ಹೊಸದಿಲ್ಲಿ: ಹೊಸದಿಲ್ಲಿಯ ಜಿ20 ಶೃಂಗಸಭೆಗೆ (g20 summit 2023) ಎಲ್ಲ ದೇಶಗಳೂ ಸಹಕಾರ ನೀಡುರುವುದು ನಿಜವಾದರೂ, ಅದರ “ಅಂತಿಮ ಯಶಸ್ಸು” ಭಾರತದ ಕಠಿಣ ಪರಿಶ್ರಮಕ್ಕೆ ಸಲ್ಲುತ್ತದೆ ಎಂದು ಬ್ರೆಜಿಲ್‌ನ ವಿದೇಶಾಂಗ ಸಚಿವ (Brazil FM) ಮೌರೊ ವಿಯೆರಾ ಅವರು ಶ್ಲಾಘಿಸಿದ್ದಾರೆ. ʼದಿಲ್ಲಿ ಘೋಷಣೆʼಯನ್ನು ರೂಪಿಸಿ ಹಾಗೂ ಪ್ರಕಟಿಸುವಲ್ಲಿ ಎಲ್ಲ ದೇಶಗಳ ಮನವೊಲಿಸುವ ಭಾರತದ ಸಾಮರ್ಥ್ಯದಿಂದಾಗಿ ಅದು ಯಶಸ್ವಿಯಾಗಿದೆ ಎಂದಿದ್ದಾರೆ.
ಶುಕ್ರವಾರ ನ್ಯೂಯಾರ್ಕ್‌ನಲ್ಲಿ ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಐಬಿಎಸ್‌ಎ (IBSA- ಭಾರತ-ಬ್ರೆಜಿಲ್-ದಕ್ಷಿಣ ಆಫ್ರಿಕಾ) “ಬಹಳ ಪ್ರಮುಖ ಗುಂಪು” ಎಂದು ಹೇಳಿದರು. ಈ ಮೂರೂ ದೇಶಗಳ ಸಚಿವರ ಸಭೆಯ ಅಧ್ಯಕ್ಷತೆಯನ್ನು ಮುಗಿಸಿದ ನಂತರ ಅವರು ಮಾತನಾಡುತ್ತಿದ್ದರು. ಇದರಲ್ಲಿ ಮೂರೂ ದೇಶಗಳು ಜಾಗತಿಕ ಸಾಂಸ್ಥಿಕ ಸುಧಾರಣೆಯ ಸಾಮಾನ್ಯ ಗುರಿಯನ್ನು ಹಂಚಿಕೊಳ್ಳುತ್ತವೆ. ಸಾಮಾಜಿಕ ಮತ್ತು ರಾಜಕೀಯ ವಿಷಯಗಳನ್ನು ಚರ್ಚಿಸಿ, ಜಾಗತಿಕ ಮಟ್ಟದಲ್ಲಿ ಸಹಕಾರಕ್ಕೆ ಚಾಲನೆ ನೀಡುತ್ತವೆ.
ಭಾರತದ ವಿರುದ್ಧ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ (canada pm justin trudeau) ಮಾಡಿರುವ ಆರೋಪದ ಕುರಿತು (India Canada Row) ಪ್ರತಿಕ್ರಿಯಿಸಲು ಅವರು ನಿರಾಕರಿಸಿದ್ದಾರೆ. ಬ್ರೆಜಿಲ್ ಈ ವಿಷಯದ ಬಗ್ಗೆ ಯಾವುದೇ ನಿಲುವನ್ನು ಹೊಂದಿಲ್ಲ. ಅದು ಇತರ ಎರಡು ದೇಶಗಳ ನಡುವಿನ ದ್ವಿಪಕ್ಷೀಯ ವಿಷಯವಾಗಿದೆ. ಇದನ್ನು ಚರ್ಚಿಸಲು IBSA ವೇದಿಕೆಯಲ್ಲ ಎಂದು ಸಚಿವರು ಹೇಳಿದ್ದಾರೆ. ಕೆನಡಾದ ನೆಲದಲ್ಲಿ ಖಲಿಸ್ತಾನ್ ಉಗ್ರನನ್ನು (Khalistan terrorist) ಕೊಂದುಹಾಕಿದ ಪ್ರಕರಣದಲ್ಲಿ ಭಾರತದ ಗುಪ್ತಚರ ಏಜೆನ್ಸಿಗಳ ಪಾತ್ರವಿದೆ ಎಂದು ಕೆನಡಾ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಹೇಳಿದ್ದರು. ಇದರ ನಂತರ ಉಭಯ ದೇಶಗಳು ಪರಸ್ಪರರ ರಾಜತಾಂತ್ರಿಕರನ್ನು ಹೊರಹಾಕಿದ್ದವು.
