ನವ ದೆಹಲಿ: ದಲೈ ಲಾಮಾ ಅವರು ಭಾರತದ ಅತಿಥಿ. ಅವರನ್ನು ಗೌರವಾನ್ವಿತ ಅತಿಥಿಯಂತೆ ಪರಿಗಣಿಸುವುದು ನಮ್ಮ ಸ್ಥಿರ ನೀತಿಯಾಗಿದೆ ಎಂದು ಭಾರತ ಸರ್ಕಾರ ಚೀನಾಗೆ ಉತ್ತರ ನೀಡಿದೆ.
ಜುಲೈ 6ರಂದು ದಲೈ ಲಾಮ ಅವರ 87ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಭಾಶಯ ಕೋರಿದ್ದರು. ಸ್ವತಃ ಫೋನ್ ಕರೆ ಮಾಡಿ ಮಾತನಾಡಿದ್ದಾಗಿ ಟ್ವೀಟ್ ಮಾಡಿದ್ದರು. ಇದು ಚೀನಾವನ್ನು ಕೆರಳಿಸಿತ್ತು.
ಮರುದಿನ ಚೀನಾದ ಬೀಜಿಂಗ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಅಲ್ಲಿನ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್, “14ನೇ ದಲೈ ಲಾಮಾ ಅವರ ಚೀನಾ ವಿರೋಧಿ ಪ್ರತ್ಯೇಕತಾವಾದಿ ಸ್ವಭಾವವನ್ನು ಭಾರತ ಗುರುತಿಸಬೇಕು. ಚೀನಾದ ಜತೆಗಿನ ಉತ್ತಮ ದ್ವಿಪಕ್ಷೀಯ ಸಂಬಂಧಕ್ಕೆ ಬದ್ಧವಾಗಿರುವಂತೆ ಮಾತನಾಡಬೇಕು ಮತ್ತು ವಿವೇಕದಿಂದ ವರ್ತಿಸಬೇಕು. ಚೀನಾದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಲು ಟಿಬೆಟ್ ಸಂಬಂಧಿತ ಸಮಸ್ಯೆಗಳನ್ನು ಬಳಸುವುದನ್ನು ನಿಲ್ಲಿಸಬೇಕು” ಎಂದು ಹೇಳಿದ್ದರು.
ಇದಾದ ಮರುದಿನ ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ʼʼಭಾರತದಲ್ಲಿ ಗೌರವಾನ್ವಿತ ಅತಿಥಿಯಾಗಿ ಮತ್ತು ಭಾರತದಲ್ಲಿ ಹೆಚ್ಚಿನ ಅನುಯಾಯಿಗಳನ್ನು ಹೊಂದಿರುವ ಗೌರವಾನ್ವಿತ ಧಾರ್ಮಿಕ ನಾಯಕರಾಗಿ ದಲೈ ಲಾಮ ಅವರನ್ನು ಪರಿಗಣಿಸುವುದು ಭಾರತ ಸರ್ಕಾರದ ಸ್ಥಿರ ನೀತಿ. ಭಾರತದಲ್ಲಿ ಅವರ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳನ್ನು ನಡೆಸಲು ಎಲ್ಲಾ ರೀತಿಯ ಸ್ವಾತಂತ್ರ್ಯ ನೀಡಲಾಗಿದೆ” ಬಾಗ್ಚಿ ಗುರುವಾರ ಹೇಳಿದರು.
ಕಳೆದ ವರ್ಷವೂ ಜನ್ಮದಿನದಂದು ಅವರಿಗೆ ಮೋದಿ ಶುಭಾಶಯ ಕೋರಿದ್ದಾರೆ. ದಲೈ ಲಾಮಾ ಅವರು ಜುಲೈ 14ರಂದು ಜಮ್ಮು ಮತ್ತು ಲಡಾಖ್‌ಗೆ ಭೇಟಿ ನೀಡಲಿದ್ದಾರೆ. ಇದು ಚೀನಾವನ್ನು ಮತ್ತಷ್ಟು ಕೆರಳಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: ಟಿಬೆಟ್, ಮೇಘಾಲಯದಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಭೂಕಂಪ, 4.0 ತೀವ್ರತೆ