Site icon Vistara News

India China Border: ಅಕ್ಸಾಯ್ ಚಿನ್‌ನಲ್ಲಿ ಚೀನಾ ಭೂಗತ ಬಂಕರ್‌; ಉಪಗ್ರಹ ಚಿತ್ರದಿಂದ ಬಹಿರಂಗ

china bunkers in aksai chin

ಹೊಸದಿಲ್ಲಿ: ಭಾರತಕ್ಕೆ ಸೇರಿರುವ ಅಕ್ಸಾಯ್ ಚಿನ್‌ನ (Aksai chin) ಹಿಮಪರ್ವತದ ಒಳಗೆ, ಉಭಯ ದೇಶಗಳ ಗಡಿಗೆ ಸಮೀಪದಲ್ಲಿ (India China border) ಚೀನಾ ಭೂಗತ ಬಂಕರ್‌ಗಳು (underground bunker) ಮತ್ತು ಸೌಲಭ್ಯಗಳನ್ನು ನಿರ್ಮಿಸಿಕೊಳ್ಳುತ್ತಿದೆ ಎಂಬುದು ಸ್ಯಾಟ್‌ಲೈಟ್‌ ಚಿತ್ರಗಳಿಂದ (satellite imagery) ತಿಳಿದುಬಂದಿದೆ. ಪತ್ತೆಯಾಗದಂತೆ ಹೆಚ್ಚಿನ ಮಿಲಿಟರಿ ಸಾಮಗ್ರಿ ಕೂಡಿಡಲು, ವಿಮಾನ ಅಥವಾ ಕ್ಷಿಪಣಿ ದಾಳಿ ಸಂದರ್ಭ ಮಿಲಿಟರಿ ಸ್ವತ್ತುಗಳನ್ನು ರಕ್ಷಿಸಲು ಇದನ್ನು ನಿರ್ಮಿಸಿರಬಹುದು ಎಂದು ಶಂಕಿಸಲಾಗಿದೆ.

ಉಪಗ್ರಹ ಚಿತ್ರಣದ ವಿಶ್ಲೇಷಣೆ ಮಾಡಿದಾಗ ಈ ಅಂಶ ಗೊತ್ತಾಗಿದೆ. ಡಿಸೆಂಬರ್ 6, 2021 ಮತ್ತು ಆಗಸ್ಟ್ 18, 2023ರ ಉಪಗ್ರಹ ಚಿತ್ರಗಳ ಹೋಲಿಕೆಯಲ್ಲಿ ಇದು ಕಂಡುಬಂದಿದೆ. ಆಕ್ಸಾಯ್‌ ಚಿನ್‌ ಪ್ರದೇಶ ಭಾರತದ್ದಾಗಿದ್ದು, ಬಹಳ ಕಾಲದಿಂದ ಚೀನಾದ ವಶದಲ್ಲಿದೆ.

ಆಕ್ಸಾಯ್ ಚಿನ್ ಮತ್ತು ಅರುಣಾಚಲ ಪ್ರದೇಶಗಳನ್ನು (Arunachala Pradesh) ತನ್ನ ದೇಶದ ಭಾಗವಾಗಿ ಚಿತ್ರಿಸುವ “ಸ್ಟಾಂಡರ್ಡ್ ಮ್ಯಾಪ್ ಆಫ್ ಚೀನಾ” 2023ರ ಆವೃತ್ತಿಯನ್ನು ಬೀಜಿಂಗ್ ಇತ್ತೀಚೆಗೆ ಬಿಡುಗಡೆ ಮಾಡಿದೆ. ವಾರ್ಷಿಕ “ರಾಷ್ಟ್ರೀಯ ಸಮೀಕ್ಷೆ ಮತ್ತು ಮ್ಯಾಪಿಂಗ್ ಪ್ರಚಾರ ದಿನದ” ಭಾಗವಾಗಿ ಸೋಮವಾರ ಚೀನಾದ ನೈಸರ್ಗಿಕ ಸಂಪನ್ಮೂಲ ಸಚಿವಾಲಯ ಆ ನಕ್ಷೆಯನ್ನು ಬಿಡುಗಡೆ ಮಾಡಿದೆ.

