ಹೊಸದಿಲ್ಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಕೇಂದ್ರ ಸರ್ಕಾರ ದೇಶದ ಹೆಸರನ್ನು ʼಭಾರತʼ (Bharath) ಎಂದು ಮರುನಾಮಕರಣ ಮಾಡಲು ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಹೊಸ ವಿಧೇಯಕವನ್ನು ತರುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಈ ಮೂಲಕ ಪ್ರತಿಪಕ್ಷಗಳ ಒಕ್ಕೂಟ ʼINDIA bloc’ಗೆ ಟಕ್ಕರ್ ಕೊಡಲು ಮೋದಿ ಸರ್ಕಾರ ಮುಂದಾಗಿದೆ. ವಿಪಕ್ಷಗಳ ಒಕ್ಕೂಟ “I.N.D.I.A’ ಎಂದು ಹೆಸರಿಟ್ಟುಕೊಂಡ ಬಳಿಕ ಈ ಪದವನ್ನು ಬಳಸುವ ಸಂದರ್ಭಗಳಲ್ಲೆಲ್ಲಾ ಕೇಂದ್ರ ಸರ್ಕಾರ “ಭಾರತʼ ಎಂಬ ಪದವನ್ನು ಬಳಸುತ್ತಿದೆ.
ಇತ್ತೀಚೆಗೆ ರಾಷ್ಟ್ರಪತಿ ಭವನದಿಂದ ಸೆಪ್ಟೆಂಬರ್ 9ರ G20 ಔತಣಕೂಟಕ್ಕೆ ಪ್ರತಿಪಕ್ಷಗಳಿಗೆ ಆಹ್ವಾನ ಹೋಗಿದ್ದು, ಅದರಲ್ಲಿ ʼPresident of India’ ಬದಲಿಗೆ ʼPresident of Bharatʼ ಎಂದು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಕೇಂದ್ರದ ವಿರುದ್ಧ ಟೀಕೆ ಆರಂಭಿಸಿದೆ.
“ಸುದ್ದಿ ನಿಜವಾಗಿದೆ. ರಾಷ್ಟ್ರಪತಿ ಭವನವು ಸೆಪ್ಟೆಂಬರ್ 9ರಂದು ಸಾಮಾನ್ಯವಾಗಿರುತ್ತಿದ್ದ ʼPresident of India’ ಬದಲಿಗೆ ʼPresident of Bharatʼ ಎಂದು G20 ಔತಣಕೂಟಕ್ಕೆ ಆಹ್ವಾನವನ್ನು ಕಳುಹಿಸಿದೆʼʼ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಈಗ ಸಂವಿಧಾನದ 1ನೇ ವಿಧಿಯಲ್ಲಿ ಹೀಗೆ ಓದಬಹುದು: ʼಭಾರತ, ಇಂಡಿಯಾ ಎದು ಕರೆಯಲ್ಪಡುತ್ತಿತ್ತು, ರಾಜ್ಯಗಳ ಒಕ್ಕೂಟವಾಗಿರುತ್ತದೆ’. ಈ ‘ಯುನಿಯನ್ ಆಫ್ ಸ್ಟೇಟ್ಸ್’ ಕೂಡ ಆಕ್ರಮಣಕ್ಕೆ ಒಳಗಾಗಲಿದೆ” ಎಂದು ಅವರು ಟೀಕಿಸಿದ್ದಾರೆ.
ಇದೇ ಸಂದರ್ಭದಲ್ಲಿ ಹಿಮಂತ ವಿಸ್ವ ಶರ್ಮಾ ಕೂಡ ಈ ಕುರಿತು ಎಕ್ಸ್ (ಟ್ವೀಟ್) ಮಾಡಿದ್ದಾರೆ. ʼʼRepublic of Bharath- ನಮ್ಮ ನಾಗರಿಕತೆಯು ಅಮೃತ ಕಾಲದ ಕಡೆಗೆ ಧೈರ್ಯದಿಂದ ಮುನ್ನಡೆಯುತ್ತಿರುವುದಕ್ಕೆ ಸಂತೋಷ ಮತ್ತು ಹೆಮ್ಮೆ” ಎಂದು ಟ್ವೀಟ್ ಮಾಡಿದ್ದಾರೆ.
