ನವದೆಹಲಿ: ಸತತ ಎರಡನೇ ದಿನ ಭಾರತದಲ್ಲಿ 1,800ಕ್ಕೂ ಅಧಿಕ ಕೋವಿಡ್ ಪ್ರಕರಣಗಳು (Covid-19) ದಾಖಲಾಗಿವೆ. ಇದರೊಂದಿಗೆ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಹತ್ತು ಸಾವಿರ ದಾಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಅಂಕಿ ಸಂಖ್ಯೆಗಳು ತಿಳಿಸಿವೆ. ಇದೇ ವೇಳೆ, ಕೋವಿಡ್ ಸಂಬಂಧ 6 ಜನರು ಮೃತಪಟ್ಟಿದ್ದಾರೆ. ಇದರೊಂದಿಗೆ ಕೋವಿಡ್‌ನಿಂದ ಮೃತಪಟ್ಟವರ ಒಟ್ಟಾರೆ ಸಂಖ್ಯೆ 5,30,837ಕ್ಕೆ ಏರಿಕೆಯಾದಂತಾಗಿದೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಸೋಮವಾರ ರಾಜ್ಯಗಳ ಆರೋಗ್ಯ ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಕೋವಿಡ್ -19 ಎದುರಿಸುವ ಸಿದ್ಧತೆಯನ್ನು ಪರಿಶೀಲಿಸುವ ಸಭೆ ನಡೆಸಲಿದ್ದಾರೆ. ಭಾರತದಲ್ಲಿ ನಿತ್ಯ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಲೇವೆ. ಹೀಗಾಗಿ, ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವ ಸಂಬಂಧ ಸಭೆಯನ್ನು ನಡೆಸಲಾಗುತ್ತಿದೆ. ಮುಂದಿನ ತಿಂಗಳು ಎಲ್ಲಾ ಜಿಲ್ಲೆಗಳಲ್ಲಿನ ಆರೋಗ್ಯ ಕೇಂದ್ರಗಳಲ್ಲಿ ರಾಷ್ಟ್ರವ್ಯಾಪಿ ಅಣಕು-ಡ್ರಿಲ್ ಅನ್ನು ಯೋಜಿಸಲಾಗಿದೆ. ಈ ಬಗ್ಗೆ ಸಭೆಯಲ್ಲಿ ಚರ್ಚೆಯಾಗಲಿದೆ.
ಶನಿವಾರ 1,890 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿತ್ತು. ಇದು 149 ದಿನಗಳಲ್ಲಿ ಅತಿ ಹೆಚ್ಚು ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ದೈನಂದಿನ ಪಾಸಿಟಿವಿಟಿ ರೇಟ್ ಶೇ.1.56 ದಾಖಲಾಗಿದ್ದರೆ, ವಾರದ ಪಾಸಿಟಿವಿಟಿ ರೇಟ್ ಶೇ.1.29ಕ್ಕೆ ನಿಗದಿಯಾಗಿದೆ.
ಇದನ್ನೂ ಓದಿ: Coronavirus: ಕೋವಿಡ್‌ನಿಂದ ಮೆದುಳು ಸಮಸ್ಯೆ, ಜಪಾನ್‌ನಲ್ಲಿ ಶೇ.10ರಷ್ಟು ಮಕ್ಕಳ ಸಾವು
2021ರ ಅಂತ್ಯದಲ್ಲಿ ಆರಂಭವಾದ ಕೋವಿಡ್ ಸೋಂಕಿನಿಂದಾಗಿ ಇಡೀ ಜಗತ್ತು ಎರಡು ವರ್ಷಗಳ ಕಾಲ ತತ್ತರಿಸಿತ್ತು. ಲಕ್ಷಾಂತರ ಜನರು ಮೃತಪಟ್ಟರೆ, ಕೋಟ್ಯಂತರ ಜನರು ಸೋಂಕಿತರಾಗಿದ್ದರು. ಲಸಿಕೆಗಳು ಬಳಕೆಗೆ ಬಂದ ಮೇಲೆ ಕೋವಿಡ್ ನಿಯಂತ್ರಣಕ್ಕೆ ಬಂದಿತ್ತು. ಇಷ್ಟಾಗಿಯೂ ಚೀನಾ, ಅಮೆರಿಕ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಕೋವಿಡ್ ಇನ್ನೂ ಜಾರಿ ಹಂತದಲ್ಲಿತ್ತು. ಇದೀಗ ಭಾರತದಲ್ಲಿ ನಿತ್ಯ ಕೋವಿಡ್ ಪ್ರಕರಣಗಳು ಹೆಚ್ಚು ದಾಖಲಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.