ನವದೆಹಲಿ: ಉದಾರ ಆರ್ಥಿಕ ಸುಧಾರಣೆಗಾಗಿ ದೇಶವು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ (Dr. Manmohan Sing) ಅವರಿಗೆ ಋಣಿಯಾಗಿದೆ ಎಂದು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ(Nitin Gadkari) ಅವರು ಬಣ್ಣಿಸಿದರು. ಟಿಐಒಎಲ್ ಅವಾರ್ಡ್ಸ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಡ ಜನರಿಗೆ ಪ್ರಯೋಜನಗಳನ್ನು ಒದಗಿಸಲು ದೇಶಕ್ಕೆ ಉದಾರ ಆರ್ಥಿಕ ನೀತಿ ಅಗತ್ಯವಿದೆ ಎಂದು ಅವರು ಇದೇ ವೇಳೆ ಅಭಿಪ್ರಾಯಪಟ್ಟರು.
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ವಿತ್ತ ಮಂತ್ರಿಯಾಗಿ 1991ರಲ್ಲಿ ಜಾರಿಗೆ ತಂದ ಆರ್ಥಿಕ ಸುಧಾರಣೆಗಳು ಭಾರತದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಿದವು. ಉದಾರ ಆರ್ಥಿಕತೆಯಾಗಿ ಬೆಳೆಯಲು ಸಾಧ್ಯವಾಯಿತು ಎಂದು ಅವರು ಅಭಿಪ್ರಾಯಪಟ್ಟರು.
ಉದಾರ ಆರ್ಥಿಕತೆಯಿಂದಾಗಿ ದೇಶಕ್ಕೆ ಅಭಿವೃದ್ಧಿಯ ಹೊಸ ದಿಕ್ಕು ಲಭಿಸಿತು. ಇದಕ್ಕಾಗಿ ದೇಶವು ಅವರಿಗೆ ಋಣಿಯಾಗಿದೆ. ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಜಾರಿಗೆ ತಂದ ಆರ್ಥಿಕ ನೀತಿಗಳಿಂದಾಗಿ ಸಾಕಷ್ಟು ಲಾಭವಾಗಿದೆ. 1990ರ ದಶಕದಲ್ಲಿ ತಾವು ಮಹಾರಾಷ್ಟ್ರ ಲೋಕೋಪಯೋಗಿ ಸಚಿವರಾಗಿದ್ದಾಗ, ರಸ್ತೆ ನಿರ್ಮಾಣಕ್ಕೆ ಹಣ ಸಂಗ್ರಹಿಸಲು ಸಾಧ್ಯವಾಯಿತು ಎಂದು ಅವರು ನೆನಪಿಸಿಕೊಂಡರು. ಉದಾರ ಆರ್ಥಿಕ ನೀತಿಗಳು ರೈತ ಪರ ಮತ್ತು ಬಡವರ ಪರವಾಗಿವೆ ಎಂದು ಅವರು ಹೇಳಿದರು.
ಉದಾರ ಆರ್ಥಿಕ ನೀತಿ ಹೇಗೆ ದೇಶವನ್ನು ಅಭಿವೃದ್ಧಿಪಥದಲ್ಲಿ ಕೊಂಡೊಯ್ಯುತ್ತದೆ ಎಂಬುದಕ್ಕೆ ಅವರು, ನಮ್ಮ ನೆರೆಯ ರಾಷ್ಟ್ರ ಚೀನಾವನ್ನು ಉದಾಹರಣೆಯಾಗಿ ನೀಡಿದರು. ಭಾರತಕ್ಕೆ ಈಗ ಮತ್ತೆ ಉದಾರ ಆರ್ಥಿಕ ನೀತಿಗಳನ್ನು ರೂಪಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇದನ್ನೂ ಓದಿ | Nitin Gadkari | ತಿರುಚಿದ ಮತ್ತು ಸುಳ್ಳು ಸುದ್ದಿ ಹರಡುವವರ ವಿರುದ್ಧ ನಿತಿನ್ ಗಡ್ಕರಿ ಕಾನೂನು ಕ್ರಮದ ಎಚ್ಚರಿಕೆ