Site icon Vistara News

India vs Bharat Row: ನಿಜವಾಗಿಯೂ ‘ಇಂಡಿಯಾ’ ಬದಲಾಗುವುದೇ? ಕೇಂದ್ರದಿಂದ ಮಹತ್ವದ ಸ್ಪಷ್ಟನೆ

Anurag Thakur On Renaming India Name Row

India vs Bharat row: Centre rejects speculation as just rumours

ನವದೆಹಲಿ: ಕೇಂದ್ರ ಸರ್ಕಾರವು ‘ಇಂಡಿಯಾ’ ಎಂಬ ಹೆಸರನ್ನು ‘ಭಾರತ’ ಎಂಬುದಾಗಿ ಬದಲಿಸಲು ಸಂಸತ್‌ ವಿಶೇಷ ಅಧಿವೇಶನದಲ್ಲಿ ವಿಧೇಯಕ (India vs Bharat Row) ಮಂಡಿಸಲಿದೆ ಎಂದು ಹೇಳಲಾಗುತ್ತಿದೆ. ರಾಷ್ಟ್ರಪತಿಯವರ ಅಧಿಸೂಚನೆಯಲ್ಲಿ ‘ಪ್ರೆಸಿಡೆಂಟ್‌ ಆಫ್‌ ಭಾರತ್’‌ ಎಂದು ನಮೂದಿಸಿರುವುದೇ ಇಂತಹ ಚರ್ಚೆಗೆ ಕಾರಣವಾಗಿದೆ. ಭಾರತ ಎಂಬುದಾಗಿ ಹೆಸರು ಬದಲಿಸುವ ಕುರಿತು ಪರ-ವಿರೋಧ ಚರ್ಚೆಗಳು ಕಾವೇರಿವೆ. ಪ್ರತಿಪಕ್ಷಗಳು ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿವೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಮಹತ್ವದ ಸ್ಪಷ್ಟನೆ ನೀಡಿದೆ. “ಹೆಸರು ಬದಲಾವಣೆಯೆಲ್ಲ ಪ್ರತಿಪಕ್ಷಗಳು ಹಬ್ಬಿಸುತ್ತಿರುವ ವದಂತಿ” ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಹೇಳಿದ್ದಾರೆ.

“ಹೆಸರು ಬದಲಾವಣೆ ಕುರಿತು ಹಬ್ಬಿಸಿರುವುದೆಲ್ಲ ವದಂತಿಯಾಗಿದೆ. ಇದು ಪ್ರತಿಪಕ್ಷಗಳ ಮನಸ್ಥಿತಿಗೂ ಹಿಡಿದ ಕನ್ನಡಿಯಾಗಿದೆ. ಅಷ್ಟಕ್ಕೂ, ದೇಶದಲ್ಲಿ ‘ಭಾರತ’ ಎಂಬ ಹೆಸರನ್ನು ವಿರೋಧಿಸುವವರು ಯಾರು? ಯಾರಾದರೂ ವಿರೋಧಿಸುತ್ತಾರೆ ಎಂದಾದರೆ, ಅವರ ಮನಸ್ಥಿತಿ ಗೊತ್ತಾಗುತ್ತದೆ” ಎಂದು ಅನುರಾಗ್‌ ಠಾಕೂರ್‌ ತಿಳಿಸಿದ್ದಾರೆ ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಪ್ರಧಾನಿ ನೋಟಿಫಿಕೇಷನ್‌ನಲ್ಲೂ ಭಾರತ

ರಾಷ್ಟ್ರಪತಿಯವರ ನೋಟಿಫಿಕೇಷನ್‌ನಲ್ಲಿ ಇಂಡಿಯಾ ಬದಲು ಭಾರತ್‌ ಎಂಬುದಾಗಿ ಬಳಸಿದ್ದಕ್ಕೆ ಪ್ರತಿಕ್ರಿಯಿಸಿದ ಅನುರಾಗ್‌ ಠಾಕೂರ್‌, “ಅದರಲ್ಲೇನು ತಪ್ಪಿದೆ? ಇದಕ್ಕೂ ಮೊದಲು ಕೂಡ ಇಂಡಿಯಾ ಬದಲು ಭಾರತ್‌ ಎಂಬುದಾಗಿ ಬಳಸಲಾಗಿದೆ. ಅಷ್ಟಕ್ಕೂ ಭಾರತ ಎಂಬ ಪದದಿಂದ ಪ್ರತಿಪಕ್ಷಗಳಿಗೆ ಭೀತಿ ಏಕೆ? ನಾನೊಬ್ಬ ಭಾರತ ಸರ್ಕಾರದ ಸಚಿವನಾಗಿದ್ದೇನೆ. ದೇಶದ ಎಷ್ಟೋ ಸಂಸ್ಥೆಗಳು, ಚಾನೆಲ್‌ಗಳು ಭಾರತ ಎಂಬ ಹೆಸರು ಹೊಂದಿವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Vistara Explainer: ‘ಭಾರತ’ವು ‘ಇಂಡಿಯಾ’ ಆಗಿದ್ದು ಹೇಗೆ? ಇಂಡಿಯಾ ಪದ ಬಳಕೆಗೆ ಏಕೆ ಆಕ್ಷೇಪ?

ಜಿ-20 ನಾಯಕರಿಗೆ ರಾಷ್ಟ್ರಪತಿ ಅವರು ಕಳುಹಿಸಿದ ಆಹ್ವಾನ ಪತ್ರಿಕೆಯಲ್ಲಿ ‘ಪ್ರೆಸಿಡೆಂಟ್‌ ಆಫ್‌ ಇಂಡಿಯಾ’ ಬದಲು, ‘ಪ್ರೆಸಿಡೆಂಟ್‌ ಆಫ್‌ ಭಾರತ್’‌ ಎಂದು ನಮೂದಿಸಿದ ಬಳಿಕವೇ ಹೆಸರು ಬದಲಾವಣೆಯ ಸುದ್ದಿ ಹರಡಿವೆ. ಸೆಪ್ಟೆಂಬರ್‌ 18ರಿಂದ 22ವರೆಗೆ ನಡೆಯುವ ಸಂಸತ್‌ ವಿಶೇಷ ಅಧಿವೇಶನದಲ್ಲಿ ಹೆಸರು ಬದಲಾವಣೆ ಕುರಿತು ವಿಧೇಯಕ ಮಂಡಿಸಲಾಗುತ್ತದೆ ಎಂದೇ ಹೇಳಲಾಗುತ್ತಿದೆ. ಹಾಗಾಗಿ, ಪ್ರತಿಪಕ್ಷಗಳು ‘ಇಂಡಿಯಾ’ ಎಂಬ ಒಕ್ಕೂಟದ ಹೆಸರಿಗೆ ಹೆದರಿ ಕೇಂದ್ರ ಸರ್ಕಾರ ಭಾರತ ಎಂದು ಬದಲಿಸಲು ಹೊರಟಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಸಾಮಾಜಿಕ ಜಾಲತಾಣಗಳಲ್ಲೂ ಪರ-ವಿರೋಧ ಚರ್ಚೆ ಶುರುವಾಗಿವೆ.

Exit mobile version