ರೋಮ್: ಲೋಕಸಭೆ ಚುನಾವಣೆ ಬಳಿಕ ಮೊದಲ ಬಾರಿಗೆ ವಿದೇಶಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜಿ-7 ಶೃಂಗಸಭೆಯಲ್ಲಿ (G7 Summit Italy) ಪಾಲ್ಗೊಂಡರು. ಇದೇ ವೇಳೆ ಮಾತನಾಡಿದ ಅವರು, “ತಂತ್ರಜ್ಞಾನದ ಅಳವಡಿಕೆ ಜತೆಗೆ ಮಾನವ ಕೇಂದ್ರಿತವಾಗಿಯೇ ಏಳಿಗೆ ಹೊಂದಲು ಭಾರತ ಆದ್ಯತೆ ನೀಡುತ್ತಿದೆ. ಜಾಗತಿಕವಾಗಿ ತಂತ್ರಜ್ಞಾನದ ಜತೆಗೇ ಮಾನವ ಕೇಂದ್ರಿತ ಅಭಿವೃದ್ಧಿಯು ಪ್ರಮುಖ ವಿಷಯವಾಗಬೇಕಿದೆ” ಎಂದು ಪ್ರತಿಪಾದಿಸಿದರು.
“ತಂತ್ರಜ್ಞಾನವನ್ನು ಸೃಜನಶೀಲತೆಯ ಸೃಷ್ಟಿಗಾಗಿ, ಅಭಿವೃದ್ಧಿಗಾಗಿ, ಏಳಿಗೆಗಾಗಿ ಬಳಸಬೇಕೇ ಹೊರತು, ವಿನಾಶಕ್ಕಾಗಿ ಅದನ್ನು ಬಳಸಬಾರದು. ಜಗತ್ತಿನಾದ್ಯಂತ ಬೇರೂರಿರುವ ಸಾಮಾಜಿಕ ಅಸಮಾನತೆಯನ್ನು ನಿರ್ಮೂಲನೆ ಮಾಡುವ ದಿಸೆಯಲ್ಲಿ ಇಂದು ತಂತ್ರಜ್ಞಾನವನ್ನು ಬಳಸಬೇಕಾಗಿದೆ. ಭಾರತವು, ಇಂತಹ ಪ್ರಯತ್ನ ಮಾಡುತ್ತಿದೆ. ಕೃತಕ ಬುದ್ಧಿಮತ್ತೆ ಸೇರಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಏಳಿಗೆಯತ್ತ ಮುಂದೆ ಸಾಗುತ್ತಿದೆ. ಎಲ್ಲರಿಗೂ ಕೃತಕ ಬುದ್ಧಿಮತ್ತೆ (AI For All) ಎಂಬ ತತ್ವದೊಂದಿಗೆ, ಕೃತಕ ಬುದ್ಧಿಮತ್ತೆ ಬಳಕೆಗೆ ರಾಷ್ಟ್ರೀಯ ಸ್ಟ್ರ್ಯಾಟಜಿಯೊಂದಿಗೆ ಮುನ್ನಡೆಯುತ್ತಿದೆ” ಎಂದು ತಿಳಿಸಿದರು.
With world leaders at the @G7 Summit in Italy. pic.twitter.com/83gSNhNQTs
— Narendra Modi (@narendramodi) June 14, 2024
ಚುನಾವಣೆ ಗೆಲುವಿನ ಪ್ರಸ್ತಾಪ
ಕಳೆದ ಲೋಕಸಭೆ ಚುನಾವಣೆ ಕುರಿತು ಕೂಡ ನರೇಂದ್ರ ಮೋದಿ ಮಾತನಾಡಿದರು. “ಇತ್ತೀಚೆಗೆ ಭಾರತದಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲೂ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಯಿತು. ತಂತ್ರಜ್ಞಾನದ ಸಹಾಯದಿಂದ ಪಾರದರ್ಶಕವಾಗಿ ಚುನಾವಣೆ ನಡೆಸಲಾಯಿತು. ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ನಡೆದ ಚುನಾವಣೆ ಫಲಿತಾಂಶವನ್ನು ಕೆಲವೇ ಗಂಟೆಗಳಲ್ಲಿ ಪ್ರಕಟಿಸಲಾಯಿತು. ನಮ್ಮ ದೇಶದ ಜನ ನನಗೆ ಮೂರನೇ ಬಾರಿಗೆ ಸೇವೆ ಮಾಡಲು ಅವಕಾಶ ಕೊಟ್ಟಿರುವುದಕ್ಕೆ ನಾನು ಧನ್ಯನಾಗಿದ್ದೇನೆ” ಎಂದು ಹೇಳಿದರು.
“ಸತತ ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಜನ ನನ್ನನ್ನು ಆಯ್ಕೆ ಮಾಡಿದ್ದಾರೆ. ಕಳೆದ ಆರು ದಶಕಗಳಲ್ಲಿಯೇ ಮೊದಲ ಬಾರಿಗೆ ನಮ್ಮ ದೇಶದ ಜನ ಸತತ ಮೂರನೇ ಬಾರಿಗೆ ಆಯ್ಕೆ ಮಾಡಿದ್ದಾರೆ. ಭಾರತದ ಮತದಾರರು ನೀಡಿದ ಜಯವು ಪ್ರಜಾಪ್ರಭುತ್ವದ ಜಯವಾಗಿದೆ” ಎಂದು ಹೇಳಿದರು. ಸೈಬರ್ ಭದ್ರತೆ, ಗ್ಲೋಬಲ್ ಸೌತ್, ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ-20 ಶೃಂಗಸಭೆ, ವಿಕಸಿತ ಭಾರತದ ಗುರಿ, ಇಂಧನದ ಸದ್ಬಳಕೆ, ಪರಿಸರ ಜಾಗೃತಿ ಸೇರಿ ಹಲವು ವಿಷಯಗಳನ್ನು ಮೋದಿ ಪ್ರಸ್ತಾಪಿಸಿದರು.
ಇದನ್ನೂ ಓದಿ: Narendra Modi: ಸ್ನೇಹಿತ ಮೋದಿಯನ್ನು ಕೈಮುಗಿದು ಆತ್ಮೀಯವಾಗಿ ಸ್ವಾಗತಿಸಿದ ಇಟಲಿ ಪ್ರಧಾನಿ ಮೆಲೋನಿ; Video ಇದೆ