Site icon Vistara News

India Poverty: ದೇಶದಲ್ಲಿ ಬಡವರ ಸಂಖ್ಯೆ 5%ಕ್ಕಿಂತ ಇಳಿಕೆ; ಆಹಾರಕ್ಕಿಂತ ಓಡಾಟ, ಮನರಂಜನೆಗೇ ಹೆಚ್ಚು ಖರ್ಚು!

india poverty

ಹೊಸದಿಲ್ಲಿ: ದೇಶದಲ್ಲಿ ಬಡವರ ಜನಸಂಖ್ಯೆಯು (India Poverty) ಈಗ ಶೇಕಡಾ 5ಕ್ಕಿಂತ ಕಡಿಮೆಯಾಗಿದೆ ಎಂದು ನೀತಿ ಆಯೋಗದ (NITI Aayog) ʼಬಳಕೆ ಮತ್ತು ವೆಚ್ಚದ ಸಮೀಕ್ಷೆಯ ವರದಿ’ ತಿಳಿಸಿದೆ. ಭಾರತೀಯರು ಆಹಾರಕ್ಕಿಂತ ಸಾರಿಗೆ ಹಾಗೂ ಇತರ ಸಂಗತಿಗಳ ಮೇಲೆಯೇ ಹೆಚ್ಚು ಖರ್ಚು ಮಾಡುತ್ತಾರೆ ಎಂಬುದನ್ನೂ ಈ ವರದಿ ತಿಳಿಸಿದೆ.

ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಅವರು ವರದಿಯ ಸಾರಾಂಶವನ್ನು ಬಿಡುಗಡೆ ಮಾಡಿದ್ದಾರೆ. ನೀತಿ ಆಯೋಗದ ʼಗೃಹಬಳಕೆಯ ವೆಚ್ಚ ಸಮೀಕ್ಷೆ 2022-23ʼರ (Household Consumption Expenditure Survey 2022-23) ಪ್ರಕಾರ, ದೇಶದ ತಳಮಟ್ಟದ ಶೇಕಡಾ 5 ಜನತೆಯ ಮಾಸಿಕ ತಲಾ ಗ್ರಾಹಕ ವೆಚ್ಚವು ಗ್ರಾಮೀಣ ಭಾರತದಲ್ಲಿ ರೂ. 1,441 ಮತ್ತು ನಗರ ಭಾರತದಲ್ಲಿ ರೂ 2,087 ಆಗಿದೆ.

“ಬಡತನವನ್ನು ಅಳೆಯು ಮಾಪನಗಳ ಬಗ್ಗೆ ತೆಂಡೂಲ್ಕರ್ ಸಮಿತಿ ನೀಡಿದ ಹಳೆಯ ವರದಿಯ ಮಾನದಂಡಗಳನ್ನು ಅನುಸರಿಸಿದ್ದೇವೆ. ಅದನ್ನು ಈ ಸಮೀಕ್ಷೆಯ ದತ್ತಾಂಶದೊಂದಿಗೆ ವಿವರಿಸಿದರೆ, ಭಾರತದಲ್ಲಿ 5%ಕ್ಕಿಂತ ಕಡಿಮೆ ಬಡವರು ಇದ್ದಾರೆ ಎಂದು ತೋರಿಸುತ್ತದೆ” ಎಂದು ಸುಬ್ರಹ್ಮಣ್ಯಂ ತಿಳಿಸಿದ್ದಾರೆ.

ಡಿಸೆಂಬರ್ 2005ರಲ್ಲಿ ತೆಂಡೂಲ್ಕರ್ ಸಮಿತಿಯನ್ನು ಆಗ ಇದ್ದ ಯೋಜನಾ ಆಯೋಗವು ರಚಿಸಿತ್ತು. ನಂತರ ನೀತಿ ಆಯೋಗ ಬಂದಿತ್ತು. ಇದು ಡಿಸೆಂಬರ್ 2009ರಲ್ಲಿ ತನ್ನ ವರದಿಯನ್ನು ಸಲ್ಲಿಸಿತ್ತು. ಅಸ್ತಿತ್ವದಲ್ಲಿರುವ ನಗರ ಬಡತನ ರೇಖೆಯೊಂದಿಗೆ ಸಂವಾದಿಯಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಗ್ರಾಮೀಣ ಬಡತನ ರೇಖೆಯನ್ನು ಮರುಪರಿಗಣಿಸಬೇಕೆಂದು ಅದು ಶಿಫಾರಸು ಮಾಡಿದೆ. ಆದ್ದರಿಂದ, 2004-05ರಲ್ಲಿ ಅಖಿಲ ಭಾರತ ಗ್ರಾಮೀಣ ಬಡತನದ ಅನುಪಾತವನ್ನು 41.8 ಪ್ರತಿಶತ, ನಗರ ಬಡತನದ ಅನುಪಾತವನ್ನು 25.7 ಪ್ರತಿಶತ ಮತ್ತು ಅಖಿಲ ಭಾರತ ಮಟ್ಟದಲ್ಲಿ 37.2 ಪ್ರತಿಶತದಲ್ಲಿ ಇರಿಸಲಾಗಿದೆ. ಈ ಅಂದಾಜುಗಳನ್ನು ಯೋಜನಾ ಆಯೋಗ ಒಪ್ಪಿಕೊಂಡಿದೆ.

