Site icon Vistara News

Hinduism: ಅಮೆರಿಕದಲ್ಲಿ ಹಿಂದೂ ಧರ್ಮದ ಜಾಗೃತಿಗೆ 4 ದಶಲಕ್ಷ ಡಾಲರ್‌ ಮೀಸಲಿಟ್ಟ ಭಾರತೀಯ ಅಮೇರಿಕನ್ ವೈದ್ಯ!

Dr Mihir Meghani

ನ್ಯೂಯಾರ್ಕ್‌: ಭಾರತೀಯ ಅಮೇರಿಕನ್ ವೈದ್ಯರೊಬ್ಬರು (Indian American Doctor) ತಮ್ಮ ಜೀವಮಾನದ ಗಳಿಕೆಯಲ್ಲಿ ಗಣನೀಯ ಪಾಲನ್ನು ಅಮೆರಿಕದಲ್ಲಿ ಹಿಂದೂ ಧರ್ಮದ ಜಾಗೃತಿಗಾಗಿ (Hinduism) ತೆಗೆದಿಟ್ಟಿದ್ದೇನೆ ಎಂದು ಘೋಷಿಸಿದ್ದಾರೆ. ಡಾ. ಮಿಹಿರ್ ಮೇಘಾನಿ (Dr. Mihir Meghani) ಅವರ ಹೆಸರು. 4 ದಶಲಕ್ಷ ಡಾಲರ್‌ (33.35 ಕೋಟಿ ರೂ.) ಹಣವನ್ನು ಈ ಉದ್ದೇಶಕ್ಕಾಗಿ ಅವರು ಮೀಸಲಿಟ್ಟಿದ್ದಾರೆ.

ಹಿಂದೂ ಧರ್ಮವು ಕೇವಲ ಒಂದು ಧರ್ಮವಲ್ಲ. ಇದೊಂದು ಒಂದು ಜೀವನ ವಿಧಾನವಾಗಿದೆ ಎಂದು ಪ್ರಸಿದ್ಧ ಭಾರತೀಯ ಅಮೇರಿಕನ್ ವೈದ್ಯ ಮಿಹಿರ್ ಮೇಘಾನಿ ಹೇಳುತ್ತಾರೆ. ಎರಡು ದಶಕಗಳ ಹಿಂದೆ ತಮ್ಮ ಸ್ನೇಹಿತರೊಂದಿಗೆ ʼಹಿಂದೂ ಅಮೇರಿಕನ್ ಫೌಂಡೇಶನ್ʼ (Hindu American Foundation) ಅನ್ನು ಇವರು ಸ್ಥಾಪಿಸಿದ್ದಾರೆ. ತುರ್ತು ನಿಗಾ ವೈದ್ಯರಾಗಿರುವ ಡಾ.ಮೇಘಾನಿ, ಸಂಸ್ಥೆಯು ಈ ತಿಂಗಳಲ್ಲಿ ನಡೆಸಿದ ವಾರ್ಷಿಕ ʼಸಿಲಿಕಾನ್ ವ್ಯಾಲಿ ಗಾಲಾʼದಲ್ಲಿ 1.5 ದಶಲಕ್ಷ ಡಾಲರ್‌ ದಾನ ಮಾಡುವ ವಾಗ್ದಾನ ಮಾಡಿದ್ದಾರೆ. ಇದುವರೆಗೆ ಅವರು ಹೀಗೆ 4 ಮಿಲಿಯ ಡಾಲರ್‌ ನೀಡಿದ್ದಾರೆ.

ಆ ಮೂಲಕ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ಹಿಂದೂ ಧರ್ಮದ ಉದ್ದೇಶಕ್ಕಾಗಿ ಅತಿದೊಡ್ಡ ದೇಣಿಗೆ ನೀಡಿದ ವೈಯಕ್ತಿಕ ಭಾರತೀಯ ಅಮೆರಿಕನ್ ದಾನಿಯಾಗಿ ಮೇಘಾನಿ ಹೊರಹೊಮ್ಮಿದ್ದಾರೆ. ಈ ಕೊಡುಗೆಯಲ್ಲಿ ಅವರ ಪತ್ನಿ ಕೂಡ ಕೈಜೋಡಿಸಿದ್ದಾರೆ.

