Site icon Vistara News

ವಿಸ್ತಾರ ಸಂಪಾದಕೀಯ: ʼಭಾರತʼ ಕೇವಲ ಹೆಸರಲ್ಲ, ಅದೊಂದು ಭಾವನೆ, ಅನನ್ಯ ಪರಂಪರೆ

INDIA

ಇದೇ ತಿಂಗಳು ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ನಮ್ಮ ದೇಶದ ಹೆಸರನ್ನು ʼಇಂಡಿಯಾʼ (India) ಬದಲಿಗೆ ʼಭಾರತʼ (Bharat) ಎಂದು ಮರುನಾಮಕರಣ ಮಾಡುವ ಕುರಿತು ಚರ್ಚೆ ನಡೆಸಲಿದೆ ಎಂದು ಸುದ್ದಿಯಾಗಿದೆ. ಈ ಕುರಿತಾದ ವಿಧೇಯಕವನ್ನು ಕೇಂದ್ರ ಸರ್ಕಾರ ಮಂಡಿಸಲಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಜಿ20 ನಾಯಕರಿಗೆ ಆಯೋಜಿಸಲಾಗಿರುವ ಡಿನ್ನರ್ ಪಾರ್ಟಿಯ ಆಮಂತ್ರಣ ಪತ್ರಿಕೆಯಲ್ಲೂ ಪ್ರೆಸಿಡೆಂಟ್ ಆಫ್ ಭಾರತ್ (President of Bharat) ಎಂದು ಬರೆದಿರುವುದು ರಾಜಕೀಯ ಚರ್ಚೆಗಳಿಗೆ ಆಸ್ಪದ ಮಾಡಿಕೊಟ್ಟಿದೆ. ಈ ಮಧ್ಯೆ, ಇಂಡಿಯಾ ಮತ್ತು ಭಾರತ ಪದಗಳ ಬಳಕೆ, ಇತಿಹಾಸ ಕುರಿತು ಚರ್ಚೆಗಳೂ ಜೋರಾಗಿ ನಡೆಯುತ್ತಿದೆ. ಎಂದಿನಂತೆ ವಿಪಕ್ಷಗಳು ಇದನ್ನು ಟೀಕೆಗೆ ಒಡ್ಡಿವೆ. ಬಿಜೆಪಿ ಹಾಗೂ ರಾಷ್ಟ್ರೀಯವಾದಿ ವಲಯದವರು ಇದನ್ನು ಸ್ವಾಗತಿಸಿದ್ದಾರೆ.

ಈ ಉಪಖಂಡವನ್ನು ʼಭರತವರ್ಷʼ ಅಥವಾ “ಭರತಖಂಡʼ ಎಂದು ಕರೆದು ವಿವಿಧ ಪುರಾಣಗಳಲ್ಲಿ, ಭಾರತೀಯ ಧರ್ಮಗ್ರಂಥಗಳು ಮತ್ತು ಪಠ್ಯಗಳಲ್ಲಿ ಬಳಸಲಾಗಿದೆ. ಚೀನಾ- ಯುರೋಪ್‌ಗಳಿಂದ ಇಲ್ಲಿ ಬಂದು ಓಡಾಡಿದ ಪ್ರವಾಸಿಗರೂ ಇದನ್ನು ಭಾರತ ಎಂದು ಕರೆದಿದ್ದಾರೆ. ಅಂದರೆ ಭರತಖಂಡ ಅಥವಾ ಭಾರತ ಎಂಬ ಹೆಸರು ಬಹಳ ಹಿಂದಿನಿಂದಲೂ ಇಲ್ಲಿ ಚಾಲ್ತಿಯಲ್ಲಿದೆ. ಅನೇಕರು ಇದರ ಮೂಲವನ್ನು ಮಹಾಭಾರತದಲ್ಲಿ ಬರುವ ಚಂದ್ರವಂಶದ ಮಹಾರಾಜ ಭರತನಲ್ಲಿ ಗುರುತಿಸುತ್ತಾರೆ; ಇನ್ನು ಹಲವರು ಜೈನ ತೀರ್ಥಂಕರ ವೃಷಭದೇವನ ಪುತ್ರ, ಭರತ ಚಕ್ರವರ್ತಿಯಿಂದ ಇದು ಬಂದಿರಬಹುದು ಎಂದು ಸೂಚಿಸುತ್ತಾರೆ. ಅದೇನೇ ಇದ್ದರೂ ಈ ವಿಸ್ತಾರ ಉಪಖಂಡವನ್ನು ರಾಜಕೀಯವಾಗಿ, ಸಾಮಾಜಿಕವಾಗಿ ಒಂದುಗೂಡಿಸಿದ ಒಂದು ರಾಜಕೀಯ ಶಕ್ತಿ ಈ ಹೆಸರಿನ ಹಿಂದೆ ಇತ್ತು ಎಂಬುದು ನಿಸ್ಸಂಶಯ. ಹೀಗಾಗಿ ಇದು ಭಾರತೀಯ ಉಪಖಂಡಕ್ಕೇ ವಿಶಿಷ್ಟವಾದ ಒಂದು ಪರಂಪರೆಯನ್ನು ಹೊಂದಿರುವ ಹೆಸರಾಗಿದೆ.

