ವಾಷಿಂಗ್ಟನ್: ಭಾರತಕ್ಕೆ ಫೈಟರ್ ಜೆಟ್ ಎಂಜಿನ್ ತಯಾರಿಕೆ ತಂತ್ರಜ್ಞಾನ (India-US Jet Engine deal) ವರ್ಗಾಯಿಸುವ ಜೋ ಬೈಡೆನ್ (Joe Biden) ಆಡಳಿತದ ನಿರ್ಧಾರಕ್ಕೆ ಯುನೈಟೆಡ್ ಸ್ಟೇಟ್ಸ್ (ಯುಎಸ್) ಕಾಂಗ್ರೆಸ್ ಸಮ್ಮತಿ ನೀಡಿದೆ. ಈ ಒಪ್ಪಂದ ಜಾರಿಗೆ ಬಂದಲ್ಲಿ ಭಾರತದಲ್ಲಿ ಜೆಟ್ ಎಂಜಿನ್‌ಗಳ ತಯಾರಿಕೆ ಸಾಧ್ಯವಾಗಲಿದೆ.
ಈ ಒಪ್ಪಂದದೊಂದಿಗೆ ಅಮೆರಿಕದ ಜನರಲ್ ಎಲೆಕ್ಟ್ರಿಕ್ (ಜಿಇ) ಕಂಪನಿಯು ಭಾರತದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಜೊತೆಗೆ ತಂತ್ರಜ್ಞಾನ ವಿನಿಮಯ ಮತ್ತಿತರ ವಿಚಾರಗಳಲ್ಲಿ ಸಹಕಾರ ನೀಡಲಿದೆ. US ಕಾಂಗ್ರೆಸ್‌ನ ಅಧಿಕೃತ ಕಚೇರಿ ಕ್ಯಾಪಿಟಲ್ ಹಿಲ್‌ನ ಮೂಲಗಳ ಪ್ರಕಾರ, ಈ ಒಪ್ಪಂದಕ್ಕೆ ಸಮ್ಮತಿ ಶಾಸಕಾಂಗದ ಕಡೆಯಿಂದ ಸ್ಪಷ್ಟವಾಗಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಭೇಟಿಗೂ ಮುನ್ನವೇ ಮಾರಾಟಕ್ಕೆ ಅನುಮೋದನೆ ನೀಡಲಾಗಿತ್ತು. ಆದರೆ, ಪ್ರಕ್ರಿಯೆಯ ಪ್ರಕಾರ, ಆಡಳಿತ ಇಲಾಖೆ ಜುಲೈ 28ರಂದು ಹೌಸ್ ಮತ್ತು ಸೆನೆಟ್ ವಿದೇಶಿ ಸಂಬಂಧಗಳ ಸಮಿತಿಗೆ ಸೂಚಿಸಿದೆ. ಅಧಿಸೂಚನೆಯ ನಂತರ 30 ದಿನಗಳವರೆಗೆ ಯಾವುದೇ ಕಾಂಗ್ರೆಸ್ ಪ್ರತಿನಿಧಿ ಅಥವಾ ಸೆನೆಟರ್ ಆಕ್ಷೇಪಿಸದಿದ್ದರೆ ಅದನ್ನು ಒಪ್ಪಿಗೆ ಎಂದು ಪರಿಗಣಿಸಲಾಗುತ್ತದೆ. ಇದುವರೆಗೂ ಯಾವುದೇ ಆಕ್ಷೇಪಣೆ ಇಲ್ಲದಿರುವುದರಿಂದ ಮುಂದಿನ ಹಂತ ಸುಗಮವಾಗಿದೆ.
ಸೆಪ್ಟೆಂಬರ್‌ನಲ್ಲಿ ಜಿ20 ಶೃಂಗಸಭೆಗಾಗಿ (G20 Summit 2023) ಅಧ್ಯಕ್ಷ ಬೈಡೆನ್ ಭಾರತಕ್ಕೆ ಭೇಟಿ ನೀಡಿದಾಗ, ಎರಡೂ ದೇಶಗಳು ಒಪ್ಪಂದವನ್ನು ಮುಂದುವರಿಸುವ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸುವ ನಿರೀಕ್ಷೆಯಿದೆ. ಕಾಂಗ್ರೆಸ್ ಮೂಲಗಳು ಈ ಐತಿಹಾಸಿಕ ಒಪ್ಪಂದದಲ್ಲಿ ಮುಂದುವರಿಯಲು ಎರಡೂ ಕಡೆಯಿಂದ ಅಗತ್ಯ ಕ್ರಮಗಳಿಗಾಗಿ ನಾವು ಕೆಲಸ ಮಾಡುತ್ತಿದ್ದೇವೆ ಎಂದಿವೆ. ಈ ಬಗ್ಗೆ ಪ್ರತಿಕ್ರಿಯಿಸಲು ಆಡಳಿತ ಇಲಾಖೆ ನಿರಾಕರಿಸಿದ್ದು, ವಾಣಿಜ್ಯ ರಕ್ಷಣಾ ವ್ಯಾಪಾರ ಪರವಾನಗಿ ಚಟುವಟಿಕೆಗಳ ವಿವರಗಳ ಬಗ್ಗೆ ಸಾರ್ವಜನಿಕವಾಗಿ ಕಾಮೆಂಟ್ ಮಾಡುವುದಿಲ್ಲ ಎಂದಿದೆ.
