ನವದೆಹಲಿ: ಸದಾ ಸಂಘರ್ಷ ಸನ್ನದ್ಧ ಸ್ಥಿತಿಯಲ್ಲಿರುವ ಚೀನಾಗೆ (China) ಠಕ್ಕರ್ ನೀಡಲು ಭಾರತವು (India) ಸಜ್ಜಾಗಿದೆ. ಹೌದು, ಎತ್ತರ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುವ ದೇಶಿ ನಿರ್ಮಿತ ಮೊದಲ ಲೈಟ್ ಟ್ಯಾಂಕ್ (Light Tank) ಅನ್ನು ಭಾರತವು ಶೀಘ್ರವೇ ನಿಯೋಜನೆ ಮಾಡಲಿದೆ. ಗಮನಾರ್ಹವಾಗಿ ಕಡಿಮೆ ಅವಧಿಯಲ್ಲಿ ಅಭಿವೃದ್ಧಿಪಡಿಸಲಾದ ಟ್ಯಾಂಕ್, ಅದರ ಮೂಲಮಾದರಿಯ ಮುಕ್ತಾಯದ ಸಮೀಪದಲ್ಲಿದೆ. ಡಿಸೆಂಬರ್‌ನಲ್ಲಿ ಅನೇಕ ಪರೀಕ್ಷೆಗಳಿಗೆ ಈ ಟ್ಯಾಂಕ್ ಒಳಪಡಲಿದೆ. ವಿಶೇಷ ಎಂದರೆ, ಇದು ಮೊದಲ ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ಲೈಟ್ ಟ್ಯಾಂಕ್ ಆಗಿದ್ದು(indigenous developed tank), ಎತ್ತರ ಯುದ್ಧಭೂಮಿಯಲ್ಲಿ ಚೀನಾವನ್ನು ಎದುರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ.
2020ರಲ್ಲಿ ಪೂರ್ವ ಲಡಾಖ್‌ನಲ್ಲಿ ಉಲ್ಬಣಗೊಂಡ ಉದ್ವಿಗ್ನತೆಯೇ ಸುಮಾರು 25 ಟನ್ ತೂಕದ ಲೈಟ್ ಟ್ಯಾಂಕ್ ಅನ್ನು ಅಭಿವೃದ್ಧಿಪಡಿಸುವ ನಿರ್ಧಾರವನ್ನು ಕೈಗೊಳ್ಳುವಂತೆ ಮಾಡಿತು. ಚೀನಾವು ಎತ್ತರದ ಸ್ಥಳಗಳಲ್ಲಿ ಲಘು ಶಸ್ತ್ರಸಜ್ಜಿತ ವಾಹನಗಳನ್ನು ನಿಯೋಜಿಸಿತು. ತಾತ್ಕಾಲಿಕವಾಗಿ ಜೋರಾವರ್ ಎಂದು ಹೆಸರಿಸಲಾದ ಈ ಭಾರತೀಯ ಟ್ಯಾಂಕ್, ಮೊಬಿಲಿಟಿ ಮತ್ತು ಫೈರ್‌ಪವರ್ ನಿಖರತೆಗೆ ಸಂಬಂಧಿಸಿದಂತೆ ಲಡಾಖ್ ಗಡಿಯಲ್ಲಿ ನಿಯೋಜಿಸಲಾದ ಚೀನಾದ ಟೈಪ್ 15 ಟ್ಯಾಂಕ್‌ಗಳನ್ನು ಮೀರಿಸುವ ನಿರೀಕ್ಷೆಯಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈ ಟ್ಯಾಂಕ್ ಅಭಿವೃದ್ಧಿಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯು ಲಾರ್ಸೆನ್ ಮತ್ತು ಟೌಬ್ರೊ (L&T) ತನ್ನ ಪಾಲುದಾರನಾಗಿ ಆಯ್ಕೆ ಮಾಡಿಕೊಂಡಿತು. 2022ರ ಏಪ್ರಿಲ್ ತಿಂಗಳಲ್ಲಿ ಟ್ಯಾಂಕ್ ಅಭಿವೃದ್ಧಿಪಡಿಸಲು ಅನುಮತಿ ನೀಡಲಾಯಿತು. ಈ ಟ್ಯಾಂಕ್ ವಿನ್ಯಾಸವು ಸಂಪೂರ್ಣವಾಗಿ ಹೊಸದು ಮತ್ತು ಸ್ಥಳೀಯ ಚಾಸಿಸ್ ಅನ್ನು ಹೊಂದಿದೆ. ಭಾರತದಲ್ಲಿ ಈಗಾಗಲೇ ಉತ್ಪಾದನೆಯಲ್ಲಿರುವ ಕೆ9 ವಜ್ರ ಸ್ವಯಂ ಚಾಲಿತ ಗನ್ ಚಾಸಿಸ್ ಅನ್ನು ಈ ಟ್ಯಾಂಕ್ ಆಧರಿಸಿದೆ.
