ನ್ಯೂಯಾರ್ಕ್: ಭಾರತ ಸಿಖ್ ಉಗ್ರ ಹತ್ಯೆಯಲ್ಲಿ ಸಹಕರಿಸುತ್ತಿಲ್ಲ ಎಂದು ಅಂತಾರಾಷ್ಟ್ರೀಯ ಸಮುದಾಯದ ಮುಂದೆ ದೂರು ಹೇಳುತ್ತಿರುವ ಕೆನಡಾ ಪಿಎಂ ಜಸ್ಟಿನ್ ಟ್ರುಡೊಗೆ (Canada PM Justin Trudeau) ಪ್ರತ್ಯುತ್ತರವಾಗಿ (India Canada Row) ಭಾರತ, ವಿಶ್ವಸಂಸ್ಥೆಯಲ್ಲಿ ಕೆಲವು ಶಿಫಾರಸುಗಳನ್ನು ಮಂಡಿಸುವ ಮೂಲಕ ಉತ್ತರ ನೀಡಿದೆ.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಪರಿಶೀಲನಾ ಸಭೆಯಲ್ಲಿ ಭಾರತ ಈ ಮಹತ್ವದ ರಾಜತಾಂತ್ರಿಕ ಕ್ರಮ ತೆಗೆದುಕೊಂಡು, ಈ ಪ್ರಸ್ತಾಪಗಳನ್ನು ಮಂಡಿಸಿತು. ಕೆನಡಾದಲ್ಲಿ ಪೂಜಾ ಸ್ಥಳಗಳ ಮೇಲಿನ ದಾಳಿಯನ್ನು ತಡೆಗಟ್ಟುವ ಕ್ರಮಗಳನ್ನು ಬಲಪಡಿಸಲು, ದ್ವೇಷಭಾಷಣವನ್ನು ಪರಿಣಾಮಕಾರಿಯಾಗಿ ನಿಗ್ರಹಿಸಲು ಕೆನಡಾಕ್ಕೆ ಶಿಫಾರಸು ನೀಡಿತು. ಬಾಂಗ್ಲಾದೇಶ ಮತ್ತು ಶ್ರೀಲಂಕಾದ ರಾಜತಾಂತ್ರಿಕರು ಕೂಡ ಈ ನಿಟ್ಟಿನಲ್ಲಿ ಭಾರತಕ್ಕೆ ಪೂರಕವಾಗಿ ಮಾತನಾಡಿದರಲ್ಲದೆ, ತಮ್ಮ ಒಳನೋಟಗಳು ಮತ್ತು ಶಿಫಾರಸುಗಳನ್ನು ಹಂಚಿಕೊಂಡರು.
ಭಾರತೀಯ ರಾಜತಾಂತ್ರಿಕ ಮೊಹಮ್ಮದ್ ಹುಸೇನ್ ಅವರು ಕೌನ್ಸಿಲ್ ಸಭೆಯಲ್ಲಿ ಸಮಸ್ಯೆಯನ್ನು ಉದ್ದೇಶಿಸಿ ಮಾತನಾಡಿ ಅಲ್ಲಿನ ರಾಷ್ಟ್ರೀಯ ವಸತಿ ಕಾರ್ಯತಂತ್ರ ಕಾಯಿದೆ ಮತ್ತು ಆಕ್ಸೆಸಿಬಲ್ ಕೆನಡಾ ಕಾಯಿದೆಗಳನ್ನು ಉಲ್ಲೇಖಿಸಿದರು. ಬಾಂಗ್ಲಾದೇಶದ ರಾಜತಾಂತ್ರಿಕ ಅಬ್ದುಲ್ಲಾ ಅಲ್ ಫೋರ್ಹಾದ್ ಅವರು ಜನಾಂಗೀಯ ದ್ವೇಷ, ದ್ವೇಷ ಭಾಷಣ, ದ್ವೇಷದ ಅಪರಾಧಗಳು ಮತ್ತು ವಲಸಿಗರು ಮತ್ತು ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧದ ತಾರತಮ್ಯವನ್ನು ಎದುರಿಸಲು ಕೆನಡಾ ತನ್ನ ಪ್ರಯತ್ನಗಳನ್ನು ತೀವ್ರಗೊಳಿಸುವಂತೆ ಒತ್ತಾಯಿಸಿದರು.
