Site icon Vistara News

PM Narendra Modi: “ಕಾಂಗ್ರೆಸ್‌ಗೆ ನಿದ್ರೆ ಬರುತ್ತಿಲ್ಲ…ʼʼ ದ್ವಾರಕಾ ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಿ ಪ್ರಧಾನಿ ಮೋದಿ

pm narendra modi dwarka expressway

ಹೊಸದಿಲ್ಲಿ: “ದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು (Development programs) ನೋಡಿ ಕಾಂಗ್ರೆಸ್‌ (congress) ಮತ್ತು ಅದರ ದುರಹಂಕಾರಿ ಮಿತ್ರರಿಗೆ ನಿದ್ರೆ ಬರುತ್ತಿಲ್ಲ. ಚುನಾವಣೆಗಾಗಿ ನಾವು ಇದನ್ನೆಲ್ಲ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ” ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ.

ದೆಹಲಿ- ಗುರುಗ್ರಾಮ್ ನಡುವಿನ ಸಂಚಾರವನ್ನು ಸುಗಮಗೊಳಿಸುವ ದ್ವಾರಕಾ ಎಕ್ಸ್‌ಪ್ರೆಸ್‌ವೇಯ (Dwarka Expressway) ಪ್ರಮುಖ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ನಡೆಯುತ್ತಿರುವ ಕ್ಷಿಪ್ರ ಮೂಲಸೌಕರ್ಯ ನಿರ್ಮಾಣ ಕಾರ್ಯವು ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯನ್ನಾಗಿ ಮಾಡಲಿದೆ. ಆದರೆ ಕಾಂಗ್ರೆಸ್ ಮತ್ತು ಅದರ ದುರಹಂಕಾರಿ ಮೈತ್ರಿ ಪಕ್ಷಗಳು ನಮ್ಮ ಅಭಿವೃದ್ಧಿ ಕಾರ್ಯಗಳಲ್ಲಿ ಸಮಸ್ಯೆಯನ್ನು ಎದುರಿಸುತ್ತಿವೆ ಎಂದು ಪ್ರಧಾನಿ ಹೇಳಿದರು.

ದೇಶದಲ್ಲಿ ನಡೆಯುತ್ತಿರುವ ಲಕ್ಷಾಂತರ ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳಿಂದ ಬಹುದೊಡ್ಡ ಸಮಸ್ಯೆ ಎದುರಿಸುತ್ತಿರುವವರು ಕಾಂಗ್ರೆಸ್ ಮತ್ತು ಮೈತ್ರಿಕೂಟ ಮಾತ್ರ. ಇವರಿಗೆ ನಿದ್ದೆ ಬರುತ್ತಿಲ್ಲ. ಚುನಾವಣೆಗಾಗಿಯೇ ಮೋದಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. 10 ವರ್ಷಗಳಲ್ಲಿ ದೇಶ ತುಂಬಾ ಬದಲಾಗಿದೆ. ಆದರೆ ಕಾಂಗ್ರೆಸ್ ಮತ್ತು ಅದರ ಸ್ನೇಹಿತರ ದೃಷ್ಟಿಕೋನಗಳು ಬದಲಾಗಿಲ್ಲ ಎಂದು ಪ್ರಧಾನಿ ಹೇಳಿದರು.

“ದ್ವಾರಕಾ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೂ ಮುನ್ನ ಮುಸ್ಸಂಜೆಯ ನಂತರ ಜನರು ಇಲ್ಲಿಗೆ ಬರುವುದನ್ನು ತಪ್ಪಿಸುತ್ತಿದ್ದರು. ಟ್ಯಾಕ್ಸಿ ಚಾಲಕರು ಸಹ ನಿರಾಕರಿಸುತ್ತಿದ್ದರು. ಇಡೀ ಪ್ರದೇಶವನ್ನು ಅಸುರಕ್ಷಿತವೆಂದು ಪರಿಗಣಿಸಲಾಗುತ್ತಿತ್ತು. ಇಂದು ಅನೇಕ ದೊಡ್ಡ ಕಂಪನಿಗಳು ತಮ್ಮ ಯೋಜನೆಗಳನ್ನು ಇಲ್ಲಿ ಸ್ಥಾಪಿಸುತ್ತಿವೆ. ಎನ್‌ಸಿಆರ್‌ನ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳಲ್ಲಿ ಇದು ಒಂದಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದರು.