ಜೂನ್ 22ರಂದು, ಪ್ರಧಾನಿ ನರೇಂದ್ರ ಮೋದಿಯವರು ವಾಷಿಂಗ್ಟನ್ ಡಿಸಿಗೆ ಐತಿಹಾಸಿಕ ಭೇಟಿ ನೀಡಿದ್ದರು. ಅಲ್ಲಿ ವ್ಯಾಪಕ ದ್ವಿಪಕ್ಷೀಯ ಮಾತುಕತೆಗಳು ಮತ್ತು ವಿಶೇಷ ಭೋಜನಕೂಟಕ್ಕೆ ಮೊದಲು ಶ್ವೇತಭವನದಲ್ಲಿ ವಿಧ್ಯುಕ್ತ ಸ್ವಾಗತವನ್ನು ನೀಡಲಾಯಿತು. GE ಏರೋಸ್ಪೇಸ್ ಮತ್ತು HALಗಳು F-414 ಎಂಜಿನ್ ಜಂಟಿಯಾಗಿ ಉತ್ಪಾದಿಸಲು ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದವು. ಇದು ಸದ್ಯ ಅಭಿವೃದ್ಧಿಪಡಿಸಲಾಗುತ್ತಿರುವ Mk2 ಹಗುರ ಯುದ್ಧ ವಿಮಾನದ (LCA) ಎಂಜಿನ್ ಆಗಿದೆ.
ಈ ಒಪ್ಪಂದವು ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ US ಜೆಟ್ ಎಂಜಿನ್ ತಂತ್ರಜ್ಞಾನ ಅತ್ಯುನ್ನತ ಮಟ್ಟದ್ದು. ಅದು ತುಂಬಾ ಹತ್ತಿರದ ಮಿತ್ರರಾಷ್ಟ್ರಗಳಿಗೂ ಈ ತಂತ್ರಜ್ಞಾನವನ್ನು ಹಂಚಿಕೊಂಡಿಲ್ಲ. ಭಾರತವು ಜೆಟ್ ಎಂಜಿನ್ ತಂತ್ರಜ್ಞಾನದಲ್ಲಿ ಹಿಂದುಳಿದಿದೆ. ಈ ಒಪ್ಪಂದವು ಈ ತಂತ್ರಜ್ಞಾನದಲ್ಲಿ ಪಕ್ಷತೆ ಸಾಧಿಸಲು ಸೇತುವೆಯಾಗಲಿದೆ. ಭಾರತದ ವೈಮಾನಿಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡಲಿದೆ. ವಿಶೇಷವಾಗಿ ನೈಜ ನಿಯಂತ್ರಣ ರೇಖೆಯಲ್ಲಿ ಚೀನಾದೊಂದಿಗಿನ ತಮ್ಮ ವಾಯು ಹೋರಾಟದ ಸಾಮರ್ಥ್ಯ ತುಸು ದುರ್ಬಲ. ಹೀಗಾಗಿ ನಮ್ಮ ಮಹತ್ವಾಕಾಂಕ್ಷೆ ನಮ್ಮದೇ ಆದ ದೇಶೀಯ ರಕ್ಷಣಾ ಕೈಗಾರಿಕಾ ನೆಲೆ. US ಆಡಳಿತದ ಅಧಿಕಾರಿಗಳು GE ಒಪ್ಪಂದವು ಒಂದು ಮಾದರಿಯಾಗಬಹುದು ಎಂದು ಒಪ್ಪಿಕೊಂಡಿದ್ದಾರೆ. ಎರಡೂ ದೇಶಗಳ ರಕ್ಷಣಾ ವ್ಯವಸ್ಥೆಗಳು ಮತ್ತು ಸಂಸ್ಥೆಗಳನ್ನು ಹೆಚ್ಚು ನಿಕಟವಾಗಿ ಸಂಯೋಜಿಸುವ ಅಮೆರಿಕದ ಆಶಯದೊಂದಿಗೆ ಇದು ಹೊಂದಿಕೊಳ್ಳುತ್ತದೆ.