“ಕೆನಡಾದ ರಾಷ್ಟ್ರೀಯ ವಸತಿ ಕಾರ್ಯತಂತ್ರ ಕಾಯಿದೆ, ಆಕ್ಸೆಸಿಬಲ್ ಕೆನಡಾ ಕಾಯಿದೆ ಮತ್ತು ಮಾನವ ಕಳ್ಳಸಾಗಣೆಯನ್ನು ಎದುರಿಸಲು ಅಲ್ಲಿನ ರಾಷ್ಟ್ರೀಯ ಕಾರ್ಯತಂತ್ರವನ್ನು ನಾವು ಗಮನಿಸಿದ್ದೇವೆ. ಭಾರತವು ಕೆನಡಾಕ್ಕೆ ಈ ಕೆಳಗಿನವುಗಳನ್ನು ಶಿಫಾರಸು ಮಾಡುತ್ತದೆ: ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗವನ್ನು ತಡೆಗಟ್ಟಲು ದೇಶೀಯ ಚೌಕಟ್ಟನ್ನು ಬಲಪಡಿಸುವುದು, ಹಿಂಸೆಯನ್ನು ಪ್ರಚೋದಿಸುವ ಮತ್ತು ಉಗ್ರವಾದವನ್ನು ಉತ್ತೇಜಿಸುವ ಗುಂಪುಗಳ ಚಟುವಟಿಕೆಗಳನ್ನು ಅನುಮತಿಸದಿರುವುದು, ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರ ಪೂಜಾ ಸ್ಥಳಗಳ ಮೇಲಿನ ದಾಳಿಯನ್ನು ಪರಿಣಾಮಕಾರಿಯಾಗಿ ತಡೆಯುವುದು, ದ್ವೇಷದ ಅಪರಾಧಗಳು ಮತ್ತು ದ್ವೇಷದ ಭಾಷಣಗಳನ್ನು ಪರಿಹರಿಸಲು ಶಾಸಕಾಂಗ ಮತ್ತು ಇತರ ಕ್ರಮಗಳನ್ನು ಬಲಪಡಿಸುವುದು ಮಾಡಬೇಕಿದೆʼʼ ಎಂದು ಭಾರತೀಯ ರಾಜತಾಂತ್ರಿಕ ಮೊಹಮ್ಮದ್ ಹುಸೇನ್ ಈ ಸಂದರ್ಭದಲ್ಲಿ ಕೆನಡಾಗೆ ಸೂಚಿಸಿದರು.
ಈ ನಡುವೆಯೇ ಮಾನವ ಹಕ್ಕುಗಳ ರಕ್ಷಣೆ ಮತ್ತು ಮಾನವ ಕಳ್ಳಸಾಗಣೆಯನ್ನು ಎದುರಿಸುವ ಕಾರ್ಯತಂತ್ರದಲ್ಲಿ ಕೆನಡಾದ ಪ್ರಗತಿಯನ್ನು ಅಲ್ ಫೋರ್ಹಾದ್ ಶ್ಲಾಘಿಸಿದರು. ಕಾರ್ಬನ್ ಹೊರಸೂಸುವಿಕೆ ಕಡಿಮೆ ಮಾಡಲು ಮತ್ತು ಹವಾಮಾನ ಬದಲಾವಣೆಯ ಋಣಾತ್ಮಕ ಪರಿಣಾಮಗಳನ್ನು ಪರಿಹರಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಬಾಂಗ್ಲಾದೇಶ ಕೆನಡಾಗೆ ಕರೆ ನೀಡಿತು.
“ಮಾನವ ಹಕ್ಕುಗಳ ರಕ್ಷಣೆಯ ಪ್ರಚಾರದಲ್ಲಿ ಕೆನಡಾ ಮಾಡಿದ ಪ್ರಗತಿಯನ್ನು ನಾವು ಪ್ರಶಂಸಿಸುತ್ತೇವೆ. ಮಾನವ ಕಳ್ಳಸಾಗಣೆ ವಿರುದ್ಧ ಹೋರಾಡಲು ಅದರ ರಾಷ್ಟ್ರೀಯತಾವಾದಿ ಕಾರ್ಯತಂತ್ರದ ಅನುಷ್ಠಾನವನ್ನು ನಾವು ಅಂಗೀಕರಿಸುತ್ತೇವೆ. ಇದರ ಹೊರತಾಗಿಯೂ ಬಾಂಗ್ಲಾದೇಶವು ಕೆನಡಾಕ್ಕೆ ಶಿಫಾರಸುಗಳನ್ನು ನೀಡುತ್ತದೆ. ರ್ಣಭೇದ ನೀತಿ, ದ್ವೇಷ ಭಾಷಣ, ದ್ವೇಷದ ಅಪರಾಧಗಳು, ವಲಸಿಗರು ಮತ್ತು ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧದ ತಾರತಮ್ಯವನ್ನು ಎದುರಿಸಲು ತನ್ನ ಪ್ರಯತ್ನಗಳನ್ನು ತೀವ್ರಗೊಳಿಸಬೇಕು. ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡಲು ಮತ್ತು ಹವಾಮಾನ ಬದಲಾವಣೆಯ ಋಣಾತ್ಮಕ ಪರಿಣಾಮಗಳನ್ನು ಪರಿಹರಿಸುವಲ್ಲಿ ಅಂತಾರಾಷ್ಟ್ರೀಯ ಸಹಕಾರವನ್ನು ಬಲಪಡಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಎಲ್ಲಾ ವಲಸಿಗರು, ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರ ಹಕ್ಕುಗಳ ರಕ್ಷಣೆಗಾಗಿ ಅಂತಾರಾಷ್ಟ್ರೀಯ ಸಮಾವೇಶದ ಸೂಚನೆಗಳನ್ನು ಪರಿಗಣಿಸಿ” ಎಂದು ಅಲ್ ಫೋರ್ಹಾದ್ ಹೇಳಿದರು.