ಹಾಗಿದ್ದರೆ ಈ ಭಾರತ ಎಂಬ ಹೆಸರು ಬದಲಾಗಿ ʼಇಂಡಿಯಾʼ ಬಂದುದು ಯಾವಾಗ? ಅದು ಇತ್ತೀಚಿಗಿನ ಮುನ್ನೂರು ವರ್ಷಗಳ ಬೆಳವಣಿಗೆ. ಬ್ರಿಟಿಷ್ ಆಡಳಿತದಲ್ಲಿ ಅಂದರೆ, ಅಂದಾಜು 1757ರಿಂದ 1947ರವರೆಗೆ ಭಾರತ ಉಪಖಂಡವನ್ನು ಬ್ರಿಟಿಷರು ಇಂಡಿಯಾ ಎಂದು ಉಲ್ಲೇಖಿಸುತ್ತಿದ್ದರು. ಸಿಂಧೂ ನದಿಯನ್ನು ವಿದೇಶೀಯರು ಇಂಡಸ್‌ ಎಂದು ಕರೆದು, ಇಂಡಸ್‌ನಿಂದ ದಕ್ಷಿಣ ಹಾಗೂ ಪೂರ್ವಕ್ಕಿರುವ ನಾಡನ್ನೆಲ್ಲ ಇಂಡಿಯಾ ಎಂದು ಕರೆಯಲಾರಂಭಿಸಿದರು. ಅದು ಭಾರತದ ಪಶ್ಚಿಮ ಗಡಿಯಾಗಿತ್ತು. ಉಚ್ಚರಿಸಲು ಸುಲಭವಾದುದರಿಂದ ಮುಂದೆ ಬ್ರಿಟಿಷರು ಇಂಡಿಯಾ ಎಂಬ ಪದವನ್ನೇ ಅಧಿಕೃತವಾಗಿ ಬಳಸಲಾರಂಭಿಸಿದರು. ಹೀಗೆ ಬ್ರಿಟಿಷರು ಮಾಡಿದ ಒಂದು ತಪ್ಪಿನಿಂದ ಇಂಡಿಯಾ ಎಂಬ ಪದ ಹುಟ್ಟಿಕೊಂಡಿತು. ಮುಂದೆ ಅದೇ ಉಳಿದುಕೊಂಡಿತು.

