ನವದೆಹಲಿ: ದೇಶಾದ್ಯಂತ ಈ ಬಾರಿ ಮುಂಗಾರು ಮಳೆ (Monsoon Season) ಕೊರತೆಯುಂಟಾಗಿದ್ದು, ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕಳೆದ ಐದು ವರ್ಷದಲ್ಲಿಯೇ ಕನಿಷ್ಠ ಮಳೆ ದಾಖಲಾಗಿದ್ದು, ಅಗತ್ಯ ವಸ್ತುಗಳ ಬೆಲೆಯೇರಿಕೆಯೂ ಆಗಿದೆ. ಅದರಲ್ಲೂ, ಕರ್ನಾಟಕದಲ್ಲಿ 200ಕ್ಕೂ ಅಧಿಕ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಆದರೆ, 2022-23ನೇ ಸಾಲಿನಲ್ಲಿ ದೇಶದಲ್ಲಿ ದಾಖಲೆಯ ಪ್ರಮಾಣದಲ್ಲಿ ಆಹಾರ ಧಾನ್ಯ (Food Grain) ಹಾಗೂ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
2022ರ ಜುಲೈನಿಂದ 2023ರ ಜೂನ್ ಅವಧಿಯಲ್ಲಿ ದೇಶದಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯು 32.96 ಕೋಟಿ ಟನ್ ಆಗಿದೆ. ಇದು 2021-22ರ ಸಾಲಿಗಿಂತ ಶೇ.4ರಷ್ಟು ಅಥವಾ 1.41 ಕೋಟಿ ಆಹಾರ ಧಾನ್ಯಗಳ ಹೆಚ್ಚಾಗಿದೆ. 2021-22ರಲ್ಲಿ ದೇಶಾದ್ಯಂತ 31.15 ಕೋಟಿ ಟನ್ ಆಹಾರ ಧಾನ್ಯಗಳ ಉತ್ಪಾದನೆ ಮಾಡಲಾಗಿತ್ತು. ದೇಶದಲ್ಲಿ 2012-13ನೇ ಸಾಲಿನಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯು 25.71 ಕೋಟಿ ಟನ್ ಇತ್ತು ಎಂದು ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯವು ಮಾಹಿತಿ ಒದಗಿಸಿದೆ.
ತೋಟಗಾರಿಕೆ ಬೆಳೆಗಳ ಉತ್ಪಾದನೆಯೂ ಏರಿಕೆ
ದೇಶದಲ್ಲಿ 2022-23ರಲ್ಲಿ ತೋಟಗಾರಿಕೆ ಬೆಳೆಗಳ ಉತ್ಪಾದನೆಯೂ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ ಸಾಲಿನಲ್ಲಿ ದೇಶದಲ್ಲಿ 35.19 ಕೋಟಿ ಟನ್ ತೋಟಗಾರಿಕೆ ಉತ್ಪನ್ನಗಳ ಉತ್ಪಾದನೆಯಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಇದೇ ಸಾಲಿನಲ್ಲಿ ಗೋಧಿ 13.57 ಕೋಟಿ ಟನ್, ಗೋಧಿ 11.05 ಟನ್ ಇದೆ. ಇದು ಕೂಡ ಕಳೆದ ಸಾಲಿಗಿಂತ ಹೆಚ್ಚಿನ ಪ್ರಮಾಣದ ಉತ್ಪಾದನೆ ಎಂದು ಮಾಹಿತಿ ನೀಡಿದೆ.
ಇದನ್ನೂ ಓದಿ: Rabi Crops MSP: ರೈತರಿಗೆ ಕೇಂದ್ರ ಸಿಹಿ ಸುದ್ದಿ; 6 ಬೆಳೆಗಳಿಗೆ ಭರ್ಜರಿ ಬೆಂಬಲ ಬೆಲೆ!
ಕಾಳುಗಳ ಉತ್ಪಾದನೆಯು 2.6 ಕೋಟಿ ಟನ್ (2021-22ಕ್ಕಿಂತ ಶೇ.1.4ರಷ್ಟು ಏರಿಕೆ), ಎಣ್ಣೆ ಬೀಜಗಳ ಉತ್ಪಾದನೆಯು ದಾಖಲೆಯ 4.13 ಕೋಟಿ ಟನ್ (33 ಲಕ್ಷ ಟನ್ ಹೆಚ್ಚು), ಹಣ್ಣಿನ ಉತ್ಪಾದನೆ (10.83 ಕೋಟಿ ಟನ್), ತರಕಾರಿ 21.29 ಕೋಟಿ ಟನ್ ಉತ್ಪಾದನೆ ಮಾಡಲಾಗಿದೆ. ಅಕ್ಕಿಯ ಉತ್ಪಾದನೆ 13.57 ಕೋಟಿ (62 ಲಕ್ಷ ಟನ್ ಹೆಚ್ಚು) ಆಗಿದೆ ಎಂದು ಮಾಹಿತಿ ನೀಡಿದೆ.