ಈ ಒಪ್ಪಂದದಲ್ಲಿ ತಂತ್ರಜ್ಞಾನದ 80% ವರ್ಗಾವಣೆಯಾಗಲಿದೆ. ಇದರ ಮೌಲ್ಯ ಸುಮಾರು $1 ಶತಕೋಟಿ (7500 ಕೋಟಿ ರೂ.). ಇದರಿಂದ LCA Mk-1A ಎಂಜಿನ್‌ಗಳ ಉತ್ಪಾದನೆಯಲ್ಲಿ 55%-60% ಮತ್ತು ಅಸ್ತಿತ್ವದಲ್ಲಿರುವ ರೂಪಾಂತರಗಳಲ್ಲಿ 50%ಗೆ ಹೋಲಿಸಿದರೆ ಸುಮಾರು 75% ನಷ್ಟು ಸ್ವದೇಶಿ ಅಂಶವನ್ನು ಹೊಂದಲು ಹೊಸ ಫೈಟರ್ ಜೆಟ್ ಕಾರಣವಾಗುತ್ತದೆ. ಪರವಾನಗಿ ಅಡಿಯಲ್ಲಿ 99 F-414 ಎಂಜಿನ್‌ಗಳನ್ನು ಉತ್ಪಾದಿಸಲು GE ಏರೋಸ್ಪೇಸ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲಿದೆ. ಮೂರು ವರ್ಷಗಳ ನಂತರ ಭಾರತದಲ್ಲಿ ಮೊದಲ ಎಂಜಿನ್‌ಗಳನ್ನು ತಯಾರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ LCA Mk-2 ಅನ್ನು ಅಭಿವೃದ್ಧಿಪಡಿಸಲು ಭಾರತ ಸರ್ಕಾರ ಒಪ್ಪಿಗೆ ನೀಡಿದೆ. ಯೋಜನೆಗೆ ₹ 10,000 ಕೋಟಿ ಮಂಜೂರು ಮಾಡಿದೆ. Mk-2 ಯುದ್ಧವಿಮಾನವು ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಲಾಗುತ್ತಿರುವ ಅತ್ಯಾಧುನಿಕ ಹಗುರ ಯುದ್ಧ ವಿಮಾನ. ಹೆಚ್ಚು ಶಕ್ತಿಶಾಲಿ GE-414 ಎಂಜಿನ್‌ನ ಹೊರತಾಗಿ ಇದು ಉನ್ನತ ರೇಡಾರ್, ಉತ್ತಮ ಏವಿಯಾನಿಕ್ಸ್ ಮತ್ತು ಎಲೆಕ್ಟ್ರಾನಿಕ್ಸ್‌ಗಳನ್ನು ಹೊಂದಿದ್ದು, ಹೆಚ್ಚಿನ ಶಸ್ತ್ರಾಸ್ತ್ರಗಳ ಪೇಲೋಡ್ ಅನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.
13.5 ಟನ್ ಭಾರದ LCA Mk-1Aಗೆ ಹೋಲಿಸಿದರೆ 17.5 ಟನ್ ಭಾರದ ಹೊಸ ಫೈಟರ್ ಗರಿಷ್ಠ 1.8 Mach ವೇಗವನ್ನು ಹೊಂದಿರುತ್ತದೆ. ಹಿಂದಿನದರ ವೇಗ 1.6 Mach. ಹೊಸ ವಿಮಾನದ ಪೇಲೋಡ್ ಸಾಮರ್ಥ್ಯ 6.5 ಟನ್. ಹಳತರದು 3.5 ಟನ್ ಆಗಿತ್ತು. ಇದು ದೃಷ್ಟಿಗೋಚರ ವ್ಯಾಪ್ತಿಯ ಆಕಾಶದಿಂದ ಆಕಾಶಕ್ಕೆ ದಾಳಿ ಮಾಡುವ ಕ್ಷಿಪಣಿಗಳು, ಆಕಾಶದಿಂದ ನೆಲಕ್ಕೆ ನೆಗೆಯುವ ಕ್ಷಿಪಣಿಗಳು, ನಿಖರ ಮಾರ್ಗದರ್ಶನ ಹೊಂದಿರುವ ಶಸ್ತ್ರಾಸ್ತ್ರಗಳು ಮತ್ತು ಸಾಂಪ್ರದಾಯಿಕ ಬಾಂಬುಗಳನ್ನು ಒಯ್ಯಲಿದೆ.
ಇದನ್ನೂ ಓದಿ: PM Modi Visit US: ಮೋದಿ ಅಮೆರಿಕ ಪ್ರವಾಸದ ಎಫೆಕ್ಟ್, ಅಗ್ಗವಾಗಲಿವೆ ಕಡಲೆ, ಬೇಳೆಕಾಳು, ಸೇಬು!