Site icon Vistara News

INDIA Bloc: ನಿತೀಶ್‌ ಅವರಿಂದ ನೆರವೇರಿತು ಇಂಡಿಯಾ ಮೈತ್ರಿಕೂಟದ ಅಂತಿಮ ವಿಧಿ ವಿಧಾನ; ಕಾಂಗ್ರೆಸ್‌ ನಾಯಕ

pramod krishnam

pramod krishnam

ಲಕ್ನೋ: ತಮ್ಮ ಪಕ್ಷದ ನಿರ್ಧಾರಗಳನ್ನು ಆಗಾಗ ಟೀಕಿಸುವ ಮೂಲಕ ಸದ್ದು ಮಾಡುವ ಕಾಂಗ್ರೆಸ್‌ ನಾಯಕ ಆಚಾರ್ಯ ಪ್ರಮೋದ್‌ ಕೃಷ್ಣಂ (Acharya Pramod Krishnam) ಇದೀಗ ವಿಪಕ್ಷಗಳ ಒಕ್ಕೂಟ ಇಂಡಿಯಾ ಮೈತ್ರಿಕೂಟ (INDIA Bloc) ವಾಸ್ತವದಲ್ಲಿ ಅಸ್ತಿತ್ವದಲ್ಲಿಲ್ಲ ಎಂದು ಹೇಳಿದರು. ಬಳಿಕ ತಮ್ಮ ಮಾತಿಗೆ ಸ್ಪಷ್ಟನೆ ನೀಡಿದ ಅವರು, ʼʼಇಂಡಿಯಾ ಮೈತ್ರಿಕೂಟ ರಚನೆಯಾದಾಗಿನಿಂದ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಲೇ ಬಂದಿದೆ. ಇದೀಗ ನಿತೀಶ್‌ ಕುಮಾರ್‌ (Nitish Kumar) ಎನ್‌ಡಿಎ ತೆಕ್ಕೆಗೆ ಜಾರುವ ಮೂಲಕ ಇಂಡಿಯಾ ಮೈತ್ರಿಕೂಟದ “ಅಂತಿಮ ವಿಧಿಗಳನ್ನು” ನೆರವೇರಿಸಿದ್ದಾರೆʼʼ ಎಂದು ಹೇಳಿದರು.

ʼʼಈಗ ಇಂಡಿಯಾ ಮೈತ್ರಿಕೂಟ ಎಂಬುದು ಅಸ್ತಿತ್ವದಲ್ಲಿಲ್ಲ ಎಂದು ನಾನು ಭಾವಿಸುತ್ತೇನೆ. ಅದು ರಚನೆಯಾದಾಗಲೇ ಸಾಕಷ್ಟು ರೋಗಗಳಿಗೆ ತುತ್ತಾಗಿತ್ತು. ನಂತರ ಅದು ಐಸಿಯು ಮತ್ತು ವೆಂಟಿಲೇಟರ್‌ಗೆ ಹೋಯಿತು. ಅಂತಿಮವಾಗಿ ಪಟನಾದಲ್ಲಿ ನಿತೀಶ್ ಕುಮಾರ್ ಅಂತ್ಯ ಸಂಸ್ಕಾರ ನೆರವೇರಿಸಿದರು. ಹೀಗಾಗಿ ಈ ಮೈತ್ರಿಕೂಟ ಅಸ್ತಿತ್ವದಲ್ಲಿಲ್ಲ ಎಂದೇ ನಾನು ಭಾವಿಸುತ್ತೇನೆ” ಎಂದು ಆಚಾರ್ಯ ಪ್ರಮೋದ್‌ ಕೃಷ್ಣಂ ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ.

