Site icon Vistara News

Indian Army | ಇದೇ ಮೊದಲನೇ ಬಾರಿಗೆ ಕರ್ನಲ್‌ ಆಗುತ್ತಿದ್ದಾರೆ 108 ಮಹಿಳಾ ಯೋಧರು!

ನವದೆಹಲಿ: ಭಾರತೀಯ ಸೇನೆಯಲ್ಲಿ (Indian Army) ಲೆಫ್ಟಿನೆಂಟ್‌ ಕರ್ನಲ್‌ ಆಗಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರಿಗೆ ಕರ್ನಲ್‌ ಆಗಿ ಬಡ್ತಿ ನೀಡುವ ಕೆಲಸವನ್ನು ಇದೀಗ ಭಾರತೀಯ ಸೇನೆ ಮಾಡುತ್ತಿದೆ. ಇದೇ ತಿಂಗಳ 9ರಿಂದ 22ನೇ ತಾರೀಖಿನವರೆಗೆ ಸೇನೆಯ ಮುಖ್ಯ ಕಚೇರಿಯಲ್ಲಿ ಬಡ್ತಿ ಪ್ರಕ್ರಿಯೆಗಳು ನಡೆಯುತ್ತಿದ್ದು, ಒಟ್ಟಾರೆಯಾಗಿ 108 ಮಹಿಳೆಯರನ್ನು ಕರ್ನಲ್‌ ಆಗಿ ಬಡ್ತಿ ನೀಡಲಾಗುತ್ತಿದೆ.

ಇದನ್ನೂ ಓದಿ: Army Day In Bengaluru | ಬೆಂಗಳೂರಿನಲ್ಲಿ ಸೇನಾ ದಿನಾಚರಣೆ ಹೇಗಿತ್ತು? ಸೇನೆ ಬಗ್ಗೆ ಹೆಮ್ಮೆ ಮೂಡಿಸುವ ಫೋಟೊಗಳು ಇಲ್ಲಿವೆ

1992ರಿಂದ 2006ನೇ ಬ್ಯಾಚಿನ ಮಹಿಳಾ ಅಧಿಕಾರಿಗಳಿಗೆ ಈ ಬಡ್ತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಸೇನೆಯ ವಿವಿಧ ಶಸ್ತ್ರಾಸ್ತ್ರ ಮತ್ತು ಸೇವೆಗಳಲ್ಲಿ (ಎಂಜಿನಿಯರ್ಸ್, ಸಿಗ್ನಲ್‌ಗಳು, ಆರ್ಮಿ ಏರ್ ಡಿಫೆನ್ಸ್, ಇಂಟೆಲಿಜೆನ್ಸ್ ಕಾರ್ಪ್ಸ್, ಆರ್ಮಿ ಸರ್ವಿಸ್ ಕಾರ್ಪ್ಸ್, ಆರ್ಮಿ ಆರ್ಡನೆನ್ಸ್‌ ಕಾರ್ಪ್ಸ್, ಎಲೆಕ್ಟ್ರಿಕಲ್‌ ಆಂಡ್‌ ಮೆಕಾನಿಕಲ್‌ ಎಂಜಿನಿಯರ್ಸ್) ಬಡ್ತಿ ನಡೆಯುತ್ತಿದೆ. ಪ್ರತಿ ಮಹಿಳಾ ಅಧಿಕಾರಿಗೆ ಈ ಪ್ರಕ್ರಿಯೆಯಲ್ಲಿ ಮೂರು ಹಂತದಲ್ಲಿ ಬಡ್ತಿ ಪಡೆಯುವುದಕ್ಕೆ ಅವಕಾಶವಿದೆ. ಬಡ್ತಿ ಆದ ತಕ್ಷಣವೇ ಅವರಿಗೆ ಅದರ ಮಾಹಿತಿ ನೀಡಲಾಗುತ್ತಿದೆ. ಈಗಾಗಲೇ 80 ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದೆ ಎಂದು ಸೇನೆ ಮಾಹಿತಿ ನೀಡಿದೆ.


ಆಯ್ಕೆ ಮಂಡಳಿಯಿಂದ ʼಫಿಟ್‌ʼ ಎಂದು ಘೋಷಿಸಲ್ಪಡುವ 108 ಮಹಿಳಾ ಅಧಿಕಾರಿಗಳನ್ನು ವಿವಿಧ ಕಮಾಂಡ್ ಅಸೈನ್‌ಮೆಂಟ್‌ಗಳಲ್ಲಿ ನಿಯೋಜಿಸಲಾಗುವುದು. ಅಂತಹ ನೇಮಕಾತಿಗಳ ಮೊದಲ ಸೆಟ್ ಅನ್ನು ಜನವರಿ 2023 ರ ಅಂತ್ಯದ ವೇಳೆಗೆ ನೀಡಲಾಗುವುದು. ಕರ್ನಲ್‌ ಆಗುವ ಅಧಿಕಾರಿಗಳು ತಮ್ಮ ತಂಡಗಳನ್ನು ಮುನ್ನಡೆಸುವ ಜವಾಬ್ದಾರಿ ಹೊಂದಿರಲಿದ್ದಾರೆ ಎಂದು ಭಾರತೀಯ ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Mahindra Scorpio | 1470 ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್​ ಕಾರುಗಳನ್ನು ಬುಕ್​ ಮಾಡಿದ ಭಾರತೀಯ ಸೇನೆ

108 ಕರ್ನಲ್‌ ಪೋಸ್ಟ್‌ಗಳು ಖಾಲಿಯಿದ್ದು, ಅದಕ್ಕೆಂದು 244 ಮಹಿಳಾ ಅಧಿಕಾರಿಗಳು ಬಡ್ತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಮೊದಲು ಸೇನೆಗೆ ಮಹಿಳೆಯರನ್ನು ಶಾರ್ಟ್‌ ಸರ್ವೀಸ್‌ ಕಮಿಷನ್‌ ಅಡಿಯಲ್ಲಿ ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಈಗ ಅವರನ್ನು ಶಾಶ್ವತ ಆಯೋಗದ ಅಡಿಯಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಸೇನೆಯಲ್ಲಿರುವವರನ್ನೂ ಶಾಶ್ವತ ಆಯೋಗಕ್ಕೆ ಸೇರಿಸುವ ನಿಟ್ಟಿನಲ್ಲಿ ಹೆಚ್ಚಿನ ತರಬೇತಿ ನೀಡಲಾಗುತ್ತಿದೆ. ಈ ರೀತಿ ನೇಮಕವಾಗುವ ಮಹಿಳೆಯರು ಹೆಚ್ಚು ಉನ್ನತ ಹುದ್ದೆಗಳಿಗೆ ಹೋಗುವುದು ಅವಶ್ಯಕವಾದ್ದರಿಂದ ಸೇನೆ ಈ ಬಡ್ತಿ ಪ್ರಕ್ರಿಯೆ ನಡೆಸುತ್ತಿರುವುದಾಗಿ ತಿಳಿಸಿದೆ.

Exit mobile version