Site icon Vistara News

Narendra Modi: ಸ್ತ್ರೀ ಸಬಲೀಕರಣಕ್ಕೆ ಮಹಿಳಾ ಮೀಸಲಾತಿ ಶಕ್ತಿ, ಇದು ಐತಿಹಾಸಿಕ; ಮೋದಿ ಸಂತಸ

Narendra Modi

India witnessed new history, coming generations will discuss Women's Reservation Bill: Narendra Modi

ನವದೆಹಲಿ: ಲೋಕಸಭೆ (Lok Sabha) ಮತ್ತು ರಾಜ್ಯ ವಿಧಾನಸಭೆಗಳಲ್ಲಿ (State Assembly) ಮಹಿಳೆಯರಿಗೆ ಶೇ.33ರಷ್ಟು ಮೀಸಲು ಕಲ್ಪಿಸುವ ವಿಧೇಯಕಕ್ಕೆ (Women’s Reservation Bill) ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತ ಹಿನ್ನೆಲೆಯಲ್ಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಂಭ್ರಮಾಚರಣೆ ಮಾಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವಿಧೇಯಕಕ್ಕೆ ಅಂಗೀಕಾರ ದೊರೆತಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ, “ದೇಶದ ಮಹಿಳಾ ಸಬಲೀಕರಣದ ದಿಸೆಯಲ್ಲಿ ಕೇಂದ್ರ ಸರ್ಕಾರ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದೆ” ಎಂದು ಹೇಳಿದ್ದಾರೆ.

“ನಾರಿಶಕ್ತಿ ವಂದನ್‌ ಅಧಿನಿಯಮ ವಿಧೇಯಕಕ್ಕೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅನುಮೋದನೆ ದೊರೆತಿರುವುದು ಐತಿಹಾಸಿಕವಾಗಿದೆ. ದಶಕಗಳಿಂದ ದೇಶದ ಹೆಣ್ಣುಮಕ್ಕಳಿಗೆ ನನಸಾಗಿಯೇ ಉಳಿದ ಮಹಿಳಾ ಮೀಸಲಾತಿ ಕನಸನ್ನು ಕೇಂದ್ರ ಸರ್ಕಾರ ನನಸು ಮಾಡುತ್ತಿದೆ. ಇದು ದೇಶದ ಏಳಿಗೆಯಲ್ಲಿ ಮಹಿಳೆಯರ ಸಹಭಾಗಿತ್ವ ಪ್ರಮಾಣವನ್ನು ಹೆಚ್ಚಿಸಲಿದೆ. ಕೇಂದ್ರ ಸರ್ಕಾರವು ದೇಶದ ಮಹಿಳೆಯರ ಕುಟುಂಬದ ಸದಸ್ಯನಂತೆ ಕೆಲಸ ಮಾಡುತ್ತಿದೆ ಎಂಬುದಕ್ಕೆ ಮಹಿಳಾ ಮೀಸಲಾತಿಯನ್ನು ಜಾರಿಗೆ ತರುತ್ತಿರುವುದೇ ಸಾಕ್ಷಿಯಾಗಿದೆ. ಇದು ಪೀಳಿಗೆಗಳವರೆಗೆ ಸ್ತ್ರೀ ಸಬಲೀಕರಣಕ್ಕೆ ನೆರವಾಗಲಿದೆ” ಎಂದು ತಿಳಿಸಿದರು.

ಪೂರ್ಣ ಬಹುಮತದ ಸರ್ಕಾರದ ಕೊಡುಗೆ

“ಕಳೆದ 30 ವರ್ಷಗಳಿಂದಲೂ ಮಹಿಳಾ ಮೀಸಲಾತಿ ಬಗ್ಗೆ ಚರ್ಚಿಸಲಾಗುತ್ತಿತ್ತು. ಆದರೆ, ಯಾರೂ ಮಹಿಳಾ ಮೀಸಲಾತಿ ನೀಡಲು ಸಾಧ್ಯವಾಗಿರಲಿಲ್ಲ. ಆದರೆ, ದೇಶದ ಜನರು ಪೂರ್ಣ ಬಹುಮತದ ಸರ್ಕಾರ ಅಸ್ತಿತ್ವಕ್ಕೆ ತಂದ ಕಾರಣ, ನಮಗೆ ಬಹುಮತ ನೀಡಿದ ಕಾರಣ ದೇಶದ ಮಹಿಳೆಯರಿಗೆ ಇಂದು ಮೀಸಲಾತಿ ನೀಡಲು ಸಾಧ್ಯವಾಗುತ್ತಿದೆ. ಇದೆಲ್ಲ ಸ್ಥಿರ, ಬಹುಮತದ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದೇ ಸಾಕ್ಷಿಯಾಗಿದೆ” ಎಂದು ಹೇಳಿದರು.

ನರೇಂದ್ರ ಮೋದಿ ಅವರು ಭಾಷಣದ ವೇಳೆ ಕಳೆದ ಒಂಬತ್ತು ವರ್ಷದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಜಾರಿಗೆ ತಂದ ಯೋಜನೆಗಳ ಕುರಿತು ಮಾತನಾಡಿದರು. “ದೇಶದ ಕೋಟ್ಯಂತರ ಮನೆಗಳಲ್ಲಿ ಶೌಚಾಲಯ ನಿರ್ಮಿಸುವ ಮೂಲಕ ಹೆಣ್ಣುಮಕ್ಕಳ ಗೌರವ ಕಾಪಾಡಲಾಗಿದೆ. ಉಚಿತವಾಗಿ ಅಡುಗೆ ಅನಿಲ ಸಿಲಿಂಡರ್‌ ಸಂಪರ್ಕ, ಸುಕನ್ಯಾ ಸಮೃದ್ಧಿ ಯೋಜನೆಗಳ ಮೂಲಕ ಹೆಣ್ಣುಮಕ್ಕಳ ಏಳಿಗೆಗೆ ಶ್ರಮಿಸಲಾಗಿದೆ. ಅಷ್ಟೇ ಏಕೆ, ತ್ರಿವಳಿ ತಲಾಖ್‌ ರದ್ದುಗೊಳಿಸುವ ಮೂಲಕ ದೇಶದ ಮುಸ್ಲಿಂ ಹೆಣ್ಣುಮಕ್ಕಳಿಗೆ ರಕ್ಷಣೆ ನೀಡಲಾಗಿದೆ” ಎಂದರು.

ಇದನ್ನೂ ಓದಿ: Women’ Reservation bill : ಮಹಿಳಾ ಮೀಸಲಾತಿಗೆ ಸಿದ್ದರಾಮಯ್ಯ ಸ್ವಾಗತ, ಈಗ ಯೋಗಿ ಆದಿತ್ಯನಾಥ್‌ ಏನಂತಾರೆ?

ನರೇಂದ್ರ ಮೋದಿ ಅವರು ಬಿಜೆಪಿ ಕೇಂದ್ರ ಕಚೇರಿಗೆ ಆಗಮಿಸುತ್ತಲೇ ಬಿಜೆಪಿ ಕಾರ್ಯಕರ್ತೆಯರು, ನಾಯಕಿಯರು ಹೂಮಳೆ ಸುರಿಸಿ ಗೌರವ ಸಲ್ಲಿಸಿದರು. ಹಾಗೆಯೇ, ಭಾರತ್‌ ಮಾತಾ ಕೀ ಜೈ, ಮೋದಿ ಮೋದಿ ಎಂಬ ಘೋಷಣೆಗಳನ್ನೂ ಕೂಗಿದರು.

Exit mobile version