ವ್ಯಾಂಕೋವರ್: ಕೆನಡಾದ ವ್ಯಾಂಕೋವರ್‌ನಲ್ಲಿರುವ ಭಾರತೀಯ ಕಾನ್ಸುಲೇಟ್‌ನ ಎದುರು (India Canada Row) ಖಲಿಸ್ತಾನ್ ಸಹಾನುಭೂತಿಪರರು (Khalistan terrorists) ಆಯೋಜಿಸಿದ್ದ ರ‍್ಯಾಲಿ ವಿಫಲವಾಗಿದೆ. ಜನರೇ ಬರದ ಕಾರಣ ಇದೊಂದು ಕಳಪೆ ಪ್ರದರ್ಶನ ಎನಿಸಿಕೊಂಡಿದೆ.
ವ್ಯಾಂಕೋವರ್‌ನಲ್ಲಿರುವ ಭಾರತೀಯ ಕಾನ್ಸುಲೇಟ್‌ನ ಎದುರು ಖಲಿಸ್ತಾನಿ ಪರ ಪ್ರತಿಭಟನಾಕಾರರು ಸೋಮವಾರ ರ‍್ಯಾಲಿ ಆಯೋಜಿಸಿದ್ದರು. ಆದರೆ ಕೇವಲ 25 ಜನ ಮಾತ್ರ ಇದಕ್ಕೆ ಹಾಜರಾದರು. ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ (hardeep singh nijjar) ಹತ್ಯೆಗೆ ಸಂಬಂಧಿಸಿದಂತೆ ಭಾರತದ ವಿರುದ್ಧ ಪ್ರತಿಭಟಿಸಲು ರ್ಯಾಲಿಗೆ ಕರೆ ನೀಡಲಾಗಿತ್ತು.
ಜೂನ್ 18ರಂದು ಬ್ರಿಟಿಷ್ ಕೊಲಂಬಿಯಾದಲ್ಲಿ 45 ವರ್ಷದ ನಿಜ್ಜರ್ ಹತ್ಯೆ ನಡೆದಿತ್ತು. ಇದರಲ್ಲಿ ಭಾರತೀಯ ಏಜೆನ್ಸಿಗಳ ಕೈವಾಡ ಇದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ (Canada PM justin trudeau) ಆರೋಪಿಸಿದ್ದರು. ಭಾರತವು 2020ರಲ್ಲಿ ನಿಜ್ಜರ್‌ನನ್ನು ಭಯೋತ್ಪಾದಕ ಎಂದು ಹೆಸರಿಸಿತ್ತು. ಟ್ರುಡೋ ಆರೋಪವನ್ನು “ಅಸಂಬದ್ಧ” ಮತ್ತು “ದುರುದ್ದೇಶಪೂರಿತ” ಎಂದು ಹೊಸದಿಲ್ಲಿ ತಿರಸ್ಕರಿಸಿತ್ತು. ಪ್ರಕರಣ ಉಲ್ಬಣಿಸಿ ಎರಡೂ ದೇಶಗಳಿಂದ ಪರಸ್ಪರರ ರಾಯಭಾರಿಗಳ ಉಚ್ಚಾಟನೆ (India Canada diplomatic relations) ಕಾರಣವಾಗಿತ್ತು.
ಸೋಮವಾರ ನಡೆದ ಪ್ರತಿಭಟನೆಯಲ್ಲಿ ಸುಮಾರು 20-25 ಜನ ಸೇರಿದ್ದರು. ಇವರು ಖಲಿಸ್ತಾನ್ ಧ್ವಜಗಳ ಜೊತೆಗೆ ಕೆನಡಾದ ಧ್ವಜ ಹಿಡಿದಿದ್ದರು. “ಸಿಖ್ಖರೊಂದಿಗೆ ನಿಂತಿದ್ದಕ್ಕಾಗಿ” ಜಸ್ಟಿನ್ ಟ್ರುಡೊ ಅವರಿಗೆ ಧನ್ಯವಾದ ಹೇಳುವ ಫಲಕಗಳನ್ನು ಕೆಲವರು ಹಿಡಿದಿದ್ದರು. ಇವರಿಗಿಂತಲೂ ಸಂಖ್ಯೆಯಲ್ಲಿ ಮಾಧ್ಯಮ ಪ್ರತಿನಿಧಿಗಳು ಮತ್ತು ಪೊಲೀಸ್ ಸಿಬ್ಬಂದಿಯೇ ಹೆಚ್ಚಿದ್ದರು.
ಭಾರತಕ್ಕೆ ಪ್ರವಾಸ ನೀಡುವ ಕೆನಡಿಗರಿಗೆ ಕೆನಡಾ “ಜಾಗರೂಕರಾಗಿರಿ ಮತ್ತು ಎಚ್ಚರಿಕೆಯಿಂದಿರಿ” ಎಂದು ಎಚ್ಚರಿಕೆ ನೀಡಿದೆ. ಕೆನಡಾದಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳು ಮತ್ತು ವಿದ್ಯಾರ್ಥಿಗಳಿಗೂ ಭಾರತ ಇದೇ ರೀತಿಯ ಸಲಹೆಯನ್ನು ನೀಡಿದೆ. ಕಳೆದ ವಾರ ಕೆನಡಾದ ಪ್ರಜೆಗಳಿಗೆ ತನ್ನ ವೀಸಾ ಸೇವೆಯನ್ನೂ ಭಾರತ ಸ್ಥಗಿತಗೊಳಿಸಿದೆ.
ಇದನ್ನೂ ಓದಿ: India Canada Row: ಅತ್ತ ದರಿ ಇತ್ತ ಪುಲಿ; ಭಾರತದ ಜತೆಗಿನ ಸಂಬಂಧ ಮುಖ್ಯ ಎಂದ ಕೆನಡಾ ಸಚಿವ