ದ್ವಾರಕಾ ಎಕ್ಸ್‌ಪ್ರೆಸ್‌ವೇ ವೈಶಿಷ್ಟ್ಯಗಳು

ಇಂದು ತೆರೆದ ದ್ವಾರಕಾ ಎಕ್ಸ್‌ಪ್ರೆಸ್‌ವೇಯ ಹರಿಯಾಣ ವಿಭಾಗ, ದೆಹಲಿ ಮತ್ತು ಗುರುಗ್ರಾಮ್ ನಡುವೆ NH-48ನಲ್ಲಿ ಟ್ರಾಫಿಕ್ ಹರಿವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಪ್ರತಿದಿನ ಈ ಮಾರ್ಗದಲ್ಲಿ ಪ್ರಯಾಣಿಸುವ 90,000 ಪ್ರಯಾಣಿಕರಿಗೆ ಎಕ್ಸ್‌ಪ್ರೆಸ್‌ವೇ ಪ್ರಯಾಣದ ಸಮಯವನ್ನು ಕನಿಷ್ಠ 20 ನಿಮಿಷಗಳಷ್ಟು ಕಡಿತಗೊಳಿಸುತ್ತದೆ.

ಇದು ಒಂದೊಂದೇ ಪಿಲ್ಲರ್‌ ಮೇಲೆ ನಿರ್ಮಿಸಲಾದ ಭಾರತದ ಮೊದಲ ಎಕ್ಸ್‌ಪ್ರೆಸ್‌ವೇ. ಇದರ 18 ಕಿಮೀ ವ್ಯಾಪ್ತಿಯ ಉದ್ದಕ್ಕೂ ಹಲವಾರು ಅಂಡರ್‌ಪಾಸ್‌ಗಳು ಮತ್ತು ಸೇವಾ ರಸ್ತೆಗಳನ್ನು ಹೊಂದಿದೆ. ಎಂಟು ಪಥಗಳ ಎಕ್ಸ್‌ಪ್ರೆಸ್‌ವೇ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಗುರುಗ್ರಾಮ್ ಬೈಪಾಸ್‌ಗೆ ನೇರ ಸಂಪರ್ಕವನ್ನು ಒದಗಿಸುತ್ತದೆ.

ಎಕ್ಸ್‌ಪ್ರೆಸ್‌ವೇಯನ್ನು ಸುಮಾರು ₹ 10,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಈ ಪೈಕಿ ಹರಿಯಾಣ ವಿಭಾಗವನ್ನು ₹ 4,100 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ದೆಹಲಿ-ಹರಿಯಾಣ ಗಡಿಯನ್ನು ಬಸಾಯಿ ರೈಲ್-ಓವರ್-ಬ್ರಿಡ್ಜ್ (ROB) ನೊಂದಿಗೆ ಸಂಪರ್ಕಿಸುವ 10.2-ಕಿಮೀ ವಿಸ್ತರಣೆ ಮತ್ತು ಬಸಾಯಿ ROB ಮತ್ತು ಖೇರ್ಕಿ ದೌಲಾ ನಡುವಿನ 8.7-ಕಿಮೀ ವಿಸ್ತರಣೆಯನ್ನು ಒಳಗೊಂಡಿದೆ.

ಪ್ರಧಾನಿ ಮೋದಿ ಇಂದು ಉದ್ಘಾಟಿಸಿದ ಮತ್ತು ಶಂಕುಸ್ಥಾಪನೆ ಮಾಡಿದ ₹1 ಲಕ್ಷ ಕೋಟಿ ಮೌಲ್ಯದ ಹೆದ್ದಾರಿ ಯೋಜನೆಗಳಲ್ಲಿ ಇದೂ ಸೇರಿದೆ. ದ್ವಾರಕಾ ಎಕ್ಸ್‌ಪ್ರೆಸ್‌ವೇ ಭಾರತಮಾಲಾ ಯೋಜನೆಯ ಪ್ರಮುಖ ಭಾಗವಾಗಿದ್ದು, ಇದು ಮೋದಿ ಸರ್ಕಾರದ ಪ್ರಮುಖ ಮೂಲಸೌಕರ್ಯ ಯೋಜನೆ.

