ಬಾಲಿ: ಜಿ20 ಶೃಂಗಸಭೆಯ (G20 Summit) ಹಿನ್ನೆಲೆಯಲ್ಲಿ ಇಂಡೋನೇಷ್ಯಾದ ಬಾಲಿಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ, ಜಾಗತಿಕ ನಾಯಕರ ಭೇಟಿ, ಮಾತುಕತೆ ಜತೆಗೆ ಭಾರತದ ಸಿರಿವಂತ ಸಂಸ್ಕೃತಿ ಹಾಗೂ ಪರಂಪರೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. “ಭಾರತದ ಪರಂಪರೆ ಹಾಗೂ ಸಂಸ್ಕೃತಿಯು ಸಿರಿತನದಿಂದ ಕೂಡಿದೆ. ಐತಿಹಾಸಿಕ ಸಾಂಸ್ಕೃತಿಕ ಹಿರಿಮೆ, ಆಹಾರ ಪದ್ಧತಿಯು ಜಗತ್ತಿಗೆ ಮಾದರಿಯಾಗಿದೆ” ಎಂದು ಹೇಳಿದರು.
ಜಿ20 ಶೃಂಗಸಭೆ ಮಧ್ಯೆಯೇ ಇಂಡೋನೇಷ್ಯಾದಲ್ಲಿರುವ ಅನಿವಾಸಿ ಭಾರತೀಯರ ಜತೆ ಮಾತನಾಡಿದ ಅವರು, “ಭಾರತ ಹಾಗೂ ಇಂಡೋನೇಷ್ಯಾದ ಸಂಸ್ಕೃತಿ, ಪರಂಪರೆಯು ಹಲವು ಸಾಮ್ಯತೆಗಳಿಂದ ಕೂಡಿದೆ. ಎರಡೂ ದೇಶಗಳ ಜನರ ನಡುವಿನ ಬಾಂಧವ್ಯವೂ ಉತ್ತಮವಾಗಿದೆ. ಆಹಾರ, ಸಂಸ್ಕೃತಿ, ಸಂಪ್ರದಾಯಗಳು ಉಭಯ ದೇಶಗಳ ಮಧ್ಯೆ ಬೆಸೆದುಕೊಂಡಿವೆ” ಎಂದು ತಿಳಿಸಿದರು.
“ಎರಡೂ ರಾಷ್ಟ್ರಗಳ ನಡುವಿನ ಸಂಸ್ಕೃತಿಯ ಸಾಮ್ಯತೆಗೆ ಹತ್ತಾರು ಉದಾಹರಣೆಗಳಿವೆ. ನಾನು ಬಾಲಿಯಲ್ಲಿ ನಿಮ್ಮೆಲ್ಲರೊಂದಿಗೆ ಮಾತನಾಡುತ್ತಿದ್ದರೆ, ಇಲ್ಲಿಂದ 1,500 ಕಿ.ಮೀ ದೂರದಲ್ಲಿರುವ ಕಟಕ್‌ನಲ್ಲಿ (ಒಡಿಶಾ) ಬಾಲಿ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಭಾರತ ಹಾಗೂ ಇಂಡೋನೇಷ್ಯಾದ ವ್ಯಾಪಾರ ಸಂಬಂಧದ ದ್ಯೋತಕವಾಗಿ ಬಾಲಿ ಜಾತ್ರಾ ಮಹೋತ್ಸವವು ಸಾವಿರಾರು ವರ್ಷಗಳಿಂದ ನಡೆಯುತ್ತಿದೆ” ಎಂದು ಹೇಳಿದರು.
ದೇಶದಲ್ಲಿ ಚಿಕ್ಕ ಯೋಚನೆಗಳಿಗೆ ಜಾಗವೇ ಇಲ್ಲ
“ಭಾರತವು ಜಾಗತಿಕವಾಗಿ ಬೆಳೆಯುತ್ತಿದೆ. ದೇಶದಲ್ಲಿ ಈಗ ಸಣ್ಣ ಸಣ್ಣ ಯೋಚನೆಗಳಿಗೆ ಜಾಗವೇ ಇಲ್ಲ. ಭಾರತದ ಪ್ರತಿಭೆ, ತಂತ್ರಜ್ಞಾನ, ನಾವೀನ್ಯತೆ ಹಾಗೂ ಉದ್ಯಮವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿವೆ. ಇದರಿಂದಾಗಿಯೇ ನಾವಿಂದು ಜಗತ್ತಿನಲ್ಲಿಯೇ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯನ್ನು ಹೊಂದಿದ್ದೇವೆ” ಎಂದು ತಿಳಿಸಿದರು. ಅನಿವಾಸಿ ಭಾರತೀಯರ ಕಾರ್ಯಕ್ರಮಕ್ಕೆ ಮೋದಿ ಆಗಮಿಸುತ್ತಲೇ ಜನ, ‘ಮೋದಿ, ಮೋದಿ, ಮೋದಿ’ ಎಂಬ ಘೋಷಣೆಗಳನ್ನು ಕೂಗಿದರು.
ನೈಸರ್ಗಿಕ ಕೃಷಿಗೆ ಉತ್ತೇಜನ
ಜಿ20 ಶೃಂಗಸಭೆಯಲ್ಲೂ ಮೋದಿ ಭಾರತದ ಆಹಾರ ಭದ್ರತೆ ಹಾಗೂ ಸಿರಿಧಾನ್ಯಗಳ ಪ್ರಾಮುಖ್ಯತೆಯನ್ನು ಸಾರಿದರು. “ಭಾರತದಲ್ಲಿ ಸುಸ್ಥಿರ ಆಹಾರ ಭದ್ರತೆಗಾಗಿ ನಾವು ನೈಸರ್ಗಿಕ ಕೃಷಿಯನ್ನು ಉತ್ತೇಜಿಸುತ್ತಿದ್ದೇವೆ. ಸಿರಿಧಾನ್ಯಗಳಂಥ ಪೌಷ್ಟಿಕ ಮತ್ತು ಸಾಂಪ್ರದಾಯಿಕ ಆಹಾರ ಧಾನ್ಯಗಳನ್ನು ಮತ್ತೆ ಜನಪ್ರಿಯಗೊಳಿಸುತ್ತಿದ್ದೇವೆ. ಸಿರಿಧಾನ್ಯಗಳು ಜಾಗತಿಕವಾಗಿ ಹಸಿವು ಮತ್ತು ಅಪೌಷ್ಟಿಕತೆಯನ್ನು ದೂರ ಮಾಡಬಲ್ಲವು. ಈ ನಿಟ್ಟಿನಲ್ಲಿ ಬರುವ ವರ್ಷದಿಂದ ನಾವೆಲ್ಲರೂ ಅಂತಾರಾಷ್ಟ್ರೀಯ ಸಿರಿಧಾನ್ಯ ದಿನವನ್ನು ಉತ್ಸಾಹದಿಂದ ಆಚರಣೆ ಮಾಡಬೇಕು” ಎಂದರು.
ಇದನ್ನೂ ಓದಿ | G20 Summit | ಜಿ20 ಶೃಂಗಸಭೆಯಲ್ಲಿ ಸಿರಿಧಾನ್ಯಗಳ ಮಹತ್ವ ಹೇಳಿದ ಪ್ರಧಾನಿ ಮೋದಿ; ಉಕ್ರೇನ್ ಕದನ ವಿರಾಮಕ್ಕೆ ಕರೆ