ಆದರೆ, ನೀತಿ ಆಯೋಗದ ಇತ್ತೀಚಿನ ಸಂಶೋಧನೆಯ ಪ್ರಕಾರ ಭಾರತದ ಕೆಳಹಂತದ 5 ಪ್ರತಿಶತ ಜನತೆಯ ಮಾಸಿಕ ಖರ್ಚು (ಇದನ್ನು ಮಾಸಿಕ ತಲಾ ಗ್ರಾಹಕ ವೆಚ್ಚ ಎಂದೂ ಉಲ್ಲೇಖಿಸಲಾಗುತ್ತದೆ) ಗ್ರಾಮೀಣ ಪ್ರದೇಶಗಳಲ್ಲಿ 1,441 ರೂ ಮತ್ತು ನಗರಗಳಲ್ಲಿ 2,087 ರೂ. ಇದೆ ಎಂದು ವರದಿ ಹೇಳುತ್ತದೆ. “ಆದರೂ, ಭಾರತದಲ್ಲಿ ಜನತೆ ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದರ್ಥವಲ್ಲ. ಸಂಪೂರ್ಣ ನಿರ್ಗತಿಕರಾದವರ ಸಂಖ್ಯೆ ಈಗ 5%ಕ್ಕಿಂತ ಕಡಿಮೆ ಇದೆ ಎಂದರ್ಥ” ಎಂದು ಸುಬ್ರಹ್ಮಣ್ಯಂ ಹೇಳಿದ್ದಾರೆ.

ಈ ಸಮೀಕ್ಷಾ ವರದಿ ಏಪ್ರಿಲ್-ಮೇಯಲ್ಲಿ ಬರುವ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಬಂದಿದೆ. ಕಳೆದ ಒಂಬತ್ತು ವರ್ಷಗಳಲ್ಲಿ 24.82 ಕೋಟಿ ಜನರು ಬಹು ಆಯಾಮದ ಬಡತನದಿಂದ ಹೊರಬಂದಿದ್ದಾರೆ ಎಂದು ನೀತಿ ಆಯೋಗ ಹಿಂದೆ ಹೇಳಿತ್ತು. 2013-14 ಮತ್ತು 2022-23ರ ವರ್ಷಗಳ ನಡುವಿನ ಬಡತನದ ಎಲ್ಲಾ ಆಯಾಮಗಳ ಪರಿಹಾರ ಕುರಿತ ಸರ್ಕಾರಿ ಯೋಜನೆಗಳು ಮತ್ತು ಉಪಕ್ರಮಗಳಿಗೆ ಇದರ ಕಾರಣದ ಮನ್ನಣೆ ನೀಡಿದೆ. ʼಪೋಷಣಾ ಅಭಿಯಾನʼ ಮತ್ತು ʼರಕ್ತಹೀನತೆ ಮುಕ್ತ ಭಾರತʼದಂತಹ ಉಪಕ್ರಮಗಳು ಆರೋಗ್ಯ ಸೇವೆಗಳ ಲಭ್ಯತೆ ಹೆಚ್ಚಿಸಿವೆ. ಇದು ಅಭಾವದ ಇಳಿಕೆಗೆ ಕಾರಣವಾಗಿದೆ ಎಂದಿದೆ.

ವರದಿಯ ಮತ್ತೊಂದು ಪ್ರಮುಖ ಅಂಶವೆಂದರೆ, ಗ್ರಾಮೀಣ ಭಾರತದ ಜನತೆಯ ಆದಾಯ ಹೆಚ್ಚಿದೆ. ನಗರದ ಆದಾಯವು 2.5 ಪಟ್ಟು ಹೆಚ್ಚಿದ್ದರೆ, ಗ್ರಾಮೀಣ ಆದಾಯವು 2.6 ಪಟ್ಟು ಹೆಚ್ಚಾಗಿದೆ. ಗ್ರಾಮೀಣ ಬಳಕೆಯು ನಗರಕ್ಕಿಂತ ವೇಗವಾಗಿ ಏರಿದೆ. ಇವೆರಡರ ನಡುವಿನ ಅಂತರವನ್ನು ಕಡಿಮೆ ಮಾಡಿದೆ. 2011-12ರಲ್ಲಿ ಶೇ.84ರಷ್ಟು ಅಂತರವಿದ್ದು, ಅದು ಈಗ ಶೇ.71ಕ್ಕೆ ಇಳಿಕೆಯಾಗಿದೆ. ಇದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಎಂಬ ಧ್ಯೇಯವಾಕ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಸರ್ಕಾರಿ ಮೂಲಗಳು ಹೇಳಿವೆ.

