Site icon Vistara News

ವಿಸ್ತಾರ ಸಂಪಾದಕೀಯ: ಭಾರತ ಮುಸ್ಲಿಮರ ಸ್ವರ್ಗ, ಆದರೂ ಅಪಪ್ರಚಾರ!

Muslims In India

Muslims In India

ಭಾರತದಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರ ನಡೆಯುತ್ತಿದೆ ಎಂಬುದು ಹಸಿಹಸಿ ಸುಳ್ಳು. ಪ್ರಪಂಚದ ಯಾವುದೇ ದೇಶದಲ್ಲಿ ಇಲ್ಲದ ಸ್ವಾತಂತ್ರ್ಯವನ್ನು ಮುಸ್ಲಿಮರು ಭಾರತದಲ್ಲಿ ಅನುಭವಿಸುತ್ತಿದ್ದಾರೆ. 1947ರ ಬಳಿಕ ಮುಸ್ಲಿಮರ ಜನಸಂಖ್ಯೆಯ ನಿರಂತರ ಬೆಳವಣಿಗೆ ಭಾರತದಲ್ಲಿ ಆಗಿದೆ. ಇಲ್ಲಿ ಮುಸ್ಲಿಮರು ಮುಕ್ತವಾಗಿ ವ್ಯಾಪಾರೋದ್ಯಮಗಳನ್ನು ನಡೆಸುತ್ತಿದ್ದಾರೆ. ಈ ಕುರಿತು ಸುಳ್ಳು ಹೇಳುತ್ತಿರುವ ಪಾಕಿಸ್ತಾನದಲ್ಲಿಯೇ ಅಲ್ಪಸಂಖ್ಯಾತರ ಸರ್ವನಾಶ ಮಾಡಲಾಗುತ್ತಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಈ ಕುರಿತ ಅವರು ಟೀಕಾಕಾರರ ನೆಲದಲ್ಲಿಯೇ, ಅಂದರೆ ವಾಷಿಂಗ್ಟನ್‌ನ ಪೀಟರ್‌ಸನ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಇಂಟರ್‌ನ್ಯಾಷನಲ್‌ ಎಕಾನಮಿಕ್ಸ್‌ನಲ್ಲಿ ಉತ್ತರ ನೀಡಿದ್ದಾರೆ. ಅನುಮಾನ ಹೊಂದಿರುವವರು ಭಾರತಕ್ಕೆ ಭೇಟಿ ನೀಡಿ ಅದನ್ನು ಪರಿಹರಿಸಿಕೊಳ್ಳಬಹುದು ಎಂದೂ ಕರೆ ಕೊಟ್ಟಿದ್ದಾರೆ.

ಇಷ್ಟಾಗಿಯೂ ವಿದೇಶಗಳ ಕೆಲವು ಮಾಧ್ಯಮಗಳು ಭಾರತದಲ್ಲಿನ ಅಲ್ಪಸಂಖ್ಯಾತರ ಸ್ಥಿತಿಗತಿಯ ಕುರಿತು ಪೂರ್ವಗ್ರಹ ಪೀಡಿತವಾಗಿ ವರದಿ ಮಾಡುತ್ತಿವೆ. ಕಾಶ್ಮೀರದಲ್ಲಿ ಆರ್ಟಿಕಲ್‌ 370 ರದ್ದುಪಡಿಸಿದಾಗ ಮುಸ್ಲಿಮರ ಕಗ್ಗೊಲೆಯೇ ಆಯಿತು ಎಂದು ವರದಿ ಮಾಡಿದವರೆಷ್ಟೋ. ಆದರೆ ಅಲ್ಲಿನ ಮುಸ್ಲಿಮರೂ ಸೇರಿದಂತೆ ಎಲ್ಲರ ಸ್ಥಿತಿಗತಿಯೂ ಸುಧಾರಿಸುತ್ತಿದ್ದು, ಔದ್ಯಮಿಕ ಅವಕಾಶಗಳೂ ಹೆಚ್ಚುತ್ತಿವೆ. ಭಾರತದ ವಿಭಜನೆಯ ಸಂದರ್ಭದಲ್ಲಿ ಸೃಷ್ಟಿಯಾದ ಪಾಕಿಸ್ತಾನ ತನ್ನನ್ನು ಇಸ್ಲಾಮಿಕ್‌ ದೇಶ ಎಂದು ಕರೆದುಕೊಂಡಿದೆ. ಆದರೆ ಅಲ್ಲಿ ಮುಸ್ಲಿಮರೂ ನೆಮ್ಮದಿಯಿಂದಿಲ್ಲ; ಅಲ್ಲಿನ ಹಿಂದೂಗಳು- ಸಿಕ್ಖರು ಸೇರಿದಂತೆ ಅಲ್ಪಸಂಖ್ಯಾತರ ಸಂಖ್ಯೆಯಂತೂ ಇಳಿಯುತ್ತಲೇ ಇದೆ. ಅವರ ಮೇಲಿನ ದೌರ್ಜನ್ಯ ಹೆಚ್ಚುತ್ತಲೇ ಇದೆ. ಇದನ್ನೂ ವಿತ್ತ ಸಚಿವೆ ಅಮೆರಿಕದ ವೇದಿಕೆಯಲ್ಲೇ ದಿಟ್ಟವಾಗಿ ಹೇಳಿದ್ದಾರೆ.