1947ರಲ್ಲಿ ಭಾರತವು ಸ್ವತಂತ್ರಗೊಂಡಾಗ ಯಾವ ಹೆಸರನ್ನು ಅಧಿಕೃತವಾಗಿ ಇಟ್ಟುಕೊಳ್ಳಬೇಕೆಂಬ ಸುದೀರ್ಘ ಚರ್ಚೆ ನಡೆಯಿತು. ಹೊಸದಾಗಿ ರಚನೆಯಾದ ದೇಶಕ್ಕೆ ಅಧಿಕೃತವಾದ ಹೆಸರನ್ನು ಬಳಸುವುದು ಅತ್ಯಗತ್ಯವಾಗಿದ್ದರಿಂದ ಸಂವಿಧಾನ ರಚನಾಕಾರರು ಈ ಕುರಿತು ವ್ಯಾಪಕವಾಗಿ ಚರ್ಚೆ ಮಾಡಿದರು. ಭಾರತದ ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನದಲ್ಲಿ “ಭಾರತ” ಮತ್ತು “ಇಂಡಿಯಾ” ಈ ಎರಡೂ ಪದಗಳನ್ನು ಬಳಸಲು ನಿರ್ಧರಿಸಲಾಯಿತು. ಭಾರತೀಯ ಸಂವಿಧಾನದ 1ನೇ ವಿಧಿಯಲ್ಲಿ “ಇಂಡಿಯಾ, ಇದು ಭಾರತ, ರಾಜ್ಯಗಳ ಒಕ್ಕೂಟ” ಎಂದು ಕರೆಯಲಾಗಿದೆ. ಹೀಗಾಗಿ ಎರಡೂ ಹೆಸರುಗಳು ಐತಿಹಾಸಿಕ ಮಹತ್ವವನ್ನು ಪಡೆದುಕೊಂಡಿವೆ. ಇಂಡಿಯಾ ಮತ್ತು ಭಾರತಗಳೆರಡೂ ಅಧಿಕೃತ ಬಳಕೆಯ ಪದಗಳಾದರೂ ವರ್ಷಗಳು ಉರುಳಿದಂತೆ ಇಂಡಿಯಾ ಎಂಬ ಪದ ಹೆಚ್ಚು ಬಳಕೆಯಲ್ಲಿ ಬಂತು. ಅದರಲ್ಲೂ ಅಂತಾರಾಷ್ಟ್ರೀಯ ವಿಷಯಗಳು, ಸಂದರ್ಭದಲ್ಲಿ ಭಾರತವನ್ನು ಇಂಡಿಯಾ ಎಂದೇ ಹೆಸರಿಸಲು ಆರಂಭಿಸಲಾಯಿತು. ಸಾಂವಿಧಾನಿಕ ಸಂಸ್ಥೆಗಳಲ್ಲೂ ಇದನ್ನು ಜಾರಿಗೆ ತರಲಾಯಿತು. ಉದಾ: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ. ಹಿಂದಿ ಮತ್ತು ಇತರ ಭಾರತೀಯ ಭಾಷೆಗಳಲ್ಲಿ ಭಾರತ ಎಂಬ ಪದ ಬಳಕೆ ಮುಂದುವರಿಯಿತು. ಹಿಂದಿ ಮತ್ತು ಇಂಗ್ಲಿಷ್ ಭಾರತದ ಅಧಿಕೃತ ಭಾಷೆಗಳಾದವು ಮತ್ತು ಹಿಂದಿ ಭಾರತ ಸರ್ಕಾರದ ಅಧಿಕೃತ ಭಾಷೆಯಾಗಿದೆ.

ಇಂಡಿಯಾ ಎಂಬ ಪದಕ್ಕೆ ಐತಿಹಾಸಿಕ ಹಿನ್ನೆಲೆ ಇದ್ದರೂ, ಸಾಂಸ್ಕೃತಿಕವಾಗಿ ʼಭಾರತʼ ಎಂಬ ಪದವೇ ನಮಗೆ ಹೆಚ್ಚು ನಿಕಟವಾದುದು. ʼಭಾರತʼ ಎಂದಾಗ ನಮಗೆ ಮಹಾಭಾರತ, ರಾಮಾಯಣ ಮುಂತಾದ ನಮ್ಮ ಮಹಾಕಾವ್ಯಗಳು ನೆನಪಾಗುತ್ತವೆ. ನಮ್ಮನ್ನಾಳಿದ ಜನಸ್ನೇಹಿಗಳಾದ ಭರತನಂಥ ರಾಜರು ನೆನಪಾಗುತ್ತಾರೆ. ಭಾರತೀಯ ಎಂಬ ಹೆಸರಿನ ಜತೆಗೆ ಸೇರಿಕೊಂಡು ಲಲಿತಕಲೆಗಳು, ಸಾಹಿತ್ಯ ಎಲ್ಲವೂ ನೆನಪಾಗುತ್ತವೆ. ಇಂಡಿಯಾ ಎಂಬುದು ಬರಿಯ ಒಂದು ಹೆಸರು. ಆದರೆ ಭಾರತ ಎಂಬುದು ಬರಿಯ ಹೆಸರಲ್ಲ; ಅದು ಒಂದು ಭಾವನೆ; ಅದೊಂದು ಸುಂದರ ಪರಂಪರೆ. ಅಲ್ಲಿ ನಮ್ಮ ದೇಶದ ಶತಮಾನಗಳ ಪರಂಪರೆಯ ಸಾತತ್ಯವಿದೆ, ವಿಶಿಷ್ಟತೆ, ಅಸ್ಮಿತೆಗಳಿವೆ. ಹೀಗಾಗಿ ʼಇಂಡಿಯಾʼ ಬದಲು ʼಭಾರತʼ ಎಂಬುದನ್ನು ಬಳಸುವಲ್ಲಿ ಯಾವುದೇ ತಪ್ಪಿಲ್ಲ.

