Site icon Vistara News

ಪರಿಸರ ಸೂಚ್ಯಂಕದಲ್ಲಿ ಕಳಪೆ ಸ್ಥಾನ: ಮಾನದಂಡ ಸರಿಯಿಲ್ಲ ಎಂದ ಭಾರತ

environment

ನವ ದೆಹಲಿ: ಪರಿಸರ ಕಾರ್ಯಕ್ಷಮತೆ ಸೂಚ್ಯಂಕದ (Environment Performance Index-EPI) 180 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವನ್ನು ಅತ್ಯಂತ ಕೆಳಗೆ ಕೂರಿಸಿದ ಕ್ರಮವನ್ನು ಭಾರತ ಸರ್ಕಾರ ಕಟುವಾಗಿ ಟೀಕಿಸಿದೆ.

ಯೇಲ್ ಸೆಂಟರ್ ಫಾರ್ ಎನ್ವಿರಾನ್‌ಮೆಂಟ್ ಲಾ & ಪಾಲಿಸಿ ಮತ್ತು ಕೊಲಂಬಿಯಾ ವಿಶ್ವವಿದ್ಯಾನಿಲಯ ಈ ಸೂಚ್ಯಂಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದವು. ಪಟ್ಟಿಯಲ್ಲಿ 180 ರಾಷ್ಟ್ರಗಳಿದ್ದು, ಭಾರತವನ್ನು ಅತ್ಯಂತ ಕೆಳಗಿನ ಸಾಲಿಗೆ ತಳ್ಳಲಾಗಿದೆ.

ಇಪಿಐ ಸೂಚ್ಯಂಕದ ನಿರ್ಧಾರ ಅತ್ಯಂತ ಅವೈಜ್ಞಾನಿಕವಾಗಿದೆ. ಆಧಾರರಹಿತ ಊಹೆಗಳ, ಅವೈಜ್ಞಾನಿಕ ವಿಧಾನಗಳ ಆಧಾರದ ಮೇಲೆ ಇದನ್ನು ನಿರ್ಧರಿಸಲಾಗಿದೆ. ಅನೇಕ ಮಾನದಂಡಗಳಲ್ಲಿ ಭಾರತವನ್ನು ಗುರುತಿಸಿದ ವಿಧಾನ ಸಮರ್ಪಕವಾಗಿಲ್ಲ ಎಂದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಹೇಳಿಕೆ ನೀಡಿದೆ. ಹೀಗಾಗಿ ಭಾರತ ಈ ಸೂಚ್ಯಂಕವನ್ನು ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಇಂಗಾಲಾಮ್ಲ ಹೊರಸೂಸುವಿಕೆ ಕಡಿಮೆ ಮಾಡುವಲ್ಲಿ, ವಾಯು ಮಾಲಿನ್ಯವನ್ನು ತಗ್ಗಿಸುವಲ್ಲಿ ಮತ್ತು ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ಭಾರತ ವಿಫಲವಾಗಿದೆ ಎಂದು ಸೂಚ್ಯಂಕ ಪಟ್ಟಿಯಲ್ಲಿ ದೂಷಿಸಲಾಗಿತ್ತು.

11 ವರ್ಗಗಳಲ್ಲಿ 40 ಕಾರ್ಯಕ್ಷಮತೆ ಮಾನದಂಡಗಳನ್ನು ಬಳಸಿಕೊಂಡು EPI ಸೂಚ್ಯಂಕ ನಿರ್ಧರಿಸಲಾಗುತ್ತದೆ. ಹವಾಮಾನ ಬದಲಾವಣೆ ತಡೆಗಟ್ಟುವ ಕಾರ್ಯಕ್ಷಮತೆ, ಪರಿಸರ ಆರೋಗ್ಯ, ಪರಿಸರ ವ್ಯವಸ್ಥೆಯ ಮೇಲೆ ಹೂಡಿಕೆ ಇತ್ಯಾದಿಗಳ ಆಧಾರದ ಮೇಲೆ ದೇಶಗಳಿಗೆ ಶ್ರೇಯಾಂಕ ನೀಡಿದೆ. ಹದಗೆಡುತ್ತಿರುವ ಗಾಳಿಯ ಗುಣಮಟ್ಟ, ವೇಗವಾಗಿ ಹೆಚ್ಚುತ್ತಿರುವ ಹಸಿರುಮನೆ ಅನಿಲ ಹೊರಸೂಸುವಿಕೆಗಳು ಇಲ್ಲಿ ತುರ್ತು ಸವಾಲು ಒಡ್ಡಿವೆ ಎಂದಿದೆ.

ಭಾರತ ಕಳೆದ ವರ್ಷ ಅತ್ಯಂತ ಕಡಿಮೆ ಹೊರಸೂಸುವಿಕೆ ಸಾಧಿಸಿದೆ. ಆದರೆ ಈ ಐತಿಹಾಸಿಕ ಡೇಟಾವನ್ನು ಸಂಸ್ಥೆಯು ಮಾಡಿದ ಲೆಕ್ಕಾಚಾರದಲ್ಲಿ ನಿರ್ಲಕ್ಷಿಸಲಾಗಿದೆ. ದೇಶವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ವಿಷಯಗಳನ್ನು ಪರಿಗಣಿಸಿಲ್ಲ. ಭಾರತ ಈಗಾಗಲೇ ಪಳೆಯುಳಿಕೆಯಲ್ಲದ ಮೂಲಗಳಿಂದ ವಿದ್ಯುತ್ ತಯಾರಿಸುವಲ್ಲಿ ದೇಶದ ಶೇ.40 ಗುರಿಯನ್ನು ಸಾಧಿಸಿದೆ. ಕೃಷಿ ಜೀವವೈವಿಧ್ಯ, ಮಣ್ಣಿನ ಆರೋಗ್ಯ, ಕನಿಷ್ಠ ತ್ಯಾಜ್ಯದಂತಹ ಮಾನದಂಡಗಳು ಹೆಚ್ಚಿನ ಕೃಷಿ ಜನಸಂಖ್ಯೆಯನ್ನು ಹೊಂದಿರುವ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಮುಖ್ಯವಾಗಿದ್ದರೂ ಸಹ ಅವುಗಳನ್ನು ಸೇರಿಸಲಾಗಿಲ್ಲ ಎಂದು ಸಚಿವಾಲಯ ಹೇಳಿದೆ.

ಇದನ್ನೂ ಓದಿ: World Environment Day | ಇಂದು ವಿಶ್ವ ಪರಿಸರ ದಿನ: ಪ್ರಕೃತಿ ಸಂರಕ್ಷಣೆಗಾಗಿ ಈ ಅಭ್ಯಾಸ ಅನುಸರಿಸಿ

Exit mobile version