ಇಸ್ಕೆಂಡರುನ್, ಟರ್ಕಿ: ಸರಣಿ ಭೂಕಂಪದಿಂದ ತತ್ತರಿಸಿರುವ ಟರ್ಕಿ (Turkey Earthquake) ಹಲವು ರಾಷ್ಟ್ರಗಳು ನೆರವಿನ ಹಸ್ತ ಚಾಚಿವೆ. ಅದರಂತೆ ಭಾರತವೂ (India) ‘ಆಪರೇಷನ್ ದೋಸ್ತ್’ (Operation Dost) ಹೆಸರಿನಲ್ಲಿ ಟರ್ಕಿಯಲ್ಲಿ ಪರಿಹಾರ ಕಾರ್ಯಾಚರಣೆಯನ್ನು ಕೈಗೊಂಡಿದೆ. ಭಾರತೀಯ ತಂಡವು ಟರ್ಕಿಯ ಇಸ್ಕೆಂಟರುನ್ ಎಂಬಲ್ಲಿ ಸೇನಾ ಕ್ಷೇತ್ರ ಆಸ್ಪತ್ರೆಯನ್ನು ತೆರೆದಿದ್ದು, ಇದುವರೆಗೆ 106 ಸಂತ್ರಸ್ತರಿಗೆ ಆರೋಗ್ಯ ನೆರವು ಒದಗಿಸಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ವಿಡಿಯೋ ಷೇರ್ ಮಾಡಿ ಮಾಹಿತಿ ನೀಡಿದೆ.
ಭೂಕಂಪದಲ್ಲಿ ಸಿಲುಕಿದ ಗಾಯಾಳುಗಳನ್ನು ಹೊರ ತೆಗೆದು ಭಾರತದ ಈ ಫೀಲ್ಡ್ ಹಾಸ್ಪಿಟಲ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಭೂಕಂಪ ಪೀಡಿತ ಜನರಿಗೆ ನೆರವು ನೀಡಲು ಟರ್ಕಿಯ ಹಟೇಯಲ್ಲಿ ಸ್ಥಾಪಿಸಲಾದ ಭಾರತೀಯ ಸೇನೆಯ ಕ್ಷೇತ್ರ ಆಸ್ಪತ್ರೆ ಗುರುವಾರದಿಂದೇ ಕಾರ್ಯಾರಂಭ ಮಾಡಿದೆ. ಈ ಮೂರ್ನಾಲ್ಕು ದಿನಗಳಲ್ಲಿ ಸಾಕಷ್ಟು ಗಾಯಾಳುಗಳಿಗೆ ಆರೋಗ್ಯ ನೆರವು ಒದಗಿಸಿದೆ.
ಟರ್ಕಿಯ ಹಟೇ ವ್ಯಾಪ್ತಿಯ ಇಸ್ಕೆಂಡರುನ್‌ನಲ್ಲಿರುವ ಸೇನಾ ಕ್ಷೇತ್ರ ಆಸ್ಪತ್ರೆಯು ವೈದ್ಯಕೀಯ, ಶಸ್ತ್ರಚಿಕಿತ್ಸಾ ಮತ್ತು ತುರ್ತು ವಾರ್ಡ್‌ಗಳೊಂದಿಗೆ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ. ಎಕ್ಸ್-ರೇ ಲ್ಯಾಬ್ ಮತ್ತು ಮೆಡಿಕಲ್ ಸ್ಟೋರ್ ಸೇವೆಗಳು ಇಲ್ಲಿ ಲಭ್ಯ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಟ್ವೀಟ್ ಮಾಡಿದ್ದಾರೆ. ಆಪರೇಷನ್ ದೋಸ್ತ್ ಪರಿಹಾರ ಕಾರ್ಯಾಚರಣೆಯಡಿಯಲ್ಲಿ ಈ ಆಸ್ಪತ್ರೆಯನ್ನು ತೆರೆಯಲಾಗಿದೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಟರ್ಕಿ ಭೂಕಂಪ ಪೀಡಿತರಿಗೆ ನೆರವು; ಮತ್ತೊಮ್ಮೆ ಜಗದ ಹೃದಯ ಗೆದ್ದ ಭಾರತ
ಟರ್ಕಿಯಲ್ಲಿ ಪರಿಹಾರ ಕಾರ್ಯಾಚರಣೆಯ ಫೋಟೋಗಳನ್ನು ಷೇರ್ ಮಾಡಿರುವ ವಿದೇಶಾಂಗ ಸಚಿವ ಜೈಶಂಕರ್ ಅವರು, ಹಟೆಯಲ್ಲಿರುವ ನಮ್ಮ ಫೀಲ್ಡ್ ಸೇನಾ ಆಸ್ಪತ್ರೆಯು ಭೂಕಂಪಪೀಡಿತ ಸಂತ್ರಸ್ತರಿಗೆ ಚಿಕಿತ್ಸೆ ನೀಡಲಿದೆ. ನಮ್ಮ ತಂಡವು ವೈದ್ಯಕೀಯ ಮತ್ತು ತುರ್ತು ಕಾಳಜಿ ವಿಶೇಷ ತಜ್ಞರು ಹಾಗೂ ಉಪಕರಣಗಳನ್ನು ಹೊಂದಿದ್ದು, ಯಾವುದೇ ತುರ್ತು ಪರಿಸ್ಥಿತಿ ಎದುರಿಸಲು ಸಜ್ಜಾಗಿದೆ ಎಂದು ಅವರು ಹೇಳಿದ್ದಾರೆ.