ಇದನ್ನೂ ಓದಿ : Vistara Explainer: ‘ಭಾರತ’ವು ‘ಇಂಡಿಯಾ’ ಆಗಿದ್ದು ಹೇಗೆ? ಇಂಡಿಯಾ ಪದ ಬಳಕೆಗೆ ಏಕೆ ಆಕ್ಷೇಪ?

ಮತ್ತೊಂದು ಕಡೆಯಿಂದ ನೋಡಿದರೆ, ʼಇಂಡಿಯಾʼ ಎಂಬುದಕ್ಕೆ ಕರಾಳ ಹಿನ್ನೆಲೆಯಿದೆ. ಅದು ನಮ್ಮನ್ನು ಕ್ರೂರವಾಗಿ ಆಳಿಹೋದ ಬ್ರಿಟಿಷ್‌ ವಸಾಹತುಶಾಹಿಯ ನೆನಪನ್ನು ನಮಗೆ ತರುತ್ತದೆ. ನಾವು ಶತಮಾನಗಳ ಕಾಲ ಅನುಭವಿಸಿದ ಗುಲಾಮಗಿರಿ, ಸಂಕಟಗಳನ್ನು ಕಣ್ಣ ಮುಂದೆ ತರುತ್ತದೆ. ಈ ಕರಾಳ ಭೂತಕಾಲದಿಂದ ಬಿಡುಗಡೆ ಹೊಂದಬೇಕು, ಗುಲಾಮಿ ಮನಸ್ಥಿತಿಯಿಂದ ಬಿಡುಗಡೆ ಹೊಂದಬೇಕು ಎಂಬುದು ಎಲ್ಲ ಪ್ರಜ್ಞಾವಂತರ ಅಪೇಕ್ಷೆ. ಸಂವಿಧಾನದಲ್ಲೂ ʼಭಾರತʼ ಎಂಬ ಪದಬಳಕೆ ಇರುವುದರಿಂದ, ಸಾಂವಿಧಾನಿಕ ಸಂಸ್ಥೆಗಳಲ್ಲಿ ಇದನ್ನು ಅಳವಡಿಸುವುದು ಕಷ್ಟವಾಗಲಾರದು. ಇಂಗ್ಲಿಷ್‌ ಶಿಕ್ಷಣ ಪಡೆದ ಮನಸ್ಥಿತಿಗೆ, ಇಂಗ್ಲಿಷರಂತೆ ವರ್ತಿಸುವವರಿಗೆ ಆರಂಭದಲ್ಲಿ ಸ್ವಲ್ಪ ಕಷ್ಟವಾದೀತು. ಆದರೆ ಕಾಲಾನುಕ್ರಮದಲ್ಲಿ ಸರಿಹೋಗುತ್ತದೆ. ಭಾರತ ಎಂಬ ಹೆಸರೇ ನಮ್ಮ ಸ್ವಾಭಿಮಾನದ ಪ್ರತೀಕವಾಗುತ್ತದೆ.

Exit mobile version