Site icon Vistara News

India Canada Row: ಟ್ರುಡೊ ಅಸಮರ್ಥ, ಭಾರತದಲ್ಲಿ ಹಾಸ್ಯಾಸ್ಪದ ವ್ಯಕ್ತಿ: ಕೆನಡಾ ಮುಖಂಡ ಕಟು ಟೀಕೆ

justin trudeau

ಹೊಸದಿಲ್ಲಿ: ಪ್ರಧಾನ ಮಂತ್ರಿ ಜಸ್ಟಿನ್‌ ಟ್ರುಡೊ (Canada PM Justin Trudeau) ಅಸಮರ್ಥ ನಾಯಕ; ಅವರು ಈಗ ಭಾರತದಲ್ಲಿ ಹಾಸ್ಯಾಸ್ಪದ ವ್ಯಕ್ತಿ ಆಗಿಬಿಟ್ಟಿದ್ದಾರೆ ಎಂದು ಕೆನಡಾದ ಪ್ರಮುಖ ವಿಪಕ್ಷ ನಾಯಕ ಪಿಯರೆ ಪೊಯಿಲಿವ್ರೆ ಕಟುವಾಗಿ ಟೀಕಿಸಿದ್ದಾರೆ.

ಕೆನಡಾದ ಪ್ರಮುಖ ವಿರೋಧ ರಾಜಕೀಯ ಪಕ್ಷದ ನಾಯಕ ಪಿಯರೆ ಪೊಯಿಲಿವ್ರೆ (Pierre Poilievre), ಭಾರತದೊಂದಿಗಿನ ಕೆನಡಾದ ಹದಗೆಟ್ಟ ಸಂಬಂಧಗಳ ಬಗ್ಗೆ ವಿಷಾದಿಸಿದ್ದಾರೆ. ಅವರು ಭಾರತದೊಂದಿಗೆ ವೃತ್ತಿಪರ ಸಂಬಂಧವನ್ನು ಪುನಃಸ್ಥಾಪಿಸಲು ಪ್ರಯತ್ನಿಸುವುದಾಗಿ ಶಪಥ ಮಾಡಿದ್ದಾರೆ.

ಪೊಲಿಯೆವ್ರೆ ಅವರು ಕೆನಡಾದ ಹೌಸ್ ಆಫ್ ಕಾಮನ್ಸ್‌ನಲ್ಲಿ ಅತಿದೊಡ್ಡ ವಿರೋಧ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಪ್ರಸ್ತುತ ಸಾರ್ವಜನಿಕ ಅಭಿಪ್ರಾಯ ಸಂಗ್ರಹಗಳಲ್ಲಿ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರ ಲಿಬರಲ್ ಪಕ್ಷಕ್ಕಿಂತ ಪೊಲಿಯೆವ್ರೆ ಹೆಚ್ಚಿನ ಮುನ್ನಡೆಯನ್ನು ಹೊಂದಿದ್ದಾರೆ. ಆದರೆ 2025ರವರೆಗೆ ಯಾವುದೇ ಚುನಾವಣೆ ಇಲ್ಲ.

ನೇಪಾಳದ ಮಾಧ್ಯಮ ಸಂಸ್ಥೆ ʼನಮಸ್ತೆ ರೇಡಿಯೊ ಟೊರೊಂಟೊʼಗೆ ನೀಡಿದ ಸಂದರ್ಶನದಲ್ಲಿ, ತನ್ನನ್ನು ಅಧಿಕಾರಕ್ಕೆ ತಂದರೆ ಭಾರತದೊಂದಿಗೆ ವೃತ್ತಿಪರ ಸಂಬಂಧವನ್ನು ಮರುಸ್ಥಾಪಿಸುವುದಾಗಿ ಭರವಸೆ ನೀಡಿದ್ದಾರೆ. “ಜಸ್ಟಿನ್ ಟ್ರುಡೊ ಎಂಟು ವರ್ಷಗಳ ನಂತರವೂ ಆಡಳಿತಕ್ಕೆ ಯೋಗ್ಯವಾಗಿಲ್ಲ ಎಂಬುದಕ್ಕೆ ಉಭಯ ದೇಶಗಳ ನಡುವೆ ಹಳಸಿದ ಸಂಬಂಧ ಮತ್ತೊಂದು ಉದಾಹರಣೆ. ಟ್ರುಡೊ ದೇಶದೊಳಗೆ ಕೆನಡಿಯನ್ನರನ್ನು ಒಡೆದಿದ್ದಾರೆ ಮತ್ತು ವಿದೇಶದಲ್ಲಿ ನಮ್ಮ ಸಂಬಂಧಗಳನ್ನು ಧ್ವಂಸಗೊಳಿಸಿದ್ದಾರೆ. ಅವರು ಎಷ್ಟು ಅಸಮರ್ಥ ಮತ್ತು ವೃತ್ತಿಪರ ಅಲ್ಲದ ವ್ಯಕ್ತಿ ಎಂಬುದು ಸಾಬೀತಾಗಿದೆ. ಈಗ ನಾವು ಪ್ರಪಂಚದ ಪ್ರತಿಯೊಂದು ಪ್ರಮುಖ ಶಕ್ತಿಯೊಂದಿಗೂ ವಿವಾದದಲ್ಲಿದ್ದೇವೆ. ಮತ್ತು ಅದರಲ್ಲಿ ಭಾರತವೂ ಸೇರಿದೆ” ಎಂದು ಅವರು ಹೇಳಿದರು.

ಜೂನ್‌ನಲ್ಲಿ ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯಲ್ಲಿ ಭಾರತೀಯ ಏಜೆಂಟರ ಕೈವಾಡವಿದೆ ಎಂದು ಟ್ರುಡೊ ಹೇಳಿದ ಬಳಿಕ ಉದ್ವಿಗ್ನತೆ ಸೃಷ್ಟಿಯಾಗಿದೆ. ಕಳೆದ ವಾರ ಕೆನಡಾದ 41 ರಾಜತಾಂತ್ರಿಕರನ್ನು ಭಾರತದಿಂದ ಹಿಂತೆಗೆದುಕೊಳ್ಳಲಾಗಿದೆ. ತನಿಖೆಯಲ್ಲಿ ಸಹಕರಿಸುವಂತೆ ಕೆನಡಾ ಭಾರತಕ್ಕೆ ಕರೆ ನೀಡಿದೆ. ಆದರೆ ನವದೆಹಲಿ ಈ ಆರೋಪವನ್ನು ತಿರಸ್ಕರಿಸಿದೆ. ಕೆನಡಿಯನ್ನರಿಗೆ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿದೆ.

ಇದನ್ನೂ ಓದಿ: India Canada Row: ಕೆನಡಾ ಉಪಟಳ; ಬೆಂಗಳೂರಲ್ಲಿ ವೀಸಾ ಸೇವೆ ಸ್ಥಗಿತ, 17 ಸಾವಿರ ಜನ ಅತಂತ್ರ!

Exit mobile version