ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದಲ್ಲಿ ಈಗಲೇ ಸ್ಪರ್ಧೆ ಆರಂಭವಾಗಿದೆ. ನಾನೇ ಅಧ್ಯಕ್ಷೀಯ ಅಭ್ಯರ್ಥಿ ಎಂದು ಡೊನಾಲ್ಡ್ ಟ್ರಂಪ್ ಈಗಾಗಲೇ ಘೋಷಿಸಿದರೂ ಭಾರತದ ಮೂಲದವರೇ ಆದ ನಿಕ್ಕಿ ಹ್ಯಾಲೆ ಅವರು ನಾನೇ ಸ್ಪರ್ಧಿಸುತ್ತೇನೆ ಎಂದು ಹೇಳುವ ಮೂಲಕ ಸವಾಲು ಹಾಕಿದ್ದಾರೆ. ಇದರ ಬೆನ್ನಲ್ಲೇ, ಭಾರತದ ಮೂಲದವರಾದ, ರಿಪಬ್ಲಿಕನ್ ಪಕ್ಷದವರೇ ಆದ ವಿವೇಕ್ ರಾಮಸ್ವಾಮಿ (Vivek Ramaswamy) ಅವರು ಕೂಡ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಕುರಿತು ಘೋಷಣೆ ಮಾಡುವ ಸಾಧ್ಯತೆ ಇದೆ.
ಭಾರತದ ಮೂಲದ ದಂಪತಿಗೆ ಜನಿಸಿರುವ, ೩೭ ವರ್ಷದ ವಿವೇಕ್ ರಾಮಸ್ವಾಮಿ ಅವರು ಅಮೆರಿಕದ ಖ್ಯಾತ ಯುವ ಉದ್ಯಮಿಯಾಗಿದ್ದಾರೆ. ಇವರು ರಿಪಬ್ಲಿಕನ್ ಪಕ್ಷದ ಸದಸ್ಯರಾಗಿದ್ದು, ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧೆ ಘೋಷಿಸಿ, ಶೀಘ್ರದಲ್ಲಿಯೇ ಪ್ರಚಾರ ಆರಂಭಿಸಲಿದ್ದಾರೆ ಎನ್ನಲಾಗುತ್ತಿದೆ. ವಿವೇಕ್ ರಾಮಸ್ವಾಮಿ ಅವರೂ ಸ್ಪರ್ಧೆ ಘೋಷಿಸಿದರೆ, ರಿಪಬ್ಲಿಕನ್ ಪಕ್ಷದಲ್ಲಿಯೇ ಟ್ರಂಪ್ ಅವರಿಗೆ ಭಾರತ ಮೂಲದ ಇಬ್ಬರು ಸವಾಲಾದಂತಾಗುತ್ತದೆ.
೪೦೦ ಕೋಟಿ ರೂ.ಗಿಂತ ಅಧಿಕ ಮೌಲ್ಯದ ಆಸ್ತಿಯ ವಾರಸುದಾರರಾಗಿರುವ ವಿವೇಕ್ ರಾಮಸ್ವಾಮಿ ಅವರನ್ನು ನ್ಯೂಯಾರ್ಕ್ ಮ್ಯಾಗಜಿನ್‌ವೊಂದು, ‘ಸಿಇಒ ಆಫ್ ಆ್ಯಂಟಿ-ವೋಕ್ ಐಎನ್‌ಸಿ’ ಎಂದು ಕರೆದಿದೆ. ಬಯೋಟೆಕ್ ಹಾಗೂ ಔಷಧಿ ಉತ್ಪಾದನೆ ಕ್ಷೇತ್ರದ ಪ್ರಮುಖ ಉದ್ಯಮಿಯಾಗಿರುವ ಇವರು ಸಿನಿಸಿನಾಟಿಯಲ್ಲಿ ಜನಿಸಿದ್ದಾರೆ. ಹಾರ್ವರ್ಡ್ ಹಾಗೂ ಯಾಲೆ ವಿವಿಯಲ್ಲಿ ಓದಿರುವ ವಿವೇಕ್, ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಘೋಷಿಸಿದರೆ ಚುನಾವಣೆಯು ಮತ್ತಷ್ಟು ರಂಗೇರಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Nikki Haley: ಅಧ್ಯಕ್ಷೀಯ ಚುನಾವಣೆಯಲ್ಲಿ ನಾನೇ ರಿಪಬ್ಲಿಕನ್ ಅಭ್ಯರ್ಥಿ, ಟ್ರಂಪ್‌ಗೆ ಭಾರತ ಮೂಲದ ನಿಕ್ಕಿ ಹ್ಯಾಲೆ ಸವಾಲು