“ಶ್ರೀಲಂಕಾ ಕೆನಡಾಗೆ ಶಿಫಾರಸು ಮಾಡುವುದೇನೆಂದರೆ, ಎಲ್ಲಾ ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬಗಳ ಸದಸ್ಯರ ಹಕ್ಕುಗಳ ರಕ್ಷಣೆ, ಜನಾಂಗೀಯ ತಾರತಮ್ಯದ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುವುದು, ನಿರ್ದಿಷ್ಟವಾಗಿ ಆರೋಗ್ಯ ಕ್ಷೇತ್ರ ಸೇರಿದಂತೆ ವಲಸೆಗಾರರ ಹಕ್ಕುಗಳ ಮೇಲೆ ಪರಿಣಾಮ ಬೀರುವ ತಾರತಮ್ಯದ ನೀತಿಗಳು ಮತ್ತು ನಿಬಂಧನೆಗಳನ್ನು ತಪ್ಪಿಸುವುದು, ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ತಪ್ಪು ಮಾಹಿತಿಯನ್ನು ಎದುರಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು, ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಕಾರ್ಯವಿಧಾನಗಳು ಮತ್ತು ಒಪ್ಪಂದದ ಬಾಧ್ಯತೆಗಳಿಂದ ಪಡೆದ ಶಿಫಾರಸುಗಳ ಅನುಸರಣೆ ಮಾಡಿʼʼ ಎಂದು ಶ್ರೀಲಂಕಾದ ರಾಜತಾಂತ್ರಿಕ ತಿಲಿನಿ ಜಯಶೇಖರ ಅವರು ಕೆನಡಾಗೆ ಸೂಚಿಸಿದರು.
40ಕ್ಕೂ ಹೆಚ್ಚು ಕೆನಡಾದ ರಾಜತಾಂತ್ರಿಕರು ಭಾರತದಿಂದ ತೆರಳುವಂತೆ ಸೂಚಿಸುವ ಮೂಲಕ ಭಾರತ ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಆರೋಪಿಸಿದ್ದರು. ಸಿಖ್ ಉಗ್ರ ನಿಜ್ಜರ್ (khalistan terrorist) ಹತ್ಯೆಯ ಹಿನ್ನೆಲೆಯಲ್ಲಿ ಭಾರತೀಯ ಏಜೆನ್ಸಿಗಳ ಪಾತ್ರವಿದೆ ಎಂದು ಆರೋಪಿಸಿ, ಈ ಕುರಿತ ತನಿಖೆಯಲ್ಲಿ ಭಾರತ ಸಹಕರಿಸುತ್ತಿಲ್ಲ ಎಂದು ಆರೋಪಿಸಿದ್ದರು. ಈ ಆರೋಪವನ್ನು ಭಾರತ ನಿರಾಕರಿಸಿದೆ. ಕೆನಡಾ ಖಲಿಸ್ತಾನಿ ಉಗ್ರರಿಗೆ ಆಶ್ರಯ ನೀಡಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ದ್ವೇಷಭಾಷಣಗಳನ್ನು ನಿಯಂತ್ರಿಸದೆ ಸುಮ್ಮನಿದೆ ಎಂದಿದೆ.
ಇದನ್ನೂ ಓದಿ: India Canada Row: ಕೆನಡಾ ಮತ್ತೆ ಉಪಟಳ; ವ್ಯಾಪಾರದ ಚರ್ಚೆ ಇಲ್ಲ ಎಂದ ಕೇಂದ್ರ!