ವಿಶ್ವಸಂಸ್ಥೆ: ಇಂಡಿಯಾ (India) ಹೆಸರು ಬದಲಾವಣೆ ಈಗ ವಿಶ್ವಸಂಸ್ಥೆಯ (United Nations) ಅಂಗಳಕ್ಕೂ ತಲುಪಿದೆ. ಯಾವುದೇ ದೇಶವು ತನ್ನ ದೇಶದ ಹೆಸರನ್ನು ಮರುನಾಮಕರಣ ಮಾಡಿರುವುದಾಗಿ ಹೇಳಿದರೆ, ಅಂಥ ಮನವಿಯನ್ನು ವಿಶ್ವಸಂಸ್ಥೆ ಸ್ವೀಕರಿಸಲು ಸಿದ್ಧವಿದೆ ಎಂದು ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರಸ್ (UN Secretary-General Antonio Guterres) ಅವರ ಡೆಪ್ಯುಟಿ ವಕ್ತಾರ ಫರ್ಹಾನ್ ಹಕ್ (Deputy Spokesperson Farhan Haq) ಅವರು ಹೇಳಿದ್ದಾರೆ. ಜಿ20 ಶೃಂಗದಲ್ಲಿ ಪಾಲ್ಗೊಳ್ಳಲಿರುವ ವಿಶ್ವ ನಾಯಕರಿಗೆ ನೀಡಲಾದ ಔತಣಕೂಟದಲ್ಲಿ ಪ್ರೆಸಿಡೆಂಟ್ ಆಫ್ ಭಾರತ್ (President of Bharat) ಎಂದು ಬರೆದಿರುವುದು ದೇಶದ ಮರುನಾಮಕರಣ ಕುರಿತಾದ ಚರ್ಚೆಗೆ ಕಾರಣವಾಗಿದೆ.
ಸೆಪ್ಟೆಂಬರ್ 18ರಿಂದ ಐದು ದಿನಗಳ ಕಾಲ ವಿಶೇಷ ಸಂಸತ್ ಅಧಿವೇಶನ ನಡೆಯಲಿದ್ದು(Parliament Special Session), ಈ ವೇಳೆ ಸಂವಿಧಾನದಲ್ಲಿ ಬಳಸಲಾಗಿರುವ ಇಂಡಿಯಾ ಪದದ ಬದಲಿಗೆ ಭಾರತ್ ಎಂದು ಸೇರಿಸುವ ವಿಧೇಯಕ ಮಂಡಿಸಲಿದೆ ಎನ್ನಲಾಗುತ್ತಿದೆ. ಆದರೆ, ಈ ಕುರಿತು ಕೇಂದ್ರ ಸರ್ಕಾರವೇನೂ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
ಹೆಸರು ಬದಲಾವಣೆ ಅಂಥ ಕ್ಲಿಷ್ಟ ಕಾರ್ಯವಲ್ಲ. ಯಾವುದೇ ದೇಶವು ಹೆಸರು ಬದಲಾವಣೆಯ ವಿನಂತಿಯನ್ನು ಮಾಡಿದರೆ, ಅದು ಹೇಗೆ ಇದೆಯೋ ಹಾಗೆಯೇ ವಿಶ್ವ ಸಂಸ್ಥೆ ಸ್ವೀಕರಿಸುತ್ತದೆ ಎಂದು ಫರ್ಹಾನ್ ಹಕ್ ಅವರು ಹೇಳಿದ್ದಾರೆ. ಕಳೆದ ವರ್ಷ ಟರ್ಕಿ ಸರ್ಕಾರವು ತಮ್ಮ ದೇಶದ ಹೆಸನ್ನು ತುರ್ಕಿಯೇ ಎಂದು ಬದಲಾವಣೆ ಮಾಡಿ, ವಿನಂತಿಯನ್ನು ಕಳುಹಿಸಿತ್ತು. ಅದನ್ನು ವಿಶ್ವಸಂಸ್ಥೆ ಸ್ವೀಕರಿಸಿದೆ ಎಂದು ಹಕ್ ನೆನಪಿಸಿಕೊಂಡರು.
ಟರ್ಕಿಯ ಪ್ರಕರಣದಲ್ಲಿ ಸರ್ಕಾರವು ನಮಗೆ ನೀಡಿದ ಔಪಚಾರಿಕ ವಿನಂತಿಗೆ ಪ್ರತಿಕ್ರಿಯಿಸಿದ್ದೇವೆ. ನಿಸ್ಸಂಶಯವಾಗಿ, ನಮಗೆ ಅಂತಹ ವಿನಂತಿಗಳು ಬಂದರೆ, ಅವು ಬಂದಂತೆ ನಾವು ಅವುಗಳನ್ನು ಪರಿಗಣಿಸುತ್ತೇವೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ: India vs Bharat Row: ವಿಷ್ಣು ಪುರಾಣ ಉಲ್ಲೇಖಿಸಿ ‘ಭಾರತ’ದ ಅರ್ಥ ತಿಳಿಸಿದ್ದ ಮೋದಿ; ಹೆಸರು ಬದಲಿಗೆ ಮೊದಲೇ ಪ್ಲಾನ್?
ಇಂಡಿಯಾ ವರ್ಸಸ್ ಭಾರತ್ ಚರ್ಚೆಗೆ ಬಲಿ ಬೀಳಬೇಡಿ
ಈ ಮಧ್ಯೆ ಇಂಡಿಯಾ ಮರುನಾಮಕರಣ ಕುರಿತಾದ ಚರ್ಚೆಗಳಿಂದ ದೂರ ಇರಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಹೇಳಿದ್ದಾರೆ. ಭಾರತ್ ಎನ್ನುವುದು ಪ್ರಾಚೀನ ಹೆಸರಾಗಿದೆ. ಹಾಗಾಗಿ ತಲೆ ಕೆಡಿಸಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದ್ದಾರೆ.
ಸೆಪ್ಟೆಂಬರ್ 9 ಮತ್ತು 10ರಂದು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲೇ ಇರುವಂತೆ ತಮ್ಮ ಸಚಿವರಿಗೆ ಮೋದಿ ಅವರು ತಿಳಿಸಿದ್ದಾರೆ. ತಮಗೆ ವಹಿಸಲಾದ ಯಾವುದೇ ಜವಾಬ್ದಾರಿಯನ್ನು ತ್ವರಿತವಾಗಿ ನಿರ್ವಹಿಸುವಂತೆ ಸೂಚಿಸಿದ್ದಾರೆ. ವಿಶ್ವ ನಾಯಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಹೇಳಿದ್ದಾರೆ.