ಹೊಸದಿಲ್ಲಿ: ಸಂಸತ್ತಿನ ಚಳಿಗಾಲದ ಅಧಿವೇಶನದಿಂದ (Winter Session) ಸಂಸದರನ್ನು ಉಚ್ಚಾಟಿಸಿರುವುದನ್ನು (Mass suspension of MPs) ಖಂಡಿಸಿ ಇಂದು ದೇಶಾದ್ಯಂತ ಇಂಡಿಯಾ ಮೈತ್ರಿಕೂಟದ (INDIA Bloc) ಸದಸ್ಯರಿಂದ ಪ್ರತಿಭಟನೆ ನಡೆಯಲಿದೆ.
ಚಳಿಗಾಲದ ಅಧಿವೇಶನದಲ್ಲಿ “ಪ್ರಜಾಸತ್ತಾತ್ಮಕವಲ್ಲದ ರೀತಿಯಲ್ಲಿ” ಭಾರಿ ಸಂಖ್ಯೆಯ ಸಂಸದರನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಲು ವಿಪಕ್ಷ ಒಕ್ಕೂಟದ ಬಣದ ನಾಯಕರು ಇಂದು ಬೀದಿಗಿಳಿಯಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಮೈತ್ರಿಕೂಟದ ಇತರ ಸದಸ್ಯರು ದೆಹಲಿಯ ಜಂತರ್ ಮಂತರ್‌ನಲ್ಲಿ ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಕಾರ್ಯಾಧ್ಯಕ್ಷರು, ಸಂಸದರು, ಸಚಿವರು ಹಾಗೂ ಶಾಸಕರು ಭಾಗವಹಿಸಲಿದ್ದಾರೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಹ ಪ್ರತಿಭಟನೆಯನ್ನು ನಿಗದಿಪಡಿಸಲಾಗಿದೆ.
ಡಿಸೆಂಬರ್ 13ರಂದು ಸಂಸತ್ತಿನ ಭದ್ರತೆಯನ್ನು ಉಲ್ಲಂಘಿಸಿದ ಘಟನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿ ವಿಪಕ್ಷಗಳ ಸದಸ್ಯರು ಚಳಿಗಾಲದ ಅಧಿವೇಶನವನ್ನು ಅಡ್ಡಿಪಡಿಸಿದ್ದರು. ಈ ಸಂದರ್ಭದಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಸಂಸದರ ಅಮಾನತುಗಳ ಸರಣಿಯೇ ನಡೆಯಿರು. ಮೂರು ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಲಾಗಿದ್ದು, ಒಟ್ಟು ಅಮಾನತುಗಳ ಸಂಖ್ಯೆ ದಾಖಲೆಯ 146ಕ್ಕೆ ಏರಿದೆ.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್‌ಕರ್ ಅವರ ಕ್ರಮವನ್ನು ವಿರೋಧಿಸಿ, ಅಮಾನತುಗೊಂಡವರು ಸೇರಿದಂತೆ ವಿರೋಧ ಪಕ್ಷದ ಸಂಸದರು ಸಂಸತ್ತಿನಿಂದ ವಿಜಯ್ ಚೌಕ್‌ಗೆ ಗುರುವಾರ ಮೆರವಣಿಗೆ ನಡೆಸಿದರು.
“ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲ. ಸಂಸತ್ತು ದೊಡ್ಡ ಪಂಚಾಯತ್. ಸಂಸತ್ತಿನಲ್ಲಿ ಮಾತನಾಡದಿದ್ದರೆ ಬೇರೆಲ್ಲಿ ಮಾತನಾಡಬೇಕು? ಭದ್ರತಾ ಲೋಪದ ಬಗ್ಗೆ ಹೇಳಿಕೆ ನೀಡಲು ಗೃಹ ಸಚಿವ ಶಾ ಮತ್ತು ಪ್ರಧಾನಿ ಮೋದಿ ಸದನಕ್ಕೆ ಬಾರದಿರುವುದು ದುರದೃಷ್ಟಕರ. ಅವರು ಸದನದಲ್ಲಿ, ಅದರ ಹೊರಗೆ ಮಾತನಾಡಬೇಕಾದ ವಿಷಯಗಳ ಬಗ್ಗೆ ಮಾತನಾಡಿದರು” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದು, ʼಪ್ರಜಾಸತ್ತಾತ್ಮಕವಾಗಿ ವರ್ತಿಸಿʼ ಎಂದು ಬಿಜೆಪಿಗೆ ಕರೆ ನೀಡಿದ್ದಾರೆ.
ಇದನ್ನೂ ಓದಿ: Lok Sabha Election: ಲೋಕಸಭೆ ಎಲೆಕ್ಷನ್ ಮೋದಿ v/s ಖರ್ಗೆ! ಕುತೂಹಲ ಕೆರಳಿಸಿದ ‘ಇಂಡಿಯಾ’ ನಡೆ