Site icon Vistara News

India canada Row: ಜಸ್ಟಿನ್‌ ಟ್ರುಡೊ ಮತ್ತೆ ಕಿರಿಕಿರಿ; ಯುಎಇ ಅಧ್ಯಕ್ಷರ ಜತೆ ವಿಚಾರ ಎತ್ತಿದ ಕೆನಡಾ ಪ್ರಧಾನಿ

Narendra Modi And Justin Trudeau

ಒಟ್ಟಾವ: ಖಲಿಸ್ತಾನಿಗಳ ವಿಚಾರದಲ್ಲಿ ತುಸು ಬಾಗಿದಂತೆ ನಟಿಸಿದ್ದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ (Justin Trudeau) ಮತ್ತೆ ಕಿರಿಕಿರಿ (India Canada Row) ತೆಗೆದಿದ್ದಾರೆ. ʼಭಾರತ ಮತ್ತು ಕಾನೂನನ್ನು ಗೌರವಿಸುವ ಪ್ರಾಮುಖ್ಯತೆ’ ಕುರಿತು ಯುಎಇ ಅಧ್ಯಕ್ಷರೊಂದಿಗೆ ಮಾತನಾಡಿದ್ದೇನೆ ಎಂದಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಅವರು ಟ್ವೀಟ್‌ ಮಾಡಿದ್ದಾರೆ. ಖಲಿಸ್ತಾನಿ ಉಗ್ರ ಹರದೀಪ್‌ ಸಿಂಗ್‌ ನಿಜ್ಜರ್‌ (Hardeep singh Nijjar) ಹತ್ಯೆಯ ಬಳಿಕ ಉಂಟಾಗಿರುವ ಭಾರತ- ಕೆನಡಾ ರಾಜತಾಂತ್ರಿಕ ಜಗಳದಲ್ಲಿ ಇದನ್ನು ಹೊಸ ಪ್ರಚೋದನೆ ಎಂದು ಕರೆಯಬಹುದಾಗಿದೆ.

ʼʼಯುಎಇ ಅಧ್ಯಕ್ಷ ಮೊಹಮದ್ ಬಿನ್ ಜಾಯೆದ್ ಅವರೊಂದಿಗೆ ದೂರವಾಣಿ ಕರೆಯಲ್ಲಿ ಮಾತನಾಡಿದ್ದೇನೆ. ಭಾರತ ಹಾಗೂ ಕಾನೂನಿನ ನಿಯಮವನ್ನು ಎತ್ತಿಹಿಡಿಯುವ ಹಾಗೂ ಗೌರವಿಸುವ ಪ್ರಾಮುಖ್ಯತೆಯನ್ನು ಚರ್ಚಿಸಿದ್ದೇನೆʼʼ ಎಂದು ಪೋಸ್ಟ್‌ ಮಾಡಿದ್ದಾರೆ. ಇದೇ ಪೋಸ್ಟ್‌ನಲ್ಲಿ ಅವರು ಇಸ್ರೇಲ್- ಹಮಾಸ್ ಸಂಘರ್ಷವನ್ನು ಪ್ರಸ್ತಾಪಿಸಿದ್ದು, ನಾಗರಿಕರ ಜೀವಗಳನ್ನು ರಕ್ಷಿಸುವ ಅಗತ್ಯವನ್ನು ಪ್ರತಿಪಾದಿಸಿದ್ದಾರೆ.

ಇದಕ್ಕೂ ಕೆಲವೇ ದಿನಗಳ ಮುನ್ನ ಜಸ್ಟಿನ್‌ ಟ್ರುಡೊ ಅವರು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರೊಂದಿಗೆ ಭಾರತ- ಕೆನಡಾ ರಾಜತಾಂತ್ರಿಕ ಬಿಕ್ಕಟ್ಟಿನ ಬಗ್ಗೆ ಚರ್ಚೆಯನ್ನು ನಡೆಸಿದ್ದರು. ಸಾಧ್ಯವಾದಷ್ಟು ಬೇಗ ಈ ಬಿಕ್ಕಟ್ಟಿನ ಶಮನ ಆಗುವುದನ್ನು ನೋಡಲು ತಾನು ಆಶಿಸುವುದಾಗಿ ರಿಷಿ ಹೇಳಿದ್ದರು. ಡೌನಿಂಗ್ ಸ್ಟ್ರೀಟ್ ಹೇಳಿಕೆಯ ಪ್ರಕಾರ, ಟ್ರುಡೊ ಅವರು ರಿಷಿ ಸುನಕ್‌ ಅವರಿಗೆ ಭಾರತದಲ್ಲಿ ಕೆನಡಾದ ರಾಜತಾಂತ್ರಿಕರಿಗೆ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಕಾನೂನನ್ನು ಗೌರವಿಸಬೇಕಾದ ಬಗ್ಗೆ ಇಬ್ಬರೂ ಒಪ್ಪಿದ್ದಾರೆ.

ಇದೇ ಸಂದರ್ಭದಲ್ಲಿ ಕೆನಡಾದಲ್ಲಿರುವ ಭಾರತೀಯ ರಾಜತಾಂತ್ರಿಕರು ಹಾಗೂ ಪ್ರಜೆಗಳ ಸುರಕ್ಷತೆಯ ಅಗತ್ಯವನ್ನು ಭಾರತ ಒತ್ತಿ ಹೇಳಿದೆ. “ನಮ್ಮ ರಾಜತಾಂತ್ರಿಕರು ಮತ್ತು ಆವರಣಗಳ ಸುರಕ್ಷತೆಯ ಕಾಳಜಿ ನಮ್ಮ ಆದ್ಯತೆಯಾಗಿದೆ. ಈ ಬಗ್ಗೆ ಮಾತುಕತೆಯನ್ನು ಮುಂದುವರಿಸುತ್ತೇವೆʼʼ ಎಂದು MEA ವಕ್ತಾರ ಅರಿಂದಮ್ ಬಾಗ್ಚಿ ನವದೆಹಲಿಯಲ್ಲಿ ಹೇಳಿದ್ದಾರೆ. ಜತೆಗೆ, ಭಾರತದಲ್ಲಿರುವ ರಾಜತಾಮತ್ರಿಕರ ಸಂಖ್ಯೆಯನ್ನು ಕೆನಡಾ ಕಡಿಮೆ ಮಾಡಬೇಕು ಎಂದು ಭಾರತ ಪ್ರತಿಪಾದಿಸಿದೆ.

ಇದನ್ನೂ ಓದಿ: India Canada Row: ‘ಖಾಸಗಿ ಮಾತುಕತೆ ನಡೆಸೋಣ ಬನ್ನಿ’; ಎದುರೇಟಿಗೆ ಏದುಸಿರು ಬಿಟ್ಟ ಕೆನಡಾ ಮನವಿ

Exit mobile version