25 ಟನ್ ತೂಕದ ಟ್ಯಾಂಕ್ ಅನ್ನು ನಿರ್ದಿಷ್ಟವಾಗಿ ತೀವ್ರ ಎತ್ತರದಲ್ಲಿ ಮೊಬಿಲಿಟಿಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಜಾನ್ ಕಾಕೆರಿಲ್ ತಯಾರಿಸಿದ 105 ಎಂಎಂ ಗನ್ ಅನ್ನು ಹೊಂದಿದ್ದು, ಟ್ಯಾಂಕ್‌ಗಳು ಸರಣಿ ಉತ್ಪಾದನೆಗೆ ಪ್ರವೇಶಿಸಿದ ನಂತರ ಭಾರತದಲ್ಲಿ ಉತ್ಪಾದಿಸುವ ನಿರೀಕ್ಷೆಯಿದೆ.
ಹೆಚ್ಚುವರಿಯಾಗಿ, ಟ್ಯಾಂಕ್ ಒಳಬರುವ ದಾಳಿಗಳ ವಿರುದ್ಧ ಸಕ್ರಿಯ ರಕ್ಷಣಾ ಕ್ರಮಗಳನ್ನು ಮತ್ತು ಯುದ್ಧಭೂಮಿ ಗೋಚರತೆಯನ್ನು ಹೆಚ್ಚಿಸಲು ಸಮಗ್ರ ಮಾನವರಹಿತ ವೈಮಾನಿಕ ವಾಹನ (UAV) ಅನ್ನು ಒಳಗೊಂಡಿದೆ.
ಈ ಹೊಸ ಲಘು ಟ್ಯಾಂಕ್, ಅತಿ ಎತ್ತರದ ಪ್ರದೇಶದಿಂದ ಹಿಡಿಯುವ ದ್ವೀಪ ಪ್ರದೇಶಗಳವರೆಗೆ ನಾನಾ ತರಹದ ಜಾಗ ಮತ್ತು ಪರಿಸ್ಥಿತಿಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಶೀಘ್ರ ನಿಯೋಜನೆಗಾಗಿ ಈ ಟ್ಯಾಂಕ್ ಅನ್ನು ಸುಲಭವಾಗಿ ಏರ್ ಟ್ರಾನ್ಸ್‌ಪೋರ್ಟ್ ಮಾಡಬಹುದು. ಮುಂಬರುವ ಪ್ರಯೋಗವು ಟ್ಯಾಂಕ್ ಪ್ರದರ್ಶನದ ಅನೇಕ ಹೊಳಹುಗಳನ್ನು ನೀಡಲಿದೆ. ಇದರಿಂದ ಯುದ್ಧ ಭೂಮಿಯಲ್ಲಿ ಟ್ಯಾಂಕ್ ನಿಯೋಜನೆ ಮಾಡಲು ಭಾರತೀಯ ಸೇನೆಗೆ ನೆರವು ದೊರೆಯಲಿದೆ.
ಈ ಸುದ್ದಿಯನ್ನೂ ಓದಿ: ರಾಜಮಾರ್ಗ ಅಂಕಣ: ಭಾರತೀಯ ಸೇನೆಯ ಬಗ್ಗೆ ಎದೆ ಉಬ್ಬಿಸಿ ನಡೆಯಲು ಇನ್ನೊಂದು ಕಾರಣ