ಭಾರತದಿಂದ ಅಧ್ಯಕ್ಷ ಸ್ಥಾನವನ್ನು ಬ್ರೆಜಿಲ್ ಸ್ವೀಕರಿಸಿದ ನಂತರ ಅದು ಅಧ್ಯಕ್ಷತೆ ವಹಿಸಿದ ಮೊದಲ ಸಭೆಯಾಗಿದೆ. ʼʼಇದು ಬಹಳ ಮುಖ್ಯವಾದ ಗುಂಪು. ನಮ್ಮ ಸಮಾಜಗಳ ನಡುವಿನ ಸಾಮಾಜಿಕ ಸಂವಾದ ಮತ್ತು ರಾಜಕೀಯ ಸಮಸ್ಯೆಗಳಂತಹ ಅನೇಕ ವಿಷಯಗಳನ್ನು ನಾವು ಚರ್ಚಿಸಬಹುದು. ವಿವಿಧ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ನಮ್ಮ ಸಾಮಾನ್ಯ ಸ್ಥಾನಗಳನ್ನು ಚರ್ಚಿಸಬಹುದು ಮತ್ತು ಇತರ ದೇಶಗಳೊಂದಿಗೆ ಸಹಕಾರವನ್ನು ಉತ್ತೇಜಿಸಬಹುದು. IBSA ನಿಧಿಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇದು 37 ವಿವಿಧ ದೇಶಗಳಲ್ಲಿ 42 ಯೋಜನೆಗಳಿಗೆ ಹಣಕಾಸು ಒದಗಿಸಿದೆʼʼ ಎಂದು ವಿಯೆರಾ ಹೇಳಿದರು.
ʼದಿಲ್ಲಿ ಘೋಷಣೆʼಯ ಕ್ರೆಡಿಟ್ ಅನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ (S Jaishankar) ಅವರಿಗೆ ವೀರಾ ನೀಡಿದರು. “ಈ ಮಹತ್ವದ ಘೋಷಣೆಗಾಗಿ ನಾಲ್ಕು ದೇಶಗಳು ಒಟ್ಟಾಗಿ ಕೆಲಸ ಮಾಡಿವೆ. ಆದರೆ ನನ್ನ ಪ್ರಕಾರ ಭಾರತ ಮತ್ತು ಸಚಿವ ಜೈಶಂಕರ್ ಇದಕ್ಕಾಗಿ ಪಟ್ಟ ಶ್ರಮವೇ ಅಂತಿಮ ಯಶಸ್ಸು ತಂದಿದೆ. ಅಂತಿಮವಾಗಿ ಇಂಡೋನೇಷ್ಯಾ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದ ಬೆಂಬಲದೊಂದಿಗೆ G20ಯ ಎಲ್ಲಾ ಭಾಗೀದಾರರನ್ನು ಮನವೊಲಿಸಲು ಸಾಧ್ಯವಾಯಿತುʼʼ ಎಂದರು.
ಇದನ್ನೂ ಓದಿ: India Canada Row: ಆನೆ ಜತೆ ಇರುವೆ ಜಗಳವಾಡುತ್ತಿದೆ! ಕೆನಡಾಗೆ ಅಮೆರಿಕದ ಮಾಜಿ ರಕ್ಷಣಾ ಅಧಿಕಾರಿ ಗೇಲಿ!