Site icon Vistara News

Israel Palestine War: ವಿಶ್ವಸಂಸ್ಥೆಯಲ್ಲಿ ಇಸ್ರೇಲ್‌ ವಿರುದ್ಧದ ನಿರ್ಣಯದ ಪರ ಭಾರತ ಮತ!

Israel Palestine War

India votes in favour of UN resolution against Israeli's settlement activities in Palestine

ನ್ಯೂಯಾರ್ಕ್‌: ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಮರವು (Israel Palestine War) ಅಂತ್ಯಗೊಳ್ಳುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಅದರಲ್ಲೂ ಅಕ್ಟೋಬರ್‌ 7ರಂದು ಹಮಾಸ್‌ ಉಗ್ರರು ದಾಳಿ ಆರಂಭಿಸಿದ ಬಳಿಕ ಗಾಜಾ ನಗರದ ಮೇಲೆ ಇಸ್ರೇಲ್‌ ಸೇನೆ ನಡೆಸುತ್ತಿರುವ ದಾಳಿಯು ಭೀಕರವಾಗಿದೆ. ಇನ್ನು, ಇದರ ಬೆನ್ನಲ್ಲೇ, ಪ್ಯಾಲೆಸ್ತೀನ್‌ನ ಆಕ್ರಮಿತ ಪ್ರದೇಶಗಳಲ್ಲಿ ಇಸ್ರೇಲ್‌ ಆಕ್ರಮಣಕಾರಿ ನೀತಿಯನ್ನು ಖಂಡಿಸಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ನಿರ್ಣಯ (UN Resolution) ಮಂಡಿಸಲಾಗಿದೆ. ಈ ನಿರ್ಣಯದ ಪರವಾಗಿ ಭಾರತ ಮತದಾನ ಮಾಡಿರುವುದು ವಿಶೇಷವಾಗಿದೆ.

“ಪೂರ್ವ ಜೆರುಸಲೇಂ ಹಾಗೂ ಸಿರಿಯನ್‌ ಗೋಲನ್‌ ಸೇರಿ ಪ್ಯಾಲೆಸ್ತೀನ್‌ನ ಹಲವು ಪ್ರದೇಶಗಳಲ್ಲಿ ಇಸ್ರೇಲ್‌ ವಸಾಹತು ಹಾಗೂ ಆಕ್ರಮಣಕಾರಿ ನೀತಿ” ಖಂಡಿಸಿ ವಿಶ್ವಸಂಸ್ಥೆಯಲ್ಲಿ ನವೆಂಬರ್‌ 9ರಂದು ನಿರ್ಣಯ ಮಂಡಿಸಲಾಗಿದೆ. ನಿರ್ಣಯದ ಪರ ನವೆಂಬರ್‌ 11ರಂದು 145 ದೇಶಗಳು ಮತ ಚಲಾಯಿಸಿವೆ. ಇನ್ನು ನಿರ್ಣಯದ ಪರವಾಗಿ ಭಾರತ ಕೂಡ ಮತದಾನ ಮಾಡಿದೆ. ಅಮೆರಿಕ, ಕೆನಡಾ, ಹಂಗೇರಿ, ಇಸ್ರೇಲ್‌ ಸೇರಿ ಹಲವು ರಾಷ್ಟ್ರಗಳು ನಿರ್ಣಯದ ವಿರುದ್ಧ ಮತ ಚಲಾಯಿಸಿವೆ. 18 ದೇಶಗಳು ಮತದಾನದಿಂದ ದೂರ ಉಳಿದಿವೆ.

ಭಾರತದ ನಡೆ ಸ್ವಾಗತಿಸಿದ ಟಿಎಂಸಿ

ವಿಶ್ವಸಂಸ್ಥೆ ಸಾಮಾನ್ಯ ಸಭೆಯ ನಿರ್ಣಯದ ಪರವಾಗಿ ಮತದಾನ ಮಾಡಿದ ಭಾರತದ ನಡೆಯನ್ನು ಟಿಎಂಸಿ ಸ್ವಾಗತಿಸಿದೆ. “ಪ್ಯಾಲೆಸ್ತೀನ್‌ನ ಆಕ್ರಮಿತ ಪ್ರದೇಶಗಳಲ್ಲಿ ಇಸ್ರೇಲ್‌ ಚಟುವಟಿಕೆಗಳು ಅಕ್ರಮ ಎಂಬ ಕುರಿತು ವಿಶ್ವಸಂಸ್ಥೆ ಮಂಡಿಸಿದ ನಿರ್ಣಯದ ಪರವಾಗಿ ಭಾರತ ಮತದಾನ ಮಾಡಿದೆ. ನಿರ್ಣಯದ ಪರವಾಗಿ ಭಾರತ ಮತದಾನ ಮಾಡಿರುವುದು ಸಂತಸದ ವಿಷಯವಾಗಿದೆ. ಪ್ಯಾಲೆಸ್ತೀನ್‌ನಲ್ಲಿ ಇಸ್ರೇಲ್‌ ಆಕ್ರಮಣವು ಅಕ್ರಮವಾಗಿದೆ” ಎಂದು ರಾಜ್ಯಸಭೆ ಟಿಎಂಸಿ ಸದಸ್ಯ ಸಾಕೇತ್‌ ಗೋಖಲೆ ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: Israel Palestine War: ಲೆಬನಾನ್‌ ಉಗ್ರರ ಮೇಲೆ ಇಸ್ರೇಲ್‌ ದಾಳಿ; ಗಾಜಾದಲ್ಲಿ 11,000 ದಾಟಿದ ಸಾವಿನ ಸಂಖ್ಯೆ

ಮತದಾನದಿಂದ ದೂರ ಉಳಿದಿದ್ದ ಭಾರತ

ಗಾಜಾ ನಗರದಲ್ಲಿ ಮಾನವೀಯ ನೆಲೆಯಲ್ಲಿ ಕದನವಿರಾಮ ಘೋಷಿಸುವ ದಿಸೆಯಲ್ಲಿ ಕಳೆದ ತಿಂಗಳು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೆ, ನಿರ್ಣಯದಲ್ಲಿ ಹಮಾಸ್‌ ದಾಳಿಯ ಪ್ರಸ್ತಾ ಇರದ ಕಾರಣ ಭಾರತವು ಮತದಾನದಿಂದ ದೂರ ಉಳಿದಿತ್ತು. ಜೋರ್ಡಾನ್ ಪ್ರಸ್ತಾಪಿಸಿದ ನಿರ್ಣಯವು ಗಾಜಾ ಪಟ್ಟಿಯಲ್ಲಿ ಅಡೆತಡೆಯಿಲ್ಲದ ಮಾನವೀಯ ಪ್ರವೇಶಕ್ಕೆ ಕರೆ ನೀಡಿದೆ. ಆದರೆ ಹಮಾಸ್ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ. ಇದರಿಂದಾಗಿಯೇ ಭಾರತವು ನಿರ್ಣಯದ ಮತದಾನದಿಂದ ದೂರ ಉಳಿದಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version