ಈ ಮಾತಿಗೆ ಅಧ್ಯಯನ ಫಲಿತಾಂಶಗಳೂ ಒತ್ತಾಸೆಯಾಗಿ ನಿಂತಿವೆ. ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ, ಅಲ್ಪಸಂಖ್ಯಾತರನ್ನು ಒಳಗೊಳ್ಳುವ ಕ್ರಮಗಳಲ್ಲಿ ಭಾರತ ನಂ.1 ಸ್ಥಾನದಲ್ಲಿದೆ ಎಂದು ಸಿಪಿಎ (ಸೆಂಟರ್ ಫಾರ್ ಪಾಲಿಸಿ ಅನಾಲಿಸಿಸ್) ಇತ್ತೀಚೆಗೆ ನೀಡಿದ ಜಾಗತಿಕ ವರದಿ ಹೇಳಿತ್ತು. ಇದೊಂದು ಸ್ವತಂತ್ರ ಅಂತಾರಾಷ್ಟ್ರೀಯ ಸಂಸ್ಥೆ. 110 ರಾಷ್ಟ್ರಗಳಲ್ಲಿ ಸಮೀಕ್ಷೆ ನಡೆಸಿದಾಗ ಭಾರತವೇ ಅಲ್ಪಸಂಖ್ಯಾತರಿಗೆ ಹೆಚ್ಚು ಸುರಕ್ಷಿತ ಜಾಗ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ಯಾವುದೇ ನಿರ್ಬಂಧ ಇಲ್ಲ. ಭಾರತದ ಸಂವಿಧಾನವು ಸಂಸ್ಕೃತಿ ಮತ್ತು ಶಿಕ್ಷಣ ಎರಡರಲ್ಲೂ ಧಾರ್ಮಿಕ ಅಲ್ಪಸಂಖ್ಯಾತರನ್ನು ಪ್ರೋತ್ಸಾಹಿಸುವ ವಿಶಿಷ್ಟ, ವಿಶೇಷ ವಿಧಿಗಳನ್ನು ಹೊಂದಿದೆ ಎಂದೂ ಈ ವರದಿ ಉಲ್ಲೇಖಿಸಿತ್ತು.