ಚೀನಾದ ಕಡೆಯವರು ಅಕ್ಸಾಯ್ ಚಿನ್‌ನಲ್ಲಿ ಸುಮಾರು 15 ಚದರ ಕಿ.ಮೀ ಪ್ರದೇಶದಲ್ಲಿ ಆರು ಸ್ಥಳಗಳಲ್ಲಿ ಬಲವರ್ಧಿತ ಬಂಕರ್‌ಗಳು ಮತ್ತು ಭೂಗತ ಸೌಲಭ್ಯಗಳನ್ನು ನಿರ್ಮಿಸಿದ್ದಾರೆ ಎಂದು ಕಂಡುಬಂದಿದೆ. ಈ ಪ್ರದೇಶವು ಗಡಿ ನಿಯಂತ್ರಣ ರೇಖೆಯಿಂದ (line of actual control- ಎಲ್‌ಎಸಿ) ಸುಮಾರು 70 ಕಿಮೀ ದೂರದಲ್ಲಿದೆ. ಮೇ 2020ರಲ್ಲಿ ಬಿಕ್ಕಟ್ಟು ಬಿಗಡಾಯಿಸಲು ಆರಂಭವಾಗುವ ಮುನ್ನ ಇಲ್ಲಿನ ಹೆಚ್ಚಿನ ಭೂಮಿ ಖಾಲಿಯಾಗಿ ಇತ್ತು ಮತ್ತು ಕೆಲವು ಸಣ್ಣಪುಟ್ಟ ಕಟ್ಟಡ ನಿರ್ಮಾಣ ಚಟುವಟಿಕೆಯ ಕೆಲವು ಚಿಹ್ನೆಗಳಷ್ಟೇ ಇದ್ದವು.

ಆದರೆ ಆಗಸ್ಟ್ 2023ರ ಇತ್ತೀಚಿನ ಚಿತ್ರಗಳು ಇಲ್ಲಿ ಭಾರಿ ಪ್ರಮಾಣದ ನಿರ್ಮಾಣ ಚಟುವಟಿಕೆಯನ್ನು ತೋರಿಸಿವೆ. ಇದರಲ್ಲಿ ಭೂಮಿ ಕೊರೆಯುವ ಯಂತ್ರಗಳು, ಹೊಸ ರಸ್ತೆಗಳು ಮತ್ತು ಭೂಗತ ಬಂಕರ್‌ ಪ್ರವೇಶಿಸುವ ಹಲವು ಪ್ರವೇಶದ್ವಾರಗಳು ಕಂಡುಬಂದಿವೆ. ಸಂಭಾವ್ಯ ಯುದ್ಧದ ವೇಳೆ ವಾಯು ಅಥವಾ ಕ್ಷಿಪಣಿ ದಾಳಿಯಿಂದ ಸೂಕ್ಷ್ಮ ಉಪಕರಣಗಳು, ಮದ್ದುಗುಂಡುಗಳು ಮತ್ತು ಕಮಾಂಡ್ ಪೋಸ್ಟ್‌ಗಳನ್ನು ರಕ್ಷಿಸಲು ಈ ಭೂಗತ ಸೌಲಭ್ಯಗಳನ್ನು ಮಾಡಿರಬಹುದು ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.

