ನವದೆಹಲಿ: ಕೆನಡಾದ ಸಾರ್ವತ್ರಿಕ ಚುನಾವಣೆಯಲ್ಲಿ (Canada Federal election) ಭಾರತ ಹಸ್ತಕ್ಷೇಪ ಮಾಡುತ್ತಿದೆ (Interference by India) ಎಂದು ಅಧಿಕೃತ ರಹಸ್ಯ ದಾಖಲೆಗಳಿಂದ ಮಾಹಿತಿ ಬಹಿರಂಗವಾಗಿದೆ. ಚೀನಾ ಹಸ್ತಕ್ಷೇಪದ ಬಗ್ಗೆ ತೀವ್ರ ಆತಂಕ ಹೊಂದಿದ್ದ (Interference by China) ಕೆನಡಾಗೆ ಭಾರತ ಕೂಡ ಅಂಥದ್ದೇ ಪ್ರಯತ್ನಕ್ಕೆ ಮುಂದಾಗಿರುವುದು ಸವಾಲು ಸೃಷ್ಟಿಸಿದೆ ಎಂದು ದಾಖಲೆಗಳಲ್ಲಿ ಹೇಳಲಾಗಿದೆ(Intelligence Report).
ಕೆನಡಾದ ಭದ್ರತಾ ಗುಪ್ತಚರ ಸೇವೆ (CSIS) ಸಿದ್ಧಪಡಿಸಿದ ವಿದೇಶಿ ಹಸ್ತಕ್ಷೇಪದ ಕುರಿತು ಡೆಮಾಕ್ರಟಿಕ್ ಸಂಸ್ಥೆಗಳ ಸಚಿವರಿಗೆ ಬ್ರೀಫಿಂಗ್ ಡಿಕ್ಲಾಸಿಫೈಡ್ ಡಾಕ್ಯುಮೆಂಟ್ ಅನ್ನು ಗ್ಲೋಬಲ್ ನ್ಯೂಸ್ ಉಲ್ಲೇಖಿಸಿ ವರದಿ ಮಾಡಿದೆ. “ಭಾರತವು ಎಫ್ಐ (ವಿದೇಶಿ ಹಸ್ತಕ್ಷೇಪ) ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ” ಎಂದು ವರದಿಯಲ್ಲಿ ತಿಳಿಸಲಾಗಿದೆ. ಭಾರತಕ್ಕೆ ಸಂಬಂಧಿಸಿದ ದಾಖಲೆಯಲ್ಲಿ ಉಳಿದಿರುವ ಏಕೈಕ ವಾಕ್ಯ ಇದಾಗಿದೆ ಎಂದು ಅದು ವರದಿ ಮಾಡಿದೆ.
ಕೆನಡಾದ ಚುನಾವಣೆಯಲ್ಲಿ ಭಾರತವು ಹಸ್ತಕ್ಷೇಪ ಮಾಡುತ್ತಿದೆ, ಪ್ರಭಾವ ಬೀರುತ್ತಿದೆ ಎಂಬ ವರದಿಯನ್ನು ಭಾರತೀಯ ಅಧಿಕಾರಿಗಳು ಕೆಲವು ತಿಂಗಳ ಹಿಂದೆ ನಿರಾಕರಿಸಿದ್ದರು. ನಾವು ಪ್ರಜಾಪ್ರಭುತ್ವ ರಾಷ್ಟ್ರವಾಗಿ ಮತ್ತೊಂದು ಪ್ರಜಾಪ್ರಭುತ್ವದ ರಾಷ್ಟ್ರದ ಆಂತರಿಕ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು.
ಆದರೆ, ಕೆನಡಾದ ಮೂಲಭೂತ ಆತಂಕ ಏನೆಂದರೆ, ಚೀನಾ 2019 ಮತ್ತು 2021ರ ಫೆಡರಲ್ ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡಿರುವುದು. ಈ ಅಂಶವೇ, ನ್ಯಾಯಮೂರ್ತಿ ಮೇರಿ-ಜೋಸಿ ಹೊಗ್ ನೇತೃತ್ವದ ಫೆಡರಲ್ ಚುನಾವಣಾ ಪ್ರಕ್ರಿಯೆಗಳು ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ವಿದೇಶಿ ಹಸ್ತಕ್ಷೇಪದ ಸಾರ್ವಜನಿಕ ವಿಚಾರಣೆಯ ರಚನೆಗೆ ಕಾರಣವಾಯಿತು. ಈ ವಾರ ವಿಚಾರಣೆಗಳು ಆರಂಭವಾಗಲಿದ್ದು, 2024 ಮೇ 3ರಂದು ಮಧ್ಯಂತರ ವರದಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ ಮತ್ತು ಅದರ ಅಂತಿಮ ವರದಿಯನ್ನು 2024 ಡಿಸೆಂಬರ್ 31ಕ್ಕೆ ನೀಡಲಾಗುತ್ತದೆ.
ಗುರುವಾರ ವಿಚಾರಣೆಗೆ ಸಲ್ಲಿಸಿದ ದಾಖಲೆಯನ್ನು ಉಲ್ಲೇಖಿಸಿ ಸಿಬಿಸಿ ವರದಿ ಮಾಡಿದ್ದು, ಕೆನಡಾದ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಗುರಿಯಾಗಿಸುವ ಚೀನಾದ ಚಟುವಟಿಕೆಯು ಪ್ರಾಥಮಿಕವಾಗಿ ರಾಜಕೀಯ ಅಭ್ಯರ್ಥಿಗಳು ಮತ್ತು ಪದಾಧಿಕಾರಿಗಳೊಂದಿಗೆ ಸಂಬಂಧಗಳನ್ನು ಬೆಳೆಸುವ ಅಥವಾ ಬೆಂಬಲಿಸುವ ಬಯಕೆಯಿಂದ ಪ್ರೇರೇಪಿಸಲ್ಪಟ್ಟಿದೆ ಎಂದು ತಿಳಿಸಲಾಗಿದೆ. ಚಿಕ್ಕ ಟಿಪ್ಪಣಿಯಲ್ಲಿ ಚೀನಾ 2019 ಮತ್ತು 2021 ರ ಫೆಡರಲ್ ಚುನಾವಣೆಗಳಲ್ಲಿ ರಹಸ್ಯವಾಗಿ ಮತ್ತು ಮೋಸಗೊಳಿಸುವ ಪ್ರಭಾವ ಬೀರಲು ಪ್ರಯತ್ನಿಸಿದೆ ಎಂದು ನಮಗೆ ತಿಳಿದಿದೆ ಎಂದು ಬರೆಯಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈ ಸುದ್ದಿಯನ್ನೂ ಓದಿ: India Canada Row: ಕೆನಡಾದಿಂದ ಮತ್ತೊಂದು ಕಿರಿಕ್; ಚುನಾವಣೆಯಲ್ಲಿ ಭಾರತದ ಹಸ್ತಕ್ಷೇಪ ತನಿಖೆಗೆ ಸಮಿತಿ