Site icon Vistara News

Passport Ranking: ಪಾಸ್‌ಪೋರ್ಟ್‌ ರ‍್ಯಾಂಕಿಂಗ್‌ನಲ್ಲಿ ಕುಸಿದ ಭಾರತ; ಟಾಪ್‌ ದೇಶ ಯಾವುದು?

Indian Passport

India slips to 85th place in passport power rankings, France takes top spot

ನವದೆಹಲಿ: ಜಾಗತಿಕವಾಗಿ ಯಾವುದೇ ಪಾಸ್‌ಪೋರ್ಟ್‌ ಎಷ್ಟು ಬಲಿಷ್ಠವಾಗಿದೆ ಎಂಬುದರ ಆಧಾರದ ಮೇಲೆ ಆ ದೇಶದ ನಾಗರಿಕರಿಗೆ ಗೌರವ, ನಿಯಮಗಳ ಸಡಿಲಿಕೆ ಸೇರಿ ಹಲವು ಸೌಲಭ್ಯಗಳು ಸಿಗುತ್ತವೆ. ಆದರೆ, ಜಾಗತಿಕವಾಗಿ ಬಲಿಷ್ಠ ಪಾಸ್‌ಪೋರ್ಟ್‌ ಹೊಂದಿರುವ ದೇಶಗಳ ಪಟ್ಟಿಯಲ್ಲಿ (Passport Power Ranking) ಭಾರತದ ಒಂದು ಸ್ಥಾನ ಕುಸಿತವಾಗಿದೆ. ಭಾರತವು ಪಟ್ಟಿಯಲ್ಲಿ 84ನೇ ಸ್ಥಾನದಿಂದ 85ನೇ ಸ್ಥಾನಕ್ಕೆ (Indian Passport) ಕುಸಿತ ಕಂಡಿದೆ. ಮತ್ತೊಂದೆಡೆ, ಫ್ರಾನ್ಸ್‌ ಪಾಸ್‌ಪೋರ್ಟ್‌ (France Passport) ವಿಶ್ವದಲ್ಲೇ ಬಲಿಷ್ಠ ಪಾಸ್‌ಪೋರ್ಟ್‌ ಎನಿಸಿದ್ದು, ನಂಬರ್‌ 1 ಸ್ಥಾನ ಪಡೆದಿದೆ.

2024ನೇ ಸಾಲಿನ ಹೆನ್ಲೆ ಪಾಸ್‌ಪೋರ್ಟ್‌ ಸೂಚ್ಯಂಕ ಪ್ರಕಟವಾಗಿದೆ. ಸುಮಾರು 194 ದೇಶಗಳ ಮಾಹಿತಿ ಸಂಗ್ರಹಿಸಿ, ಪಾಸ್‌ಪೋರ್ಟ್‌ ದಕ್ಷತೆಯ ಆಧಾರದ ಮೇಲೆ ಪಟ್ಟಿ ತಯಾರಿಸಿದೆ. ಫ್ರಾನ್ಸ್‌ ನಂಬರ್‌ 1 ಸ್ಥಾನದಲ್ಲಿರುವುದರಿಂದ ಆ ದೇಶದ ನಾಗರಿಕರು 194 ದೇಶಗಳಿಗೂ ವೀಸಾ ಇಲ್ಲದೆ ಪ್ರಯಾಣಿಸಬಹುದಾಗಿದೆ. ಜರ್ಮನಿ, ಇಟಲಿ, ಜಪಾನ್‌, ಸಿಂಗಾಪುರ ಹಾಗೂ ಸ್ಪೇನ್‌ ಕೂಡ ಜಂಟಿಯಾಗಿ ಮೊದಲ ಸ್ಥಾನದಲ್ಲಿವೆ. ಪಾಕಿಸ್ತಾನವು ಕಳೆದ ವರ್ಷದಂತೆಯೇ 106ನೇ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶವು 101ನೇ ಸ್ಥಾನದಿಂದ 102ನೇ ಸ್ಥಾನಕ್ಕೆ ಕುಸಿತ ಕಂಡಿದೆ.

