ನವ ದೆಹಲಿ: ಭಾರತ ಸರ್ಕಾರವು 67ಕ್ಕೂ ಹೆಚ್ಚು ಅಶ್ಲೀಲ ಜಾಲತಾಣಗಳು ಬ್ಲಾಕ್ ಮಾಡುವಂತೆ ಇಂಟರ್ನೆಟ್ ಸರ್ವೀಸ್ ಪೂರೈಕೆದಾರ ಕಂಪನಿಗಳಿಗೆ ಆದೇಶಿಸಿದೆ. ಇನ್ಫಾರ್ಮೇಷನ್ ಟೆಕ್ನಾಲಜಿ ಕಾಯಿದೆ ಉಲ್ಲಂಘನೆ ಸಂಬಂಧ ನೀಡಿದ್ದ ತೀರ್ಪಿನ ಆಧಾರದ ಮೇಲೆ ಸರ್ಕಾರವು ಈ ಆದೇಶ(India Porn Ban)ವನ್ನು ಮಾಡಿದೆ.
ಈ ಸಂಬಂಧ ಟೆಲಿಕಮ್ಯುನಿಕೇಷನ್ ಇಲಾಖೆಯು ಇಂಟರ್ನೆಟ್ ಸೇವಾ ಪೂರೈಕೆದಾರ ಕಂಪನಿಗಳಿಗೆ ಪತ್ರ ಬರೆದಿದ್ದು, 67 ಜಾಲತಾಣಗಳನ್ನು ನಿರ್ಬಂಧಿಸುವಂತೆ ತಿಳಿಸಿದೆ. ಈ ಪೈಕಿ 63 ವೆಬ್‌ಸೈಟ್‌ಗಳನ್ನು ಪುಣೆ ಕೋರ್ಟ್ ನೀಡಿದ ಆದೇಶದ ಅನ್ವಯ ನಿರ್ಬಂಧಿಸುವಂತೆ ಸೂಚಿಸಲಾಗಿದೆ. 2018ರಲ್ಲಿ ಉತ್ತರಾಖಂಡ ಹೈಕೋರ್ಟ್ ನೀಡಿದ ಆದೇಶದ ಅನುಸಾರ ಉಳಿದ ನಾಲ್ಕು ವೆಬ್‌ಸೈಟ್ ನಿರ್ಬಂಧಿಸಲು ಸೂಚಿಸಲಾಗಿದೆ.
ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದ್ದ 800 ಕ್ಕೂ ಹೆಚ್ಚು ಅಶ್ಲೀಲ ವೆಬ್‌ಸೈಟ್‌ಗಳನ್ನು ಸರ್ಕಾರ ತಾತ್ಕಾಲಿಕವಾಗಿ 2018ರಲ್ಲಿ ನಿಷೇಧಿಸಿತ್ತು. ಆ ಜಾಲತಾಣಗಳು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾದ ಅರ್ಜಿಯ ಭಾಗವಾಗಿದ್ದವು. ನ್ಯಾಯಾಲಯವು ನಿಷೇಧಕ್ಕೆ ಸ್ಪಷ್ಟವಾಗಿ ಆದೇಶಿಸದಿದ್ದರೂ, ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಜಾಲತಾಣಗಳನ್ನು ತೆಗೆದುಹಾಕಲು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ಆದೇಶ ನೀಡುವಂತೆ ಕೇಳಿಕೊಂಡಿದ್ದರು.
ಪೋರ್ನ್ ವೆಬ್‌ಸೈಟ್‌ಗಳ ಬಳಕೆಯಿಂದ ಯುವಕರು ಹಾಳಾಗುತ್ತಿದ್ದಾರೆ, ಅತ್ಯಾಚಾರದಂಥ ಅಪರಾಧಗಳಿಗೆ ಇವು ಪ್ರೇರಣೆ ನೀಡುತ್ತವೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈ ಹಿಂದೆ ಹಲವು ಪೋರ್ನ್ ವೆಬ್‌ಸೈಟ್‌ಗಳನ್ನು ನಿಷೇಧ ಮಾಡಿದೆ. ಇದೀಗ ಮತ್ತೆ ಅಂಥದ್ದೇ ನಿರ್ಧಾರವನ್ನು ಭಾರತ ಸರ್ಕಾರವು ಪಡೆದುಕೊಂಡಿದೆ.
ಇದನ್ನೂ ಓದಿ | Pornography | ಸ್ನೇಹಿತನ ಜತೆಗೂಡಿ ಪತ್ನಿಯ ಪೋರ್ನ್ ವಿಡಿಯೊ ಮಾಡಿ ಬ್ಲಾಕ್‌ಮೇಲ್