ಇಂದು ಉದ್ಘಾಟನೆಗೊಂಡ ಇತರ ಪ್ರಮುಖ ಯೋಜನೆಗಳಲ್ಲಿ 9.6 ಕಿಮೀ ಆರು ಪಥದ ನಗರ ವಿಸ್ತರಣೆ ರಸ್ತೆ-II (UER-II)-ಪ್ಯಾಕೇಜ್ 3 ನಂಗ್ಲೋಯ್-ನಜಾಫ್‌ಗಡ್ ರಸ್ತೆ ಮತ್ತು ದೆಹಲಿಯ ಸೆಕ್ಟರ್ 24 ದ್ವಾರಕಾ ವಿಭಾಗದ ನಡುವೆ ಸೇರಿವೆ. ಲಕ್ನೋ ರಿಂಗ್ ರಸ್ತೆಯ ಮೂರು ವಿಭಾಗಗಳು ಮತ್ತು ಆಂಧ್ರಪ್ರದೇಶದ NH-16 ರ ಆನಂದಪುರಂ-ಪೆಂಡುರ್ತಿ-ಅನಕಪಲ್ಲಿ ಹಂತವನ್ನು ಸಹ ಉದ್ಘಾಟಿಸಲಾಯಿತು.

ಸಮಾರಂಭದಲ್ಲಿ ಪ್ರಧಾನಿಯವರು ಹಿಮಾಚಲ ಪ್ರದೇಶದಲ್ಲಿ ₹ 3,400 ಕೋಟಿ, ಕರ್ನಾಟಕದಲ್ಲಿ ₹ 2,750 ಕೋಟಿ ಮತ್ತು ದೇಶದ ಇತರ ಭಾಗಗಳಲ್ಲಿ ₹ 20,500 ಕೋಟಿ ಮೊತ್ತದ ಯೋಜನೆಗಳಿಗೆ ಚಾಲನೆ ನೀಡಿದರು.

ಇಂದು ಶಂಕುಸ್ಥಾಪನೆ ಮಾಡಿದ ಹೆದ್ದಾರಿ ಯೋಜನೆಗಳಲ್ಲಿ ಬೆಂಗಳೂರು-ಕಡಪ-ವಿಜಯವಾಡ ಎಕ್ಸ್‌ಪ್ರೆಸ್‌ವೇಯ 14 ವಿಭಾಗಗಳು ಮತ್ತು ಕರ್ನಾಟಕದಲ್ಲಿ NH-748A ಯ ಬೆಳಗಾವಿ-ಹುನಗುಂದ-ರಾಯಚೂರು ವಿಭಾಗದ ಆರು ಪ್ಯಾಕೇಜ್‌ಗಳು ಸೇರಿವೆ. ಹರಿಯಾಣದ ಶಾಮ್ಲಿ-ಅಂಬಾಲಾ ಹೆದ್ದಾರಿ ಮತ್ತು ಪಂಜಾಬ್‌ನ ಅಮೃತಸರ-ಭಟಿಂಡಾ ಕಾರಿಡಾರ್‌ನ ವಿವಿಧ ವಿಭಾಗಗಳ ಅಡಿಪಾಯವನ್ನೂ ಪ್ರಧಾನಿ ಹಾಕಿದರು.

ಇದನ್ನೂ ಓದಿ: PM Narendra Modi: ಉಕ್ರೇನ್‌ ವಿರುದ್ಧ ರಷ್ಯಾದ ಅಣುಬಾಂಬ್‌ ಸಂಭಾವ್ಯ ದಾಳಿ ತಡೆಯಲು ಪ್ರಯತ್ನಿಸಿದ್ದರು ಪ್ರಧಾನಿ ನರೇಂದ್ರ ಮೋದಿ!

Exit mobile version