ಗ್ರಾಮೀಣ ಭಾರತದ ಈ ಬದಲಾವಣೆಯ ಮೂಲ ಕಾರಣ ಪ್ರಾಥಮಿಕವಾಗಿ ಗ್ರಾಮೀಣ ಕುಟುಂಬಗಳ ಹಾಗೂ ಆಸ್ತಿಗಳ ವಿಭಜನೆ ಮತ್ತು ಆದಾಯ ಏರಿಕೆ ಎನ್ನಲಾಗಿದೆ.

ಹೆಚ್ಚು ಖರ್ಚು ಎಲ್ಲಿದೆ?

ವಿಶೇಷ ಅಂದರೆ, ಭಾರತದ ಜನ ಆಹಾರಕ್ಕಿಂತಲೂ ಹೆಚ್ಚು ಹಣವನ್ನು ಸಾರಿಗೆ, ಮನರಂಜನೆ ಇತ್ಯಾದಿಗಳಿಗೆ ಖರ್ಚು ಮಾಡುತ್ತಿದ್ದಾರೆ. ಭಾರತವು ಧಾನ್ಯಗಳು ಮತ್ತು ಒಟ್ಟಾರೆ ಆಹಾರದ ಮೇಲೆ ಕಡಿಮೆ ಖರ್ಚು ಮಾಡುತ್ತಿದ್ದಾರೆ. ಆಹಾರೇತರ ವಸ್ತುಗಳ ಮೇಲೆ ಹೆಚ್ಚು ಖರ್ಚು ಮಾಡುತ್ತಿದ್ದಾರೆ.

ಏಕದಳ ಧಾನ್ಯಗಳ ಬಳಕೆಯು ಗ್ರಾಮೀಣ ಭಾರತದಲ್ಲಿ ಶೇಕಡಾ 5ಕ್ಕಿಂತ ಕಡಿಮೆ ಮತ್ತು ನಗರ ಪ್ರದೇಶಗಳಲ್ಲಿ 4 ಶೇಕಡಾಕ್ಕಿಂತ ಕಡಿಮೆ. ಜನರು ಏರಿಯೇಟೆಡ್ ಪಾನೀಯಗಳಿಗೆ ಹೆಚ್ಚು ಖರ್ಚು ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳು ಶೇಕಡಾ 50ಕ್ಕಿಂತ ಕಡಿಮೆ ಮತ್ತು ನಗರ ಭಾರತೀಯರು ಆಹಾರಕ್ಕಾಗಿ 40 ಶೇಕಡಾಕ್ಕಿಂತ ಕಡಿಮೆ ಖರ್ಚು ಮಾಡುತ್ತಾರೆ.

ಭಾರತೀಯರು ಸಾರಿಗೆ ಮತ್ತು ಬಾಳಿಕೆ ಬರುವ ವಸ್ತುಗಳ ಮೇಲೆ ಸಾಕಷ್ಟು ಖರ್ಚು ಮಾಡುತ್ತಿದ್ದಾರೆ. ಸರಳವಾಗಿ ಹೇಳುವುದಾದರೆ ಮೆಟ್ರೋ, ಬಸ್‌ಗಳು, ಕ್ಯಾಬ್‌ಗಳಂತಹ ಸಾರ್ವಜನಿಕ ಸಾರಿಗೆ ಸೇವೆಗಳ ಜೊತೆಗೆ ಟಿವಿ ಮತ್ತು ರೆಫ್ರಿಜರೇಟರ್‌ಗಳನ್ನು ಖರೀದಿಸಲು ಹೆಚ್ಚು ಖರ್ಚು ಮಾಡುತ್ತಿದ್ದಾರೆ.

ಇದನ್ನೂ ಓದಿ: NITI Aayog: 9 ವರ್ಷದಲ್ಲಿ 24.82 ಕೋಟಿ ಭಾರತೀಯರು ಬಡತನದಿಂದ ಪಾರು! ನೀತಿ ಆಯೋಗದ ವರದಿಯಲ್ಲಿ ಏನಿದೆ?

Exit mobile version