Site icon Vistara News

British Envoy: ಪಿಒಕೆಗೆ ಬ್ರಿಟಿಷ್‌ ಹೈಕಮಿಷನರ್ ಭೇಟಿ; ತೀವ್ರವಾಗಿ ಖಂಡಿಸಿದ ಭಾರತ

Jane Marriott In PoK

India protests POK visit by British envoy to Pakistan, says highly objectionable

ನವದೆಹಲಿ: ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ (PoK) ಇತ್ತೀಚೆಗೆ ಇಸ್ಲಾಮಾಬಾದ್‌ ಬ್ರಿಟಿಷ್‌ ಹೈಕಮಿಷನರ್‌ ಜೇನ್‌ ಮ್ಯಾರಿಯಟ್‌ (Jane Marriott) ಅವರು ಭೇಟಿ ನೀಡಿರುವುದಕ್ಕೆ ಭಾರತ ತೀವ್ರ ಖಂಡನೆ ವ್ಯಕ್ತಪಡಿಸಿದೆ. ಜೇನ್‌ ಮ್ಯಾರಿಯಟ್‌ ಸೇರಿ ಬ್ರಿಟನ್‌ ವಿದೇಶಾಂಗ ಸಚಿವಾಲಯದ ಹಲವು ಅಧಿಕಾರಿಗಳು ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡಿರುವುದು ಖಂಡನೀಯ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (Ministry of External Affairs) ಆಕ್ರೋಶ ವ್ಯಕ್ತಪಡಿಸಿದೆ.

“ಇಸ್ಲಾಮಾಬಾದ್‌ನಲ್ಲಿರುವ ಬ್ರಿಟಿಷ್‌ ಹೈಕಮಿಷನರ್‌ ಅವರು ಬ್ರಿಟನ್‌ ವಿದೇಶಾಂಗ ಸಚಿವಾಲಯದ ಅಧಿಕಾರಿಗಳೊಂದಿಗೆ ಜನವರಿ 10ರಂದು ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡಿರುವುದನ್ನು ಭಾರತವು ಗಂಭೀರವಾಗಿ ಪರಿಗಣಿಸಿದೆ. ಭಾರತದ ಸಾರ್ವಭೌಮತೆ ಹಾಗೂ ಪ್ರಾದೇಶಿಕ ಸಮಗ್ರತೆಯನ್ನು ಇದು ಉಲ್ಲಂಘಿಸುತ್ತದೆ. ಭಾರತದಲ್ಲಿರುವ ಬ್ರಿಟಿಷ್‌ ಹೈಕಮಿಷನರ್‌ ಎದುರು ಭಾರತದ ವಿದೇಶಾಂಗ ಕಾರ್ಯದರ್ಶಿಯು ಇಂತಹ ಉಲ್ಲಂಘನೆ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಯಾವುದೇ ಕಾರಣಕ್ಕೂ ಇಂತಹ ಉಲ್ಲಂಘನೆಯನ್ನು ಸಹಿಸುವುದಿಲ್ಲ” ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಆಕ್ಷೇಪ ವ್ಯಕ್ತಪಡಿಸಿದೆ.

ವಿದೇಶಾಂಗ ಕಾರ್ಯದರ್ಶಿ ವಿನಯ್‌ ಮೋಹನ್‌ ಕ್ವಾತ್ರಾ ಅವರು ಬ್ರಿಟಿಷ್‌ ಹೈಕಮಿಷನರ್‌ ನಡೆಯನ್ನು ಖಂಡಿಸಿ ಪ್ರಕಟಣೆ ಹೊರಡಿಸಿದ್ದಾರೆ. “ಜಮ್ಮು-ಕಾಶ್ಮೀರ ಹಾಗೂ ಲಡಾಕ್‌ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗಗಳಾಗಿವೆ. ಹಾಗೆಯೇ, ಭಾರತದ ಅವಿಭಾಜ್ಯ ಅಂಗಗಳಾಗಿಯೇ ಉಳಿಯಲಿವೆ” ಎಂದಿದ್ದಾರೆ. ಪಾಕ್‌ ಆಕ್ರಮಿತ ಕಾಶ್ಮೀರವೂ ನಮ್ಮ ಅವಿಭಾಜ್ಯ ಅಂಗ ಎಂದು ಇದಕ್ಕೂ ಮೊದಲು ಸಂಸತ್‌ನಲ್ಲಿಯೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದರು.

ಇದನ್ನೂ ಓದಿ: Jammu and Kashmir: ನೆಹರು ತಪ್ಪಿನಿಂದ ಪಿಒಕೆ ಸೃಷ್ಟಿ; ಅದು ನಮ್ಮದೇ: ಸಂಸತ್‌ನಲ್ಲಿ ಅಮಿತ್‌ ಶಾ

ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ನಿಯೋಗದೊಂದಿಗೆ ಭೇಟಿ ನೀಡಿದ್ದ ಜೇನ್‌ ಮ್ಯಾರಿಯಟ್‌ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದರು. “ಮೀರ್‌ಪುರಕ್ಕೆ ನನ್ನ ನಮನಗಳು. ಬ್ರಿಟಿಷರು ಹಾಗೂ ಪಾಕಿಸ್ತಾನಿಯರ ನಡುವಿನ ಉತ್ತಮ ಬಾಂಧವ್ಯಕ್ಕೆ ಮೀರ್‌ಪುರ ಸೇತುವೆಯಾಗಿದೆ. ಮೀರ್‌ಪುರ ನೀಡಿದ ಆತಿಥ್ಯಕ್ಕೆ ನನ್ನ ಮನಸ್ಸು ತುಂಬಿ ಬಂದಿದೆ” ಎಂದು ಪೋಸ್ಟ್‌ ಮಾಡಿದ್ದರು. ಜೇನ್‌ ಮ್ಯಾರಿಯಟ್‌ ವಿರುದ್ಧ ಭಾರತೀಯರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. “ಜೇನ್‌ ಮ್ಯಾರಿಯಟ್‌ ವಿರುದ್ಧ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರು ಕ್ರಮ ತೆಗೆದುಕೊಳ್ಳಬೇಕು” ಒತ್ತಾಯಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version