ತಮಾಷೆ ಎಂದರೆ, ನರೇಂದ್ರ ಮೋದಿಯವರ ಆಡಳಿತದಲ್ಲಿ ಮುಸ್ಲಿಮರು ಆತಂಕ ಅನುಭವಿಸುತ್ತಿದ್ದಾರೆ ಎಂದು ಪ್ರಚಾರ ಮಾಡಲು ಹೊರಟಿದ್ದ ಬಿಬಿಸಿ ಸುದ್ದಿಸಂಸ್ಥೆಯ ಮಾತೃನೆಲವಾದ ಇಂಗ್ಲೆಂಡ್‌ ಈ ವರದಿಯಲ್ಲಿ 54ನೇ ಸ್ಥಾನದಲ್ಲಿತ್ತು. ಭಾರತದ ಅಲ್ಪಸಂಖ್ಯಾತ ನೀತಿಯು ವೈವಿಧ್ಯತೆಯನ್ನು ಬೆಳೆಸುವ ಕಾರ್ಯತಂತ್ರದ ಮೇಲೆ ರೂಪಿಸಲ್ಪಟ್ಟಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ನಮ್ಮ ದೇಶದಲ್ಲಿ ಆರು ಧರ್ಮಗಳ (ಮುಸ್ಲಿಂ, ಕ್ರೈಸ್ತ, ಸಿಖ್‌, ಜೈನ, ಬೌದ್ಧ, ಪಾರ್ಸಿ) ಅಲ್ಪಸಂಖ್ಯಾತರು ಒಟ್ಟಾಗಿ ಒಟ್ಟಾರೆ ಜನಸಂಖ್ಯೆಯ 19.3%ದಷ್ಟು ಇದ್ದಾರೆ. ಅಲ್ಪಸಂಖ್ಯಾತರ ಹಿತವನ್ನು ಕಾಯಲು ನಮ್ಮ ಸಂವಿಧಾನದಲ್ಲೂ ʼಧರ್ಮನಿರಪೇಕ್ಷತೆʼಯನ್ನು ಸೇರಿಸಲಾಗಿದೆ. ಅದಕ್ಕಾಗಿಯೇ ʼಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯʼವೂ ಇದೆ. ಭಾರತದ ಜನಸಂಖ್ಯೆಯ ಸುಮಾರು 14%ದಷ್ಟು, ಅಂದರೆ 20 ಕೋಟಿ ಮುಸ್ಲಿಮರು ಇಲ್ಲಿ ಇದ್ದಾರೆ. ಇದು ದೇಶದ ಎರಡನೇ ಅತಿ ದೊಡ್ಡ ಧಾರ್ಮಿಕ ಸಮುದಾಯ. ಇಂಡೋನೇಷ್ಯಾ ಹಾಗೂ ಪಾಕಿಸ್ತಾನದ ಬಳಿಕ ಅತಿ ಹೆಚ್ಚು ಮುಸ್ಲಿಮರು ಇರುವ ದೇಶ ಎಂದರೆ ಭಾರತ. ಇನ್ನುಳಿದ ಇಸ್ಲಾಮಿಕ್‌ ದೇಶಗಳೆನಿಸಿಕೊಂಡವು ಕೂಡ ಭಾರತದಷ್ಟು ಸಂಖ್ಯೆಯ ಮುಸ್ಲಿಮರನ್ನು ಹೊಂದಿಲ್ಲ. ಭಾರತದಲ್ಲಿ ಎರಡೂ ಧರ್ಮಗಳೂ ಸಾಕಷ್ಟು ಕೊಡುಕೊಳ್ಳುವಿಕೆ ಮಾಡಿಕೊಂಡು ಸಾಮರಸ್ಯದಿಂದ ಬಾಳುತ್ತಿವೆ.

ಇದನ್ನೂ ಓದಿ: Hanuma Jayanti 2023: ಶೆಟ್ಟಿಹಳ್ಳಿ ಆಂಜನೇಯ ಸ್ವಾಮಿ ರಥೋತ್ಸವ; ಭಕ್ತಾದಿಗಳಿಗೆ ತಂಪು ಪಾನೀಯ ವಿತರಿಸಿದ ಮುಸ್ಲಿಮರು

ಪಾಕಿಸ್ತಾನ, ಇರಾನ್ ಮುಂತಾದ ಅಪ್ಪಟ ಮುಸ್ಲಿಂ ದೇಶಗಳಿಗಿಂತ ಭಾರತೀಯ ಮುಸ್ಲಿಮರು ಹೆಚ್ಚು ಸ್ವಾತಂತ್ರ್ಯ ಮತ್ತು ಸೌಕರ್ಯ ಹೊಂದಿದ್ದಾರೆ. ಭಾರತದಲ್ಲಿ ಮುಸ್ಲಿಮರಿಗೆ ಯಾವುದೇ ಅಪಾಯ ಇಲ್ಲ ಎಂದು ಆರೆಸ್ಸೆಸ್‌ ಮುಖ್ಯಸ್ಥ ಮೋಹನ ಭಾಗವತ್ ಕೂಡ ಇತ್ತೀಚೆಗೆ ಹೇಳಿದ್ದರು. ಹಾಗೆ ನೋಡಿದರೆ ಮುಸ್ಲಿಂ ದೇಶಗಳಲ್ಲೇ ಮುಸ್ಲಿಮರು ಸುರಕ್ಷಿತವಾಗಿಲ್ಲ. ಪಾಕಿಸ್ತಾನ, ಆಫ್ಘಾನಿಸ್ತಾನದ ಮಸೀದಿಗಳಲ್ಲೇ ಬಾಂಬ್ ಇಟ್ಟು ಸ್ಫೋಟಿಸಲಾಗುತ್ತಿದೆ. ಈ ಬಗ್ಗೆ ವಿತ್ತ ಸಚಿವರು ಸ್ಪಷ್ಟವಾಗಿ ಮಾತನಾಡಿರುವುದು ಸ್ವಾಗತಾರ್ಹ. ಮುಸ್ಲಿಮರಿಗೆ ಇಲ್ಲಿ ರಕ್ಷಣೆಯಿಲ್ಲ ಎಂದು ಹುಯಿಲೆಬ್ಬಿಸುವುದನ್ನೇ ಕಾಯಕ ಮಾಡಿಕೊಂಡವರು ಇದರಿಂದ ಪಾಠ ಕಲಿಯಲಿ.

Exit mobile version