“ನಾನು ಮತ್ತು ನನ್ನ ಪತ್ನಿ ತನ್ವಿ ಇಲ್ಲಿಯವರೆಗೆ ಹಿಂದೂ ಅಮೇರಿಕನ್ ಫೌಂಡೇಶನ್‌ಗೆ USD 1.5 ಮಿಲಿಯ ಕೊಡುಗೆ ನೀಡಿದ್ದೇವೆ. ನಾವು ಇತರ ಹಿಂದೂ ಮತ್ತು ಭಾರತೀಯ ಸಂಘಟನೆಗಳು ಮತ್ತು ಕಾರಣಗಳಿಗೆ ಕಳೆದ 15 ವರ್ಷಗಳಲ್ಲಿ USD 1 ಮಿಲಿಯಕ್ಕಿಂತ ಹೆಚ್ಚಿನ ಕೊಡುಗೆ ನೀಡಿದ್ದೇವೆ. ಮುಂದಿನ ಎಂಟು ವರ್ಷಗಳಲ್ಲಿ ನಾವು ಭಾರತ ಮತ್ತು ಹಿಂದೂ ಸಂಘಟನೆಗಳಿಗೆ USD 1.5 ಮಿಲಿಯ ನೀಡುವ ಪ್ರತಿಜ್ಞೆ ಮಾಡುತ್ತಿದ್ದೇವೆ” ಎಂದು ಡಾ. ಮೇಘಾನಿ ಹೇಳಿದ್ದಾರೆ.

“ನನ್ನಲ್ಲಿ ಯಾವುದೇ ಸ್ಟಾರ್ಟ್ಅಪ್ ಕಂಪನಿ ಇಲ್ಲ. ನಾನು ಯಾವುದೇ ಅಡ್ಡ ವ್ಯವಹಾರಗಳನ್ನು ಹೊಂದಿಲ್ಲ. ನಾನು ಸಂಬಳ ಪಡೆಯುವ ತುರ್ತು ಸೇವಾ ವೈದ್ಯನಾಗಿದ್ದೇನೆ. ನನ್ನ ಹೆಂಡತಿ ಫಿಟ್ನೆಸ್ ಬೋಧಕಿ ಮತ್ತು ಆಭರಣ ವಿನ್ಯಾಸಕಿ. ನಾವು ಪ್ರತಿವರ್ಷ ದಶಲಕ್ಷ ಡಾಲರ್ ಗಳಿಸುತ್ತಿಲ್ಲ. ನಮಗೆ ಷೇರುಪೇಟೆ ಹೂಡಿಕೆಯಿಲ್ಲ. ನಾವು ಇದನ್ನು ಮಾಡುತ್ತಿರುವುದೇಕೆಂದರೆ ಇದು ನಮ್ಮ ಧರ್ಮ, ಇದು ನಮ್ಮ ಕರ್ತವ್ಯ” ಎಂದಿದ್ದಾರೆ ಮೇಘಾನಿ.

ಡಾ. ಮೇಘಾನಿ ಮತ್ತು ಅವರ ಮೂವರು ಸ್ನೇಹಿತರು 2003ರಲ್ಲಿ ಹಿಂದೂ ಅಮೇರಿಕನ್ ಫೌಂಡೇಶನ್ (HAF) ಅನ್ನು ಸ್ಥಾಪಿಸಿದರು. ಇತರ ಮೂವರೆಂದರೆ ಕಿಡ್ನಿ ತಜ್ಞ ಅಸೀಮ್ ಶುಕ್ಲಾ, ವಕೀಲ ಸುಹಾಗ್ ಶುಕ್ಲಾ, ಕಾರ್ಮಿಕ ಕಾನೂನು ವಕೀಲ ನಿಖಿಲ್ ಜೋಶಿ. ಅಮೆರಿಕದಲ್ಲಿ ಇದು ಈ ರೀತಿಯ ಹಿಂದೂ ಪರ ಗುಂಪುಗಳಲ್ಲಿ ಮೊದಲನೆಯದು.

ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಡಾ. ಮೇಘಾನಿ, “ಹೆಚ್ಚಿನ ಅಮೆರಿಕನ್ನರು ಕ್ರಿಶ್ಚಿಯನ್ನರಾಗಿದ್ದು, ಹಿಂದೂ ಧರ್ಮವನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವುದಿಲ್ಲ. ಅವರು ಅಬ್ರಹಾಮಿಕ್ ಹಿನ್ನೆಲೆಯಿಂದ ಬಂದವರು. ಹಿಂದೂ ಧರ್ಮವು ಕೇವಲ ಒಂದು ಧರ್ಮವಲ್ಲ, ಅದು ಜೀವನ ವಿಧಾನ ಎಂದು ಅವರು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಇದು ಜೀವನದ ಬಗ್ಗೆ ಯೋಚಿಸುವ ಮಾರ್ಗವಾಗಿದೆ” ಎಂದರು. “ಭಾರತದಿಂದ ಅಮೆರಿಕಕ್ಕೆ ಬರುತ್ತಿರುವ ಹಿಂದೂಗಳಿಗೆ ಹಿಂದೂ ಅಸ್ಮಿತೆ ಮತ್ತು ತಮಗಿರುವ ಭಾರತೀಯ ರಾಷ್ಟ್ರೀಯ ಗುರುತಿನ ಬಗ್ಗೆ ಸರಿಯಾಗಿ ತಿಳಿದಿಲ್ಲ. ನಾವು ಅದರ ಅರಿವು ಮೂಡಿಸಬೇಕಿದೆ” ಎಂದಿದ್ದಾರೆ.

“ಇಂದು ದೀಪಾವಳಿಯನ್ನು ವೈಟ್‌ಹೌಸ್‌ನಲ್ಲಿ, ಉಪಾಧ್ಯಕ್ಷರೊಂದಿಗೆ, ಯುಎಸ್ ಕಾಂಗ್ರೆಸ್‌ನಲ್ಲಿ ಮತ್ತು ದೇಶದ ವಿವಿಧ ರಾಜ್ಯ ಮತ್ತು ಸ್ಥಳೀಯ ಸರ್ಕಾರಗಳಲ್ಲಿ ಆಚರಿಸುವುದನ್ನು ನೀವು ನೋಡಬಹುದು. ಆದರೆ ಇಲ್ಲಿಗೆ ಬರಲು ಸಮಯ ಹಿಡಿಯಿತು. ಇದು ಅಮೆರಿಕದಲ್ಲಿ HAFನ ಆರಂಭಿಕ ಯಶಸ್ಸುʼʼ ಎಂದು ಅವರು ಹೇಳಿದರು.

ಹಿಂದೂ ಅಮೇರಿಕನ್ ಫೌಂಡೇಶನ್, ಸಂಪೂರ್ಣವಾಗಿ ಸ್ವಯಂಸೇವಕತ್ವವನ್ನು ಆಧರಿಸಿದೆ. ಈಗ ವಾರ್ಷಿಕ USD 2.5 ಮಿಲಿಯನ್ ಬಜೆಟ್ ಅನ್ನು ಹೊಂದಿದೆ ಮತ್ತು ಹಲವಾರು ಪೂರ್ಣ ಸಮಯದ ಸಿಬ್ಬಂದಿಯನ್ನು ಹೊಂದಿದೆ. ಮುಂದಿನ ವರ್ಷ ತನ್ನ ಬಜೆಟ್ ಅನ್ನು USD 5 ಮಿಲಿಯನ್‌ಗೆ ಮತ್ತು ದಶಕದ ಅಂತ್ಯದ ವೇಳೆಗೆ USD 20 ಮಿಲಿಯನ್‌ಗೆ ಹೆಚ್ಚಿಸುವುದು HAF ಗುರಿಯಾಗಿದೆ.

ಇದನ್ನೂ ಓದಿ: Sanatana Dharma: ಸನಾತನ ಧರ್ಮ ಶಾಶ್ವತ ಎಂದ ಮದ್ರಾಸ್‌ ಹೈಕೋರ್ಟ್;‌ ಉದಯನಿಧಿಗೆ ಮಂಗಳಾರತಿ

Exit mobile version