Site icon Vistara News

INDIA Bloc Meeting: ವಿಶೇಷ ಅಧಿವೇಶನ ಕರೆಗೆ ಬೆಚ್ಚಿದ ವಿಪಕ್ಷ ಒಕ್ಕೂಟ, ಮುಂಬಯಿ ಸಭೆಯಲ್ಲಿ ನಿರ್ಧಾರಗಳಿಗೆ ತರಾತುರಿ

india bloc meeting mumbai

ಹೊಸದಿಲ್ಲಿ: ಕೇಂದ್ರ ಸರ್ಕಾರ ಕರೆದಿರುವ ವಿಶೇಷ ಅಧಿವೇಶನದ (Special parliament session) ಕರೆಗೆ ವಿಪಕ್ಷ ಮೈತ್ರಿಕೂಟ ಇಂಡಿಯಾ (INDIA Bloc Meeting) ವಿಚಲಿತಗೊಂಡಿದೆ. ಮುಂಬಯಿಯಲ್ಲಿ ನಡೆಯುತ್ತಿರುವ ಮೈತ್ರಿಕೂಟದ (I.N.D.I.A) ಪಕ್ಷಗಳ ಮೂರನೇ ಸಭೆಯಲ್ಲಿ ಇನ್ನಷ್ಟು ತರಾತುರಿಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಭವ ಇದೆ ಎನ್ನಲಾಗಿದೆ.

ಇಂದು ಮುಂಬಯಿಯಲ್ಲಿ ವಿಪಕ್ಷಗಳ ಸಭೆಯ 2ನೇ ದಿನವಾಗಿದ್ದು, ನಿನ್ನೆ ಅನೌಪಚಾರಿಕ ಸಭೆ ನಡೆದಿತ್ತು. ನಿನ್ನೆ ರಾತ್ರಿ ಶಿವಸೇನಾ UBT ಮುಖ್ಯಸ್ಥ ಉದ್ಧವ್ ಠಾಕ್ರೆ (Uddhav Thackeray) ಅವರು ಒಕ್ಕೂಟದ ನಾಯಕರಿಗೆ ಭೋಜನಕೂಟ ಏರ್ಪಡಿಸಿದ್ದರು. ಸಭೆಯಲ್ಲಿ ಹಲವು ಮುಖಂಡರು ಅವಧಿಪೂರ್ವ ಚುನಾವಣೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಎನ್‌ಡಿಎ ಎದುರಿಗಿಡುವ ಅಚ್ಚರಿದಾಯಕ ತಂತ್ರಗಳನ್ನು ಎದುರಿಸಲು ಪ್ರತಿಪಕ್ಷಗಳು ಸಿದ್ಧವಾಗಬೇಕು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಹೇಳಿದ್ದಾರೆ.

ಇಂದು ಅಧಿಕೃತವಾಗಿ ಲೋಕಸಭೆ ಚುನಾವಣೆಗೆ (Lok sabha Election) ಸೀಟು ಹಂಚಿಕೆ ಬಗ್ಗೆ ಚರ್ಚೆ ಸಾಧ್ಯತೆ ಇದೆ. ಸೆಪ್ಟೆಂಬರ್ 30ರ ಒಳಗಾಗಿ ಸೀಟು ಹಂಚಿಕೆ ವಿಚಾರಕ್ಕೆ ಅಂತಿಮ ಸ್ಪರ್ಶ ನೀಡಬೇಕು ಎಂಬ ಅನಿಸಿಕೆ ಮೂಡಿದೆ. ಕೇಂದ್ರ ಸರ್ಕಾರ 5 ದಿನಗಳ ವಿಶೇಷ ಅಧಿವೇಶನ ಕರೆದಿರುವ ಬಗ್ಗೆಯೂ ನಾಯಕರಿಂದ ಚರ್ಚೆ ನಡೆಯಲಿದೆ.