ಸೋಮವಾರ ಬಿಡುಗಡೆಯಾದ ಹೊಸ ನಕ್ಷೆಯು 1962ರ ಯುದ್ಧದ ಸಮಯದಲ್ಲಿ ಚೀನಾ ಆಕ್ರಮಿಸಿಕೊಂಡಿದ್ದ ಅಕ್ಸಾಯ್ ಚಿನ್ ಮತ್ತು ದಕ್ಷಿಣ ಟಿಬೆಟ್ ಎಂದು ಬೀಜಿಂಗ್ ಹೇಳಿಕೊಳ್ಳುವ ಅರುಣಾಚಲ ಪ್ರದೇಶವನ್ನು ಅದರ ಗಡಿಯೊಳಗೆ ತೋರಿಸುತ್ತದೆ. ನಕ್ಷೆಯು ತೈವಾನ್ ಅನ್ನು ಸಹ ಒಳಗೊಂಡಿದೆ. ದಕ್ಷಿಣ ಚೀನಾ ಸಮುದ್ರದ ದೊಡ್ಡ ಪ್ರದೇಶವನ್ನೂ ಒಳಗೊಂಡಿದೆ. ಅಲ್ಲಿ ಚೀನಾ ಅನೇಕ ಪ್ರಾದೇಶಿಕ ವಿವಾದಗಳಲ್ಲಿ ತೊಡಗಿದೆ.

ಏಪ್ರಿಲ್‌ನಲ್ಲಿ ಅರುಣಾಚಲ ಪ್ರದೇಶದ 11 ಸ್ಥಳಗಳನ್ನು ಮರುನಾಮಕರಣ ಮಾಡಿದ ಚೀನಾದ ಕ್ರಮವನ್ನು ನಕ್ಷೆ ಸಮರ್ಥಿಸಿದೆ. ಇತ್ತೀಚಿನ ವರ್ಷಗಳಲ್ಲಿ ಇದು ಮೂರನೇ ಬಾರಿಗೆ ಚೀನಾ ಈಶಾನ್ಯ ರಾಜ್ಯದಲ್ಲಿ ಸ್ಥಳಗಳನ್ನು ಮರುನಾಮಕರಣ ಮಾಡಿದೆ. ಮಾರ್ಚ್‌ನಲ್ಲಿ ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರದಲ್ಲಿ ಭಾರತವು G20-ಸಂಬಂಧಿತ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಹೀಗೆ ಮಾಡಿದೆ ಎನ್ನಲಾಗಿದೆ. ಇಟಾನಗರದಲ್ಲಿ ನಡೆದ ಸಭೆಯಲ್ಲಿ ಚೀನಾ ಭಾಗವಹಿಸಿರಲಿಲ್ಲ.

ಸಂಸತ್ತಿನಲ್ಲಿ ಸರ್ಕಾರ ನೀಡಿದ ಮಾಹಿತಿಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು 38,000 ಚ.ಕಿ.ಮೀ.ನಷ್ಟು ಭಾರತೀಯ ಭೂಪ್ರದೇಶ ಚೀನಾದ ವಶದಲ್ಲಿದೆ. ಮಾರ್ಚ್ 1963ರ ಚೀನಾ-ಪಾಕಿಸ್ತಾನ “ಗಡಿ ಒಪ್ಪಂದ” ಎಂದು ಕರೆಯಲ್ಪಡುವ ಒಪ್ಪಂದದಲ್ಲಿ, ಪಾಕಿಸ್ತಾನವು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 5,180 ಚದರ ಕಿ.ಮೀ ಭಾರತೀಯ ಭೂಪ್ರದೇಶವನ್ನು ಚೀನಾಕ್ಕೆ ಅಕ್ರಮವಾಗಿ ಬಿಟ್ಟುಕೊಟ್ಟಿದೆ.

ಇದನ್ನೂ ಓದಿ: China: ಮತ್ತೆ ಚೀನಾ ಕ್ಯಾತೆ; ಅರುಣಾಚಲ ಪ್ರದೇಶ, ಆಕ್ಸಾಯ್ ಚಿನ್ ಎಲ್ಲಾ ಅದರ ಮ್ಯಾಪ್‌ನೊಳಗೆ!

Exit mobile version