ನವ ದೆಹಲಿ: ದೇಶದಲ್ಲಿ ಕೊರೊನಾ ಏರಿಳಿತ ಮುಂದುವರಿದಿದೆ. ಶುಕ್ರವಾರ (ಜು.8) 18,815 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದರೆ ಶನಿವಾರ ಅದು 18,840ಕ್ಕೇರಿದೆ. ದೇಶದಲ್ಲಿ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 4,36,04,394 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಪ್ರಸ್ತುತ ದೇಶದಲ್ಲಿ 1,25,028 ಸಕ್ರಿಯ ಪ್ರಕರಣಗಳಿದ್ದು, ಒಂದೇ ದಿನದಲ್ಲಿ ಮಹಾಮಾರಿ ಸೋಂಕಿಗೆ 43 ಮಂದಿ ಸಾವನ್ನಪ್ಪಿದ್ದು, ಮೃತಪಟ್ಟವರ ಸಂಖ್ಯೆ 5,25,386ಕ್ಕೆ ಏರಿದೆ. ನಿನ್ನೆಗಿಂತ ಇಂದು (ಶನಿವಾರ) 0.1% ರಷ್ಟು ಸೋಂಕಿನ ಪ್ರಮಾಣ ಏರಿಕೆ ಕಂಡಿದೆ. ಇನ್ನು ಅತಿ ಹೆಚ್ಚು ಸೋಂಕು ದಾಖಲಾಗುತ್ತಿರುವ ಕೇರಳ, ಪಶ್ಚಿಮ ಬಂಗಾಳ. ಮಹಾರಾಷ್ಟ್ರ. ತಮಿಳುನಾಡು ಮತ್ತು ಕರ್ನಾಟಕದಲ್ಲಿ ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು, ಸೋಂಕು ನಿಯಂತ್ರಿಸಲು ಈ ರಾಜ್ಯಗಳು ಹೆಣಗಾಡುತ್ತಿವೆ.
ಈ ಐದು ರಾಜ್ಯಗಳಲ್ಲಿ 68.81% ರಷ್ಟು ಪಾಸಿಟಿವಿಟಿ ದರ ಹೆಚ್ಚಳವಾಗಿದ್ದು, ಕೇರಳ ಒಂದರಲ್ಲಿ 17.57% ರಷ್ಟು ಕೊರೊನಾ ಕೇಸ್ಗಳು ದಾಖಲಾಗುತ್ತಿವೆ. ಇದೆಲ್ಲದರ ನಡುವೆ ಪ್ರತಿದಿನ ಸೋಂಕಿನಿಂದ ಗುಣಮುಖರಾಗುವವರ ಸಂಖ್ಯೆ ಕೊಂಚ ಏರಿಕೆ ಕಾಣುತ್ತಿದೆ. ಕಳೆದ 24 ಗಂಟೆಯಲ್ಲಿ 16,104 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಒಟ್ಟಾರೆ ದೇಶದಲ್ಲಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 4,29,53,980 ಕ್ಕೆ ಏರಿದೆ (ಒಟ್ಟಾರೆ ದೇಶದಲ್ಲಿನ ಪಾಸಿಟಿವಿಟಿ ದರ 98.51%) ರಷ್ಟಿದೆ. ಒಂದೇ ದಿನದಲ್ಲಿ 12,26,795 ಮಂದಿಗೆ ಕೊರೊನಾ ಲಸಿಕೆ ವಿತರಣೆ ಮಾಡಲಾಗಿದೆ. ಒಟ್ಟಾರೆ ಈವರೆಗೂ 1,98,65,36,288 ಕೊರೊನಾ ಡೋಸ್ಗಳ ವಿತರಣೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಇದನ್ನು ಓದಿ| ದೇಶದಲ್ಲಿ ಕಳೆದ 24 ಗಂಟೆಯಲ್ಲಿ 18,815 ಮಂದಿಗೆ ಕೊರೊನಾ, ಪಶ್ಚಿಮ ಬಂಗಾಳದಲ್ಲಿ ಏರುಮುಖ