ಭಾರತದ ಪಾಸ್‌ಪೋರ್ಟ್‌ ಇದ್ದರೆ 62 ದೇಶಗಳಿಗೆ ವೀಸಾ ಬೇಕಿಲ್ಲ

ಹೆನ್ಲೆ ಪಾಸ್‌ಪೋರ್ಟ್‌ ಸೂಚ್ಯಂಕದಲ್ಲಿ ಭಾರತವು 2023ರಲ್ಲಿ 84ನೇ ಸ್ಥಾನದಲ್ಲಿತ್ತು. ಕಳೆದ ವರ್ಷ ಭಾರತದ ಪಾಸ್‌ಪೋರ್ಟ್ ಇದ್ದರೆ 60 ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದಿತ್ತು. ಆದರೆ, ಈ ಬಾರಿ ಇರಾನ್‌ ಹಾಗೂ ಮಲೇಷ್ಯಾ ಕೂಡ ಭಾರತದ ಪಾಸ್‌ಪೋರ್ಟ್‌ ಇದ್ದರೆ ಸಾಕು, ವೀಸಾ ಬೇಕಾಗಿಲ್ಲ ಎಂದು ಘೋಷಿಸಿದೆ. ಅಲ್ಲಿಗೆ, ಭಾರತದ ಪಾಸ್‌ಪೋರ್ಟ್‌ ಇದ್ದವರು 62 ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದಾಗಿದೆ. ಇಷ್ಟಿದ್ದರೂ, ಪಾಸ್‌ಪೋರ್ಟ್‌ ಸೂಚ್ಯಂಕದಲ್ಲಿ ಭಾರತವು ಒಂದು ಸ್ಥಾನ ಕುಸಿತ ಕಂಡಿರುವುದು ಅಚ್ಚರಿ ಎನಿಸಿದೆ.

ಇದನ್ನೂ ಓದಿ: Pakistan Passport: ಲ್ಯಾಮಿನೇಷನ್‌ ಪೇಪರ್‌ಗೂ ಗತಿ ಇಲ್ಲದ ಪಾಕ್‌; ಸಿಗುತ್ತಿಲ್ಲ ಪಾಸ್‌ಪೋರ್ಟ್‌!

ನಮ್ಮ ನೆರೆ ರಾಷ್ಟ್ರವಾದ ಮಾಲ್ಡೀವ್ಸ್‌ ಪಾಸ್‌ಪೋರ್ಟ್‌ ಭಾರತಕ್ಕಿಂತ ಬಲಿಷ್ಠ ಪಾಸ್‌ಪೋರ್ಟ್‌ ಎನಿಸಿದೆ. ಕಳೆದ ವರ್ಷದಂತೆ ಈ ವರ್ಷವೂ ಮಾಲ್ಡೀವ್ಸ್‌ 58ನೇ ಸ್ಥಾನದಲ್ಲಿದೆ. ಈ ದೇಶದ ಪಾಸ್‌ಪೋರ್ಟ್‌ ಹೊಂದಿರುವವರು ಜಗತ್ತಿನ 96 ದೇಶಗಳಿಗೆ ವೀಸಾ ಇಲ್ಲದೆ ಸಂಚರಿಸಹುದಾಗಿದೆ. ಕಳೆದ 19 ವರ್ಷದಿಂದ ಹೆನ್ಲೆ ಪಾಸ್‌ಪೋರ್ಟ್‌ ಸೂಚ್ಯಂಕ ಪ್ರಕಟಿಸಲಾಗುತ್ತಿದೆ. ಇಂಟರ್‌ನ್ಯಾಷನಲ್‌ ಏರ್‌ ಟ್ರಾನ್ಸ್‌ಪೋರ್ಟ್‌ ಅಸೋಸಿಯೇಷನ್‌ನಿಂದ ಮಾಹಿತಿ ಸಂಗ್ರಹಿಸಿ ಪ್ರತಿವರ್ಷ ಪಾಸ್‌ಪೋರ್ಟ್‌ ಸೂಚ್ಯಂಕ ಪ್ರಕಟಿಸಲಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version