ನವ ದೆಹಲಿ: ದೇಶದಲ್ಲಿ ಕೊರೊನಾ ಕೊಂಚ ಇಳಿಕೆ ಕಾಣುತ್ತಿದೆ ಎನ್ನುವಷ್ಟರಲ್ಲೇ ಮತ್ತೆ ಇವತ್ತು ಏರಿಕೆ ಕಂಡಿದೆ. ಸೋಮವಾರ ೧೨,೭೮೧ ಪ್ರಕರಣಗಳು ದಾಖಲಾಗಿದ್ದರೆ ಮಂಗಳವಾರ ಅದು 9,923ಕ್ಕೆ ಇಳಿದಿತ್ತು. ಇದೀಗ ಬುಧವಾರ ಅದು ಮತ್ತೆ 12,249 ಪ್ರಕರಣಗಳು ಕಂಡುಬಂದಿವೆ. ಪ್ರಸಕ್ತ ದೇಶದಲ್ಲಿ 81,687 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಬುಧವಾರ ಮಹಾಮಾರಿ ಸೋಂಕಿಗೆ 13 ಮಂದಿ ಸಾವನ್ನಪ್ಪಿದ್ದು, ಸಾವಿನ ಒಟ್ಟು ಸಂಖ್ಯೆ 5,24,903ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲೇ 9,862 ಮಂದಿ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ.
ಇದನ್ನು ಓದಿ| ಇಳಿಕೆ ಗತಿಯಲ್ಲಿ ಕೊರೊನಾ, ನಾಲ್ಕನೇ ಅಲೆ ಅತಂಕ ನಿಧಾನಕ್ಕೆ ದೂರ, 12781 ಹೊಸ ಕೇಸ್
ಕೊರೊನಾ ಹೆಚ್ಚಾಗಿ ಈ ಐದು ರಾಜ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅದರಲ್ಲೂ ಮಹಾರಾಷ್ಟ್ರ ಅಗ್ರಸ್ಥಾನದಲ್ಲಿದ್ದು, ಪ್ರತಿದಿನ ಸಾವರಕ್ಕೂ ಹೆಚ್ಚು ಕೇಸ್ಗಳು ದಾಖಲಾಗುತ್ತಿವೆ. ಮಂಗಳವಾರ ಇಲ್ಲಿ 3,659 ಪ್ರಕರಣ ದಾಖಲಾಗಿತ್ತು. ಕೇರಳ ಎರಡನೇ ಸ್ಥಾನದಲ್ಲಿ ಇದ್ದು, ನಂತರ ದೆಹಲಿ, ಕರ್ನಾಟಕ ಹಾಗೂ ತಮಿಳುನಾಡು ಸೇರಿದೆ.
ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಲಸಿಕೆ ಅಭಿಯಾನ ಚುರುಕುಗೊಳಿಸಿದ್ದು, ಕಳೆದ 24 ಗಂಟೆಯಲ್ಲೇ 12,28,291 ಮಂದಿಗೆ ಲಸಿಕೆ ವಿತರಣೆ ಮಾಡಲಾಗಿದೆ. ಒಟ್ಟಾರೆ ಈವರೆಗೂ 1,96,45,99,906 ಡೋಸ್ ವಿತರಣೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ,