಾಲಕರ ನೇಮಕಾತಿಯ ವಿಷಯ ಈಗಾಗಲೇ ಕೂಟದೊಳಗೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. ನಿತೀಶ್ ಕುಮಾರ್ ಅವರನ್ನು ಸಂಚಾಲಕರನ್ನಾಗಿ ಮಾಡಲು ಜೆಡಿಯು ಬಯಸಿದೆ. ಇದನ್ನು ಮಮತಾ ಬ್ಯಾನರ್ಜಿ ಅವರ ಟಿಎಂಸಿ ವಿರೋಧಿಸುತ್ತಿದೆ. ಪ್ರಧಾನಿ ಅಭ್ಯರ್ಥಿಯ ಬಗ್ಗೆಯೂ ತಗಾದೆ ಎದುರಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಮಮತಾ ಸೂಚಿಸಿದ್ದು, ಅರವಿಂದ ಕೇಜ್ರಿವಾಲ್‌ ಬೆಂಬಲಿಸಿದ್ದರು. ಆದರೆ ಇದರಿಂದ ನಿತೀಶ್‌ ಕುಮಾರ್‌, ಲಾಲು ಯಾದವ್‌ ಮುಂತಾದವರು ಅಸಮಾಧಾನಗೊಂಡಿದ್ದಾರೆ.

ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ದೆಹಲಿ ಮತ್ತು ಪಂಜಾಬ್ ಸೇರಿದಂತೆ ಪ್ರಮುಖ ರಾಜ್ಯಗಳಲ್ಲಿ ಸೀಟು ಹಂಚಿಕೆ ಕುರಿತು ಶುಕ್ರವಾರ ಹಿರಿಯ ಎಎಪಿ ನಾಯಕರು ಮತ್ತು ಕಾಂಗ್ರೆಸ್ ಮಾತುಕತೆ ನಡೆಸಿದ್ದು, ಮತ್ತೊಮ್ಮೆ ಭೇಟಿಯಾಗಲು ನಿರ್ಧರಿಸಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ಮುಕುಲ್ ವಾಸ್ನಿಕ್ ಅವರ ನಿವಾಸದಲ್ಲಿ ಸಭೆ ಎರಡು ಗಂಟೆಗಳ ಕಾಲ ನಡೆಯಿತು. ಕಾಂಗ್ರೆಸ್‌ನ ಸೀಟು ಹಂಚಿಕೆ ಸಮಿತಿಯ ಭಾಗವಾಗಿರುವ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರು ಸಭೆ ನಡೆಸಿದ್ದಾರೆ.

“ನಾವು ಎಲ್ಲವನ್ನೂ ಚರ್ಚಿಸಿದ್ದೇವೆ. ನಾವು ಉತ್ತಮ ಹೊಂದಾಣಿಕೆ ಹೊಂದಿದ್ದೇವೆ. ನಮ್ಮ ಸಂಬಂಧಗಳನ್ನು ಇದು ಬಲಪಡಿಸುತ್ತದೆ ಎಂಬ ನಂಬಿಕೆಯಿದೆ. ಎಲ್ಲವನ್ನೂ ನಾವು ಮುಕ್ತ ಹೃದಯದಿಂದ ಹಂಚಿಕೊಂಡಿದ್ದೇವೆ. ಇದು ಅದ್ಭುತವಾದ ಸಭೆಯಾಗಿದೆ. ನಾವು ನಿರೀಕ್ಷೆಗಳಿಗಿಂತ ಹೆಚ್ಚು ಮುಂದೆ ಹೋಗಿದ್ದೇವೆ” ಎಂದು ಖುರ್ಷಿದ್‌ ತಿಳಿಸಿದ್ದಾರೆ.

ಇದನ್ನೂ ಓದಿ: INDIA bloc: ಇಂದು ಇಂಡಿಯಾ ಕೂಟದ ಮೀಟಿಂಗ್; ಸಂಚಾಲಕ ನೇಮಕ, ಸೀಟು ಷೇರಿಂಗ್ ಚರ್ಚೆ

Exit mobile version