ಬಹುಕಾಲದ ಬೇಡಿಕೆ
ʼಇಂಡಿಯಾʼವನ್ನು ಬದಲಿಸಿ ʼಭಾರತʼವನ್ನು ಸ್ಥಾಪಿಸಬೇಕು ಎಂಬುದು ಬಿಜೆಪಿಯ ಬಹುಕಾಲದ ಆಶಯವಾಗಿದೆ. ಈ ಹಿಂದೆ ಹಿಮಂತ ಬಿಸ್ವ ಶರ್ಮಾ, ಆರೆಸ್ಸೆಸ್ ಮುಖಂಡ ಮೋಹನ ಭಾಗವತ್ ಕೂಡ ಈ ಪ್ರಸ್ತಾಪವನ್ನು ಮುಂದಿಟ್ಟಿದ್ದರು.
ಡಿಸೆಂಬರ್ 2022ರಲ್ಲಿ, ಗುಜರಾತ್‌ನ ಆನಂದ್‌ನ ಬಿಜೆಪಿ ಸಂಸದ ಮಿತೇಶ್ ಪಟೇಲ್ ಅವರು ʼಇಂಡಿಯಾʼವನ್ನು “ಭಾರತ್” ಅಥವಾ “ಭಾರತ್ ವರ್ಷ್” ಎಂದು ಮರುನಾಮಕರಣ ಮಾಡುವ ಬಗ್ಗೆ ಲೋಕಸಭೆಯಲ್ಲಿ ಪ್ರಶ್ನೆಯನ್ನು ಎತ್ತಿದ್ದರು. ಸೆಪ್ಟೆಂಬರ್ 1949ರಲ್ಲಿ ಸಂವಿಧಾನ ಸಭೆಯು ಈ ಬಗ್ಗೆ ಚರ್ಚಿಸಿತ್ತು. “ಇಂಡಿಯಾ” ಎಂಬುದು ದೇಶವು ಒಳಪಟ್ಟ ಗುಲಾಮಗಿರಿಯನ್ನು ಸೂಚಿಸುತ್ತದೆ. ಇದು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯಿಂದ ಬಂದಿದೆ ಎಂದು ಪಟೇಲ್ ಪ್ರತಿಪಾದಿಸಿದ್ದರು.
“ಗುಲಾಮಗಿರಿ ಚಿಂತನೆ”ಯಿಂದ ದೇಶವನ್ನು ವಿಮೋಚನೆಗೊಳಿಸಲು ಒತ್ತು ನೀಡುತ್ತಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಸಾಂವಿಧಾನಿಕ ಸಂಸ್ಥೆಗಳಿಂದ “ಇಂಡಿಯಾ” ಎಂಬ ಪದವನ್ನು ತೆಗೆದುಹಾಕಲು ಯೋಜಿಸುತ್ತಿದೆ ಎಂದು ಹೇಳಲಾಗಿದೆ. ಸಂವಿಧಾನದ ಪ್ರಸ್ತಾವನೆಯಲ್ಲಿ ಈ ಬಗ್ಗೆ ತಿದ್ದುಪಡಿ ಮಾಡಲು ಸಿದ್ಧತೆ ನಡೆಯುತ್ತಿದೆ ಎಂದೂ ಹೇಳಲಾಗಿದೆ.
ಇದನ್ನೂ ಓದಿ: Udhayanidhi Stalin: ಉದಯನಿಧಿ ಹೇಳಿಕೆ ದುರದೃಷ್ಟಕರ ಎಂದ ಇಂಡಿಯಾ ಕೂಟದ ಪ್ರಮುಖ ಪಕ್ಷ ಟಿಎಂಸಿ