ಕಾಬೂಲ್: ಸಂಘರ್ಷ ಪೀಡಿತ ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ತಿಳಿಯಾಗುತ್ತಿದ್ದು, ಆಡಳಿತದ ಚುಕ್ಕಾಣಿ ಹಿಡಿದ ತಾಲಿಬಾನ್‌ಗಳು ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ತೋರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ತನ್ನ ರಾಯಭಾರ ಕಚೇರಿಯನ್ನು ಕಾಬೂಲ್‌ನಲ್ಲಿ ಪುನರಾರಂಭಿಸಿದೆ.
ಕಳೆದ ವರ್ಷ ತಾಲಿಬಾನ್‌ಗಳು ಅಧಿಕಾರದಲ್ಲಿದ್ದ ನಾಗರಿಕ ಸರ್ಕಾರವನ್ನು ಪತನಗೊಳಿಸಿ ಅಧಿಕಾರ ಹಿಡಿಯಲು ಮುಂದಾಗಿದ್ದ ಸಂದರ್ಭದಲ್ಲಿ ಭಾರತವು ತನ್ನ ರಾಯಭಾರ ಕಚೇರಿಯನ್ನು ಮುಚ್ಚಿತ್ತು ಮತ್ತು ಅಲ್ಲಿರುವ ಭಾರತೀಯರು ಸುರಕ್ಷಿತವಾಗಿ ಹಿಂದಿರುಗಲು ಕ್ರಮ ತೆಗೆದುಕೊಂಡಿತ್ತು.
ಈಗಾಗಲೇ ಭಾರತೀಯ ವಾಯುಪಡೆಯ ವಿಮಾನದ ಮೂಲಕ, ಜಂಟಿ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ರಾಯಭಾರ ಕಚೇರಿಯ ಸಿಬ್ಬಂದಿ ಕಾಬೂಲ್ ತಲುಪಿದ್ದಾರೆ. ಕಚೇರಿ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದ್ದು, ಮೊದಲಿಗೆ ತಾಲಿಬಾನ್ ಸರ್ಕಾರದ ಜತೆಗೆ ಸಹಕಾರ ಸಂಬಂಧ ಸ್ಥಾಪನೆಗೆ ಆದ್ಯತೆ ನೀಡಲಾಗುತ್ತದೆ. ಮುಂದೆ ವೀಸಾ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತದೆ ಎಂದು ವಿದೇಶಾಂಗ ಇಲಾಖೆಯ ಮೂಲಗಳು ತಿಳಿಸಿವೆ.
ರಾಯಭಾರ ಕಚೇರಿಯನ್ನು ಪುನಃ ಆರಂಭಿಸುವಂತೆ ಅಫ್ಘಾನಿಸ್ತಾನದ ರಕ್ಷಣಾ ಸಚಿವ ಮುಲ್ಲಾ ಯಾಕೂಬ್ ಭಾರತಕ್ಕೆ ಇತ್ತೀಚೆಗೆ ಆಹ್ವಾನ ನೀಡಿದ್ದರು. “ನಿಮ್ಮ ದೇಶದ ರಾಯಭಾರ ಕಚೇರಿಯನ್ನು ನಮ್ಮಲ್ಲಿ ಪುನಃ ಆರಂಭಿಸಿ, ನಮ್ಮ ರಾಯಭಾರಿಗೂ ಭಾರತದಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕುʼʼ ಎಂದು ಭಾರತವನ್ನು ಅವರು ಕೋರಿದ್ದರು. ಉಳಿದೆಲ್ಲಾ ದೇಶಗಳಂತೆಯೇ, ಭಾರತದ ರಾಯಭಾರ ಕಚೇರಿಗೂ ಅಗತ್ಯ ಭದ್ರತೆಯನ್ನು ನೀಡುವುದಾಗಿ ಯಾಕೂಬ್ ಭರವಸೆ ನೀಡಿದ್ದರು.
ಇದನ್ನೂ ಓದಿ | ಅಫ್ಘಾನಿಸ್ತಾನದಲ್ಲಿ ಮತ್ತೆ ಹೆಣ್ಣುಮಕ್ಕಳ ಭೂಗತ ಶಾಲೆಗಳು ಚಾಲೂ: ಹೇಗೆ ನಡೀತಿದೆ?