ಒಂದು ಕ್ಷೇತ್ರಕ್ಕೆ ಮೈತ್ರಿಕೂಟದ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ಮೊದಲಿನಿಂದಲೂ ಚರ್ಚೆಯಾಗುತ್ತಿದೆ. ಹೆಚ್ಚು ಅಭ್ಯರ್ಥಿಗಳಿದ್ದಲ್ಲಿ ಬಿಜೆಪಿಗೆ ಲಾಭವಾಗಲಿದೆ. ಮತ ವಿಭಜನೆ ತಪ್ಪಿಸಬೇಕೆಂದರೆ ದ್ವಿಪಕ್ಷೀಯ ಹಣಾಹಣಿ ನಡೆಯಬೇಕು. ಈ ನಿಟ್ಟಿನಲ್ಲಿ ಸೀಟು ಹಂಚಿಕೆಯೇ ಮುಖ್ಯ. ಒಮ್ಮತ ಮೂಡಿಸಲು ಮೈತ್ರಿಕೂಟ ಯತ್ನಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಚರ್ಚೆಯಾಗಿದೆ. ಈ ನಡುವೆ, ದಿಲ್ಲಿಯ ಎಲ್ಲ ಕ್ಷೇತ್ರಗಳಲ್ಲಿ ತಾನು ಸ್ಪರ್ಧಿಸುವುದಾಗಿ ಕಾಂಗ್ರೆಸ್‌ ಈ ಹಿಂದೆ ನೀಡಿದ ಹೇಳಿಕೆಗೆ ಆಮ್‌ ಆದ್ಮಿ ಪಾರ್ಟಿ ತಿರುಗಿಬಿದ್ದಿದ್ದು, ಹಾಗಿದ್ದಲ್ಲಿ ಮೈತ್ರಿಕೂಟಕ್ಕೆ ಅರ್ಥವಿಲ್ಲ ಎಂದು ತಿರುಗೇಟು ನೀಡಿತ್ತು.

ಈ ಹಿಂದೆ ಪಾಟ್ನಾ ಮತ್ತು ಬೆಂಗಳೂರಿನಲ್ಲಿ ಮೈತ್ರಿ ನಾಯಕರು ಸಭೆ ನಡೆಸಿದ್ದರು. ಮುಂಬೈ ಸಭೆಯಲ್ಲಿ ಪ್ರಚಾರ ಕಾರ್ಯತಂತ್ರವನ್ನು ರೂಪಿಸುವ ಮತ್ತು ಬಣದ ಔಪಚಾರಿಕ ರಚನೆಯನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ. ಇಂದು ಕೂಟದ ಸಮನ್ವಯ ಸಮಿತಿಯನ್ನು ಪ್ರಕಟಿಸಲಿದೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಪ್ರತೀ ಪಕ್ಷದಿಂದ ತಲಾ ಒಂದು ಹೆಸರನ್ನು ನೀಡುವಂತೆ ನಾಯಕರನ್ನು ಕೇಳಿದ್ದಾರೆ.

ಈ ನಿರ್ಣಾಯಕ ಸಭೆಯಲ್ಲಿ ಕೂಟಕ್ಕೊಂದು ಲೋಗೋ ಆಯ್ಕೆ ಮತ್ತು ವಕ್ತಾರರ ನೇಮಕವನ್ನು ಕಾರ್ಯಸೂಚಿ ಒಳಗೊಂಡಿದೆ. ಮೈತ್ರಿಕೂಟದಲ್ಲಿ ಸಂಚಾಲಕ ಬೇಕೇ ಬೇಡವೇ ಎಂಬ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ. ಸಮನ್ವಯ ಸಮಿತಿಯಲ್ಲದೆ, ಪ್ರಚಾರ ಮತ್ತು ರ್ಯಾಲಿಗಳನ್ನು ಯೋಜಿಸಲು, ಸಾಮಾಜಿಕ ಮಾಧ್ಯಮವನ್ನು ನಿರ್ವಹಿಸಲು ಮತ್ತು ಡೇಟಾವನ್ನು ನಿರ್ವಹಿಸಲು ನಾಲ್ಕು ಉಪ ಗುಂಪುಗಳಿವೆ ಎಂದು ಮೂಲಗಳು ತಿಳಿಸಿವೆ.

ಅಕ್ಟೋಬರ್ 2ರೊಳಗೆ ಒಕ್ಕೂಟ ಪ್ರಣಾಳಿಕೆಯನ್ನು (INDIA bloc logo) ಬಿಡುಗಡೆ ಮಾಡಬೇಕೆಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (mamata banerjee) ಸೂಚಿಸಿದ್ದಾರೆ. ಆದರೆ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಯನ್ನು ಎದುರಿಸಲು ಸಾಮಾನ್ಯ ಕಾರ್ಯಸೂಚಿಯನ್ನು ಸಿದ್ಧಪಡಿಸುವಂತೆ ಖರ್ಗೆ ಅವರನ್ನು ಕೇಳಲಾಗಿದೆ. ʼಇಂಡಿಯಾʼದ 2‌8 ಪಕ್ಷಗಳ 63 ಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ. ರಾಹುಲ್ ಗಾಂಧಿ (Rahul Gandhi), ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮುಂತಾದವರು ಈಗಾಗಲೇ ಮುಂಬಯಿಯಲ್ಲಿದ್ದಾರೆ.

ಇದನ್ನೂ ಓದಿ: INDIA Bloc Meeting: ಮುಂಬೈನಲ್ಲಿ ‘ಇಂಡಿಯಾ’ ಕೂಟದ ಬಲ ಪ್ರದರ್ಶನ! ಖರ್ಗೆ ಕೂಟದ ಮುಖ್ಯಸ್ಥ?

Exit mobile version