ಪಕ್ಷವನ್ನು ಟೀಕಿಸಿದ್ದ ಆಚಾರ್ಯ ಪ್ರಮೋದ್‌ ಕೃಷ್ಣಂ

ಧಾರ್ಮಿಕ ನಾಯಕ, ರಾಜಕಾರಣಿ ಆಚಾರ್ಯ ಪ್ರಮೋದ್‌ ಕೃಷ್ಣಂ ಇತ್ತೀಚೆಗೆ ತಮ್ಮದೇ ಪಕ್ಷವಾದ ಕಾಂಗ್ರೆಸ್‌ ನಾಯಕರ ನಡೆಯನ್ನು ಟೀಕಿಸಿ ಸುದ್ದಿಯಾಗಿದ್ದರು. ಜನವರಿ 22ರಂದು ನಡೆದ ಅಯೋಧ್ಯೆ ರಾಮ ಮಂದಿರದ ಪ್ರಾಣ ಪ್ರತಿಷ್ಠೆ ಸಮಾರಂಭದಲ್ಲಿ ಕಾಂಗ್ರೆಸ್‌ ಪಾಲ್ಗೊಂಡಿರಲಿಲ್ಲ. ಇದನ್ನು ಅವರು ಪ್ರಶ್ನಿಸಿದ್ದರು. ʼʼಇತರ ಪಕ್ಷಗಳು 2024ರ ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿದ್ದರೆ, ಕಾಂಗ್ರೆಸ್ 2029ರ ಚುನಾವಣೆಯತ್ತ ಗಮನ ಹರಿಸುತ್ತಿದೆʼʼ ಎಂದು ವ್ಯಂಗ್ಯವಾಡಿದ್ದರು.

ಮೋದಿಯನ್ನು ಭೇಟಿಯಾಗಿದ್ದರು

ಕೆಲವು ದಿನಗಳ ಹಿಂದೆ ಪ್ರಮೋದ್‌ ಕೃಷ್ಣಂ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಫೆಬ್ರವರಿ 19ರಂದು ನಡೆಯುವ ‘ಶ್ರೀ ಕಲ್ಕಿ ಧಾಮ್’ ಶಂಕುಸ್ಥಾಪನಾ ಸಮಾರಂಭಕ್ಕೆ ಆಹ್ವಾನಿಸಿದ್ದರು. ಅಲ್ಲದೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ಸಂಭಾಲ್ ಜಿಲ್ಲೆಯಲ್ಲಿ ನಡೆಯುವ ‘ಶ್ರೀ ಕಲ್ಕಿ ಧಾಮ್’ ಶಂಕುಸ್ಥಾಪನಾ ಸಮಾರಂಭಕ್ಕೆ ಅವರನ್ನೂ ಆಹ್ವಾನಿಸಿದ್ದರು. ʼʼನಾನು ಯೋಗಿ ಆದಿತ್ಯನಾಥ್‌ ಅವರನ್ನು ಭೇಟಿಯಾಗಿ ‘ಶ್ರೀ ಕಲ್ಕಿ ಧಾಮ್’ ಶಂಕುಸ್ಥಾಪನಾ ಸಮಾರಂಭಕ್ಕೆ ಆಹ್ವಾನ ನೀಡಿದೆ. ಅವರು ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆʼʼ ಎಂದು ಮಾಹಿತಿ ನೀಡಿದ್ದರು.

ಇದನ್ನೂ ಓದಿ: Nitish Kumar: ನಿತೀಶ್‌ ವಿದಾಯದಿಂದ ಇಂಡಿಯಾ ಒಕ್ಕೂಟದ ಮೇಲಾಗುವ ಪರಿಣಾಮಗಳೇನು?

ಕೃತಜ್ಞತೆ ಸಲ್ಲಿಸಿದ್ದ ಮೋದಿ

ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸಿದ್ದಕ್ಕೆ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದರು. “ನಂಬಿಕೆ ಮತ್ತು ಭಕ್ತಿಗೆ ಸಂಬಂಧಿಸಿದ ಈ ಪವಿತ್ರ ಸಂದರ್ಭದ ಭಾಗವಾಗಿರುವುದು ನನಗೆ ಲಭಿಸಿದ ಒಂದು ಸೌಭಾಗ್ಯ ಎಂದೇ ಭಾವಿಸುತ್ತೇನೆ. ಆಹ್ವಾನಕ್ಕಾಗಿ ಆಚಾರ್ಯ ಪ್ರಮೋದ್ ಜಿ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು” ಎಂದು ಪ್ರಧಾನಿ ಮೋದಿ ಹೇಳಿದ್ದರು. ಬಿಹಾರದಲ್ಲಿ ಜನಿಸಿದ ಆಚಾರ್ಯ ಪ್ರಮೋದ್‌ ಕೃಷ್ಣಂ 2014ರಲ್ಲಿ ಕಾಂಗ್ರೆಸ್‌ಗೆ ಸೇರಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version